ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗಿನ ಚೆಂಬು ಬದನೆ

Last Updated 14 ಮೇ 2018, 19:30 IST
ಅಕ್ಷರ ಗಾತ್ರ

ಸುಮಾರು ಎರಡು ವರ್ಷಗಳ ಹಿಂದೆ ಕೊಡಗಿನವರಾದ ದೇವಕಿ, ಹೆಗ್ಗಡದೇವನಕೋಟೆಯ ಮಗ್ಗೆ ಗ್ರಾಮದಲ್ಲಿ ಪೀಪಲ್ ಟ್ರೀ ಸಂಸ್ಥೆ ನಡೆಸುತ್ತಿರುವ ಆದಿವಾಸಿ ಮಕ್ಕಳ ಕಾಲೇಜಿನ ಕೈತೋಟದಲ್ಲಿ ಒಂದೆರಡು ಬದನೆ ಗಿಡಗಳನ್ನು ಬೆಳೆಸಿ ಇದು ನಮ್ಮ ಕೊಡಗಿನ ಚೆಂಬು ಬದನೆ ಎಂದು ಹೇಳಿದ್ದರು.

ಕೊಡಗಿನ ಕಿತ್ತಳೆ, ಕಾಫಿ ಕೇಳಿದ್ದ ನಮಗೆ ಈ ದೈತ್ಯ ಬದನೆಯನ್ನು ನೋಡಿ ಅಚ್ಚರಿಯಾಯಿತು. ಇದು ತುಂಬಾ ಅಪರೂಪದ ಕೈತೋಟದ ಬದನೆ. ಮಡಿಕೇರಿ, ಸೋಮವಾರಪೇಟೆ, ಕುಶಾಲನಗರದ ಅಕ್ಕಪಕ್ಕದ ಗ್ರಾಮಗಳ ಒಂಟಿ ತೋಟದ ಮನೆಗಳ ಹಿತ್ತಲುಗಳಲ್ಲಿ ಹೆಚ್ಚಾಗಿ ಗೋಚರವಾಗುತ್ತದೆ. ಕೈತೋಟಗಳಲ್ಲಿ ಬೆಳೆಸಿದ ಬದನೆಕಾಯಿಗಳನ್ನು ತಾವು ಬಳಸಿ, ನೆರೆಹೊರೆಯವರಿಗೆ ಕೂಡ ಕೊಡುವ ಹಿತ್ತಲ ಸಂಸ್ಕೃತಿ ಕೊಡಗಿನಲ್ಲಿದೆ.

ಚೆಂಬು ಬದನೆ ಸುಮಾರು ಇನ್ನೂರು ಗ್ರಾಂ.ನಷ್ಟು ತೂಕ ಹೊಂದಿದ್ದು, ಬಿಳಿಬಣ್ಣದ ಮೇಲೆ ಮಂಕಾದ ನೀಲಿ ಗೆರೆಗಳಿರುತ್ತವೆ. ಒಮ್ಮೆ ನೆಟ್ಟರೆ ಸುಮಾರು ಮೂರ್ನಾಲ್ಕು ವರ್ಷಗಳ ಕಾಲ ನಿರಂತರವಾಗಿ ಕಾಯಿ ಬಿಡುತ್ತದೆ. ಮನೆಯ ಅಕ್ಕಪಕ್ಕ ಮತ್ತು ಮಹಡಿಯ ಕೈ ತೋಟಗಳಲ್ಲಿ ಬೆಳೆಸಲು ಸೂಕ್ತವಾದ ತಳಿ. ಗಿಡದಲ್ಲಿ ಹತ್ತಾರು ಕೊಂಬೆಗಳು ಮೂಡಿ ಮರದಂತೆ ಸುಮಾರು ಮೂರ್ನಾಲ್ಕು ಅಡಿಗಳಷ್ಟು ಎತ್ತರ ಬೆಳೆಯುತ್ತದೆ. ನೆಟ್ಟ ಸುಮಾರು ಎರಡು ತಿಂಗಳಲ್ಲಿ ಜೋಡಿಯಾಗಿ ಮತ್ತು ಒಂಟಿ, ಒಂಟಿ ಕಾಯಿಗಳನ್ನು ಬಿಡುತ್ತದೆ. ಸಾಮಾನ್ಯವಾಗಿ ಬದನೆಯನ್ನು ಕಾಡುವ ಬೂದಿರೋಗ ಮತ್ತು ಸುಳಿ, ಕಾಂಡ, ಕಾಯಿ ಕೊರಕ ಕೀಟಗಳ ಬಾಧೆ ಇದಕ್ಕಿಲ್ಲ. ಕಾಯಿಗಳು ಮೃದುವಾಗಿ ಇರುವುದರಿಂದ ಎಣ್ಣೆಗಾಯಿ, ಪಲ್ಯ, ಬೇಳೆ ಸಾಂಬಾರ್, ಹುರುಳಿಯ ಮೊಳಕೆ ಕಾಳಿನ ಸಾರು, ವಾಂಗಿಬಾತ್‍ಗೆ ಹೆಚ್ಚು ಸೂಕ್ತವಾದ ತಳಿ.

ಸಸಿ ಮಡಿ ಆರೈಕೆ: ಏಪ್ರಿಲ್, ಮೇ ತಿಂಗಳಲ್ಲಿ ಬೀಜಗಳನ್ನು ಸಸಿ ಮಡಿಯಲ್ಲಿ 25 ದಿವಸಗಳ ಕಾಲ ಆರೈಕೆ ಮಾಡಬೇಕು. ಸಸಿ ಮಡಿಗಳನ್ನು ನೆಲದ ಮೇಲೆ ಮತ್ತು ಕುಂಡಗಳಲ್ಲಿ ಬೆಳೆಸಬಹುದು. ಬೀಜಗಳ ಪ್ರಮಾಣ ಕಡಿಮೆ ಇದ್ದಾಗ ಮತ್ತು ಮಹಡಿ ಕೈ ತೋಟಕ್ಕೆ ಕುಂಡ ಸಸಿ ಮಡಿ ಸೂಕ್ತ. ಸಸಿ ಮಡಿಗಳಿಗೆ ಉತ್ತಮ ಗುಣಮಟ್ಟದ ಕೊಟ್ಟಿಗೆ ಗೊಬ್ಬರ ಅಥವಾ ಎರೆ ಗೊಬ್ಬರವನ್ನು ಮಣ್ಣಿನಲ್ಲಿ ಮಿಶ್ರಮಾಡಿ ಬೀಜಗಳನ್ನು ಬಿತ್ತಬೇಕು.

ಸಸಿ ಮಡಿಗಳಲ್ಲಿ 25 ದಿವಸಗಳ ಕಾಲ ಬೆಳೆಸಿ ಒಂದೂವರೆಯಿಂದ ಎರಡು ಅಡಿ ಅಗಲದ ಮತ್ತು ಒಂದು ಅಡಿ ಆಳದ ಗುಂಡಿಗಳನ್ನು ತೆಗೆದು ಕೊಟ್ಟಿಗೆ ಗೊಬ್ಬರವನ್ನು ಮಣ್ಣಿನಲ್ಲಿ ಮಿಶ್ರಮಾಡಿ ಎರಡು ದಿವಸ ಬಿಟ್ಟು ಸಂಜೆ ನಾಲ್ಕು ಗಂಟೆಯ ತಂಪು ಸಮಯದಲ್ಲಿ ಒಂದು ಗುಂಡಿಗೆ ಒಂದು ಗಿಡ ಮತ್ತು ಮಹಡಿ ಕೈ ತೋಟದ ಕುಂಡಗಳಲ್ಲಿ ಬೆಳೆಸುವವರು ಕೂಡ ಒಂದು ಸಸಿಯನ್ನು ನೆಡಬೇಕು.

ತಿಂಗಳಿಗೆ ಎರಡು ಸಾರಿ ಒಂದು ಭಾಗ ಸಗಣಿಗೆ ಎರಡು ಭಾಗ ಬೂದಿ ಮಿಶ್ರಣ ಮಾಡಿದ ದ್ರವ ಗೊಬ್ಬರವನ್ನು ಗಿಡಗಳ ಬುಡದ ಸುತ್ತ ಸುರಿಯಬೇಕು. ಪಟ್ಟಣಗಳಲ್ಲಿ ಮಹಡಿ ಕೈತೋಟ ಮಾಡುವವರು ಎರೆ ಗೊಬ್ಬರ ಕೊಡಬೇಕು.

ಬೀಜ ಸಂವರ್ಧನೆ ಶೇಖರಣೆ: ಗಿಡದಲ್ಲಿ ಕಾಯಿಗಳು ಮಾಗಿ ಹಳದಿ ಬಣ್ಣಕ್ಕೆ ತಿರುಗಿ ಹಣ್ಣುಗಳ ಮೇಲೆ ಬಿರುಕು ಮೂಡಿದಾಗ ಬೀಜಕ್ಕೆ ಸೂಕ್ತ. ಬೀಜಗಳನ್ನು ಎರಡು ವಿಧಾನಗಳಲ್ಲಿ ಸಂಗ್ರಹಿಸಬಹುದು. ಒಂದನೆಯದು ಮಾಗಿದ ಹಣ್ಣುಗಳನ್ನು ನೀರಿನಲ್ಲಿ ಒಂದು ವಾರ ಕಳಿಸಿ ಬೀಜಗಳನ್ನು ತಿರುಳಿನಿಂದ ಬೇರ್ಪಡಿಸಿ ಬಿಸಿಲಿನಲ್ಲಿ ಒಣಗಿಸಿ ಶೇಖರಣೆ ಮಾಡುವುದು. ಎರಡನೆಯದು ಹಣ್ಣನ್ನು ತಿರುಳು ಸಮೇತ ಕತ್ತರಿಸಿ ಬೂದಿ ಲೇಪನ ಮಾಡಿ ಬಿಸಿಲಿನಲ್ಲಿ ಒಣಗಿಸಿ ಶೇಖರಿಸಿಡುವುದು.

ಕೊಡಗಿನ ಚೆಂಬು ಬದನೆ ಬೆಳೆಸುವ ಆಸಕ್ತರು ಉಚಿತ ಮಾದರಿ ಬೀಜಗಳಿಗಾಗಿ

ಸಂಪರ್ಕಕ್ಕೆ: 9945219836

**

ಮಂಜ್ರಿಗೋಟ, ಬೆಕ್ಕಿನತಲೆ!

ಸೋಲನೇಸಿ ಕುಟುಂಬಕ್ಕೆ ಸೇರಿರುವ ಬದನೆಯ ವೈಜ್ಞಾನಿಕ ಹೆಸರು ಸೊಲ್ಯಾನಂ ಮೆಲಾಂಜೆನಾ. ಮೈಸೂರಿನ ಉರುಟು, ಮೋಳ, ಚಪ್ಪರ, ಬಿಳಿ, ಬುಂಡ, ತಲೆಬಡಕ, ದುಂಡು, ಹಾಸನದ ಉದ್ದ, ಕತ್ತರಿ, ಬಳ್ಳಿ, ತಳ, ಮುಳ್ಳು, ಬೆಣ್ಣೆ, ಕಲಬುರ್ಗಿಯ ಕುಡಚಿ, ಮಂಗಳೂರಿನ ಕರಿ, ಜೊಂಬು, ಉಡುಪಿಯ ಮೆಟ್ಟಗುಳ್ಳ, ಉತ್ತರ ಕನ್ನಡ ಜಿಲ್ಲೆಯ ಮಂಜ್ರಿಗೋಟ, ಗಂಜಿ, ಗೊಂಚ, ಬೆಂಗಳೂರಿನ ಬೆಕ್ಕಿನತಲೆ, ಕರಿಗೊಂಚಲು, ಮುಸುಕು, ಚಿತ್ರದುರ್ಗ ಹಾಗೂ ತುಮಕೂರಿನ ಮುಳ್ಳು ಹೀಗೆ ವಿವಿಧ ತಳಿಗಳ ಬದನೆಗಳಿವೆ. ಕೊಡಗಿನ ಚೆಂಬು ಬದನೆ ಕೂಡ ಅವುಗಳಲ್ಲಿ ಒಂದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT