ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣ್ಯರ ಭೇಟಿ: ಪ್ರತ್ಯೇಕ ಹೆಲಿಪ್ಯಾಡ್ ಇರಲಿ

ಮೈದಾನ ಕಾಲೇಜಿನ ವಿದ್ಯಾರ್ಥಿಗಳಿಗೆ, ವಾಯುವಿಹಾರಿಗಳಿಗೆ ಉಪಯೋಗವಾಗಲಿ
Last Updated 14 ಮೇ 2018, 12:23 IST
ಅಕ್ಷರ ಗಾತ್ರ

ಚಿತ್ರದುರ್ಗ: ವಿಧಾನಸಭಾ ಚುನಾವಣೆಗೂ ಮುನ್ನ ಗಣ್ಯರು ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರಕ್ಕಾಗಿ ಸಮಾವೇಶ ನಡೆಸಿದ ಹಿನ್ನೆಲೆಯಲ್ಲಿ ಮೈದಾನವೊಂದು ಹಾಳಾಗಿ ಹೋಗಿದೆ ಎಂಬುದು ಸ್ಥಳೀಯ ಆರೋಪ.

ಮತದಾನ ಪ್ರಕ್ರಿಯೆ ನಂತರ ಚುನಾವಣೆಯಂತೂ ಮುಗಿದಿದೆ. ಇನ್ನೇನಿದ್ದರೂ ಫಲಿತಾಂಶ ಬಾಕಿ ಇದ್ದು, ಪ್ರಚಾರಕ್ಕಾಗಿ ಬಳಸಿಕೊಂಡ ಇಲ್ಲಿನ ಮುರುಘಾರಾಜೇಂದ್ರ ಕ್ರೀಡಾಂಗಣವನ್ನು ಸರಿ ಪಡಿಸುವವರು ಯಾರು? ಎಂಬ ಪ್ರಶ್ನೆ ಸಾರ್ವಜನಿಕರದ್ದು.

ನಾವು ದಿನನಿತ್ಯ ಅಭ್ಯಾಸ ಮಾಡುವ ಮೈದಾನದಲ್ಲಿ ಗುಂಡಿಗಳು ಬಿದ್ದು, ಆಟವಾಡಲು ಸಾಧ್ಯವಾಗುತ್ತಿಲ್ಲ ಎಂದು ಕ್ರೀಡಾಪಟುಗಳು ದೂರಿದರೆ. ಓಡಾಡುವಾಗ ಕಾಲುಗಳಿಗೆ ಮೊಳೆಗಳು ಚುಚ್ಚುತ್ತಿವೆ ಎಂದು ವಾಯುವಿಹಾರಿಗಳು ಹೇಳುತ್ತಾರೆ.

ಹಾಳಾದ ಮೈದಾನ, ಸಿಂಥೆಟಿಕ್ ಟ್ರ್ಯಾಕ್: ‘ಅನೇಕ ವರ್ಷಗಳಿಂದ ಹೆಲಿಪ್ಯಾಡ್‌ಗಾಗಿ ಬಳಸಿಕೊಳ್ಳುತ್ತಿರುವ ಕಾರಣ ಮೈದಾನ ಹಾಳಾಗಿದೆ. ಜಿಲ್ಲಾ ಕ್ರೀಡಾಂಗಣದ ಸಿಂಥೆಟಿಕ್ ಟ್ರ್ಯಾಕ್‌ ಕೂಡ ಇದಕ್ಕೆ ಹೊರತಾಗಿಲ್ಲ. ಕೋಟ್ಯಂತರ ಮೌಲ್ಯದ ಟ್ರ್ಯಾಕ್ ಹಾಳು ಮಾಡುವುದು ಸರಿಯಲ್ಲ’ ಎಂದು ಕ್ರೀಡಾಭಿಮಾನಿ ಗೋಪಾಲ್ ಒತ್ತಾಯಿಸುತ್ತಾರೆ.

ಇತ್ತೀಚಿನ ರಾಜಕೀಯ ವಿದ್ಯಮಾನ ಗಮನಿಸಿದರೆ, ಚಿತ್ರದುರ್ಗಕ್ಕೆ ಅತಿ ಹೆಚ್ಚು ಹೆಲಿಕಾಫ್ಟರ್‌ಗಳು ಬಂದು ಹೋಗಿವೆ. ಅಲ್ಲದೆ, ಮುಂಬರುವ ಲೋಕಸಭಾ ಚುನಾವಣೆಗೂ ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಬಿಎಸ್‌ಪಿ, ಸಮಾಜವಾದಿ ಸೇರಿದಂತೆ ಇತರೆ ಪಕ್ಷಗಳ ಅನೇಕ ರಾಷ್ಟ್ರ, ರಾಜ್ಯ ನಾಯಕರು ಪ್ರಚಾರಕ್ಕಾಗಿ ಚಿತ್ರದುರ್ಗಕ್ಕೆ ಬರುವ ನಿರೀಕ್ಷೆ ಇದೆ.ಪ್ರತ್ಯೇಕ ಹೆಲಿಪ್ಯಾಡ್ ನಿರ್ಮಾಣದ ಅಗತ್ಯವಿದೆ ಎಂದು ವಿವಿಧ ಪಕ್ಷಗಳ ಮುಖಂಡರು ಹೇಳುತ್ತಾರೆ.

ಸುಸಜ್ಜಿತ ಹೆಲಿಪ್ಯಾಡ್ ನಿರ್ಮಿಸಿ: ‘ಮುಂಬರುವ ದಿನಗಳಲ್ಲಿ ಚಿತ್ರದುರ್ಗ ಕೈಗಾರಿಕಾ ಹಬ್ ಆಗುವ ಸಾಧ್ಯತೆ ಹೆಚ್ಚಿದೆ. ಜಿಲ್ಲೆಯ ಚಳ್ಳಕೆರೆಯೂ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ತನ್ನದೇ ಛಾಪೂ ಮೂಡಿಸಲಿದ್ದು, ಚಿತ್ರದುರ್ಗಕ್ಕೆ ಸಮೀಪ ಇರುವ ಕಾರಣ ಆಗಿಂದಾಗ್ಗೆ ಜಿಲ್ಲಾ ಕೇಂದ್ರಕ್ಕೂ ಕೇಂದ್ರ ಸಚಿವರ ಭೇಟಿ ಹೆಚ್ಚುವ ನಿರೀಕ್ಷೆ ಇದೆ. ರಾಜಕಾರಣಿಗಳಾಗಲಿ, ಉದ್ಯಮಿಗಳಾಗಲಿ ಹೆಚ್ಚಾಗಿ ಹೆಲಿಕಾಪ್ಟರ್ ಬಳಸುವ ಕಾರಣ ಸುಸಜ್ಜಿತವಾದ ಪ್ರತ್ಯೇಕ ಹೆಲಿಪ್ಯಾಡ್ ನಿರ್ಮಿಸುವ ಅಗತ್ಯವಿದೆ’ ಎನ್ನುತ್ತಾರೆ ಬಿಜೆಪಿ ಜಿಲ್ಲಾ ವಕ್ತಾರ ನಾಗರಾಜ್ ಬೇದ್ರೆ.

ಮೈದಾನ ಬಳಸಿಕೊಳ್ಳಲು ನಿಗದಿ ಪಡಿಸಿರುವ ದರ ಕಡಿಮೆ ಪ್ರಮಾಣ. ಇದರಿಂದಾಗಿ ಬರುವಂಥ ಹಣದಲ್ಲಿ ಹಾಳಾದ ಮೈದಾನ ಸರಿಪಡಿಸಲು ಹೇಗೆ ಸಾಧ್ಯ? ನಿರ್ವಹಣೆ ಕೊರತೆಯಿಂದ ತೊಂದರೆ ಆಗುತ್ತಿರುವುದು ಕ್ರೀಡಾಪಟು
ಗಳಿಗೆ ಎಂಬುದು ಸ್ಥಳೀಯರ ಆರೋಪ.

ಹೊರವಲಯವೇ ಸೂಕ್ತ: ಮುರುಘಾರಾಜೇಂದ್ರ ಕ್ರೀಡಾಂಗಣ ನಗರದೊಳಗೆ ಇರುವ ಕಾರಣ ಸಮಾವೇಶ ನಡೆದ ಸಂದರ್ಭಗಳಲ್ಲಿ ಟ್ರಾಫಿಕ್ ಕಿರಿಕಿರಿ ಸೇರಿದಂತೆ ಪಾದಚಾರಿಗಳ ಸಂಚಾರಕ್ಕೂ ತೊಂದರೆ ಆಗಲಿದೆ. ಈ ಕಾರಣದಿಂದಾಗಿ ಸಮಾವೇಶ, ಸಭೆ, ಸಮಾರಂಭ ಹೀಗೆ ಬೃಹತ್ ಕಾರ್ಯಕ್ರಮಗಳಿಗಾಗಿ ನಗರದ ಹೊರವಲಯದಲ್ಲಿ ಎಲ್ಲಿಯಾದರೂ ಸೂಕ್ತ ಸ್ಥಳ ಗುರುತಿಸಿ ಅಲ್ಲಿಯೇ ಕಾರ್ಯಕ್ರಮ ಮಾಡುವುದು ಒಳಿತು ಎನ್ನುತ್ತಾರೆ ವಾಯುವಿಹಾರಿಗಳಾದ ಮಂಜುನಾಥ್, ತಿಪ್ಪೇಸ್ವಾಮಿ, ರಮೇಶ್.

‘ಸಿಂಥೆಟಿಕ್ ಟ್ರ್ಯಾಕ್ ಕ್ರೀಡಾಂಗಣ ಸೂಕ್ತವಲ್ಲ’

ಗಣ್ಯರು ಹೆಲಿಕಾಪ್ಟರ್ ಮೂಲಕ ಬರುವ ಸಂದರ್ಭದಲ್ಲಿ ಸಿಂಥೆಟಿಕ್ ಟ್ರ್ಯಾಕ್ ಇರುವ ಕ್ರೀಡಾಂಗಣದಲ್ಲಿ ಇಳಿಯಲಿಕ್ಕೆ ಅವಕಾಶ ಮಾಡಿಕೊಡುವುದು ಸೂಕ್ತವಲ್ಲ ಎಂದು ಮಾಜಿ ಕ್ರೀಡಾ ಸಚಿವ ಗೂಳಿಹಟ್ಟಿ ಶೇಖರ್ ಅಭಿಪ್ರಾಯಪಡುತ್ತಾರೆ.

‘2010 ರಲ್ಲಿ ಕ್ರೀಡಾ ಸಚಿವನಾಗಿದ್ದಾಗ ಕ್ರೀಡಾ ಕ್ಷೇತ್ರದ ಪ್ರಗತಿಗೋಸ್ಕರ ಉತ್ತಮ ಉದ್ದೇಶವಿಟ್ಟುಕೊಂಡು ಚೀನಾ ಮಾದರಿ ಅನುಸರಿಸಿ, ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ರಾಜ್ಯದ ವಿವಿಧೆಡೆ ಸಿಂಥೆಟಿಕ್ ಟ್ರ್ಯಾಕ್ ನಿರ್ಮಿಸಲು ಕ್ರಮ ಕೈಗೊಂಡೆ. ಆದರೆ, ಅವುಗಳನ್ನು ಹೆಲಿಕಾಪ್ಟರ್ ಇಳಿಸಲು ಹೆಲಿಪ್ಯಾಡ್‌ ಆಗಿ ಬಳಸಿ ಹಾಳು ಮಾಡುತ್ತಿರುವುದು ನೋವನ್ನುಂಟು ಮಾಡಿದೆ’ ಎಂದು ಅವರು ಹೇಳುತ್ತಾರೆ.

ಹೆಲಿಕಾಪ್ಟರ್ ಜತೆಯಲ್ಲಿ ಆಂಬುಲೆನ್ಸ್, ಅಗ್ನಿಶಾಮಕ ಸೇರಿದಂತೆ ಅನೇಕ ವಾಹನಗಳು ಕ್ರೀಡಾಂಗಣ ಪ್ರವೇಶಿಸುವ ಕಾರಣ ಸಿಂಥೆಟಿಕ್ ಟ್ರ್ಯಾಕ್‌ಗಳು ಹಾಳಾಗುತ್ತಿವೆ. ಯಾವ ತಾಂತ್ರಿಕ ಆಧಾರದ ಮೇಲೆ ಅಧಿಕಾರಿ ವರ್ಗ ಅನುಮತಿ ನೀಡುತ್ತಿದೆ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಟ್ರ್ಯಾಕ್ ಹಾಳಾಗಬಾರದು ಎಂಬ ಉದ್ದೇಶದಿಂದ ನಟ ಪ್ರೇಮ್ ಅವರ ಸಿನಿಮಾವೊಂದರ ಚಿತ್ರೀಕರಣಕ್ಕೆ ಈ ಹಿಂದೆ ಬೆಂಗಳೂರಿನ ಕಂಠೀರಣ ಕ್ರೀಡಾಂಗಣದಲ್ಲಿ ಅವಕಾಶ ನೀಡಲಿಲ್ಲ. ಅಥ್ಲೆಟಿಕ್ ಕ್ರೀಡೆಗಾಗಿ ನಿರ್ಮಿಸಿರುವ ಟ್ರ್ಯಾಕ್‌ಗಳು ಅದೇ ಉದ್ದೇಶಕ್ಕೆ ಮಾತ್ರ ಬಳಕೆಯಾಗಬೇಕು ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಗಣ್ಯರ ಭೇಟಿ

ಮೇ 6 ರಂದು ಪ್ರಧಾನಿ ನರೇಂದ್ರ ಮೋದಿ, ಏ.26 ರಂದು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ, ಅದೇ ದಿನ ಬಿಎಸ್‌ಪಿ ನಾಯಕಿ ಮಾಯವತಿ ಸೇರಿದಂತೆ ಸಂಸದ ಬಿ.ಶ್ರೀರಾಮುಲು ಕೂಡ ಅನೇಕ ಬಾರಿ ಬಂದು ಹೋಗಿದ್ದಾರೆ.

ವಿಧಾನಸಭಾ ಚುನಾವಣೆಗೂ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಅನೇಕ ಬಾರಿ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಯಡಿಯೂರಪ್ಪ, ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್ ಉತ್ತರ ಪ್ರದೇಶದ ಮುಖ್ಯಮಂತ್ರಿ ಆಗಿದ್ದಾಗ ಚಿತ್ರದುರ್ಗದ ಮುರುಘಾರಾಜೇಂದ್ರ ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT