ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡಿ ಬಿದ್ದ ರಸ್ತೆಯಲ್ಲಿ ಸಂಚಾರ ಸರ್ಕಸ್‌

ಮಳೆನೀರಿನಿಂದ ತುಂಬಿ ನಿಂತ ಹೊಂಡಗಳು: ವಾಹನ ಸವಾರರ ಪರದಾಟ
Last Updated 14 ಮೇ 2018, 9:42 IST
ಅಕ್ಷರ ಗಾತ್ರ

ರಾಮನಗರ: ನಗರದ ರಸ್ತೆಗಳೆಲ್ಲವೂ ಗುಂಡಿಮಯವಾಗಿದ್ದು, ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚಾರ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಈಚೆಗೆ ಸುರಿಯುತ್ತಿರುವ ಮುಂಗಾರು ಪೂರ್ವ ಮಳೆಯು ಈ ರಸ್ತೆಗಳ ಸ್ಥಿತಿಯನ್ನು ಬೆತ್ತಲು ಮಾಡುತ್ತಿದೆ.

ರಾಮನಗರ ಜಿಲ್ಲಾ ಕೇಂದ್ರವಾಗಿ 10 ವರ್ಷಗಳಾಗಿದ್ದರೂ ಇಲ್ಲಿನ ಪ್ರಮುಖ ರಸ್ತೆಗಳು ಇನ್ನೂ ಸುಧಾರಣೆಯಾಗಿಲ್ಲ. ಜಾಲಮಂಗಲ ರಸ್ತೆ, ಲಕ್ಷ್ಮೀಪುರ ರಸ್ತೆ, ಹುಣಸನಹಳ್ಳಿ ರಸ್ತೆ ಮೊದಲಾದ ಹಾದಿಗಳಲ್ಲೆಲ್ಲ ಬೃಹಾದಾಕಾರದ ಗುಂಡಿಗಳು ಬಿದ್ದಿವೆ. ಈ ಗುಂಡಿಗಳು ಎದುರಾದಾಗ ವೇಗದಲ್ಲಿ ಬ್ರೇಕ್‌ ಹಾಕಲು ಆಗದೆ, ಎದುರಿನ ವಾಹನಕ್ಕೆ ಗುದ್ದುವುದು, ಅದೇ ನೆಪದಲ್ಲಿ ಜಗಳ ಉಂಟಾಗುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

ರಾಮನಗರ–ಮಾಗಡಿ ಮುಖ್ಯ ರಸ್ತೆಯು ಐಜೂರು ವೃತ್ತದಿಂದ ಜಿಗೇನಹಳ್ಳಿಯವರೆಗೂ ಹದಗೆಟ್ಟಿದೆ. ರಸ್ತೆಗಳಲ್ಲಿ ಬಹೃತ್ ಗಾತ್ರದ ಗುಂಡಿಗಳು ಬಿದ್ದಿರುವ ಪರಿಣಾಮದಿಂದಾಗಿ ಅಪಘಾತ ಹೆಚ್ಚು ಸಂಭವಿಸುತ್ತಿವೆ. ರಾಮನಗರದ ಮೂಲಕ ಮಾಗಡಿ ತಾಲ್ಲೂಕಿಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆ, ರಾಯರದೊಡ್ಡಿ, ಕೆಂಪೇಗೌಡನ ದೊಡ್ಡಿಯಲ್ಲಿ ರಸ್ತೆ ಹದಗೆಟ್ಟಿದೆ. ಪ್ರತಿ ಗುಂಡಿಯಲ್ಲಿ ಒಂದು ಅಡಿಗಿಂತ ಹೆಚ್ಚು ಹಳ್ಳ ನಿರ್ಮಾಣವಾಗಿದೆ.

ಈ ರಸ್ತೆಗುಂಡಿಗಳಿಂದ ತಪ್ಪಿಸಿಕೊಳ್ಳಲು ಹೋಗಿ ನಿತ್ಯ ಸಣ್ಣ– ಪುಟ್ಟ ಅಪಘಾತಗಳು ಸಂಭವಿಸುತ್ತಿವೆ. ಇದರಿಂದಾಗಿ ಸವಾರರಿಗೆ ಗಾಯಗಳಾಗಿವೆ. ಬೈಕ್‌ಗಳ ಬಿಡಿಭಾಗಗಳು ಸಡಿಲಗೊಳ್ಳುತ್ತಿವೆ. ಗುಂಡಿಗಳಿಂದಾಗಿ ಸಂಚಾರ ದಟ್ಟಣೆ ಹೆಚ್ಚಿದೆ. ಕೆಲವರು ಪಾದಚಾರಿ ಮಾರ್ಗದ ಮೇಲೆಯೇ ಬೈಕ್‌ಗಳನ್ನು ಓಡಿಸಿಕೊಂಡು ಹೋಗುತ್ತಿದ್ದಾರೆ.

‘ಮಳೆಗಾಲದಲ್ಲಿ ರಸ್ತೆಗಳು ಹದಗೆಡುತ್ತವೆ. ಇಂತಹ ಸಂದರ್ಭದಲ್ಲಿ ದ್ವಿಚಕ್ರ ವಾಹನ ಮತ್ತು ಕಾರಿನಲ್ಲಿ ಓಡಾಡುವವರು ಬೆನ್ನುಮೂಳೆ ನೋವಿಗೆ ಹೆಚ್ಚು ಗುರಿಯಾಗುತ್ತಿದ್ದಾರೆ. ವಾಹನ ಸವಾರರು ದಿನನಿತ್ಯ ಈ ರೀತಿಯ ಸಮಸ್ಯೆ ಎದುರಿಸುತ್ತಿದ್ದರೂ ನಗರ ಸಭೆ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ’ ಎಂಬುದು ಲೋಕೇಶ್ ಮೂರ್ತಿ ಅವರ ದೂರು.

ನಗರ ವ್ಯಾಪ್ತಿಯ ಒಳ ರಸ್ತೆಗಳಲ್ಲಿಯೂ ದೊಡ್ಡ ಪ್ರಮಾಣದ ಗುಂಡಿಗಳು ನಿರ್ಮಾಣವಾಗಿವೆ. ಇದರಿಂದ ಜನರಿಗೆ ಹಾಗೂ ವಾಹನಗಳಿಗೆ ಸಂಚರಿಸಲು ತೊಂದರೆಯಾಗುತ್ತಿದೆ. ಹಲವು ಗಲ್ಲಿಗಳ ರಸ್ತೆಗಳ ಡಾಂಬರು ಕಿತ್ತು ಬರುತ್ತಿದ್ದು, ಗುಂಡಿಗಳು ನಿರ್ಮಾಣವಾಗುತ್ತಿವೆ. ನಗರಸಭೆ ತಕ್ಷಣ ದುರಸ್ತಿ ಕೈಗೊಳ್ಳಬೇಕು. ಇಲ್ಲದಿದ್ದರೆ ಮಳೆಗಾಲದಲ್ಲಿ ರಸ್ತೆಗಳು ಮತ್ತಷ್ಟು ಹದಗೆಡುವ ಅವಕಾಶವಿದೆ ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.

ದೊಡ್ಡವಾಹನಗಳ ಸಂಚಾರವು ರಸ್ತೆ ಹದಗೆಡಲು ಪ್ರಮುಖ ಕಾರಣವಾಗಿದೆ. ರಾತ್ರಿ ಸಮಯದಲ್ಲಿ ಸವಾರರಿಗೆ ರಸ್ತೆಯ ಹಳ್ಳ ಕಾಣದೆ ವಾಹನ ಗುಂಡಿಯೊಳಗೆ ಇಳಿಸಿ ಅಪಘಾತವಾಗಿರುವ ಸಂಖ್ಯೆ ಹೆಚ್ಚಾಗಿದೆ. ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿದರೆ ಅಪಘಾತ ಪ್ರಮಾಣವು ಕಡಿಮೆಯಾಗುತ್ತದೆ ಎಂಬುದು ಜನರ ಅಳಲು.

ಒಂದೇ ಸೇತುವೆ: ನಾಲ್ಕಾರು ದುರಸ್ತಿ ಕಾಮಗಾರಿ
ಐಜೂರು ವೃತ್ತದಿಂದ ಕೆಂಪೇಗೌಡ ವೃತ್ತಕ್ಕೆ ಸಾಗುವ ಮಾರ್ಗ ಮಧ್ಯದಲ್ಲಿ ಮೋರಿಗೆ ನಿರ್ಮಿಸಲಾಗಿರುವ ಸೇತುವೆ ಶಿಥಿಲಗೊಂಡಿದೆ. ಈ ಹಿಂದೆ ನಾಲ್ಕಾರು ಬಾರಿ ಇದರ ದುರಸ್ತಿ ಕಾಮಗಾರಿ ಕೈಗೊಳ್ಳಲಾಗಿದೆಯಾದರೂ ಶಾಶ್ವತ ಪರಿಹಾರ ಮಾತ್ರ ಸಿಕ್ಕಿಲ್ಲ.

ಈಗಲೂ ಈ ಸೇತುವೆ ಕುಸಿಯುತ್ತಿದ್ದು, ಕಂದಕ ಉಂಟಾಗಿದೆ. ಅದರ ಮೇಲಿನ ರಸ್ತೆಯ ಡಾಂಬರು ಕಿತ್ತು ಬಂದಿದೆ. ‘ಈಚೆಗೆ ಮಳೆಯಾಗುತ್ತಿರುವ ಕಾರಣ ಈ ಹಳ್ಳದಲ್ಲಿ ನೀರು ತುಂಬಿರುತ್ತದೆ. ಇದರ ಆಳ ಅರಿಯದೆಯೇ ಬೈಕ್ ಸವಾರರು ಬೀಳುತ್ತಿದ್ದಾರೆ. ಹೆಂಗಸರು–ಮಕ್ಕಳು ಬಿದ್ದ, ಮೈಮೇಲೆ ಕೆಸರು ಹಾರಿಸಿಕೊಂಡ ಘಟನೆಗಳು ನಿತ್ಯ ನಡೆಯುತ್ತಲೇ ಇರುತ್ತವೆ’ ಎನ್ನುತ್ತಾರೆ ಪಕ್ಕದ ಅಂಗಡಿಯ ವರ್ತಕ ಮಹೇಶ್‌.

ಮುಖ್ಯ ರಸ್ತೆಯಾದ್ದರಿಂದ ಇಲ್ಲಿ ಭಾರಿ ವಾಹನಗಳು, ಬಸ್‌ಗಳೂ ಸಂಚರಿಸುತ್ತಿರುತ್ತವೆ. ಅನಾಹುತ ಸಂಭವಿಸುವುದಕ್ಕೆ ಮುನ್ನ ಸಂಬಂಧಿಸಿದ ಇಲಾಖೆಗಳು ದುರಸ್ತಿ ಕೈಗೊಂಡರೆ ಒಳಿತು ಎನ್ನುತ್ತಾರೆ ಸ್ಥಳೀಯರಾದ ಗಿರೀಶ್‌.

**
ಐಜೂರು ವೃತ್ತ–ಕೆಂಪೇಗೌಡ ವೃತ್ತದ ನಡುವಿನ ರಸ್ತೆಯಲ್ಲಿನ ಸೇತುವೆ ಕುಸಿದು ವರ್ಷವೇ ಕಳೆದಿದೆ. ಇದಕ್ಕೆ ಬರೀ ತೇಪೆ ಹಚ್ಚುವ ಕೆಲಸವೇ ನಡೆದಿದೆ
- ಮಹೇಶ್, ಸ್ಥಳೀಯ ನಿವಾಸಿ

**
ನಗರದಲ್ಲಿನ ಬಹುತೇಕ ರಸ್ತೆಗಳು, ಗುಂಡಿ–ದೂಳಿನಿಂದ ಕೂಡಿವೆ. ಮಳೆಯ ಸಂದರ್ಭವಂತೂ ಇಲ್ಲಿ ಸಂಚರಿಸಲು ಹೆದರಿಕೆ ಆಗುತ್ತದೆ 
- ಗಿರೀಶ್, ಸ್ಥಳೀಯ ನಿವಾಸಿ
***
– ಎಸ್. ರುದ್ರೇಶ್ವರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT