ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವರಪುರದಲ್ಲಿ ಬೈಗುಳವೇ ಮಂತ್ರ

Last Updated 14 ಮೇ 2018, 19:30 IST
ಅಕ್ಷರ ಗಾತ್ರ

ಕೊಡಗು ಪ್ರಾಕೃತಿಕವಾಗಿ ಮತ್ತು ಸಾಂಸ್ಕೃತಿಕವಾಗಿ ವೈವಿಧ್ಯಮಯ ಪ್ರದೇಶ. ಇಲ್ಲಿ ವಿಭಿನ್ನ ಹಬ್ಬಗಳನ್ನು ಆಚರಿಸುವ ಜನರಿದ್ದಾರೆ. ಕೊಡಗಿನ ಪ್ರಮುಖ ಬುಡಕಟ್ಟು ಜನಾಂಗಗಳಾದ ಜೇನುಕುರುಬರು, ಯರವರು, ಕಾಡು ಕುರುಬರು ಸೇರಿ ಮೂರು ದಿನಗಳ ಕಾಲ ಕುಣಿದು ಕುಪ್ಪಳಿಸುತ್ತಾ ಸಂಭ್ರಮಿಸುವ ಆಚರಣೆಯೇ ‘ಕುಂಡೆಹಬ್ಬ’!

ಇದು ಪ್ರತಿವರ್ಷ ಮೇ ಕೊನೆಯ ವಾರದ ಮಂಗಳವಾರ ಅಥವಾ ಗುರುವಾರದಂದು ನಡೆಯುತ್ತದೆ. ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ದೇವರಪುರ ಭದ್ರಕಾಳಿ ದೇವಸ್ಥಾನವೇ ಹಬ್ಬ ಆಚರಣೆಯ ಕೇಂದ್ರಬಿಂದು. ವರ್ಷಪೂರ್ತಿ ಕಾಡಿನೊಳಗಿನ ಹಾಡಿ ಮತ್ತು ಕಾಫಿ ತೋಟದಲ್ಲಿ ವಾಸಿಸುವ ಬುಡಕಟ್ಟು ಜನಾಂಗದವರು ವರ್ಷಕ್ಕೊಮ್ಮೆ ಮೂರು ದಿನಗಳ ಕಾಲ ತಮಗೆ ಇಷ್ಟವಾದ ವೇಷ ಧರಿಸಿಕೊಂಡು ಸಂಭ್ರಮಿಸುತ್ತಾರೆ.

ಕಾಡಿನಿಂದ ನಾಡಿಗೆ ಬಂದು ಪಟ್ಟಣದ ಅಂಗಡಿ ಮುಂಗಟ್ಟುಗಳ ಮುಂದೆ ಕೈಗೆ ಸಿಕ್ಕಿದ ವಸ್ತುಗಳನ್ನು ತಾಳಮೇಳ ಮಾಡಿಕೊಂಡು ಕುಣಿದು ಕುಪ್ಪಳಿಸುತ್ತಾ ಹಣ ಬೇಡುತ್ತಾರೆ. ಎದುರಿಗೆ ಸಿಕ್ಕಿದವರನ್ನು ಅಡ್ಡಗಟ್ಟಿ, ‘ಏ ಕುಂಡೆ’ ಮುಂತಾದ ಶಬ್ದ ಬಳಸಿ ಅಶ್ಲೀಲವಾಗಿ ಬೈಯುತ್ತಾ ಹೋಗುತ್ತಾರೆ. ಇವರು ತೊಡುವ ವೇಷಗಳು ಇಂತಹದ್ದೇ ಅಂತ ಇರುವುದಿಲ್ಲ. ಕಸದ ಗುಂಡಿಯಲ್ಲಿ ಬಿದ್ದಿರುವ ಪ್ಲಾಸ್ಟಿಕ್ ಆದರೂ ಸರಿ. ಅದನ್ನು ಮೈ ಅಥವಾ ತಲೆಗೆ ಸುತ್ತಿಕೊಳ್ಳುತ್ತಾರೆ. ಒಡೆದ ಪ್ಲಾಸ್ಟಿಕ್ ಬಿಂದಿಗೆ, ಡ್ರಮ್‌, ಹಲಸಿನ ಕಾಯಿ ಸಿಪ್ಪೆ, ಮಹಿಳೆಯರ ಒಳ ಉಡುಪುಗಳು ಇವೆಲ್ಲವೂ ಬುಡಕಟ್ಟು ಯುವಕರ ಮೈಮೇಲಿರುತ್ತವೆ.

ವಿರಾಜಪೇಟೆ ತಾಲ್ಲೂಕಿನ ಸುತ್ತಲಿನ ಜನರಲ್ಲದೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಪಂಚವಳ್ಳಿ, ಬೂದಿತಿಟ್ಟು, ಅಳ್ಳೂರು ಭಾಗಗಳ ಬುಡಕಟ್ಟು ಜನರೂ ಪಾಲ್ಗೊಳ್ಳುತ್ತಾರೆ. ಹಬ್ಬದ ಅಂತಿಮ ದಿನ ಭದ್ರಕಾಳಿ ದೇವಸ್ಥಾನದ ಬಳಿ ಮಧ್ಯಾಹ್ನ 2 ಗಂಟೆ ವೇಳೆಗೆ ಎಲ್ಲರೂ ಸೇರುತ್ತಾರೆ. ಕೆಲವರು ದೇವರಿಗೆ ಹರಕೆ ತೀರಿಸಲು ಕೋಳಿ ತಂದಿರುತ್ತಾರೆ. ಅದನ್ನು ಮೇಲಕ್ಕೆ ಎಸೆದಾಗ ಗುಂಪಿನಲ್ಲಿ ಕುಣಿಯುವ ಸಾವಿರಾರು ಜನರು ಹಿಡಿಯಲು ತಾಮುಂದು ನಾಮುಂದು ಎಂದು ಮುಗಿಬೀಳುತ್ತಾರೆ. ಕೋಳಿಯ ಒಂದೊಂದು ಅಂಗ ಒಬ್ಬೊಬ್ಬರ ಕೈಗೆ ಸಿಕ್ಕಿ ಚೂರು ಚೂರಾಗುತ್ತದೆ. ಜೀವಂತ ಕೋಳಿ ಸಿಕ್ಕಿದರೆ ಅದನ್ನು ಎಚ್ಚರಿಕೆಯಿಂದ ಸಾಕಿ ಮತ್ತೆ ಮುಂದಿನ ವರ್ಷ ತಂದು ಬಲಿಕೊಡುವ ಪದ್ಧತಿ ಇದೆ.

ಸಂಜೆವರೆಗೆ ಕುಣಿದು ಕುಪ್ಪಳಿಸಿದ ಬಳಿಕ ಬೈದದ್ದು ತಪ್ಪಾಯಿತು ಎಂದು ಭದ್ರಕಾಳಿ ಮತ್ತು ಅಯ್ಯಪ್ಪನಲ್ಲಿ ಕ್ಷಮೆ ಕೇಳುತ್ತಾರೆ. ಆನಂತರ ತಾವು ಬೇಡಿದ್ದ ಹಣವನ್ನು ದೇವಸ್ಥಾನದ ಹುಂಡಿಗೆ ಅರ್ಪಿಸಿ ಮನೆ ಕಡೆಗೆ ತೆರಳುತ್ತಾರೆ. ಹಬ್ಬ ನಡೆಯುವ ಸ್ಥಳದಲ್ಲಿ ದೊಡ್ಡ ಜಾತ್ರೆಯೇ ನೆರವೇರುತ್ತದೆ.

ಅಯ್ಯಪ್ಪ ಎಂಬ ವ್ಯಕ್ತಿ ಜೇನುಕುರುಬರನ್ನು ಕರೆದುಕೊಂಡು ದಟ್ಟ ಅರಣ್ಯಕ್ಕೆ ಬೇಟೆಗೆ ಹೋಗಿದ್ದನಂತೆ. ಭದ್ರಕಾಳಿ ಎಂಬ ಮಹಿಳೆ ಕಾಣಿಸಿಕೊಂಡಾಗ ಅಯ್ಯಪ್ಪ ಆಕೆಯ ವ್ಯಾಮೋಹಕ್ಕೆ ಒಳಗಾಗಿ ತನ್ನ ಜತೆಯಲ್ಲಿದ್ದ ಜೇನುಕರುಬರನ್ನು ಕಾಡಿನಲ್ಲೇ ಬಿಟ್ಟು ಆಕೆಯೊಂದಿಗೆ ಓಡಿ ಹೋದನಂತೆ. ದಿಕ್ಕುಗೆಟ್ಟಂತಾದ ಜೇನುಕುರುಬರು ಮತ್ತೆ ಹಿಂದಿರುಗಲು ಅಸಹಾಯಕರಾಗಿ ದಾರಿ ಹುಡುಕಾಡುವಾಗ ಅವರಿಬ್ಬರು ಏಕಾಂತದಲ್ಲಿ ಮುಳುಗಿರುವುದು ಕಂಡು ಬಂದಿತಂತೆ. ತಮ್ಮನ್ನು ಮಧ್ಯ ಕಾಡಿನಲ್ಲಿ ಕೈಬಿಡಲು ಕಾರಣಳಾದ ಭದ್ರಕಾಳಿಯ ಮೇಲೆ ಕೋಪಗೊಂಡ ಜೇನುರುಕುರುಬರು ಮನಸಾರೆ ಆಕೆಯನ್ನು ಶಪಿಸಿದರಂತೆ. ಹೀಗಾಗಿ ಭದ್ರಕಾಳಿಯನ್ನು ಮನಸಾರೆ ಬೈಯುವ ಹಬ್ಬವೇ ‘ಕುಂಡೆ ಹಬ್ಬ’ ಎನ್ನುತ್ತಾರೆ ಹಿರಿಯರು.

ಕುಂಡೆ ಹಬ್ಬದಂದು ಬುಡಕಟ್ಟು ಜನರು ಕೇವಲ ದೇವರಿಗೆ ಬೈಯುವುದಿಲ್ಲ. ಎದುರಿಗೆ ಸಿಕ್ಕಿದ ಪುರುಷ, ಮಹಿಳೆಯರಿಗೆಲ್ಲ ಅಶ್ಲೀಲವಾಗಿ ಬೈಯುತ್ತಾರೆ. ಆದರೆ ಜನ ಇದಕ್ಕೆ ಬೇಸರ ಮಾಡಿಕೊಳ್ಳುವುದಿಲ್ಲ. ಸದಾ ಕಾಡಿನಲ್ಲಿ ಮತ್ತು ಕಾಫಿ ತೋಟದಲ್ಲಿಯೇ ಕಾಲ ಕಳೆಯುವ ಬುಡಕಟ್ಟು ಜನರು ಸಂಭ್ರಮವನ್ನು ಈ ಹಬ್ಬದಲ್ಲಿ ನೋಡಿಯೇ ಅನುಭವಿಸಬೇಕು. ಇದೇ ಮೇ 22 ಅಥವಾ 24ರಂದು ನಡೆಯುವ ಸಂಭವವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT