ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭರವಸೆ ಈಡೇರಿಸುವಲ್ಲಿ ಕೇಂದ್ರ ವಿಫಲ:ಗೆಹ್ಲೋಟ್

Last Updated 11 ಮೇ 2018, 6:21 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕಪ್ಪು ಹಣ ವಾಪಸ್‌ ತರುವುದು, 2 ಕೋಟಿ ಜನರಿಗೆ ಉದ್ಯೋಗ ನೀಡುವುದು ಸೇರಿದಂತೆ ಭರವಸೆಗಳನ್ನು ಈಡೇರಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಶೋಕ ಗೆಹ್ಲೋಟ್ ಆರೋಪಿಸಿದರು.

'ದೇಶದ ಆರ್ಥಿಕ ಸ್ಥಿತಿ ಹಾಳಾಗಿದೆ. ಜನರಿಗೆ ಇಂದಿಗೂ ಒಳ್ಳೆಯ ದಿನಗಳು ಬಂದಿಲ್ಲ. ಕೇಂದ್ರದಲ್ಲಿ ಹೆಸರಿಗಷ್ಟೇ ಮಂತ್ರಿಗಳಿದ್ದಾರೆ. ಎಲ್ಲ ನಿರ್ಧಾರವನ್ನು ಪ್ರಧಾನಿ ನರೇಂದ್ರ ಮೋದಿ ಅವರೇ ತೆಗೆದುಕೊಳ್ಳುತ್ತಿದ್ದಾರೆ. ಅವರ ಸರ್ವಾಧಿಕಾರಿ ನಿಲುವಿನಿಂದ ಪ್ರಜಾಪ್ರಭುತ್ವ ಅಪಾಯಕ್ಕೆ ಸಿಲುಕುವ ಆತಂಕ ಎದುರಾಗಿದೆ’ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಆಡಳಿತ ವಿರೋಧಿ ಅಲೆ ಇಲ್ಲ. ಸರ್ವರ ಅಭಿವೃದ್ಧಿ ಗಮನದಲ್ಲಿಟ್ಟುಕೊಂಡು ರಚಿಸಿರುವ ಪ್ರಣಾಳಿಕೆ ಚೆನ್ನಾಗಿದೆ. ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿಯಲ್ಲಿ ಆರ್‌ಎಸ್‌ಎಸ್‌ ವಿಲೀನ ಮಾಡಲಿ. ಮೋದಿ ಅವರು ದೇಶಕ್ಕಿಂತ ವಿದೇಶದಲ್ಲಿಯೇ ಜಾಸ್ತಿ ಇರುತ್ತಾರೆ. ಇಲ್ಲವೇ ವಿವಿಧ ರಾಜ್ಯಗಳ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿರುತ್ತಾರೆ. ಸರ್ಕಾರದ ಆಡಳಿತದಲ್ಲಿ ಆರ್‌ಆರ್‌ಎಸ್‌ ಹಸ್ತಕ್ಷೇಪ ಮಾಡುತ್ತಿದೆ. ಹಿಂದೆ ನಿಂತು ಆಡಳಿತ ನಡೆಸುವ ಬದಲು ನೇರವಾಗಿ ಚುನಾವಣೆ ಎದುರಿಸಬೇಕು ಎಂದು ಆಗ್ರಹಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಹಂಕಾರ ಬಂದಿದೆ. ಅದನ್ನು ಮುರಿಯುವ ಕೆಲಸ ಇಲ್ಲಿಂದಲೇ ಆರಂಭವಾಗಬೇಕು. ಕರ್ನಾಟಕದ ನಿರ್ಣಯದಿಂದ ದೇಶದ ಜನರಿಗೆ ಒಳ್ಳೆಯದಾಗಲಿದೆ ಎಂದು ಅವರು ಹೇಳಿದರು.

ಹುಬ್ಬಳ್ಳಿ–ಧಾರವಾಡ ಪೂರ್ವ ಅಭ್ಯರ್ಥಿ ಪ್ರಸಾದ ಅಬ್ಬಯ್ಯ, ಮುಖಂಡರಾದ ವೀರಣ್ಣ ಮತ್ತಿಕಟ್ಟಿ, ಐ.ಜಿ. ಸನದಿ, ಅಲ್ತಾಫ್ ಹಳ್ಳೂರ, ಮಹೇಂದ್ರ ಸಿಂಘಿ ಇದ್ದರು. ಮಹಾವೀರ ಭವನದಲ್ಲಿ ಹಮ್ಮಿಕೊಂಡಿದ್ದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

'ಹತಾಶರಾಗಿ ಇಲ್ಲ ಸಲ್ಲದ ಆರೋಪ'

ಹುಬ್ಬಳ್ಳಿ: ‘ಬಿಜೆಪಿಯವರು ಹತಾಶರಾಗಿ ನನ್ನ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ಜಾತಿ ಧರ್ಮದ ಹೆಸರಿನಲ್ಲಿ ಜನರ ಭಾವನೆಗಳ್ನು ಕೆರಳಿಸುತ್ತಿದ್ದಾರೆ’ ಎಂದು ಹುಬ್ಬಳ್ಳಿ–ಧಾರವಾಡ ಪೂರ್ವ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಪ್ರಸಾದ ಅಬ್ಬಯ್ಯ ಆರೋಪಿಸಿದರು.

‘ಎಸ್‌ಡಿಪಿಐ ಬೆಂಬಲ ಕೋರಲು ಹೋಗಿದ್ದೆ ಎಂದು ಆರೋಪಿಸಿದ್ದಾರೆ. ಬೆಂಬಲ ಕೇಳಲು ಹೋಗಿರಲಿಲ್ಲ. ಪ್ರಚಾರಕ್ಕೆ ಹೋದಾಗ ಕಾರ್ಯಕರ್ತರ ಸಲಹೆ ಮೇರೆಗೆ ಅವರನ್ನೂ ಭೇಟಿಯಾಗಿದ್ದೆ. ಪ್ರತಿಯೊಬ್ಬರ ಹಿನ್ನೆಲೆ ಕೇಳಿ ಮತ ಕೇಳಲಾಗುವುದಿಲ್ಲ. ಎಲ್ಲರಂತೆ ಅವರಿಗೂ ಮತ ಕೇಳಿದ್ದೇನೆ’ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಮುತುವಲ್ಲಿ ಖೈರಾತಿ ಹೇಳಿಕೆಯನ್ನು ಅಂದೇ ಖಂಡಿಸಿದ್ದೇನೆ. ಅವರೂ ಕ್ಷಮೆ ಕೇಳಿದ್ದಾರೆ. ಅವರು ನನ್ನ ಪರವಾಗಿ ಪ್ರಚಾರ ಮಾಡಿರಬಹುದು. ಎಲ್ಲರಿಗೂ ವೈಯಕ್ತಿಕ ಸ್ವಾತಂತ್ರ್ಯ ಇದೆ. ಸಂಸದ ಪ್ರಹ್ಲಾದ ಜೋಶಿ ಅವರೂ ಮಿನಿ ಪಾಕಿಸ್ತಾನದಂತೆ ಕಾಣುತ್ತದೆ ಎಂದಿದ್ದರು. ಆ ಹೇಳಿಕೆಗೆ ಏನು ಅರ್ಥ’ ಎಂದು ಅವರು ಪ್ರಶ್ನಿಸಿದರು.

‘ನಾನೂ ಹಿಂದೂ. ಹಿಂದೂ ಮತವನ್ನು ಬೇಡ ಎಂದು ಹೇಗೆ ಹೇಳುತ್ತೇನೆ. ಶಾಸಕನಾಗಿದ್ದಾಗ ಎಲ್ಲರನ್ನೂ ಸಮಾನವಾಗಿ ಕಂಡಿದ್ದೇನೆ. ಕ್ಷೇತ್ರದ ಅಭಿವೃದ್ಧಿ ಮಾಡಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT