ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುರಿದು ಕಟ್ಟಿದ ಥ್ರಿಲ್ಲರ್

Last Updated 11 ಮೇ 2018, 20:22 IST
ಅಕ್ಷರ ಗಾತ್ರ

ಪತ್ತೇದಾರಿ ಕಾದಂಬರಿ ಯಾವುದೇ ಭಾಷೆಯಲ್ಲೂ ಜನಪ್ರಿಯ ಮಾದರಿ. ಅದರಲ್ಲೂ ನೈಜ ಘಟನೆಗಳನ್ನು ಆಧರಿಸಿದ ಕೃತಿಯ ಓದಂತೂ ಕಟ್ಟಿಕೊಡುವ ಅನುಭವ ಅನನ್ಯ. ಹರೀಂದರ್ ಸಿಕ್ಕ ಬರೆದಿದ್ದ ‘ಕಾಲಿಂಗ್ ಸೆಹಮತ್’ ಕಾದಂಬರಿ ಅಂಥದ್ದೇ ಪ್ರಕಾರಕ್ಕೆ ಸೇರಿದ್ದು. ಅದರಿಂದ ಸ್ಫೂರ್ತಿ ಪಡೆದು, ಮೇಘನಾ ಗುಲ್ಜಾರ್ ‘ರಾಝಿ’ ಸಿನಿಮಾ ನಿರ್ದೇಶಿಸಿದ್ದಾರೆ. ಚಿತ್ರಕಥೆ ರೂಪಿಸುವಲ್ಲಿ ಅವರಿಗೆ ಸಾಥ್ ನೀಡಿರುವವರು ಭವಾನಿ ಅಯ್ಯರ್.

ಪತ್ತೆದಾರಿ ಥ್ರಿಲ್ಲರ್ ಸಿನಿಮಾಗಳಿಗೂ ಒಂದು ಸೂತ್ರವಿದೆ. ಅದನ್ನು ಪೂರ್ತಿ ಚಿಂದಿ ಉಡಾಯಿಸಿ ಮೇಘನಾ ಈ ಚಿತ್ರಕಥೆ ರೂಪಿಸಿರುವುದು ಅವರ ಕೌಶಲಕ್ಕೆ ಹಿಡಿದ ಕನ್ನಡಿ. ಭಾರತ-ಪಾಕಿಸ್ತಾನದ ನಡುವೆ 1971ರಲ್ಲಿ ಯುದ್ಧ ಆಗುವ ಮೊದಲಿನ ಕುದಿ ಕ್ಷಣಗಳು ಚಲನಚಿತ್ರದ ವಸ್ತು. ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯು ಮರಣಶಯ್ಯೆಯ ಮೇಲಿರುವ ತನ್ನ ಅಪ್ಪನ ದೇಶಭಕ್ತಿಯನ್ನು ಆವಾಹಿಸಿಕೊಂಡು, ಆತನ ಇಶಾರೆಯಂತೆ ಪಾಕಿಸ್ತಾನಕ್ಕೆ ಬೇಹುಗಾರಿಕೆ ಮಾಡಲು ಹೊರಡುವುದು ಕಥಾ ಸಾರಾಂಶ. ಪಾಕಿಸ್ತಾನದ ಸೇನೆಯವರೇ ಹೆಚ್ಚಾಗಿ ಇರುವಂಥ ಕುಟುಂಬದ ಸೊಸೆಯಾಗಿ ಹೋಗಿ, ನಾಯಕಿ ತನ್ನ ಮನೆಯಲ್ಲೇ ಬೇಹುಗಾರಿಕೆ ಮಾಡುವುದು ವಿಶೇಷ.

ಸೂತ್ರಬದ್ಧ ಸಿನಿಮಾಗಳ ಪತ್ತೆದಾರಿ ನಾಯಕ, ನಾಯಕಿಗೆ ಇರಬಹುದಾದ ಎಲ್ಲ ‘ಬಿಲ್ಡಪ್‌'ಗಳನ್ನೂ ಅಳಿಸಿ, ಮೇಘನಾ ತಮ್ಮ ನಾಯಕಿ ಪಾತ್ರದ ‘ಗ್ರಾಫ್’ ಬರೆದಿದ್ದಾರೆ. ಅವಳು ಮದುವೆಯಾಗುವ ನಾಯಕನದ್ದೂ ತೂಕದ ವ್ಯಕ್ತಿತ್ವ. ಇಬ್ಬರೂ ದೇಶಭಕ್ತರೇ. ಅವರ ದೇಶಗಳು ಬೇರೆ ಬೇರೆ ಎನ್ನುವುದರಲ್ಲೇ ದೊಡ್ಡ ಭಾವ ಸಂಘರ್ಷವಿದೆ.

ಶಬ್ದಾಡಂಬರವಾಗಲೀ, ಏರಿದ ದನಿಯಾಗಲೀ ಇಲ್ಲದ ದೇಶಾಭಿಮಾನದ ಕುದಿಬಿಂದುವಿನ ಕ್ರೌರ್ಯ ದಾಟಿಸುವ ಸವಾಲನ್ನು ನಿರ್ದೇಶಕಿ ಮೈಮೇಲೆ ಎಳೆದುಕೊಂಡಿದ್ದಾರೆ. ಪ್ರತಿ ಪಾತ್ರದ ರೂಹು, ವರ್ತನೆಯನ್ನ ಅದಕ್ಕೆ ಜವಾಬು ಕೊಡುವಂತೆ ಬಗ್ಗಿಸಿರುವುದು ಅಗ್ಗಳಿಕೆ.

ಇರಾದೆಯ ಕೈ ಹಿಡಿದು ಗಂಡನ ಮನೆಗೆ ಹೋಗಿ, ಅಲ್ಲಿ ಹೆಂಡತಿ, ನಾದಿನಿ, ಸೊಸೆ ಎಲ್ಲವೂ ಆಗಿ ಸಹಜ ಭಾವಗಳನ್ನು ತುಳುಕಿಸುವವಳು ನಾಯಕಿ. ಹಾಗೆಂದು ಅವುಗಳಲ್ಲೇ ಕಳೆದುಹೋಗದೆ ತನ್ನ ಮಹತ್ವಾಕಾಂಕ್ಷೆಯನ್ನು ಸಾಧಿಸುವ ಅವಳಿಗೆ ಕೊನೆಯಲ್ಲಿ ಸತ್ಯದರ್ಶನವಾಗುತ್ತದೆ. ದೇಶಾಭಿಮಾನ ಎನ್ನುವುದು ಅಂಧಾಭಿಮಾನ ಆದಾಗ ಏನೆಲ್ಲ ಆದೀತೆಂಬ ಅರ್ಥಪೂರ್ಣ ಪ್ರಶ್ನೆಯನ್ನು ಹಾಕಿ ಮೇಘನಾ ಸಿನಿಮಾ ಮುಗಿಸಿದ್ದಾರೆ.

ಹಲವು ಮುಖಭಾವಗಳನ್ನು ಬೇಡುವ, ಹೆಚ್ಚೇ ಸೂಕ್ಷ್ಮವಾದ ಪಾತ್ರವನ್ನು ಆಲಿಯಾ ಭಟ್ ಅನುಭವಿಸಿದ್ದಾರೆ. ಅಳು, ನಗು, ಮೌನ, ಕಕ್ಕುಲತೆ, ಹಟ, ಛಲ ಹೀಗೆ ಹಲವು ಭಾವಗಳನ್ನ ಅವರು ತುಳುಕಿಸಿರುವ ರೀತಿಗೆ ಶಹಬ್ಬಾಸ್ ಹೇಳಬೇಕು. ಅವರ ಪತಿಯಾಗಿ ವಿಕ್ಕಿ ಕೌಶಲ್ ಅವರದ್ದೂ ಹದವರಿತ ನಟನೆ. ಶಿಶಿರ್ ಶರ್ಮ, ರಜತ್ ಕಪೂರ್, ಜೈದೀಪ್ ಅಹ್ಲಾವತ್ ಅಭಿನಯಾನುಭವ ಮೆಚ್ಚಿಕೊಳ್ಳದೇ ಇರಲು ಕಾರಣಗಳಿಲ್ಲ. ಶಂಕರ್-ಎಹ್ಸಾನ್-ಲಾಯ್ ಸಂಗೀತ ಹಾಗೂ ಜೆ.ಐ. ಪಟೇಲ್ ಸಿನಿಮಾಟೊಗ್ರಫಿ ಔಚಿತ್ಯಪೂರ್ಣ.

ಥ್ರಿಲ್ಲರ್ ಮಾದರಿಯನ್ನು ಮುರಿದು ಈ ರೀತಿ ಕಟ್ಟಿರುವ ಮೇಘನಾ ಅರ್ಥಪೂರ್ಣ ಕೃತಿ ನೀಡಿದ್ದಾರೆನ್ನಬೇಕು.

ಚಿತ್ರ: ರಾಝಿ (ಹಿಂದಿ)
ನಿರ್ಮಾಣ: ವಿನೀತ್ ಜೈನ್, ಕರಣ್ ಜೋಹರ್
ನಿರ್ದೇಶನ: ಮೇಘನಾ ಗುಲ್ಜಾರ್
ತಾರಾಗಣ: ಆಲಿಯಾ ಭಟ್, ವಿಕ್ಕಿ ಕೌಶಲ್, ಶಿಶಿರ್ ಶರ್ಮ, ರಜತ್ ಕಪೂರ್, ಜೈದೀಪ್ ಅಹ್ಲಾವತ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT