ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಕಿಯುಂಡು ಬೆಳೆದ ತಂಡ

Last Updated 15 ಮೇ 2018, 17:18 IST
ಅಕ್ಷರ ಗಾತ್ರ

2010ರ ಫೆಬ್ರುವರಿ 13. ಅಫ್ಗಾನಿಸ್ತಾನ ಕ್ರಿಕೆಟ್‌ಗೆ ಮರೆಯಲು ಸಾಧ್ಯವಿಲ್ಲದ ದಿನ. ಯುಎಇ ವಿರುದ್ಧ ನಡೆದ ಟ್ವೆಂಟಿ–20 ಕ್ರಿಕೆಟ್ ಪಂದ್ಯದಲ್ಲಿ ಗೆದ್ದ ಕ್ಷಣ ಅಫ್ಗಾನಿಸ್ತಾನ ಕ್ರಿಕೆಟಿಗರು ಸಂಭ್ರಮಿಸಿದ ಪರಿ ಅಪೂರ್ವ. ಇದು ಆ ತಂಡ ಅಂತರರಾಷ್ಟ್ರೀಯ ಪಂದ್ಯವೊಂದರಲ್ಲಿ ಗಳಿಸಿದ ಮೊಟ್ಟ ಮೊದಲ ಜಯ ಆಗಿತ್ತು.

ಅಂತರರಾಷ್ಟ್ರೀಯ ಕ್ರೀಡಾಂಗಣವೊಂದು ಇಲ್ಲದ ದೇಶದಲ್ಲಿ ಅಭ್ಯಾಸ ಮಾಡಿದ್ದರಿಂದ ಅವರ ಸಂಭ್ರಮ ನೂರ್ಮಡಿಗೊಂಡಿತ್ತು. ಎಲ್ಲ ಸಂಕಟವನ್ನು ಮರೆತು
ಮೈಮನ ಕುಣಿದಾಡಿದ ಕ್ಷಣವಾಗಿತ್ತು ಅದು.

ಕಳೆದ ವರ್ಷ ಜೂನ್‌ನಲ್ಲಿ ಟೆಸ್ಟ್ ಮಾನ್ಯತೆ ಗಳಿಸಿ, ಬೆಂಗಳೂರಿನಲ್ಲಿ ಇದೇ ಜೂನ್‌ 14ರಿಂದ ಮೊದಲ ಪಂದ್ಯ ಆಡಲು ಸಜ್ಜಾಗುತ್ತಿರುವ ಬಾಂಗ್ಲಾದೇಶ ತಂಡ ಬೆಂಕಿಯಲ್ಲಿ ಅರಳಿದ ಹೂವು. ಮೂಲಸೌಲಭ್ಯಗಳ ಕೊರತೆ, ತಾಲಿಬಾನ್‌ ಪಡೆಗಳಿಂದ ನಿಷೇಧ ಮುಂತಾದ ಸಮಸ್ಯೆಗಳ ನಡುವೆಯೂ ವಿದೇಶಿ ಅಂಗಣಗಳನ್ನೇ ‘ತವರು’ ಮಾಡಿಕೊಂಡು ಆಡಿದ ತಂಡ ಈ ವರೆಗೆ ಸಾಗಿ ಬಂದ ಹಾದಿ ಅದ್ಭುತ, ಅನುಪಮ.

19ನೇ ಶತಮಾನದ ಉತ್ತರಾರ್ಧದಿಂದಲೇ ಕ್ರಿಕೆಟ್‌ ಕ್ರೀಡೆಯನ್ನು ಜೀವಾಳವಾಗಿರಿಸಿಕೊಂಡಿರುವ ದೇಶ ಅಫ್ಗಾನಿಸ್ತಾನ. ಸಮಸ್ಯೆಗಳ ನಡುವೆಯೇ 1995ರಲ್ಲಿ ಈ ದೇಶದ ಕ್ರಿಕೆಟ್ ಸಂಸ್ಥೆ ಹುಟ್ಟಿಕೊಂಡಿತು. ಸತತ ಪ್ರಯತ್ನಗಳ ಫಲವಾಗಿ ಆರು ವರ್ಷಗಳ ನಂತರ ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿಯ ಮಾನ್ಯತೆಯೂ ಲಭಿಸಿತು. ನಂತರ ಈ ತಂಡ ಸವೆದ ಹಾದಿ ಅಪೂರ್ವ.

2009ರಲ್ಲಿ ಮೊದಲ ಏಕದಿನ ಪಂದ್ಯವನ್ನು ಆಡಿದ ಅಫ್ಗಾನಿಸ್ತಾನ ಈ ವರೆಗೆ 98 ಪಂದ್ಯಗಳಲ್ಲಿ ಕಣಕ್ಕೆ ಇಳಿದಿದೆ. 51ರಲ್ಲಿ ಗೆಲುವನ್ನೂ ಸಾಧಿಸಿದೆ. ವೆಸ್ಟ್‌ ಇಂಡೀಸ್ ಮತ್ತು ಜಿಂಬಾಬ್ವೆ ತಂಡಗಳನ್ನು ಕೂಡ ಏಕದಿನ ಕ್ರಿಕೆಟ್‌ನಲ್ಲಿ ಮಣಿಸಿ ಮೆರೆದಿದೆ.

ಟ್ವೆಂಟಿ–20 ಕ್ರಿಕೆಟ್‌ನಲ್ಲಂತೂ ಭರವಸೆಯ ಬಳಗವಾಗಿ ಮೂಡಿ ಬಂದಿದೆ. 2010ರಿಂದ ಈ ಮಾದರಿಯಲ್ಲಿ ಆಡುತ್ತಿರುವ ತಂಡ 63 ಪಂದ್ಯಗಳ ಪೈಕಿ 41ರಲ್ಲಿ ಗೆಲುವು ಸಾಧಿಸಿದೆ. ಇಲ್ಲೂ ವೆಸ್ಟ್‌ ಇಂಡೀಸ್‌ ಮತ್ತು ಜಿಂಬಾಬ್ವೆ ತಂಡಗಳ ವಿರುದ್ಧ ಗೆದ್ದಿದೆ. ಜಿಂಬಾಬ್ವೆ ಎದುರು ಆಡಿರುವ ಎಲ್ಲ ಏಳು ಪಂದ್ಯಗಳನ್ನೂ ಗೆದ್ದಿರುವುದು ತಂಡದ ಸಾಧನೆಯನ್ನು ಸಾರಿ ಹೇಳುತ್ತಿದೆ.

ಕ್ರೀಡಾಂಗಣಗಳ ಕೊರತೆ

ಕಾಬೂಲ್‌ ರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ, ಕುಂಡುಜ್‌ ಕ್ರಿಕೆಟ್ ಕ್ರೀಡಾಂಗಣ, ಮಜರ್ ಶರೀಫ್ ಕ್ರೀಡಾಂಗಣ ಮತ್ತು ಖೋಸ್ಟ್‌ ಸಿಟಿ ಕ್ರಿಕೆಟ್ ಕ್ರೀಡಾಂಗಣ ಹೊಂದಿರುವ ಅಫ್ಗಾನಿಸ್ತಾನದಲ್ಲಿ ಮೊದಲ ಅಂತರರಾಷ್ಟ್ರೀಯ ಕ್ರೀಡಾಂಗಣ ನಿರ್ಮಾಣವಾದದ್ದು 2011ರಲ್ಲಿ. ಜಲಾಲಬಾದ್‌ನಲ್ಲಿ ನಿರ್ಮಿಸಿರುವ ಘಾಜಿ ಅಮಾನುಲ್ಲ ಕ್ರೀಡಾಂಗಣದಲ್ಲಿ ಪಂದ್ಯಗಳಾಗಲಿ ಅಭ್ಯಾಸವಾಗಲಿ ನಡೆಸಲು ಆಗುತ್ತಿಲ್ಲ.

ಭದ್ರತೆಯ ಸಮಸ್ಯೆ ಇದಕ್ಕೆ ಕಾರಣ. ಹೀಗಾಗಿ ತಂಡದ ತವರು ಅಂಗಣ ಭಾರತದ ಗ್ರೇಟರ್ ನೋಯ್ಡಾದಲ್ಲಿರುವ ಶಹೀದ್ ವಿಜಯ್ ಸಿಂಗ್‌ ಪಠೀಕ್‌ ಕ್ರೀಡಾಂಗಣ ಮತ್ತು ಡೆಹ್ರಾಡೂನ್‌ನಲ್ಲಿರುವ ರಾಜೀವಗಾಂಧಿ ಕ್ರೀಡಾಂಗಣ. ಜೂನ್‌ನಲ್ಲಿ ಬಾಂಗ್ಲಾದೇಶ ವಿರುದ್ಧದ ಮೂರು ಪಂದ್ಯಗಳ ಟ್ವೆಂಟಿ–20 ಸರಣಿಗೂ ಡೆಹ್ರಾಡೂನ್‌ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.

ಭಾರತದ ವಿರುದ್ಧ ನಡೆಯಲಿರುವ ಟೆಸ್ಟ್ ಪಂದ್ಯಕ್ಕಾಗಿ ತಂಡವನ್ನು ಸಜ್ಜುಗೊಳಿಸಲು ಅಫ್ಗಾನಿಸ್ತಾನ ಆಯ್ಕೆ ಮಾಡಿಕೊಂಡಿರುವುದು ಗ್ರೇಟರ್ ನೋಯ್ಡಾದ ಕ್ರೀಡಾಂಗಣ.

ಶ್ರೀಲಂಕಾದ ಡಂಬುಲ ಕ್ರೀಡಾಂಗಣ ಮತ್ತು ಯುಎಇಯಲ್ಲಿರುವ ಶಾರ್ಜಾ ಕ್ರೀಡಾಂಗಣಗಳಲ್ಲಿ ನಿಗದಿತ ಓವರ್‌ಗಳ ‘ತವರಿನ’ ಪಂದ್ಯಗಳನ್ನು ಈ ಹಿಂದೆ ಈ ತಂಡ ಆಡಿತ್ತು. 2016ರಿಂದ ಭಾರತವನ್ನು ತವರಾಗಿಸಿಕೊಂಡಿದೆ.

ಪಾಕಿಸ್ತಾನದಿಂದಲೂ ನೆರವು

ಯುದ್ಧಪೀಡಿತ ಮತ್ತು ಉಗ್ರವಾದದ ಅಶಾಂತಿಯಲ್ಲಿ ಬೇಯುತ್ತಿರುವ ಅಫ್ಗಾನಿಸ್ತಾನ ತಂಡಕ್ಕೆ ಪಾಕಿಸ್ತಾನವೂ ಈ ಹಿಂದೆ ನೆರವು ನೀಡಿತ್ತು. 2015ರ ವಿಶ್ವಕಪ್‌ ಟೂರ್ನಿಗೆ ಸಜ್ಜಾಗುತ್ತಿದ್ದ ತಂಡಕ್ಕೆ ಎಲ್ಲ ಬಗೆಯ ಸಹಾಯ ಮಾಡಲು 2013ರಲ್ಲಿ ಪಾಕ್‌ ಮುಂದೆ ಬಂದಿತ್ತು. ಈ ಕುರಿತು ಒಪ್ಪಂದವನ್ನೂ ಮಾಡಿಕೊಳ್ಳಲಾಗಿತ್ತು. ತಾಂತ್ರಿಕ ನೆರವು ಮಾತ್ರವಲ್ಲದೆ ಕ್ರೀಡಾ ಶಿಕ್ಷಣ ನೀಡಿಯೂ ಆ ತಂಡವನ್ನು ಪಾಕಿಸ್ತಾನ ಬೆಳೆಸಿದೆ. ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ತಂಡಕ್ಕೆ ಸಾಕಷ್ಟು ಹಣಕಾಸಿನ ನೆರವನ್ನೂ ನೀಡುತ್ತಿದೆ.

ತಿರುವು ನೀಡಿದ ವಿಶ್ವಕಪ್

2015ರ ವಿಶ್ವಕಪ್‌ ಟೂರ್ನಿ ಅಫ್ಗಾನಿಸ್ತಾನ ತಂಡದ ಭವಿಷ್ಯವನ್ನು ಬದಲಿಸಿತು. ನಿರಾಶ್ರಿತ ಕೇಂದ್ರಗಳಿಂದಲೇ ಅಭ್ಯಾಸಕ್ಕೆ ತೆರಳಿದ ಆಟಗಾರರು ಸ್ಕಾಟ್ಲೆಂಡ್‌ ಎದುರು ಮೊತ್ತಮೊದಲ ವಿಶ್ವಕಪ್‌ ಪಂದ್ಯವನ್ನು ಗೆದ್ದು ಬೀಗಿದರು.

ಅರ್ಹತಾ ಸುತ್ತಿನಲ್ಲಿ ‘ಗೆಲುವು’ ಸಾಧಿಸಿ ವಿಶ್ವದ ಗಮನ ಸೆಳೆದರು. ನಂತರ ಭಾರತ, ಆಸ್ಟ್ರೇಲಿಯಾ, ಶ್ರೀಲಂಕಾ, ನ್ಯೂಜಿಲೆಂಡ್‌ ಮತ್ತು ಇಂಗ್ಲೆಂಡ್‌ ಜೊತೆ ಆಡುವ ಅವಕಾಶ ಲಭಿಸಿತು. ಮುಖ್ಯ ಸುತ್ತಿನ ಪಂದ್ಯಗಳಲ್ಲಿ ಗೆಲ್ಲಲು ಆಗದಿದ್ದರೂ ಈ ಟೂರ್ನಿ ಅನೇಕ ಉದಯೋನ್ಮುಖ ಆಟಗಾರರು ಬೆಳಕಿಗೆ ಬರಲು ಕಾರಣವಾಯಿತು.

ನಂತರ ವಿವಿಧ ಮಜಲುಗಳನ್ನು ಸಾಧಿಸಿದ ತಂಡದ ಆಟಗಾರರು ಈ ಬಾರಿಯ ಐಪಿಎಲ್‌ನಲ್ಲೂ ಸ್ಥಾನ ಗಿಟ್ಟಿಸಿಕೊಂಡರು. ಮೊಹಮ್ಮದ್‌ ನಬಿ, ಮುಜೀಬ್‌ ಜಡ್ರಾನ್‌, ಜಹೀರ್ ಖಾನ್‌ ಮತ್ತು ರಶೀದ್ ಖಾನ್‌ ಐಪಿಎಲ್‌ನ ವಿವಿಧ ತಂಡಗಳಲ್ಲಿ ಆಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT