ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಂಬಿದ ಬಾವಿಗಳ ತವರೂರು

Last Updated 17 ಮೇ 2018, 18:57 IST
ಅಕ್ಷರ ಗಾತ್ರ

ಭೀಮಣ್ಣನವರಿಗೆ ಈಗ ಅರವತ್ತೈದರ ಇಳಿ ವಯಸ್ಸು. ಅವರಿಗೆ ಇರುವ ಆಸ್ತಿ ಮೂರು ಎಕರೆ ಜಮೀನು, ಒಂದು ಬಾವಿ. ಇವರು ಇಪ್ಪತ್ತು ವರ್ಷದವರಿದ್ದಾಗ ಮನೆಯಲ್ಲಿ ಬಡತನ ಮನೆಮಾಡಿತ್ತು. ಕುಲವೃತ್ತಿಯಾದ ಬಂಡೆಗಳನ್ನು ಒಡೆದು ಕಲ್ಲಾಗಿಸುವ ಕೆಲಸ ಮಾಡಿ ಒಂದಿಷ್ಟು ಕಾಸು ಕೂಡಿಸಿದರು. ಊರ ಜಮೀನ್ದಾರರಿಂದ ಮೂರು ಎಕರೆ ಜಮೀನು ಖರೀದಿಸಿದರು.

ಬೆವರು ಹರಿಸಿ ತಗ್ಗು ತೋಡಿ, ಸುಂದರ ಬಾವಿ ಕಟ್ಟಿದರು. ಅದರಲ್ಲಿ ಜಿನುಗಿದ ನೀರು ಭತ್ತ ಮತ್ತು ರಾಗಿ ಪೈರುಗಳಿಗೆ ಜೀವ ನೀಡಿತು. ಬೆಳೆಯಿಂದ ಆದಾಯ ಬರಲಾರಂಭಿಸಿತು. ತೋಡಿದ ಬಾವಿ ಬಡತನದ ಕೂಪದಿಂದ ಮೇಲಕ್ಕೆ ಎತ್ತಿತು. ಆದಾಯದಲ್ಲಿ ಪ್ರತಿವರ್ಷ ಒಂದಷ್ಟು ಉಳಿತಾಯ ಮಾಡಿ, ಐದು ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಟ್ಟರು. ಮಗನನ್ನು ಓದಿಸಿದರು. ಮಗ ಕೆ.ಇ.ಬಿ.ಯಲ್ಲಿ ಈಗ ಲೈನ್‌ಮನ್‌. ಈ ಜೀವನಗಾಥೆಯನ್ನು ಬಾವಿದಡದಲ್ಲಿ ತಾವೇ ನೆಟ್ಟು ಬೆಳೆಸಿದ ಜಂಬೂ ನೇರಳೆ ಮರದ ನೆರಳಲ್ಲಿ ಕೂತು ಭೀಮಣ್ಣ ಹೇಳಿದರು.

ಹೀಗೆ ಒಂದೊಂದು ಬಾವಿಯೂ, ಕುಟುಂಬವೊಂದಕ್ಕೆ ಆರ್ಥಿಕ ಆಧಾರವಾಗಿ ಜೀವನಮಟ್ಟ ಸುಧಾರಿಸಿದ ಉದಾಹರಣೆಗಳು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ದೇವರಾಯಸಮುದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಊರುಕೇರಿಗಳಲ್ಲಿ ಸಿಗುತ್ತವೆ.

ಬೆಂಗಳೂರು–ತಿರುಪತಿ ಹೆದ್ದಾರಿಯ ಹನುಮನಹಳ್ಳಿ ಕ್ರಾಸ್‌ನಲ್ಲಿ ಬಲಕ್ಕೆ ಎರಡು ಕಿ.ಮೀ. ಕ್ರಮಿಸಿದರೆ ದೇವರಾಯಸಮುದ್ರ ಸಿಗುತ್ತದೆ. ಎಡದಲ್ಲಿ ಕಂದುಹಳದಿ ಬಣ್ಣವನ್ನು ಮೈದುಂಬಿ ನಿಂತ ಭತ್ತದ ಗದ್ದೆಗಳು, ಬಲದಲ್ಲಿ ವಿಶಾಲವಾದ ಕೆರೆ ಸ್ವಾಗತಿಸುತ್ತವೆ. ಇಲ್ಲಿನ ಬಂಡೆಯ ಬೃಹತ್‌ ಬೆಟ್ಟ ಊರು ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ. ಬೆಟ್ಟದ ಪಕ್ಕದಲ್ಲೂ ಎರಡು ಸಣ್ಣ ಕೆರೆಗಳಿವೆ.

ಬೆಟ್ಟದಲ್ಲಿ ಬೀಳುವ ಮಳೆನೀರು ಹರಿದು ಕೆರೆಗಳಿಗೆ ಸೇರಲು ಕಾಲುವೆಯ ವ್ಯವಸ್ಥೆ ಮಾಡಲಾಗಿದೆ. ಹಾಗಾಗಿ ಕೆರೆಯಂಗಳ ಸದಾಕಾಲ ನೀರಿನಿಂದ ಕಂಗೊಳಿಸುತ್ತದೆ. ಇದರಿಂದಾಗಿ ಊರು–ಹೊಲಗಳಲ್ಲಿನ ಐವತ್ತಕ್ಕೂ ಹೆಚ್ಚು ಬಾವಿಗಳಲ್ಲಿ ಜಲಸಮೃದ್ಧಿ ಇದೆ.

(ಮನೆಬಳಕೆಗೆ ನೀರು ಕೊಡುವ ಸಣ್ಣಬೀದಿ ಬಾವಿ)

ತೋಪುಬಾವಿಯ ಜಲಾಮೃತ

ಊರಿಂದ ಅರ್ಧ ಕಿ.ಮೀ. ದೂರದ ಬೆಟ್ಟದ ಬುಡದಲ್ಲಿ ತೋಪುಬಾವಿಯಿದೆ. ಸರ್ಕಾರ ಕುಡಿಯುವ ನೀರಿಗಾಗಿ ಊರಲ್ಲಿ ಫಿಲ್ಟರ್‌ ನೀರಿನ ಘಟಕದ ವ್ಯವಸ್ಥೆ ಮಾಡಿದೆ. ಆದರೆ ಊರಿನ ಬಹುತೇಕರು ಬೈಕು, ಸೈಕಲ್‌ಗಳಲ್ಲಿ ಕೊಡಗಳನ್ನು ಕಟ್ಟಿಕೊಂಡು, ಕ್ಯಾನ್‌ಗಳನ್ನು ಇಟ್ಟುಕೊಂಡು ಹೋಗಿ ತೋಪುಬಾವಿಯ ನೀರು ತಂದು ಕುಡಿಯುತ್ತಾರೆ.

ಈ ಬಾವಿಯ ಮೆಟ್ಟಿಲುಗಳನ್ನು ಚಪ್ಪಲಿಗಳನ್ನು ಹಾಕಿಕೊಂಡು  ಇಳಿಯುವಂತಿಲ್ಲ. ಇಲ್ಲಿ ದನಕರುಗಳ ಮೈತೊಳೆಯದಂತೆ, ಬಟ್ಟೆ ಒಗೆಯದಂತೆ ಜನರು ಸ್ವಯಂ ನಿರ್ಬಂಧ ಹಾಕಿಕೊಂಡಿದ್ದಾರೆ. ಈ ಬಾವಿ ನೀರು ಒಯ್ಯಲು ಪಕ್ಕದೂರುಗಳಾದ ಬೆಳ್ಳಂಬಳ್ಳಿ, ಕಿಲುಹೊಳಲಿ, ಶಾಪುರ, ತಟ್ಟರಗುಂಟೆಯಿಂದಲೂ ಜನ ಬರುತ್ತಾರೆ. ಈ ಬಾವಿಯ ಜಲಾಮೃತ ಕುಡಿದಾಗಲೇ ತಿಳಿಯಿತು, ಜನರೇಕೆ ಫಿಲ್ಟರ್‌ ನೀರಿಗಿಂತ ಈ ನೀರಿಗೆ ಆದ್ಯತೆ ನೀಡುತ್ತಾರೆ ಎಂದು. ಇದನ್ನು 1959ರಲ್ಲಿ ಕಟ್ಟಲಾಗಿದೆ ಎಂದು ಬಾವಿಯ ಪ್ರವೇಶದಲ್ಲಿನ ಕಲ್ಲಿನ ಕೆತ್ತನೆಯಿಂದ ತಿಳಿಯುತ್ತದೆ.

(ರಾಮಲಿಂಗೇಶ್ವರ ದೇವಾಲಯ ಆವರಣದಲ್ಲಿನ ಬಾವಿ)

ಬೀದಿ ಬಾವಿ: ಊರ ದೊಡ್ಡ ಬೀದಿ, ಸಣ್ಣ ಬೀದಿಗಳಲ್ಲಿಯೂ ಆಯತಾಕಾರದ ಅಂಚಿನ ಸಣ್ಣ ಬಾವಿಗಳಿವೆ. ಹೆಂಗಳೆಯರು ಬಿಂದಿಗೆಗೆ ಹಗ್ಗಕಟ್ಟಿ ಇಲ್ಲಿ ನೀರು ಸೇದುತ್ತಾರೆ. ಮನೆಬಳಕೆಗೆ ಬಳಸುತ್ತಾರೆ. ‘ನಮ್ ಬೀದಿಯಲ್ಲಿನ ಬಾವಿಯಿಂದ ದಿನಾಲು ಸುಮಾರು 300 ಬಿಂದಿಗೆಯಷ್ಟು ನೀರನ್ನು ವಠಾರದವರು ಸೇದುತ್ತಾರೆ. ನಾವು ಪಂಪ್‌ ಹಚ್ಚಿ, ಬಾವಿಯಿಂದ ವಾರಕೊಮ್ಮೆ ನೀರೆತ್ತಿ 3ಸಾವಿರ ಲೀಟರ್‌ ಹಿಡಿಯುವ ಸಂಪ್‌ನಲ್ಲಿ ಸ್ಟೋರ್‌ ಮಾಡುತ್ತೇವೆ. ಅದನ್ನೆ ಓವರ್‌ಹೆಡ್‌ ಟ್ಯಾಂಕ್‌ಗೆ ಕಳುಹಿಸಿ, ಅಡುಗೆ ಮಾಡಲು, ಪಾತ್ರೆ ತೊಳೆಯಲು, ಸ್ನಾನಕ್ಕೆ ಮತ್ತು  ಬಟ್ಟೆ ಒಗೆಯಲು ಬಳಸುತ್ತೇವೆ’ ಎಂದು ಊರವಾಸಿಯಾದ ಗಾಯತ್ರಿ ಶ್ರೀಧರ್‌ ತಿಳಿಸಿದರು.

ದೊಡ್ಡಬೀದಿಯ ಲಕ್ಷ್ಮಿನಾರಾಯಣಸ್ವಾಮಿ ದೇವಾಲಯದ ಪ್ರಾಂಗಣದಲ್ಲೂ ಮೂರು ಬಾವಿಗಳಿವೆ. ಅದರ ನೀರು ದೇವಾಲಯಕ್ಕೆ ಮೀಸಲು. ಈ ದೇವಾಲಯದ ಹಜಾರದಲ್ಲಿ ಕುಳಿತಿದ್ದ 80ರ ಹಿರಿಯಜ್ಜ ವೆಂಕಟರಮಣ ಶೆಟ್ಟರನ್ನು ಮಾತಿಗೆಳೆದಾಗ, ‘ನಾವು ಸಣ್ಣವರಿದ್ದಾಗ ಹೆಚ್ಚು ಮಣ್ಣು ಬಾವಿಗಳಿದ್ವು. ಆಮೇಲೆ ಕಲ್ಲಿಂದ ಕಟ್ಟುವ ಚಕ್ರಾಕಾರದ ಬಾವಿಗಳು ಬಂದ್ವು.

(ಊರಿಗೆ ಕುಡಿಯುವ ನೀರು ಒದಗಿಸುವ ತೋಪು ಬಾವಿ)

ಆ ನಾಯಕನಪ್ಪನ ಬಾವಿ ತೋಡುವ ಕೆಲಸಕ್ಕೆ ಹೋದಾಗ, ದಿನಕ್ಕೆ 50 ಪೈಸೆಯಂತೆ ಕೂಲಿ ಕೊಟ್ಟಿದ್ದರು. ಆಗ ಮನೆಗೊಂದು, ವಠಾರಕ್ಕೊಂದು, ಹೊಲಕ್ಕೊಂದು ಬಾವಿ ಇದ್ವು. ದನ–ಕುರಿ ಮೇಯಿಸಲು ಹೋದಾಗ ಈಜು ಹೊಡೆದ ಮೇಲೇನೇ ಮಧ್ಯಾಹ್ನದ ಊಟದ ಬುತ್ತಿ ಬಿಚ್ಚುತ್ತಿದ್ದೆವು’ ಎಂದು ನೆನಪಿನ ಬುತ್ತಿ ಬಿಚ್ಚಿಟ್ಟರು. ಇದೇ ಸಮಯಕ್ಕೆ 70 ದಾಟಿ, ಬೆನ್ನುಬಾಗಿರುವ ವೆಂಕಟಪ್ಪ ತನ್ನ ಮೊಮ್ಮಗನಿಗೆ ಸರ್ಕಾರ ಕೊಟ್ಟಿರುವ ಸೈಕಲ್‌ಗೆ ಎರಡು ಕೊಡಗಳನ್ನು ಕಟ್ಟಿಕೊಂಡು, ತೋಪುಬಾವಿಯ ನೀರು ತುಂಬಿಕೊಂಡು ಬಂದರು.

ನಟರಾಜಪ್ಪನವರ ಬಾವಿ, ಅಂಕಾಳ ಪರಮೇಶ್ವರಿ ಬಾವಿ ಈ ಊರ ಜನರ ಜೀವನದ ಭಾಗವಾಗಿ ಇನ್ನೂ ಜೀವಂತವಾಗಿವೆ. ಇಲ್ಲಿ ಬಾವಿಗಳು ದೇವಾಲಯಗಳಲ್ಲಿ ಕಲ್ಯಾಣಿ ರೂಪವನ್ನು, ಗದ್ದೆಗಳಲ್ಲಿ ಚಕ್ರಾಕಾರದ ರೂಪವನ್ನು ಮತ್ತು ಓಣಿಗಳಲ್ಲಿ 3X6 ಅಡಿ ಅಳತೆಯ ಆಯತಾಕಾರವನ್ನು ಹೊಂದಿವೆ. ಸಮೃದ್ಧ ಜಲಸಂಪತ್ತಿನಿಂದಾಗಿ ಕೆರೆ, ಬಾವಿಗಳ ಸುತ್ತಲಿನ ಪರಿಸರದಲ್ಲಿ ತರಹೇವಾರಿ ಚಿಟ್ಟೆಗಳು, ಬಣ್ಣದ ಕಿಂಗ್‌ಫಿಶರ್‌, ಬೀ ಇಟರ್‌, ಗೀಜಗ, ಕೊಕ್ಕರೆಗಳು ಕಾಣಸಿಗುತ್ತವೆ. ಇಲ್ಲಿನ ಕೃಷಿಕರು ಭತ್ತವನ್ನು ಹೆಚ್ಚು ಬೆಳೆಯುತ್ತಾರೆ. ಮನೆಮಂದಿಗೆ ಬೇಕಾದಷ್ಟು ರಾಗಿಯನ್ನು ಹಾಕುತ್ತಾರೆ.

‘ಅಂತರ್ಜಲ ಪಾರಂಪರಿಕ ವಲಯವಾಗಿಸಿ’

‘ಸರ್ಕಾರ ದೇವರಾಯಸಮುದ್ರ ಪಂಚಾಯಿತಿ ಪ್ರದೇಶವನ್ನು ‘ಅಂತರ್ಜಲ ಪಾರಂಪರಿಕ ವಲಯ’ವೆಂದು ಘೋಷಿಸಬೇಕು’ ಎಂಬುದು ಗ್ರಾಮವಿಕಾಸ ಸಂಸ್ಥೆ ಮತ್ತು ಬಯೊಮೆ ಟ್ರಸ್ಟ್‌ನ ಜಲ ಸಂರಕ್ಷಣಾ ಕಾರ್ಯಕರ್ತ ವಿಶ್ವನಾಥ್‌ ಶ್ರೀಕಂಠಯ್ಯ ಅವರ ಒತ್ತಾಯವಾಗಿದೆ.

‘ಈ ವಲಯದಲ್ಲಿ ಕೊಳವೆಬಾವಿ ಕೊರೆಸಲು ನಿರ್ಬಂಧ ಹೇರಬೇಕು. ರೈತರು ತುಂತುರು ಮತ್ತು ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳಲು ಉತ್ತೇಜಿಸಬೇಕು. ಇದರಿಂದ ಜನಜೀವನ, ನಿಸರ್ಗ ಸೇರಿದಂತೆ ತೆರೆದ ಬಾವಿಗಳ ಪರಂಪರೆಯೂ ಉಳಿಯುತ್ತದೆ’ ಎಂಬುದು ಅವರ ಕಾಳಜಿಯಾಗಿದೆ.

ಬೆಂಗಳೂರಿನ ಕೊಳಚೆ ನೀರನ್ನು ಸಂಸ್ಕರಿಸಿ ಈ ಪ್ರದೇಶದ ಹೊಳಲಿ ಮತ್ತು ನೆಂಗಲಿಗೆ ಕೆರೆಗಳನ್ನು ತುಂಬಿಸಲು ಬೆಟ್ಟದ ಬುಡದಲ್ಲಿಯೇ ತಗ್ಗು ಅಗೆದು, ಬೃಹದಾಕಾರದ ಕೊಳವೆಗಳನ್ನು ಜೋಡಿಸುತ್ತಿದ್ದಾರೆ. ಈ ಕೊಳವೆ ಮಾರ್ಗಕ್ಕಾಗಿ ಜೆಸಿಬಿಯ ಬಾಯಿ ಉದ್ದನಗುಂಟೆಯ ಬಾವಿಯ ಕಲ್ಲುಗಳನ್ನು ಕಿತ್ತೆಸೆದಿದೆ. ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಈ ಬಾವಿಯ ಕಲ್ಲುಗಳು, ಬೆಂಗಳೂರಿನ ಗಲೀಜು ನೀರಿಗಾಗಿ, ನಿಮ್ಮೂರಿನ ತಿಳಿನೀರಿಗೆ ಕಲ್ಲು ಹಾಕಿಕೊಂಡಿರಲ್ಲೋ ಎಂದು ಮರುಗುತ್ತಿರುವಂತಿದೆ.

**

ಮುಠಾಮೇಸ್ತ್ರಿ ಈಜುಕೊಳ

ದೇವರಾಯಸಮುದ್ರದ ದೊಡ್ಡಕೆರೆ ಪಕ್ಕದಲ್ಲೊಂದು ಬಾವಿ ಇದೆ. ಸದಾ ಕಂಠಮಟ್ಟ ತುಂಬಿರುವ ಇದರ ಹೆಸರು ಮುಠಾಮೇಸ್ತ್ರಿ ಬಾವಿ. ಈ ಬಾವಿಯ ಮಾಲೀಕರು ಚಿರಂಜೀವಿ ನಟಿಸಿದ ಮುಠಾಮೇಸ್ತ್ರಿ ಸಿನಿಮಾವನ್ನು ಲೆಕ್ಕವಿಲ್ಲದಷ್ಟು ಬಾರಿ ನೋಡಿದ್ದರಿಂದ, ಅವರಿಗೆ ಈ ಅಡ್ಡಹೆಸರು ಬಂತಂತೆ. ಅವರ ಹೆಸರು ಬಾವಿಗೂ ಬಿತ್ತಂತೆ.

ಹುಡುಗರಿಗೆ ಬೇಸಿಗೆಯಲ್ಲಿ ಇದು ನೆಚ್ಚಿನ ತಾಣ. ಕೈ–ಕಾಲು ಸೋಲುವವರೆಗೂ, ಮನ ತಣಿಯುವವರೆಗೂ ಇಲ್ಲಿ ಈಜು ಹೊಡೆಯುತ್ತಾರೆ. ಬಾವಿ ಪಕ್ಕದಲ್ಲಿನ ಪಂಪ್‌ಸೆಟ್‌ ಕೊಠಡಿ ಅವರಿಗೆ ಜಂಪ್‌ ಮಾಡಲು ರ್‍ಯಾಂಪ್‌ ಆಗಿ ಬಳಕೆಯಾಗುತ್ತದೆ. 70 ಅಡಿ ಆಳದ ಈ ಬಾವಿಗೆ ಜೋಡಿಸಿರುವ ಶಿಲ್ಪರಚನೆಗಳು ಗಮನ ಸೆಳೆಯುತ್ತವೆ. ಬೆಟ್ಟದ ಬುಡದ ಸಣ್ಣಕೆರೆ ಪಕ್ಕದಲ್ಲಿನ ಸುಂದರಪ್ಪನವರ ಬಾವಿ ಕೂಡ ಈಜಾಟ ಆಡಲು ಪ್ರಸಕ್ತ ತಾಣವಾಗಿದೆ. ‘ಹೆಚ್ಚು ಆಳವಿಲ್ಲದ ಇದೇ ಶಿಲ್ಪರಾಯ ಸ್ವಾಮಿ ಬಾವಿಯಲ್ಲಿ ನಾನು ಈಜು ಕಲಿತದ್ದು’ ಎಂದು ಕೇಬಲ್‌ ಅಪರೇಟರ್‌ ಸುಬ್ರಹ್ಮಣ್ಯ ತೋರಿಸಿದರು.

ಊರು ಹೊರಗಿನ ಕಾರೆ ಗಿಡಗಳ ನಡುವೆ ಗಾರೆ ಬಾವಿಯಿದೆ. ಇದರ ಸುತ್ತಲು ಗಾರೆಯಿಂದ ಕಟ್ಟಿದ ತಡೆಗೊಡೆ ಮತ್ತು ಕಮಾನುಗಳ ರಚನೆಗಳಿವೆ. ಊರಲ್ಲಿನ ಬ್ರಾಹ್ಮಣ ಸಮುದಾಯದವರು ಸಾವನಪ್ಪಿದ್ದಾಗ, ಅವರು ಚಿತಾಭಸ್ಮದ ಅಂತಿಮ ವಿಧಿವಿಧಾನಗಳು ಇದರ ದಡದಲ್ಲಿ ನಡೆಯುತ್ತವೆ.

(ಹುಡುಗರ ಈಜುಕೊಳ ಆಗಿರುವ ಮುಠಾಮೇಸ್ತ್ರಿ ಬಾವಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT