ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮ್ಮ ದೇವರಿಗಿಂತ ದೊಡ್ಡವಳು... ದೇವರು ಕೈಗೆ ಸಿಗುವುದಿಲ್ಲ!

Last Updated 11 ಮೇ 2018, 19:30 IST
ಅಕ್ಷರ ಗಾತ್ರ

ಅಮ್ಮ ಎಂದರೆ ದೇವರು ಎನ್ನುತ್ತಾರೆ. ಅದು ಸುಲಭವಾಗಿ ಸಿಗುವ ಹೋಲಿಕೆ ಕೂಡ. ಆದರೆ ಅಮ್ಮನನ್ನು ನಾನು ದೇವರಿಗೆ ಹೋಲಿಸುವುದಿಲ್ಲ. ಏಕೆಂದರೆ, ಬೇಕೆಂದಾಗ ದೇವರು ನಮ್ಮ ಕೈಗೆ ಸಿಗುವುದಿಲ್ಲ. ಅಮ್ಮ ಹಾಗಲ್ಲ – ನನ್ನ ಕಷ್ಟಸುಖಗಳಿಗೆ ಜೊತೆಯಾಗಿ ಸದಾ ನನ್ನೊಂದಿಗೆ ಇರುತ್ತಾಳೆ. ಆದ್ದರಿಂದ ಅಮ್ಮ ‘ನನ್ನ ಆಪ್ತಗೆಳತಿ’ ಎಂದು ಹೇಳಿಕೊಳ್ಳುತ್ತೇನೆ.

ಮಕ್ಕಳ ವ್ಯಕ್ತಿತ್ವ ರೂಪಿಸುವುದರಲ್ಲಿ ತಂದೆ–ತಾಯಿಯ ಪಾತ್ರ ತುಂಬಾ ಮುುಖ್ಯ. ಅವರು ನಮ್ಮನ್ನು ಹೇಗೆ ಬೆಳೆಸಿದರು ಎನ್ನುವುದರ ಮೇಲೆ ನಾವು ಏನಾಗುತ್ತೇವೆ ಎಂಬುದು ಸ್ಪಷ್ಟಗೊಳ್ಳುವುದು. ಹಾಗೆಯೇ ಈಗ ನಾನು ಏನಾಗಿದ್ದೇನೋ ಅದರ ಹಿಂದೆ ನನ್ನ ತಾಯಿಯ ನೆರಳಿದೆ.

ನನ್ನ ಜೀವನದಲ್ಲಿ ನನ್ನ ತಾಯಿಯ ಪಾತ್ರ ಬಹಳ ಪ್ರಮುಖವಾದದ್ದು. ಅವರು ತುಂಬಾ ಗಟ್ಟಿ ಹೆಣ್ಣು. ಅಪ್ಪ ತೀರಿಕೊಂಡ ಸಂದರ್ಭದಲ್ಲಿ, ಮಕ್ಕಳಿಗಾಗಿ ಗಟ್ಟಿಯಾಗಿ ನಿಂತರು. ನಾನು ಮತ್ತು ನನ್ನ ಸೋದರನನ್ನು ಧೈರ್ಯದಿಂದ ಬೆಳೆಸಿದರು. ಅಪ್ಪ ಹಾಗೂ ಅಮ್ಮ – ಎರಡು ಪಾತ್ರಗಳನ್ನೂ ಅವರೊಬ್ಬರೇ ನಿಭಾಯಿಸಿದರು. ಹಣಕಾಸಿನ ವಿಚಾರವಾಗಲೀ ಮನೆ ನಿಭಾಯಿಸುವುದರಲ್ಲಾಗಲೀ ನಮ್ಮನ್ನು ಬೆಳೆಸುವುದರಲ್ಲಾಗಲೀ – ಎಲ್ಲಿಯೂ ರಾಜಿ ಮಾಡಿಕೊಳ್ಳದೆ, ಎಲ್ಲದರ ಜವಾಬ್ದಾರಿಯನ್ನೂ ಸಂಪೂರ್ಣ ನಿಭಾಯಿಸಿ ನಮ್ಮನ್ನು ಬೆಳೆಸಿದ್ದು ಸಾಮಾನ್ಯ ಸಂಗತಿಯೇನೂ ಅಲ್ಲ.

ಅವರು ಗಟ್ಟಿ ಹೆಣ್ಣಷ್ಟೇ ಅಲ್ಲ, ಸ್ವತಂತ್ರ ಮಹಿಳೆಯಾಗಿಯೂ ನನಗೆ ಕಾಣುತ್ತಾರೆ. ತನಗೆ ಏನನ್ನಿಸುತ್ತದೋ ಆ ಅಭಿಪ್ರಾಯವನ್ನು ನೇರವಾಗಿ, ಸ್ಪಷ್ಟವಾಗಿ, ಆದರೆ ಬೇಸರ ಆಗದಂತೆ ಹೇಳಿಬಿಡುತ್ತಾರೆ. ಆ ಗುಣ ಅಮ್ಮನಿಂದ ನನಗೂ ಬಂದುಬಿಟ್ಟಿದೆ.

ಅಮ್ಮ ಚಿಕ್ಕಂದಿನಲ್ಲಿ ನನಗೆ ಹೇಳುತ್ತಿದ್ದ ಒಂದು ಮಾತು – ‘ಡ್ರೀಮ್ ಬಿಗ್’. ‘ನೀನು ಆಕಾಶಕ್ಕೆ ಗುರಿ ಇಟ್ಟರೆ ಮನೆಯ ಚಾವಣಿಯನ್ನಾದರೂ ಏರುತ್ತೀಯ. ಮನುಷ್ಯ ಕನಸು ಕಾಣಬೇಕು. ಯಾವತ್ತಿಗೂ ಕನಸು ಕಾಣುವುದನ್ನು ನಿಲ್ಲಿಸಬೇಡ’ ಎಂದು ಹೇಳುತ್ತಿದ್ದರು. ಆ ಮಾತು ಶಾಲೆಗೆ ಹೋಗುವ ದಿನಗಳಲ್ಲಿ ಎಷ್ಟು ಅರ್ಥವಾಗಿತ್ತೋ ಗೊತ್ತಿಲ್ಲ. ಆದರೆ ಕನಸು ಕಾಣುವುದನ್ನು ಕಲಿಸಿಕೊಟ್ಟಿದ್ದೇ ಅಮ್ಮ. ಈ ಒಂದು ಮನೋಭಾವವೇ ನನ್ನನ್ನು ಇಂದು ನಟಿಯಾಗಿ ನಿಲ್ಲಿಸಿದ್ದು. ಅಮ್ಮ ತುಂಬಿದ ಕನಸುಗಳೇ ನನ್ನೊಳಗಿನ ನಟಿ ಎನ್ನಬಹುದೇನೋ?

ಅವರು ಯಾವಾಗಲೂ ಹೇಳುತ್ತಿದ್ದ ಇನ್ನೂ ಒಂದು ಮಾತು – ‘ನೀನು ಪ್ರಾಮಾಣಿಕವಾಗಿದ್ದರೆ, ಸತ್ಯದಿಂದ ಇದ್ದರೆ, ಏನೇ ಮಾಡಿದರೂ ಯಾವತ್ತೂ ದಾರಿ ತಪ್ಪುವುದಿಲ್ಲ’. ಇಂಥ ಚಿಕ್ಕಪುಟ್ಟ ವಿಷಯಗಳನ್ನು ಹೇಳುತ್ತಲೇ ಅಮ್ಮ ನನ್ನನ್ನು ಬೆಳೆಸಿದರು. ಇಂಥ ಮೌಲ್ಯಗಳನ್ನು ವಯಸ್ಸಿನೊಂದಿಗೇ ನಮ್ಮ ಜೀವನದಲ್ಲಿ ತುಂಬಿದರು. ಈ ಸಣ್ಣಪುಟ್ಟ ವಿಷಯಗಳು ಎಷ್ಟೊಂದು ಬದಲಾವಣೆ ತರುವಂಥದ್ದು ಎಂಬುದು ಈಗ ಅರ್ಥವಾಗುತ್ತದೆ.

ನನ್ನಮ್ಮ ತುಂಬಾ ಗಂಭೀರ–ಕಟ್ಟುನಿಟ್ಟೇನೂ ಅಲ್ಲ. ವಾರಕ್ಕೊಮ್ಮೆಯಾದರೂ ನಾನು–ನಮ್ಮಮ್ಮ ಜಗಳ ಆಡಲೇಬೇಕು. ಇಲ್ಲ ಎಂದರೆ ಜಗಳಕ್ಕೇ ಬೇಜಾರು ಬಂದುಬಿಡಬಹುದು. ನಮ್ಮ ನಡುವೆ ಯಾವುದೇ ಮುಚ್ಚುಮರೆ ಇಲ್ಲ. ಜನರೇಷನ್ ಗ್ಯಾಪ್ ಅನ್ನೋದು ಅಲ್ಲೋ ಇಲ್ಲೋ ಇಣುಕಿದರೂ ಪ್ರೀತಿಯಲ್ಲಿ ಅವೆಲ್ಲ ಗೌಣವೇ. ನನ್ನ ಮನೆಯಲ್ಲಿ ಅಜ್ಜಿ (ತಾಯಿಯ ತಾಯಿ) ಇದ್ದರು. ಅವರಿಬ್ಬರ ನಡುವೆಯೂ ಜನರೇಷನ್ ಗ್ಯಾಪ್ ಇತ್ತು. ಅವರು ಹೇಳುವುದು ಇವರಿಗೆ ಒಪ್ಪಿಗೆ ಇಲ್ಲ. ಇವರು ಹೇಳುವುದು ಅವರಿಗೆ ಆಗಲ್ಲ. ಆದರೆ ಅವೆಲ್ಲವೂ ಶುದ್ಧ ಮನಸ್ಸಿನ ಪ್ರೀತಿಯ ಜಗಳಗಳಷ್ಟೇ.
ಅಮ್ಮನಿಂದ ಕಲಿತ ಪಾಠಗಳು ಒಂದೆರಡಲ್ಲ. ಅದರಲ್ಲಿ ಸ್ವಚ್ಛತೆ ಕೂಡ ಒಂದು. ಮನೆಯನ್ನಷ್ಟೇ ಅಲ್ಲ, ನನ್ನ ಜೀವನವನ್ನೂ ವ್ಯವಸ್ಥಿತವಾಗಿ, ಯೋಜಿತವಾಗಿ, ಸ್ವಚ್ಛವಾಗಿ ಇಟ್ಟುಕೊಳ್ಳುವ ಕಲೆಯೂ ಅಮ್ಮನಿಂದಲೇ ಒಲಿದಿದ್ದು.

ಅಮ್ಮ ಕ್ರಿಯಾಶೀಲ ವ್ಯಕ್ತಿ. ಅವರಿಗೆ ಗಾಯಕಿ ಆಗಬೇಕು ಎಂದು ಆಸೆ ಇತ್ತಂತೆ. ‘ಅದೆಲ್ಲಾ ಒಂದು ವೃತ್ತಿ ಅಲ್ಲ’ ಎಂದು ಅವರ ತಂದೆ–ತಾಯಿ ಸಂಗೀತಕ್ಕೆ ಅಷ್ಟು ಮಹತ್ವ ಕೊಡಲಿಲ್ಲ. ಅಮ್ಮನಿಗೆ ಆ ಅವಕಾಶ ಸಿಗಲಿಲ್ಲ. ಆದರೆ ನನ್ನ ಜೀವನದಲ್ಲಿ ಅದಕ್ಕೆ ವಿರುದ್ಧ ಎಂಬಂತೆ, ನೃತ್ಯ, ನಟನೆ ಏಕೆ ವೃತ್ತಿ ಆಗಬಾರದು ಎಂದು ಯೋಚಿಸಿದವಳು ನಾನು. ಅದನ್ನೇ ಕೈಗೆತ್ತಿಕೊಂಡೆ. ಅಮ್ಮನ ಜಾಗದಲ್ಲಿ ನಾನಿದ್ದರೂ ಹಟದಿಂದ ನಾನು ಮುಂದುವರಿಯುತ್ತಿದ್ದೆ. ಈ ವಿಷಯದಲ್ಲಿ ಅಮ್ಮನಿಗಿಂತ ನಾನು ಬೇರೆ ಅನ್ನಿಸುತ್ತದೆ.

ನನ್ನ ವೃತ್ತಿಗೂ ನನ್ನ ತಾಯಿಯ ಬೆಂಬಲ ಇಲ್ಲದಿಲ್ಲ. ಆದರೆ ಅದರ ರೀತಿ ಬೇರೆ ಇದೆ. ಬಹಳ ನಟಿಯರ ಸೆಟ್‍ನಲ್ಲಿ ಅವರ ತಾಯಂದಿರೂ ಬಂದು ಜೊತೆಯಿರುವುದನ್ನು ನೋಡಿದ್ದೇನೆ. ನನ್ನ ತಾಯಿ ಯಾವತ್ತೂ ಸೆಟ್‍ಗೆ ಬಂದಿಲ್ಲ. ಅದಕ್ಕೆ ಕಾರಣ, ಅವರು ನನ್ನನ್ನು ನಂಬುತ್ತಾರೆ. ಏನಾದರೂ ಸಮಸ್ಯೆ ಉಂಟಾದರೆ ಅದನ್ನು ನಿರ್ವಹಿಸುವ ಸಾಮರ್ಥ್ಯ ನನಗಿದೆ ಎಂಬ ವಿಶ್ವಾಸ ಅವರಿಗಿದೆ. ಆದರೆ ಮಾನಸಿಕವಾಗಿ, ನೈತಿಕ ಬೆಂಬಲವಾಗಿ ಅವರು ನನ್ನೊಂದಿಗೆ ಸದಾ ಇರುತ್ತಾರೆ.

ಅವರದು ‘ಕ್ರಿಟಿಕಲ್ ಸಪೋರ್ಟ್’ ಕೂಡ ಹೌದು. ನನ್ನ ಸಿನಿಮಾ ನೋಡಿದಾಗ, ‘ಅದು ಚೆನ್ನಾಗಿರಲಿಲ್ಲ, ಹೀಗೆ ಮಾಡಬಹುದಿತ್ತು. ಇದು ಓವರ್ ಆಕ್ಟಿಂಗ್ ಅನ್ನಿಸಿತು. ಇದನ್ನು ಏಕೆ ಮಾಡಿದೆ’ ಇಂಥ ವಿಚಾರಗಳನ್ನೆಲ್ಲ ಬಹಳ ಸ್ಪಷ್ಟವಾಗಿ ಹೇಳುವ ವಿಮರ್ಶಕಿ ಅವರು. ಮಗಳು ಮಾಡಿದ್ದೆಲ್ಲ ಸರಿ ಎಂದು ಹೇಳುವ ಜಾಯಮಾನ ಖಂಡಿತ ಅವರದ್ದಲ್ಲ. ತಪ್ಪು ಅನ್ನಿಸಿದರೆ ತಪ್ಪು ಅನ್ನುತ್ತಾರೆ. ಹೊಗಳುವುದಕ್ಕಿಂತ ನಿಜ ಹೇಳುವುದೇ ಸರಿ ಅಲ್ಲವಾ?

ಬೇಸರ ಅನ್ನಿಸಿದಾಗಲೆಲ್ಲ ನಾನು ಮೊದಲು ಹುಡುಸುವ ದನಿ ಅಮ್ಮನದ್ದೇ. ಬೇಸರ ಆದಾಗ ನಾವು ಯೋಚನೆ ಮಾಡುವುದು ಒಂದೇ ದೃಷ್ಟಿಕೋನದಲ್ಲಿರುತ್ತದೆ. ಬೇಜಾರಾದಾಗ ನಮ್ಮನ್ನು ನಾವು ಸಂತ್ರಸ್ತರಂತೆ ನೋಡಿಕೊಳ್ಳುವ ಸಂದರ್ಭವೇ ಹೆಚ್ಚು. ಆದರೆ ಏನೇ ಆದರೂ ಆ ಘಟನೆಯ ಆಚೆ ನಿಂತು ಯೋಚಿಸಬೇಕು. ಪರಿಹಾರ ಕಂಡುಕೊಳ್ಳಬೇಕು, ಇಲ್ಲವೇ ಇದು ನನ್ನ ಪಾಲಿಗಿರುವ ಬೇಸರ ಎಂದು ದೃಢವಾಗಬೇಕು ಎಂಬು ಯೋಚನಾ ಲಹರಿಯನ್ನು ಬೆಳೆಸಿದ್ದೇ ಅಮ್ಮ. ಈ ಕ್ಷಣ ಶಾಶ್ವತವಲ್ಲ. ದುಃಖ ಹೀಗೆ ಬಂದು ಹಾಗೆ ಹೋಗಿಬಿಡುತ್ತದೆ ಎಂದು ಮಗುವಂತೆ ರಮಿಸುವವರೂ ಅವರೇ.

ನನಗೆ ಆಗಾಗ್ಗೆ ಅನ್ನಿಸುತ್ತದೆ – ನನ್ನ ತಾಯಿಯ ಕನಸು ನನ್ನ ಹೆಸರಿರಬಹುದಾ ಎಂದು. ಅವರಿಗೆ ಸಂಗೀತ ಎಂದರೆ ಇಷ್ಟವಾದ ಕಾರಣಕ್ಕೆ ನನಗೆ ಈ ಹೆಸರಿಟ್ಟಿರಬಹುದು. ಅವರೇನೂ ಯಾವತ್ತೂ ಹೇಳಿಕೊಂಡಿಲ್ಲ.

ಬೇಸರ ಅನ್ನಿಸಿದಾಗಲೆಲ್ಲ, ಮನೆಯಲ್ಲಿ ಆರಾಮಾಗಿ ಹಾಡು ಗುನುಗುತ್ತಾ ಅಡುಗೆಗೆ ಒಗ್ಗರಣೆ ಹಾಕುವ ಅಮ್ಮನನ್ನು ನೆನಪಿಸಿಕೊಳ್ಳುತ್ತೇನೆ. ಮನಸ್ಸು ಹಗುರ ಅನ್ನಿಸುತ್ತದೆ. ಇವತ್ತಿಗೂ ಇಡೀ ಜೀವನದಲ್ಲಿ ನನ್ನನ್ನು ‘ಊಟ ಮಾಡಿದ್ಯಾ, ತಿಂಡಿ ತಿಂದ್ಯಾ’ ಎಂದು ವಿಚಾರಿಸುವ ಏಕೈಕ ವ್ಯಕ್ತಿ ಎಂದರೆ ಅಮ್ಮ. ನಾನು ಸುಳ್ಳು ಹೇಳಿದರೂ ಅವರಿಗೆ ಗೊತ್ತಾಗಿಬಿಡುತ್ತದೆ. ಅದಲ್ಲವೇ ಅಮ್ಮನ ಪ್ರೀತಿ!

ನಿರೂಪಣೆ: ಸುಮಲತಾ ಎನ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT