ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನಾಲಿ ದೈವ ‘ಹಿಡಿಂಬೆ’

Last Updated 12 ಮೇ 2018, 19:30 IST
ಅಕ್ಷರ ಗಾತ್ರ

‘ಹಿಡಿಂಬೆ’ ಎಂಬ ಹೆಸರನ್ನು ಕೇಳಿದ ಕೂಡಲೇ ನಮ್ಮ ಕಣ್ಣೆದುರಿಗೆ ನಿಲ್ಲುವುದು ಮಹಾಭಾರತದಲ್ಲಿನ ರಾಕ್ಷಸ ರೂಪದ ಹಿಡಿಂಬೆಯ ಚಿತ್ರಣ. ಅದನ್ನು ಕೇಳಿದರೆ ಸಾಕು ಮನದಲ್ಲಿ ಭಯ ಹುಟ್ಟುತ್ತದೆ. ಪರಾಕ್ರಮಿ ಪಾಂಡವ ಭೀಮಸೇನನ ಪ್ರೇಯಸಿಯಾದ ಹಿಡಿಂಬೆಯು ಆತನನ್ನು ಮದುವೆ ಕೂಡ ಆಗಿದ್ದಳು. ದ್ರೌಪದಿಯೊಂದಿಗೆ ಹೋಲಿಸಿ ಹಿಡಿಂಬೆಯನ್ನು ತಿರಸ್ಕರಿಸುವುದೂ ಉಂಟು ನಮ್ಮಲ್ಲಿ. ವನವಾಸದ ಸಂದರ್ಭದಲ್ಲಿ ಭೀಮನಿಗೆ ಮನಸೋತ ಈಕೆಗೆ ಕಮಲಪಾಲಿಕೆ ಎಂಬ ಹೆಸರೂ ಇತ್ತು. ಈಕೆ ಹಿಡಂಬನ ಸಹೋದರಿ.

ಭೀಮನು ವ್ಯಾಸರ ಅನುಮತಿ ಪಡೆದು ಹಿಡಿಂಬೆಯನ್ನು ಮದುವೆಯಾಗಿ ಏಳು ತಿಂಗಳ ನಂತರ ಘಟೋತ್ಕಚನೆಂಬ ಮಗನನ್ನು ಪಡೆಯುತ್ತಾನೆ. ಭೀಮನ ಪಾಲಿನ ರೂಪಸಿ, ರಾಣಿಯಾದ ಈಕೆ ಹಗಲಿನಲ್ಲಿ ಆತನೊಂದಿಗೆ ಪ್ರಣಯದಲ್ಲಿ ತೊಡಗಿ, ರಾತ್ರಿ ಮಾತ್ರ ಅವನನ್ನು ತಾಯಿ ಕುಂತಿಯ ಬಳಿ ತಂದು ಬಿಡುತ್ತಿದ್ದಳು. ಇದು ಮಹಾಭಾರತದ ಹಿಡಿಂಬೆಯ ಕುರಿತ ಒಂದೆರಡು ಮಾತುಗಳು.

ಮಹಾಭಾರತದ ಭೀಮನ ಈ ರಾಕ್ಷಸಪ್ರೇಯಸಿ ಹಿಡಿಂಬೆ ಭಾರತದ ಉತ್ತರ ಭಾಗದಲ್ಲಿ ಪೂಜೆಗೊಳ್ಳುತ್ತಾಳೆ. ಹಿಮಾಚಲ ಪ್ರದೇಶದ ಹಿಮಾಲಯ ಪರ್ವತದ ತಪ್ಪಲಿನಲ್ಲಿರುವ ಕುಲೂ ಜಿಲ್ಲೆಯ ಮೋಹಕ ನಗರವಾದ ‘ಮನಾಲಿ’ಯ ಪಕ್ಕದ ಹಳೆಯ ಮನಾಲಿಯಲ್ಲಿ ಈಕೆಯ ಬೃಹದಾಕಾರದ ಸುಂದರ ದೇವಾಲಯವಿದೆ. ಈಕೆಯನ್ನು ಅಲ್ಲಿನ ಜನ ಉಗ್ರರೂಪಿ ಕಾಳಿಕಾ ಮಾತೆಯ ಅವತಾರವೆಂದು ಭಯ-ಭಕ್ತಿಯಿಂದ ಆರಾಧಿಸುತ್ತಾರೆ. ಸ್ಥಳೀಯರು ‘ಹಿಡಿಂಬಾದೇವಿ’ ಎಂದು ಕರೆಯುತ್ತಾರೆ. ಇಲ್ಲಿನ ಸ್ಥಳ ಪುರಾಣದ ಪ‍್ರಕಾರ ಈಕೆ ರಾಕ್ಷಸಿಯಲ್ಲ. ದ್ರಾವಿಡ ಜನಾಂಗದ ಮಹಾಪತಿವ್ರತೆ, ಶಕ್ತಿದೇವತೆ. ಈ ಬಗ್ಗೆ ದೇವಾಲಯದ ಎದುರಿಗಿರುವ ನಾಮಫಲಕದಲ್ಲಿ ಇದನ್ನು ವಿವರಿಸಲಾಗಿದೆ.


ದೇವಾಲಯದಲ್ಲಿನ ಮರದ ಕೆತ್ತನೆ

ಈ ದೇವಾಲಯವನ್ನು ಕ್ರಿಸ್ತಶಕ 1553ರಲ್ಲಿ ರಾಜಾ ಬಹದ್ದೂರ್ ಸಿಂಗನು ಕಟ್ಟಿಸಿದನೆಂದು ತಿಳಿದುಬರುತ್ತದೆ. ಕಟ್ಟಿಗೆಯಿಂದ ಈ ದೇಗುಲ ನಿರ್ಮಿಸಲಾಗಿದೆ. ಇಲ್ಲಿ ಮರಗಳು ಯಥೇಚ್ಛವಾಗಿ ದೊರೆಯುವುದರಿಂದ ಬಹಳಷ್ಟು ದೇಗುಲಗಳು ಕಟ್ಟಿಗೆಯಲ್ಲಿಯೇ ಕಲಾತ್ಮಕವಾಗಿ ಕಟ್ಟಲ್ಪಟ್ಟಿವೆ. ಮನಾಲಿ ನಗರದ ನೈಋತ್ಯ ದಿಕ್ಕಿನ ಎತ್ತರವಾದ ಸ್ಥಳದಲ್ಲಿನ ಈ ದೇವಾಲಯವು ಪಗೋಡಾ ಮಾದರಿಯಲ್ಲಿದೆ. ಪ್ರವೇಶ ದ್ವಾರವನ್ನು ಕಲಾತ್ಮಕವಾಗಿ ನಿರ್ಮಿಸಿದ್ದಾರೆ. ಈಕೆಯ ದರ್ಶನಕ್ಕಾಗಿ ಜನ ಮೈಲುಗಟ್ಟಲೇ ಉದ್ದದ ಸಾಲಿನಲ್ಲಿ ನಿಂತಿರುತ್ತಾರೆ. ಒಳಗೆ ಗುಹೆಯಂತಿರುವ ಸ್ಥಳದಲ್ಲಿ ಕಲ್ಲಿನ ಪಾದಗಳ ರೂಪದಲ್ಲಿ ಹಿಡಿಂಬೆಯು ಪೂಜೆಗೊಳ್ಳುತ್ತಾಳೆ. ಇಲ್ಲಿಗೆ ಬರುವ ಭಕ್ತರು ಹಣ್ಣು ಕಾಯಿಗಳ ಬದಲಾಗಿ ಮಂಡಕ್ಕಿ, ಕುಸುರೆಳ್ಳುಗಳನ್ನು ಒಯ್ಯುತ್ತಾರೆ.

ದೇವರ ಹತ್ತಿರ ಕುಳಿತ ಅರ್ಚಕರು, ಹಿಡಿಂಬೆಯ ಪಾದಗಳಿಗೆ ನಮಸ್ಕರಿಸಿದ ನಂತರ ಹಣೆಗೆ ಗಂಧವನ್ನು ಹಚ್ಚುತ್ತಾರೆ. ದೇವಾಲಯದ ಹೊರಭಾಗದಲ್ಲಿ ಕಾಡೆಮ್ಮೆ, ಸಾರಂಗ, ಟಗರುಗಳಂತಹ ಪ್ರಾಣಿಗಳ ಕೊಂಬುಗಳನ್ನು ಗೋಡೆಗಳಿಗೆ ನೇತುಹಾಕಿದ್ದಾರೆ. ಸುತ್ತಲೂ ಪ್ರದಕ್ಷಿಣೆಗಾಗಿ ವಿಶಾಲವಾದ ಸ್ಥಳವಿದೆ. ದೇವಾಲಯದ ಎಡಭಾಗದಲ್ಲಿ ಪ್ರಾಣಿಗಳನ್ನು ಬಲಿ ನೀಡುವ ಕಟ್ಟಿಗೆಯ ಬಲಿಪೀಠವಿದ್ದು, ಅಲ್ಲಿ ಆಗಾಗ ಜನ ಕೋಳಿ, ಕುರಿಗಳನ್ನು ದೇವಿಗೆ ಬಲಿಕೊಡುತ್ತಾರೆ. ಅವುಗಳನ್ನು ನಿಂಬೆ ಹಣ್ಣಿನ ಜೊತೆಗೆ ಕಚಕಚನೆ ಕಡಿಯುವ ದೃಶ್ಯವನ್ನು ಕಂಡಾಗ ಜೀವ ಮುಮ್ಮಲ ಮರುಗುತ್ತದೆ. ಕಡಿದು ತುಂಡು ತುಂಡು ಮಾಡಿದ ಮಾಂಸವನ್ನು ಅಲ್ಲಿಯೇ ಚೆಲ್ಲಿಬಿಡುತ್ತಾರೆ. ಅಲ್ಲಿ ಹಸಿದು ನಿಂತ ನಾಯಿಗಳು ಧಾವಿಸಿ ಬಂದು ಗಬಗಬನೆ ತಿಂದುಬಿಡುತ್ತವೆ. ಸುತ್ತಲೂ ಪ್ರಶಾಂತವಾದ ಪರಿಸರದಲ್ಲಿನ ಈ ದೃಶ್ಯವು ನೋಡುಗರ ಮನ ಕಲುಕುತ್ತದೆ.


ಹಿಡಿಂಬೆ ಪುತ್ರ ಘಟೋತ್ಕಚನ ದೇವಾಲಯ

ದೇವಾಲಯದ ಸುತ್ತಲಿನ ದೃಶ್ಯ ಮನಮೋಹಕವಾಗಿದೆ. ಎದುರಿಗೆ ಹಿಮವನ್ನು ಹೊದ್ದ ಹಿಮಾಲಯ ಪರ್ವತ ಶ್ರೇಣಿ, ಮತ್ತೊಂದೆಡೆ ಹಸಿರಿನ ಬೆಟ್ಟಗಳು, ಅದರ ಕೆಳಗಡೆ ಜುಳುಜುಳು ಹರಿಯುವ ಬಿಯಾಸ್ ನದಿ ನೋಡುಗರ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತವೆ. ಇಲ್ಲಿಗೆ ಬರುವವರು, ಅದರಲ್ಲೂ ವಿಶೇಷವಾಗಿ ಮಹಿಳೆಯರು, ಹಿಮಾಚಲ ಪ್ರದೇಶದ ಸಾಂಪ್ರದಾಯಿಕ ಉಡುಪನ್ನು ಧರಿಸಿ, ಅಲ್ಲಿನ ಯಾಕ್ ಎಂಬ ಪ್ರಾಣಿಯೊಂದಿಗೆ, ಅಥವಾ ಬಿಳಿಮೊಲ ಹಿಡಿದು, ಅಥವಾ ಟಗರಿನೊಂದಿಗೆ, ಇಲ್ಲವೆ ಗಂಡ–ಹೆಂಡತಿಯರು ಮದುವಣಿಗರ ದಿರಿಸು ಧರಿಸಿ ಫೋಟೊ ತೆಗೆಸಿಕೊಳ್ಳುತ್ತಾರೆ. ದೇವತೆಯ ಸಂಪ್ರೀತಿಗಾಗಿ ಈ ರೀತಿ ಮಾಡಲಾಗುತ್ತದೆ ಎನ್ನುತ್ತಾರೆ.

ಮುಗಿಲನ್ನು ಚುಂಬಿಸುವ ಪೈನ್ ಹಾಗೂ ದೇವದಾರು ಮರಗಳ ನಡುವಿನಲ್ಲಿರುವ ಈ ದೇವಾಲಯದ ಬಲಭಾಗದಲ್ಲಿ ಬೇರೆ ಬೇರೆ ಪ್ರಾಣಿಗಳ ಕೊಂಬುಗಳನ್ನು ಬಯಲಿನಲ್ಲಿರುವ ದೇವದಾರು ಮರಕ್ಕೆ ನೇತುಹಾಕಿದ್ದಾರೆ. ಅದು ಹಿಡಿಂಬೆಯ ಮಗ ಘಟೋತ್ಕಚನ ದೇವಾಲಯವೆಂದು ಅರ್ಚನೆಗೊಳ್ಳುತ್ತದೆ. ಆ ಭಯಾನಕ ದೃಶ್ಯವನ್ನು ನೋಡಿದಾಗ ಎದೆ ಝಲ್ಲೆನ್ನಿಸುತ್ತದೆ. ಇಲ್ಲಿ ಪ್ರತಿ ವರ್ಷ ಮೇ ತಿಂಗಳಲ್ಲಿ ಅತಿ ದೊಡ್ಡದಾದ ಜಾತ್ರೆಯು ನಡೆಯುತ್ತದೆ. ಈ ದೇವಾಲಯದ ಆವರಣದಲ್ಲಿ ನಡೆದಾಡುವುದೇ ಒಂದು ವಿಶಿಷ್ಟ ಅನುಭವ! ಸರ್ಕಾರವು ಈ ದೇವಾಲಯವನ್ನು ಸಂರಕ್ಷಿತ ಸ್ಮಾರಕವೆಂದು ಘೋಷಿಸಿದೆ.


ದೇವಾಲಯದ ಆವರಣದಲ್ಲಿ ಸಾಂಪ್ರದಾಯಿಕ ಉಡುಗೆಯಲ್ಲಿ ಕಂಡ ಮಹಿಳೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT