ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಬನಿ ನಡುವೆ ಯೋಧನ ಅಂತ್ಯಕ್ರಿಯೆ

ಜೈಪುರದಲ್ಲಿ ಹೃದಯಘಾತದಿಂದ ಮೃತಪಟ್ಟಿದ್ದ ಫಣಿರಾಜ್‌
Last Updated 14 ಮೇ 2018, 11:11 IST
ಅಕ್ಷರ ಗಾತ್ರ

ಹಾಸನ : ಅಕಾಲಿಕ ಸಾವಿಗೆ ತುತ್ತಾದ ಯೋಧ ಫಣಿರಾಜ್ ಅವರ ಅಂತ್ಯಕ್ರಿಯೆ ಭಾನುವಾರ ಸಂಜೆ ಹುಟ್ಟೂರು ದೊಡ್ಡಗೇಣಿಗೆರೆಯಲ್ಲಿ ಶೋಕ ಸಾಗರದ ನಡುವೆ ಸರ್ಕಾರಿ ಗೌರವದೊಂದಿಗೆ ನೆರವೇರಿತು.

ಸ್ನೇಹಿತರು, ಅಸಂಖ್ಯ ಸಾರ್ವಜನಿಕರು ಪಾಲ್ಗೊಂಡು ಯೋಧನ ಸಾವಿಗೆ ಕಂಬನಿ ಮಿಡಿದರು. ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿ ಗೌರವ ಸಲ್ಲಿಸಿದರು.

ಬೂವನಹಳ್ಳಿಯ ದ್ಯಾವೇಗೌಡ ಹಾಗೂ ಮಂಜುಳಾ ದಂಪತಿಯ ಪುತ್ರ ಫಣಿರಾಜ್ 14 ವರ್ಷಗಳಿಂದ ಸೇನೆಯಲ್ಲಿ ವೆಹಿಕಲ್‌ ಮೆಕಾನಿಕಲ್‌ ಎಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಪ್ರಸ್ತುತ ರಾಜಸ್ಥಾನದ ಜೈಪುರ ಗಡಿಯಲ್ಲಿ ಕರ್ತವ್ಯ ನಿರ್ವಹಿಸುವ ವೇಳೆ ಎದೆನೋವು ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಶುಕ್ರವಾರ ರಾತ್ರಿ ಹೃದಯಘಾತದಿಂದ ನಿಧನರಾದರು.

ನಾಲ್ಕು ವರ್ಷದ ಹಿಂದೆ ಧನಲಕ್ಷ್ಮಿಯನ್ನು ಮದುವೆಯಾಗಿದ್ದ ಇವರಿಗೆ ಎರಡು ವರ್ಷದ ಮಗು ಪೂರ್ವಿಕ ಹಾಗೂ ಸಹೋದರ ವೇಣುಗೋಪಾಲ್ ಇದ್ದಾರೆ.

ಜೈಪುರದಿಂದ ವಿಶೇಷ ವಿಮಾನ ಮೂಲಕ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ತಂದು, ಅಲ್ಲಿಂದ ಸೇನಾ ವಾಹನದಲ್ಲಿ ಬೂವನಹಳ್ಳಿಗೆ ತರಲಾಯಿತು. ಗ್ರಾಮದಲ್ಲಿ ಸಂಜೆ ಸ್ನೇಹಿತರು, ಸಂಬಂಧಿಕರು ಹಾಗೂ ಸಾರ್ವಜನಿಕರು ಅಂತಿಮ ದರ್ಶನ ಪಡೆದರು.

ತಂದೆ, ತಾಯಿ, ಪತ್ನಿ ಹಾಗೂ ಇತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಊರ ಮಗನಿಗೆ ಸಂಬಂಧಿಕರು, ಗ್ರಾಮಸ್ಥರು ಕಣ್ಣೀರ ನಮನ ಸಲ್ಲಿಸಿದರು. ಜಿಟಿಜಿಟಿ ಮಳೆ ನಡುವೆಯೇ ತಂದೆ ದ್ಯಾವೇಗೌಡ ಅಂತಿಮ ವಿಧಿವಿಧಾನ ಪೂರೈಸಿದರು. ಯೋಧನ ಜಮೀನಿನಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಹಾಸನ ತಹಶೀಲ್ದಾರ್‌ ಯೋಧನ ಮನೆಗೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT