ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಯಿಯ ಐದು ಮುಖಗಳು

Last Updated 11 ಮೇ 2018, 19:30 IST
ಅಕ್ಷರ ಗಾತ್ರ

ಪಂಢರಿಬಾಯಿ! ಒಂದು ಕ್ಲೋಸಪ್...

ನನ್ನ ತಾಯಿ, ಅವರ ತಾಯಿಯ ಕಾಲದಿಂದಲೂ ಅಮ್ಮನ ಪಾತ್ರದಲ್ಲಿ ಸೈ ಅನ್ನಿಸಿಕೊಂಡು ಬಂದ ಕಲಾವಿದೆ ಪಂಢರಿಬಾಯಿ. ತಾಯಿಪಾತ್ರದಲ್ಲಿ ಅವರು ಎತ್ತಿದ ಕೈ.

ನಾನು ಸಿನಿಮಾ ನೋಡುವಾಗ,  ಒಬ್ಬ ನಟಿಯಾಗಿ ಸಿನಿಮಾ ನೋಡುವುದಿಲ್ಲ. ಪ್ರೇಕ್ಷಕಿಯಾಗಿ ನೋಡುತ್ತೇನೆ. ಹಾಗಾಗಿ ಪಂಢರಿಬಾಯಿಯವರ ತಾಯಿಪಾತ್ರದ ನಟನೆಯಾಗಲೀ ಅವರ ಮಮತೆಯಾಗಲೀ ಪರದೆಯ ಮೇಲಿನ ಅಭಿನಯವಷ್ಟೇ ಎಂದು ನನಗೆ ಯಾವತ್ತೂ ಅನ್ನಿಸಿದ್ದೇ ಇಲ್ಲ. ಅವರಲ್ಲಿನ ಆ ತಾಯಿಯ ಅಂಶವನ್ನು ನಾವು ನಮ್ಮ ತಾಯಂದಿರಲ್ಲಿ ನೋಡಲು ಇಷ್ಟಪಡುತ್ತಿದ್ದೆವು. ‘ನಮ್ಮ ಅಮ್ಮನೂ ಹೀಗೆ ಇರಬೇಕಿತ್ತಲ್ಲ‘ ಎಂದು ಅಂದುಕೊಂಡಿದ್ದಿದೆ. ಅವರ ಅಭಿನಯ ನಮಗೆ ಅಷ್ಟು ಖುಷಿ ಕೊಡುತ್ತಿತ್ತು.

ಸಿನಿಮಾರಂಗಕ್ಕೆ ಬಂದ ಮೇಲೆ, ಒಬ್ಬ ನಟಿಯಾಗಿ ಎಲ್ಲ ಕಲಾವಿದರ ಬಗ್ಗೆಯೂ ತಿಳಿದಿರಬೇಕು ಎಂದು ಕಾರಣಕ್ಕೆ ಒಂದಷ್ಟು ಅಧ್ಯಯನ ಮಾಡುತ್ತೇವೆ. ಹೀಗೆ ಪಂಢರಿಬಾಯಿ ಅವರ ಬಗ್ಗೆ ತಿಳಿದುಕೊಂಡಾಗ, ಅವರು ನಿಜ ಜೀವನದಲ್ಲೂ ತುಂಬಾ ಕಷ್ಟಪಟ್ಟಿರುವ ನಟಿ ಎನ್ನುವುದು ತಿಳಿಯಿತು. ಅವರು ನವರಸಗಳನ್ನು ಹಿಂಡಿಹಾಕಿರುವಂತಹ ನಟಿ. ನಿಜ ಜೀವನದಲ್ಲೂ ಅವರು ಮಾದರಿಯಾಗಿಯೇ ಬದುಕಿದ್ದರು. ನನಗೆ ಅವರು ಒಬ್ಬ ನಟಿಯಾಗಿ ಮಾತ್ರವಲ್ಲ – ವೈಯಕ್ತಿಕವಾಗಿಯೂ ತುಂಬಾ ಇಷ್ಟ.

ನಟನೆ ಎನ್ನುವುದು ಅವರ ಕಣ್ಣಲ್ಲೇ ಇರುತ್ತಿತ್ತು. ದುಃಖದ ಸನ್ನಿವೇಶಗಳಿಗೆ ಅವರಷ್ಟು ಭಾವ ತುಂಬಿ ನಟಿಸಲು ಇಲ್ಲಿಯವರೆಗೆ ಯಾರಿಂದಲೂ ಸಾಧ್ಯವಾಗಿಲ್ಲ. ಅವರ ಸಿನಿಮಾಗಳಲ್ಲಿ ಹೆಚ್ಚಿನ ಎಲ್ಲ ಡೈಲಾಗ್‌ಗಳು ಕ್ಲೋಸ್‌ಅಪ್‌ ಶಾಟ್‌ನಲ್ಲಿಯೇ ಇರುತ್ತಿದ್ದವು. ಆದರೆ ಈಗ ನಾವು ನಿರ್ದೇಶಕರ ಬಳಿ ‘ನಮಗೊಂದು ಕ್ಲೋಸ್‌ಅಪ್‌ ಶಾಟ್‌ ಕೊಡಿ ಸರ್’ ಎಂದು ಕೇಳಬೇಕು. ಅವರ ಸಿನಿಮಾಗಳಲ್ಲಿ ಅವರಿಗೋಸ್ಕರ ಎಂದೇ ಕ್ಲೋಸ್‌ಅಪ್ ಶಾಟ್ ಇರುತ್ತಿತ್ತು. ಹೀಗೆ ಒಂದೇ ಒಂದು ಪಾತ್ರ ಅಂತ ಎತ್ತಿ ಪಕ್ಕದಲ್ಲಿಟ್ಟರೆ ಬೇರೆ ಪಾತ್ರಗಳಿಗೆ ನಾನು ಎರಡನೇ ಸ್ಥಾನ ಕೊಟ್ಟ ಹಾಗೇ ಆಗುತ್ತದೆ. ನನಗಂತೂ ಪಂಢರಿಬಾಯಿಯವರ ಎಲ್ಲಾ ಪಾತ್ರಗಳೂ ಬಹಳ ಇಷ್ಟ.

ಸಿನಿಮಾ ಎಂದರೆ ಒಂದು ಕಲ್ಪನೆ. ನಾವು ಎರಡೂವರೆ ಗಂಟೆ ಥಿಯೇಟರ್‌ನಲ್ಲಿ ಕುಳಿತಾಗ ಒಂದು ಕಲ್ಪನಾಲೋಕಕ್ಕೆ ಹೊರಟು ಹೋಗುತ್ತೇವೆ. ವಾಸ್ತವಕ್ಕಿಂತ ಕಲ್ಪನೆ ಕಣ್ಣ ಮುಂದೆ ಇರುತ್ತದೆ, ಆ ಕಲ್ಪನೆ ನಿಜವಾಗಬೇಕು. ಯಾವುದೇ ಪಾತ್ರವಾಗಲಿ, ಆ ಪಾತ್ರ ಇಷ್ಟವಾದರೆ ಅದರಲ್ಲಿ ನಮ್ಮನ್ನು ಕಂಡುಕೊಳ್ಳುತ್ತೇವೆ. ಹೀಗೆ ಕಂಡುಕೊಂಡಿದ್ದರ ಕಾರಣದಿಂದಲೇ ಪಂಢರಿಬಾಯಿ ಕನ್ನಡದ ಪ್ರೇಕ್ಷಕರಿಗೆ ಹತ್ತಿರವಾದರು. ಅವರು ಮಾಡಿರುವ ತಾಯಿಪಾತ್ರಗಳು ಮಮತೆ ಹಾಗೂ ಪ್ರೀತಿಯ ಪ್ರತಿರೂಪದಂತಿವೆ.

ಮಾಡರ್ನ್ ತಾಯಿಪಾತ್ರಗಳಲ್ಲಿ ಸ್ವಲ್ಪ ಬೈಯೋದು ಜಾಸ್ತಿ. ಆದರೆ ಮೊದಲಿನ ಸಿನಿಮಾಗಳಲ್ಲಿ ಬುದ್ಧಿ ಹೇಳುವ ರೀತಿ ಬೇರೆ ಇತ್ತು, ಈಗ ಬೇರೆ ರೀತಿ ಇದೆ. ನನಗೆ ನನ್ನ ತಾಯಿಯೇ ರಿಯಲ್ ಹೀರೋ, ಅದರಲ್ಲಿ ಯಾವುದೇ ಅನುಮಾನವಿಲ್ಲ. ಆದರೂ ಎಲ್ಲೋ ಒಂದು ಕಡೆ ಸಿನಿಮ್ಯಾಟಿಕ್ ವೇನಲ್ಲಿ ಸ್ಲೋ ಮೋಷನ್‌ನಲ್ಲಿ ಪ್ರೀತಿ ತೋರಿಸುತ್ತಾರಲ್ಲ, ಅದನ್ನು ನನ್ನ ಅಮ್ಮನೂ ಮಾಡಬೇಕಿತ್ತು ಎಂದು ನನಗೆ ಅನ್ನಿಸುತ್ತಿತ್ತು, ಈಗಲೂ ಅನ್ನಿಸುತ್ತಿದೆ. ಅದೊಂಥರಾ ಚೆನ್ನಾಗಿರುತ್ತೆ. ಆದರೆ, ಅದೆಲ್ಲಾ ತೆರೆಯ ಮೇಲೆ ಮಾತ್ರ. ತೆರೆಯ ಹಿಂದೆ ಬಹುಶಃ ನಮ್ಮ ಅಮ್ಮಂದಿರು ಮಾಡುವ ಹಾಗೇ ಪಂಢರಿಬಾಯಿಯು ತಮ್ಮ ಮಕ್ಕಳಿಗೆ ಮಾಡಿರಬಹುದು. ತೆರೆ ಮೇಲೆ ಕಾಣಿಸುವುದೆಲ್ಲ ನಿಜ ಜೀವನದಲ್ಲಿ ಇದ್ದರೆ ಎಷ್ಟು ಚೆನ್ನಾಗಿರುತ್ತದೆ ಎಂದು ನನಗೆ ಒಮ್ಮೊಮ್ಮೆ ಅನ್ನಿಸುವುದು ಇದೆ.

– ಮಯೂರಿ, ಚಿತ್ರನಟಿ

**

ಗಾನಗಂಗೆ ಗಂಗಮ್ಮ

ದಿನಬೆಳಗಾಗುತ್ತಿದ್ದಂತೆ ಹೊಸಹೊಸ ಸವಾಲುಗಳನ್ನು ಎದುರಿಸುತ್ತಾ ಸಂಗೀತ ಸಾಧನೆ ಮುಂದುವರಿಸುವ ತಾಯಂದಿರಿದ್ದಾರೆ. ಅಂಥವರಿಗೆ, ಅಮ್ಮನ ಸ್ಥಾನದಲ್ಲಿದ್ದುಕೊಂಡು ಎಲ್ಲೂ ಸೋಲನ್ನೊಪ್ಪಿಕೊಳ್ಳದೆ ಮುನ್ನುಗ್ಗುವ ಛಲದ ದಾರಿ ತೋರುವುದು – ಡಾ. ವಿದುಷಿ ಗಂಗೂಬಾಯಿ ಹಾನಗಲ್ ಅವರ ಜೀವನಗಾಥೆ ಹಾಗೂ ಅವರ ಸಂಗೀತಯಾತ್ರೆ.

ಅಮ್ಮನೆಂದರೆ ಕೈ ಹಿಡಿದುಕೊಂಡು ಜೊತೆಗೇ ಸಾಗುವ ಮಾರ್ಗದರ್ಶಕಿ ಎಂದು ಹೇಗೆ ತಿಳಿಯುತ್ತೇವೆಯೋ ಹಾಗೆಯೇ ಅಮ್ಮ, ಆದರ್ಶದ ಸ್ಥಾನದಲ್ಲಿ ನಿಂತು ಮಕ್ಕಳಿಗೆ ಬೇಕಾದ ಸ್ಫೂರ್ತಿಯನ್ನು ನೀಡುವ ಜೀವಸೆಲೆಯೂ ಹೌದು.

ಪುರುಷಪ್ರಧಾನವಾಗಿದ್ದ, ಮಹಿಳೆಯರಿಗೆ ಅನುಕೂಲಕರವಾಗಿ ಇರದಿದ್ದ ಸಂಗೀತ ಕ್ಷೇತ್ರವನ್ನು ಧೈರ್ಯದಿಂದ ಹೊಕ್ಕು ನೋಡಿದ ಮೊದಲ ತಲೆಮಾರಿನ ಸಾಹಸಿ ಗಂಗಮ್ಮ. ಈ ಸಾಹಸ–ಸಾಧನೆಗೆ ಅವರಿಗೆ ಪ್ರೇರಣೆ, ಅವರ ತಾಯಿ ಅಂಬಾಬಾಯಿಯವರು. ಮಗಳ ಸಂಗೀತದಲ್ಲಿನ ಪ್ರತಿಭೆಯನ್ನು ಎಳೆವೆಯಲ್ಲೇ ಅವರು ಗುರುತಿಸಿದರು. ಮಗಳ ಹಿಂದೂಸ್ತಾನಿ ಸಂಗೀತಾಭ್ಯಾಸಕ್ಕೆ ತಾವು ಹಾಡುತ್ತಿರುವ ಕರ್ನಾಟಕಿ ಸಂಗೀತ ಅಡ್ಡಿ ಆಗಬಹುದೆಂದು ಭಾವಿಸಿ, ತಮ್ಮ ಸಂಗೀತವನ್ನು ತ್ಯಜಿಸಿ, ಮಗಳ ಸಾಧನೆಗೆ ಜೊತೆಯಾದರು. ಅಮ್ಮನೆಂದರೆ ತ್ಯಾಗಮಯಿ ಅಲ್ಲವೇ! ಗಂಗೂಬಾಯಿಯವರೂ ತಮ್ಮ ಮಗಳಾದ ಕೃಷ್ಣಾ ಅವರಿಗೆ ತಾವು ಆರಾಧಿಸಿದ ಸಂಗೀತವನ್ನು, ತಮ್ಮೆಲ್ಲಾ ಚಟುವಟಿಕೆಗಳ ನಡುವೆಯೂ ಧಾರೆ ಎರೆದರು.

ಸಂಗೀತ ಅಭ್ಯಾಸಕ್ಕಾಗಿ ಹೋರಾಟ ನಡೆಸಿ, ಪಂ. ಸವಾಯಿ ಗಂಧರ್ವರ ಶಿಷ್ಯರಾಗಿ ಸಾಧನೆ ಮಾಡುತ್ತಾ, ಜೀವನೋಪಾಯಕ್ಕಾಗಿ ದೇಶದಾದ್ಯಂತ ಕಾರ್ಯಕ್ರಮಗಳನ್ನು ಮಾಡುತ್ತಾ ಓಡಾಡಿ, ಸಂಸಾರದ ಆರ್ಥಿಕ ಸ್ಥಂಭವಾದವರು ಗಂಗೂಬಾಯಿ. ಮೂವರು ಮಕ್ಕಳನ್ನು ಹೆತ್ತು ಹೊತ್ತು, ವಿದ್ಯಾಭ್ಯಾಸ ನೀಡಿ ಸಂಸಾರ ತೂಗಿಸಲು ಹೆಣಗಾಡಿದರು. ಸಾಂಸಾರಿಕ ಏಳುಬೀಳುಗಳಿಗೆ ತಮ್ಮನ್ನು ಒಡ್ಡಿಕೊಳ್ಳುತ್ತಲೇ ಹಲವಾರು ಶಿಷ್ಯಮಕ್ಕಳಿಗೆ ವಿದ್ಯಾದಾನ ಮಾಡಿದರು. ಕಣ್ಣಮುಂದೆಯೇ ಮಗಳನ್ನು ಕಳೆದುಕೊಂಡು ತತ್ತರಿಸಿದರೂ ಸೋಲೊಪ್ಪದೆ ದೊಡ್ಡ ಆಲದಮರವಾಗಿ ನಿಂತ ಛಲಗಾತಿ, ಗಂಗೂಬಾಯಿ ಮಾಯಿ.

ಸಾಮಾಜಿಕವಾಗಿಯೂ ಆರ್ಥಿಕವಾಗಿಯೂ ಜೀವನದುದ್ದಕ್ಕೂ ಅಭದ್ರತೆಯೊಂದಿಗೇ ಗಂಗೂಬಾಯಿಯವರು ಬದುಕಬೇಕಾಗಿ ಬಂದಿತು. ಇಂದಿನ ಹೆಣ್ಣುಮಕ್ಕಳಿಗೂ ಸವಾಲೆನ್ನಿಸಬಹುದಾದ ಹಲವು ರೀತಿಯ ಸಾಮಾಜಿಕ ಕಟ್ಟುಪಾಡುಗಳನ್ನು ಅವರು ಎದುರಿಸಬೇಕಾಯಿತು.

ಕೇವಲ ಸಂಗೀತ ಕ್ಷೇತ್ರದಲ್ಲಿನ ನಮ್ಮ ಸಾಧನೆ, ಇಲ್ಲಿ ನಮ್ಮನ್ನು ಗುರುತಿಸಿಕೊಳ್ಳುವ ಬಗೆಯ ಬಗ್ಗೆ ಚಿಂತಿಸುವ ನಾವು ಇಂದಿನ ತಾಯಂದಿರು – ಸಮಾಜದಲ್ಲಿ ಗೌರವಾನ್ವಿತ ಸ್ಥಾನವೊಂದನ್ನು ದೊರಕಿಸಿಕೊಳ್ಳಲು, ಕುಟುಂಬವನ್ನು ನಿರ್ವಹಿಸಲು ಹೆಣಗಾಡುವ ಗಂಗಮ್ಮನ ಪಾತ್ರದಿಂದ ಕಲಿಯುವುದು ಅಪಾರವಾಗಿದೆ. ಆದ್ದರಿಂದಲೇ ಗಂಗೂಬಾಯಿ ಅಮ್ಮನನ್ನು ಕಂಡವರೂ ಬರಿದೇ ಅವರ ಬಗ್ಗೆ ಕೇಳಿದವರೂ ಸಂಗೀತವೆಂಬ ಜೀವನಯಾತ್ರೆ ಮುಂದುವರಿಸಲು, ಅವರ ಬದುಕಿನ ಜಾಡಿನತ್ತ ಮತ್ತೆ ಮತ್ತೆ ನೋಟ ಹರಿಸುತ್ತಿರುತ್ತಾರೆ.
- ಶ್ರೀಮತಿ ದೇವಿ, ಹಿಂದೂಸ್ತಾನಿ ಗಾಯಕಿ

**

ಜೀವ ನೀಡುವ ಮಾತಾಯಿ

ಸೂಲಗಿತ್ತಿ ನರಸಮ್ಮ ತುಮಕೂರು ಜಿಲ್ಲೆಯಲ್ಲಿ ಒಂದು ಜೀವಂತ  ದಂತಕಥೆ. ಸುಮಾರು ಮೂರು ಸಾವಿರಕ್ಕೂ ಹೆಚ್ಚು ಸಾಂಪ್ರದಾಯಿಕ ಹೆರಿಗೆಗಳನ್ನು ಮಾಡಿಸಿರುವ ಈ ಸಾಧ್ವಿಯ ಸೇವೆ ಸಮಾಜಕ್ಕೆ, ವೈದ್ಯಕೀಯ ಕ್ಷೇತ್ರಕ್ಕೆ ಮಾದರಿ ಹಾಗೂ ಅಚ್ಚರಿ.

ಬಸುರಿಯರ ಪಾಲಿಗೆ ತಾಯಿ ನರಸಮ್ಮ ಸಂಜೀವಿನಿಯೂ ಹೌದು, ದೇವಮಾತೆಯೂ ಹೌದು. ಸಾವಿರಾರು ಮಕ್ಕಳ ಸಹಜ–ಸರಳ,
ಆರೋಗ್ಯವಂತ ಜನನಕ್ಕೆ ಕಾರಣವಾಗಿರುವ ಅವರ ಸಹೃದಯತೆ, ಪ್ರೀತಿ, ವಿಶ್ವಾಸ, ತಾಯ್ತನ, ಅಂತಃಕರಣ, ಮಾನವೀಯತೆ, ಹೇಳಲಸದಳ. ಅವರ ಸಾಧನೆಯ ಹಾದಿಯೇ ಒಂದು ವಿಸ್ಮಯ. ವೈದ್ಯಲೋಕದ ಬೆರಗು. ಸಾಂಪ್ರದಾಯಿಕ ಹೆರಿಗೆ ಮಾಡಿಸುವುದು ಒಂದು ಮಾನವೀಯ ಕ್ರಿಯೆ, ಸವಾಲಿನ ನಂಬಿಕೆಯ ಗಳಿಗೆ ಅದು. ಒಂದು ಹೆರಿಗೆಯೂ ಫೇಲ್ ಆಗದಂತೆ ಹೆರಿಗೆ ಮಾಡಿಸಿದ ಸಾಧನೆ ಅವರದು.

ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕು ಕ್ಷೀಣ ಜಲಸಂಪನ್ಮೂಲಗಳ, ಬೆಟ್ಟಗುಡ್ಡಗಳ ಒಣ ಹವೆಯ ಭೂಭಾಗ. ಪಾವಗಡದ ತಿಮ್ಮನಾಯ್ಕನ ಪೇಟೆ ನರಸಮ್ಮನವರ ಹುಟ್ಟೂರು. ಬಾಲ್ಯದಲ್ಲಿ ಸೂಲಗಿತ್ತಿ ಕೆಲಸ ಮಾಡುತ್ತಿದ್ದ ತನ್ನ ಅಜ್ಜಿ (ತಾಯಿಯ ತಾಯಿ) ಮುರಿಗಮ್ಮನೊಂದಿಗೆ ನರಸಮ್ಮನವರಿಗೆ ವಿಪರೀತ ಸಲಿಗೆ. ಆ ಒಡನಾಟದಲ್ಲಿ ಅಜ್ಜಿಯದೇ ಕಾಯಕದಲ್ಲೇ ತನ್ನನ್ನು ತೊಡಗಿಸಿಕೊಳ್ಳಲು ಸಹಕಾರಿಯಾಯಿತು. ಹನ್ನೆರಡನೇ ವಯಸ್ಸಿಗೆ ಮದುವೆಯಾಗಿ ಕೃಷ್ಣಾಪುರಕ್ಕೆ ಬಂದ ನರಸಮ್ಮ, ತನ್ನ 22ನೇ ವಯಸ್ಸಿಗೇ ಪೂರ್ಣಪ್ರಮಾಣದ ಸೂಲಗಿತ್ತಿಯೇ ಆದರು.

ನರಸಮ್ಮನವರು ಗರ್ಭಿಣಿಯ ಪ್ರಸವದ ದಿನವನ್ನು ಲೆಕ್ಕಾಚಾರ ಮಾಡಿ ಹೇಳಿದರೆ ಎಂದೂ ತಪ್ಪುತ್ತಿರಲಿಲ್ಲವಂತೆ. ಪ್ರತಿ ಬಸುರಿಯ
ದೇಹ–ವರ್ತನೆಗಳನ್ನು ಗಮನಿಸಿಯೇ ಲೆಕ್ಕಾಚಾರ ಮಾಡುವ ವಿದ್ಯೆ ಸಿದ್ಧಿಸಿತ್ತು. ಪಾವಗಡ ತಾಲ್ಲೂಕು ಮೀರಿ ಆಂಧ್ರದ ಗಡಿಭಾಗಗಳಲ್ಲೂ ಸೂಲಗಿತ್ತಿ ನರಸಮ್ಮನವರು ಜಂಗಮರಂತೆ ಕಾಯಕದಲ್ಲಿ ತೊಡಗಿಕೊಂಡಿದ್ದು ಒಂದು ವಿಸ್ಮಯವೇ ಸರಿ.

ತನ್ನ ಹದಿಮೂರು ಮಕ್ಕಳ ಕುಟುಂಬವನ್ನು ನಿರ್ವಹಿಸುತ್ತಾ, ನರಸಮ್ಮ ಬಸುರಿಯರ ಪಾಲಿಗೆ ಸಂಜೀವಿನಿಯಂತೆ ಓಡಾಡುತ್ತಿದ್ದರು. ಅವರಿದ್ದರೆ ಸುತ್ತಮುತ್ತಲ ಬಸುರಿ ಹೆಣ್ಣುಮಕ್ಕಳಿಗೆ ನೆಮ್ಮದಿ ಮತ್ತು ಧೈರ್ಯ. ಈಗ್ಗೆ 70 ವರ್ಷಗಳ ಹಿಂದೆ ಕೃಷ್ಣಾಪುರದ ಸುತ್ತಮುತ್ತ  ಸಾಮಾನ್ಯ ಚಿಕಿತ್ಸೆಯ ವ್ಯವಸ್ಥೆಯೂ ಇರಲಿಲ್ಲ. ಆಗ ಬಸುರಿಯಾಗುವುದೆಂದರೆ, ಜೀವವನ್ನು ಕೈಯಲ್ಲಿ ಹಿಡಿದು ಹೆಣ್ಣುಮಕ್ಕಳು ಬದುಕಬೇಕಿತ್ತು. ಇಂಥ ಸಂದರ್ಭದಲ್ಲಿ ಸೂಲಗಿತ್ತಿಯೆಂಬ ದೇವತೆಯಂತೆ ಸಂಚರಿಸುತ್ತಿದ್ದ ನರಸಮ್ಮ– ಗರ್ಭಿಣಿಯರಲ್ಲಿ ಧೈರ್ಯ ತುಂಬಿ ಸಹಜ ಹಾಗೂ ಆರೋಗ್ಯಕರ ಹೆರಿಗೆ ಮಾಡಿಸುತ್ತಿದ್ದರು.

‘ಮಗು ಅಡ್ಡಡ್ಡವಾಗಿರುವಾಗ, ಮೃದುವಾಗಿ ಹೊಟ್ಟೆಯ ಮೇಲೆ ಕೈಯಾಡಿಸುತ್ತಾ, ಒಂದು ಕೈಯಿಂದ ಭ್ರೂಣದ ತಲೆಯನ್ನು ಕಿಬ್ಬೊಟ್ಟೆಯ
ಕಡೆಗೂ ಇನ್ನೊಂದು ಕೈಯಿಂದ ಪೃಷ್ಟದ ಭಾಗವನ್ನು ಎದೆಯ ಕಡೆಗೂ ತಿರುಗಿಸುತ್ತೇನೆ. ಆಗ ಹೆರಿಗೆ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.
ಇದರ ಜೊತೆಗೆ ಗರ್ಭಚೀಲವನ್ನು ಪ್ರಚೋದಿಸುವ ಕಷಾಯ ಕುಡಿಸಿದರೆ ಹೆರಿಗೆ ಸಲೀಸಾಗುತ್ತದೆ. ಹೆರಿಗೆಯ ನಂತರ ಪ್ಲೆಸೆಚಿಟಾ (ಕಸ) ಬೀಳುವುದು ತಡವಾದರೆ ಮೊದಲೇ ತಯಾರಿಸಿಕೊಂಡ ಆಯುರ್ವೇದದ ಲೇಹ್ಯವನ್ನು ತಿನ್ನಿಸಿ, ಬಾಣಂತಿಗೆ ವಾಂತಿ ಮಾಡಿಸಿ ತೆಗೆಯುತ್ತೇನೆ’ ಎಂದು ನರಸಮ್ಮನವರು ಅಭಿನಯಪೂರ್ವಕವಾಗಿ ಹೇಳತೊಡಗಿದರೆ ನಾವೂ ಹೆರಿಗೆಮನೆಯನ್ನು ಹೊಕ್ಕುಬಂದ ಅನುಭವವಾಗುತ್ತದೆ. 98ರ ವಯೋಮಾನದಲ್ಲೂ ನೆನಪು ಅವರಿಗೆ ಕೈಕೊಟ್ಟಿಲ್ಲ. ಸಾವಿರಾರು ಹೆರಿಗೆಗಳ ಸಾವಿರಾರು ವೈವಿಧ್ಯಮಯ ಅನುಭವಗಳೇ ಅವರಲ್ಲಿವೆ.

ನರಸಮ್ಮನವರ ಜೀವ ಪೊರೆಯುವ ಮಾನವೀಯ ಸೇವೆಗಾಗಿ ನೂರಾರು ಪ್ರಶಸ್ತಿಗಳು ಸಂದಿವೆ. ಸೂಲಗಿತ್ತಿ ಕಾಯಕಕ್ಕಾಗಿ ದೇಶದಲ್ಲೇ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದ ಮೊದಲಿಗರೆನ್ನುವುದು ಅವರ ಹೆಮ್ಮೆ. ತುಮಕೂರು ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್ ಪದವಿ, ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿಯೂ ಅವರಿಗೆ ಸಂದಿವೆ.
–ಬಿ.ಸಿ. ಶೈಲಾ ನಾಗರಾಜ್, ಲೇಖಕಿ

**

ಸಾವಿರದ ಮರದವ್ವ ತಿಮ್ಮಕ್ಕ ತಾಯೇ...

ಹತ್ತಾರು ಕಾರಣಗಳಿಗಾಗಿ ಮಕ್ಕಳನ್ನು ಹಡೆಯಲಾಗದ ಅದೆಷ್ಟೋ ಜೀವಗಳು ತಮ್ಮೆಡೆಗೆ ನುಗ್ಗಿಬರುವ ಸಮಾಜದ ಮೊನಚು ಉಗುರುಗಳಿಗೆ ಹೆದರುತ್ತವೆ. ಮಕ್ಕಳು ಬೇಕೆಂಬ ಆಕಾಂಕ್ಷೆಯು ಅವರಿಗೆ ಅನಿವಾರ್ಯತೆಯಾಗಿಬಿಡುತ್ತದೆ. ಮಕ್ಕಳ ಹೆರದ ಬದುಕು ಅಸಹನೀಯ ಅನಿಸುವಂತಾಗುತ್ತದೆ. ಆದರೆ ಇದರ ಹೊರತಾದ ವಿಶಾಲವ್ಯಾಪ್ತಿಯ ಪರ್ಯಾಯ ಯೋಚನೆಗಳು ಅವರನ್ನು ಈ  ಸಂಕಟದಿಂದ ಪಾರುಮಾಡಬಲ್ಲವು. ಇದಕ್ಕೆ ನಮ್ಮ ಸಾಲುಮರದ ತಿಮ್ಮಕ್ಕನೇ ಸಾಕ್ಷಿ!

ಕರ್ನಾಟಕದಲ್ಲಿ ಇರುವ ಸಾವಿರಾರು ತಿಮ್ಮಕ್ಕಂದಿರಲ್ಲಿ ಇವಳೂ ಒಬ್ಬಳಲ್ಲ. ಇವಳು ಭಿನ್ನ! ಇವಳು ನಡೆದಲ್ಲೆಲ್ಲ ಸಾಲುಮರಗಳು ಪರೇಡು ಬಂದಂತಾಗುತ್ತದೆ. ಇಂದು ‘ಸಾಲುಮರದ ತಿಮ್ಮಕ್ಕ’ ಕುದೂರಿನಿಂದ ಲಾಸ್ ಏಂಜಲೀಸ್‌ವರೆಗೆ ಸಾಗಿದ್ದಾಳೆ. ಆಕೆಯ ಬೆನ್ನಿಗೆ ಬಿದ್ದ ಮಕ್ಕಳ ಸಂಖ್ಯೆ ಒಂದೇ ಎರಡೇ... ಬರೋಬ್ಬರಿ 284! ಈ ಮಕ್ಕಳನ್ನು ಬೆಳೆಸಲು ಬಿಸಿಲು ಬಿರುಗಾಳಿ ಎನ್ನದೆ, ನಾಲ್ಕಾರು ಮೈಲಿ ನಡೆದು ನೀರುಣಿಸಿದ್ದಾಳೆ. ಆಗೆಲ್ಲಾ ಅವಳಿಗೆ ಪರಿಸರವಾದದ ಪರಿಕಲ್ಪನೆ ಇರಲಿಲ್ಲ, ನಾಡೋಜ–ರಾಜ್ಯಪ್ರಶಸ್ತಿ ಗೊತ್ತಿರಲಿಲ್ಲ. ಸುತ್ತಮುತ್ತಲ ನಾಕಾರು ಹಳ್ಳಿಗಳ ಹೆಸರು ಹೊರತಾಗಿ ಬೇರೆ ಯಾವ ಊರೂ ಗೊತ್ತಿರಲಿಲ್ಲ. ತಿಮ್ಮಕ್ಕನೆಂದೂ ಸಸ್ಯಶಾಸ್ತ್ರ ಕಲಿತಿಲ್ಲ, ಅಟ್ಲಾಸ್ ನೋಡುವುದು ತಿಳಿದೇ ಇಲ್ಲ.

ನಿರಕ್ಷರಕುಕ್ಷಿಯಾದ ಹೆಣ್ಣುಮಗಳೊಬ್ಬಳು ತನಗೆ ತಾಯ್ತನದ ಭಾಗ್ಯವಿಲ್ಲವೆಂದು ತಲೆಯಮೇಲೆ ಕೈಹೊತ್ತು ಕೂರದೆ, ಮಕ್ಕಳೆಂದು ಬೆಳೆಸಿದ ಸಾಲುಮರಗಳು ಇಂದು ಇಡೀ ವಿಶ್ವವನ್ನು ತನ್ನತ್ತ ಕರೆದು ‘ಅವ್ವ’ನ ತ್ಯಾಗದ ಕತೆಗಳನ್ನು ಬಿಚ್ಚಿಟ್ಟಿವೆ. ಆ ಕತೆ ಕೇಳಿ ಜಗತ್ತೇ ಬೆರಗಾಗಿದೆ.

ಮಾಗಡಿ ತಾಲ್ಲೂಕಿನ ಹುಲಿಕಲ್ ಪಂಚಾಯತಿಯಿಂದ ಅಮೇರಿಕದ ವೈಟ್ ಹೌಸಿನವರೆಗೆ ಹಬ್ಬಿದ ತಿಮ್ಮಕ್ಕನ ಕೀರ್ತಿ ಹಾಗೂ ಆಕೆ ಪಡೆದ ಗೌರವ ಮನ್ನಣೆಗಳಿಗೆ ಲೆಕ್ಕವಿಲ್ಲ. ಎಷ್ಟೋ ರಸ್ತೆಗಳು ಅವಳ ಹೆಸರನ್ನು ಹೊದ್ದು ಮಲಗಿವೆ. ಎಷ್ಟೋ ಮಕ್ಕಳು ತಿಮ್ಮಕ್ಕವ್ವನ ಹೆಸರನ್ನು ತಮ್ಮ ಉತ್ತರಪತ್ರಿಕೆಗಳಲ್ಲಿ ಬರೆಯುತ್ತಿದ್ದಾರೆ. ಸಾಲುಮರದ ತಿಮ್ಮಕ್ಕ ಇಂದು ಬಲುಪರಿಚಿತ ಹೆಸರು.

ಜಗತ್ತು ಎಣಿಸುತ್ತದೆ – ಕುಗ್ರಾಮದ ಮುದುಕಿ ಈಗ ಭಾರೀ ಫೇಮಸ್ಸು. ಅವಳಿದ್ದಲ್ಲಿಗೇ ಜನ ಬಂದು ಕಾರಿನಲ್ಲಿ ಕರೆದುಕೊಂಡು ಹೋಗುತ್ತಾರೆ, ಹೋದಲೆಲ್ಲಾ ಸೀರೆ ಕಣ ಕೊಡುತ್ತಾರೆ, ಸಿಎಮ್ಮು–ಪಿಎಮ್ಮಿನ ಜೊತೆ ವೇದಿಕೆ ಹಂಚಿಕೊಳ್ಳುತ್ತಾರೆ, ಅವಳಿಗೇನು ಕಡಿಮೆ? ಅವಳು ಮುಟ್ಟಿದ್ದೆಲ್ಲ ಚಿನ್ನ!

ವಾಸ್ತವ ಏನೆಂದರೆ, ಮಕ್ಕಳನ್ನೇ ಹೆರದ ಮಹಾತಾಯಿ ತಿಮ್ಮಕ್ಕ ತನ್ನೂರಿನಲ್ಲಿ ಒಂದು ಹೆರಿಗೆ ಆಸ್ಪತ್ರೆ ಕಟ್ಟಿಸಬೇಕೆಂದು ಕನಸು ಕಂಡು ದಶಕಗಳೇ ಉರುಳಿದವು. ಸರ್ಕಾರಗಳು ಬಂದವು, ಹೋದವು. ಸಂಘ-ಸಂಸ್ಥೆಗಳು ಅವ್ವನನ್ನು ಕರೆಸಿ ಸನ್ಮಾನ ಮಾಡಿ ಫೋಟೋ ಹೊಡೆಸಿಟ್ಟುಕೊಂಡವು. ಅವಳು ಸಮುದಾಯಕ್ಕಾಗಿ ಬಯಸಿದ ಒಂದು ಸಣ್ಣ ಆಸೆ ಇಂದಿಗೂ  ಈಡೇರದೆ ಹಾಗೇ ನೆನೆಗುದಿಗೆ ಬಿದ್ದಿವೆ.

ಗೌರಿ ಲಂಕೇಶ್ ಹತ್ಯೆ ವಿರೋಧಿಸಿ ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ತಿಮ್ಮಕ್ಕ ಹೇಳಿದ ಮಾತು ನನ್ನ ಕಿವಿಯಲ್ಲಿ ಇನ್ನೂ ಕೇಳಿಸುತ್ತಿದೆ, ‘ದ್ವೇಷ ಯಾರಿಗೂ ಒಳ್ಳೇದಲ್ಲ ಕಣ್ರಪ್ಪಾ. ಮನುಸ್ತಾಪ ಇದ್ರೆ ಕುಂತು ಮಾತಾಡ್ಕಬೇಕು ಕಣ್ರಪ್ಪ. ಬೇಕಂದಾಗ ಜೀವ ಕೊಡಕ್ಕೆ ಆಗ್ದಿದ್ದಮ್ಯಾಕೆ ತೆಗೆಯೋಕೆ ನಾವ್ಯಾರೇಳಿ?’. ಇಂಥ ಮಾತನ್ನು ಅಮ್ಮನಲ್ಲದೆ ಬೇರೆ ಯಾರಾದರೂ ಹೇಳಬಲ್ಲರೇ? ಹೇಳಿದರೂ ಅದಕ್ಕೆ ಅರ್ಥವಿದ್ದೀತೆ?
–ದೀಪಾ ಗಿರೀಶ್, ಸಾಮಾಜಿಕ ಕಾರ್ಯಕರ್ತೆ, ಕವಯಿತ್ರಿ

**

ವಿನಯ, ಮೌನ ಮತ್ತು ‘ಅವ್ವ’
ಎರಡು ದಶಕಗಳ ಹಿಂದೆ ಕನ್ನಡ ಎಂಎ ತರಗತಿಯಲ್ಲಿ ನಮಗೆ ಆಧುನಿಕ ಕನ್ನಡ ಕಾವ್ಯ ಪಾಠ ಮಾಡುತ್ತಿದ್ದ ಎಚ್‍. ಎಸ್‍. ರಾಘವೇಂದ್ರ ರಾವ್ ಮೇಷ್ಟ್ರು ‘ನನ್ನವ್ವ ಫಲವತ್ತಾದ ಕಪ್ಪು ನೆಲ...’ ಎಂದು ಓದಿದಾಗ, ಅರೆ! ಇದೇನೋ ಹೊಸದಾಗಿದೆ ಎಂದು ಕಿವಿಗಳು ಅರಳಿದ್ದವು. ನನ್ನ ಲೋಕಕ್ಕೆ ಹೊಸದಾಗಿದ್ದ ರೂಪಕಗಳ ಬೆನ್ನುಹತ್ತಿ ಮನಸ್ಸು ಇಂತಹ ಅವ್ವನನ್ನು ಹುಡುಕಾಡಿತು. ಅಮ್ಮನ ಕುರಿತಾದ ಕಲ್ಪನೆಗಳ ಸಿದ್ಧ ಮಾದರಿಗಳನ್ನು ಒಡೆದು ಸಹಜ ಶಿಲ್ಪವೊಂದನ್ನು ಕೆತ್ತಿದ ಪಿ. ಲಂಕೇಶ್ ‘ಅವ್ವ’ ಕವಿತೆ ಬಹುವಾಗಿ ಕಾಡಿತು.

ನನ್ನಮ್ಮನನ್ನು ಈ ಅವ್ವನೊಂದಿಗೆ ಮನಸ್ಸು ಹೋಲಿಸಿ ನೋಡಿತ್ತು. ನನ್ನಮ್ಮ ಬನದ ಕರಡಿಯಂತಲ್ಲ, ನನ್ನಮ್ಮ ಭಗವದ್ಗೀತೆಯನ್ನು ಒಲ್ಲೆ ಎಂದವಳಲ್ಲ, ಆದರೆ ಅವಳು ಕೂಡ ಬಯಸಿದ್ದು ದುಡಿದದ್ದು ಕಾಳುಕಡ್ಡಿಗೆ, ಮಕ್ಕಳಿಗೆ, ಸರೀಕರ ಎದುರು ತಲೆಯೆತ್ತಿ ನಡೆಯಲಿಕ್ಕೆ ಎನ್ನುವುದಂತೂ ಸತ್ಯ.

ಶಾಲೆಯ ಗೆಳತಿಯೊಬ್ಬಳ ಅಜ್ಜಿಯನ್ನು ನೋಡಿದ ನೆನಪು ಈ ಪದ್ಯಕ್ಕೊಂದು ಮೂರ್ತ ರೂಪ ನೀಡಿತ್ತು. ಈ ಅವ್ವನ ಚಿತ್ರ ನನ್ನ ಗೆಳತಿಯ ಆ ಅಜ್ಜಿಯನ್ನು ಹೋಲುತ್ತಿತ್ತು. ಆಕೆಯಲ್ಲಿ ಥೇಟ್ ಅವ್ವನಂತದೇ ಅಸಾಧಾರಣ ಬದುಕುವ ಛಲ ಮತ್ತು ಸ್ವಾಭಿಮಾನ. ತನ್ನ ಗಂಡನಿಲ್ಲದ ಮಗಳು ಹಾಗೂ ಮೊಮ್ಮಗಳನ್ನು ಆಕೆ ಕಾಪಿಟ್ಟು ಸಾಕಿದ್ದು ಥೇಟ್ ಬನದ ಕರಡಿಯ ಹಾಗೆ. ಸಣ್ಣತನ, ಕೊಂಕು, ಕೆನೆದಾಟ... ಮನೆತನದ ಉದ್ಧಾರ ಸೂತ್ರವನ್ನು ಹಿಡಿದು ನಿಂತ ಆಕೆ ಮಗಳು ಹಾಗೂ ಮೊಮ್ಮಗಳ ಬದುಕಿಗೆ ಆಸರೆಯಾಗಿ ಅಚಲವಾಗಿ ನಿಂತವಳು.

ಅಮ್ಮನಾಗುವುದಕ್ಕೆ ಮೊದಲು ಹೀಗೆ ನನ್ನಮ್ಮ, ಮತ್ತೊಬ್ಬರ ಅಮ್ಮ ಎಂದು ನೋಡುತ್ತಿದ್ದ ನನಗೆ ನಿಜವಾಗಿ ಅಮ್ಮನೆಂದರೆ ಏನು ಎನ್ನುವುದು ಅನುಭವಾಗಿದ್ದು ನನ್ನ ಮಡಿಲಿಗೆ ಮಗಳು ಬಂದ ಮೇಲೆ. ಮಗಳು ಹುಟ್ಟಿದ ಮೇಲೆ ನನ್ನಮ್ಮ ಕೂಡ ಬೇರೆಯಾಗಿ, ಹಿಂದೆಂದೂ ಅರ್ಥವಾಗದಿದ್ದ ರೀತಿಯಲ್ಲಿ ಅರ್ಥವಾಗತೊಡಗಿದಳು. ಅವಳೊಳಗಿನ ಪೊರೆಯುವಿಕೆ, ಮಿಡಿಯುವಿಕೆ, ವಿನಯ, ಮೌನಗಳು ನಿಧಾನವಾಗಿ ಅರಿವಾಗತೊಡಗಿತು. ಈಗ ಲಂಕೇಶರ ‘ಅವ್ವ’ ಪದ್ಯಗಳು ಇನ್ನಷ್ಟು ಆಪ್ತ.

ಪ್ರಕೃತಿ ಸಹಜವಾಗಿ ಹೆಣ್ಣಿಗೆ ಸಾಧ್ಯವಾಗುವ ತಾಯ್ತನ, ಅದರೊಂದಿಗೆ ಪೊರೆಯುವ, ಬದುಕನ್ನು ಕಾಪಿಡುವ ಗುಣವನ್ನು, ಧೈರ್ಯವನ್ನು ಆಕೆಯಲ್ಲಿ ತಂದುಬಿಡುತ್ತದೇನೋ. ಕಪ್ಪು ಮಣ್ಣಿನ ಫಲವತ್ತತೆ, ಹೆಸರು ಗದ್ದೆಯ ನೋಡಿಕೊಳ್ಳುವ ಹೊಣೆ, ಬನದ ಕರಡಿಯ ಹಾಗೆ ಮಕ್ಕಳನ್ನು ಕಾಪಾಡುವುದು, ಇವೆಲ್ಲವೂ ಆಕೆಯಲ್ಲಿ ಸಹಜವಾಗಿ ಬರುವುದರೊಂದಿಗೆ ಎಲ್ಲೋ ಒಂದು ಕಡೆ ಸಮಾಜವು ಈ ಹೊಣೆಗಾರಿಕೆಯನ್ನು ಅಲಿಖಿತ ನಿಯಮವಾಗಿ ಆಕೆಯ ಹೆಗಲಿಗೆ ದಾಟಿಸಿಬಿಡುತ್ತದೆ.

ಮಗಳಾಗಿ ಅವ್ವನನ್ನು ಮೊದಲಿಗೆ ಓದಿದಾಗ ಅರ್ಥವಾದ ರೀತಿ ಬೇರೆ, ಈಗ ಅಮ್ಮನಾದ ಮೇಲೆ ಅವ್ವ ಅರ್ಥವಾಗುತ್ತಿರುವ ರೀತಿ ಬೇರೆ. ಅವ್ವ ಪದ್ಯದ ಬಗ್ಗೆ, ನನ್ನಮ್ಮನ ಬಗ್ಗೆ ಈಗ ಅನ್ನಿಸುತ್ತಿರುವುದು: ‘ಇವಳಿಗೆ ಮೆಚ್ಚುಗೆ; ಹೆತ್ತದ್ದಕ್ಕೆ, ಸಾಕಿದ್ದಕ್ಕೆ; ಬದುಕುವುದನ್ನು ಬದುಕಿ ತೋರಿಸುವ ಮೂಲಕ ಕಲಿಸಿದ್ದಕ್ಕೆ ಕೃತಜ್ಞತೆ’. ಈಗ ನನ್ನೊಳಗಿರುವ ಅಮ್ಮ ಮತ್ತು ಅವ್ವನನ್ನು (ಪದ್ಯ) ನೋಡಿಕೊಂಡಾಗ ಕಂಡಿದ್ದು: ವಿನಯ ಮತ್ತು ಮೌನ.
–ಹೇಮಾ ಹೆಬ್ಬಗೋಡಿ, ಲೇಖಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT