ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಡಿಎಸ್‌ನ ಕೋನರಡ್ಡಿಗೆ ಸೋಲು, ಬಿಜೆಪಿಯ ಮುನೇನಕೊಪ್ಪ ಜಯಭೇರಿ

Last Updated 15 ಮೇ 2018, 9:12 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಮಹದಾಯಿ ನದಿ ನೀರಿಗಾಗಿ ಹಪಹಪಿಸುತ್ತಿರುವ ಧಾರವಾಡ ಜಿಲ್ಲೆಯ ನವಲಗುಂದ ಕ್ಷೇತ್ರದ ಮತದಾರರಿಗೆ ಯಾವ ಪಕ್ಷ ಅಧಿಕಾರಕ್ಕೆ ಬಂದರೂ ಚಿಂತೆಯಿಲ್ಲ; ಒಟ್ಟಿನಲ್ಲಿ ನಮ್ಮ ಭಾಗದ ರೈತರಿಗೆ ನೀರು ಸಿಗಬೇಕೆಂದು ಕ್ಷೇತ್ರದ ಜನರ ದೊಡ್ಡ ಬೇಡಿಕೆಯಾಗಿತ್ತು. ಇಂಥ ಕಾಲದಲ್ಲಿಯೇ ‘ನಮ್ಮ ಸರ್ಕಾರ ಬಂದರೆ ಮಹದಾಯಿ ನೀರು’ ಎಂದು ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಭರವಸೆಗೆ ಫಲ ಲಭಿಸಿದೆ.

ಇದರಿಂದ ಬಿಜೆಪಿ ಅಭ್ಯರ್ಥಿ ಶಂಕರ ಪಾಟೀಲ ಮುನೇನಕೊಪ್ಪ 63,102 ಮತಗಳನ್ನು ಪಡೆದು ಗೆಲುವು ಪಡೆದಿದ್ದಾರೆ. ಜೆಡಿಎಸ್‌ ಅಭ್ಯರ್ಥಿ ಎನ್‌.ಎಚ್‌. ಕೋನರಡ್ಡಿ 43,636 ಮತ್ತು ಕಾಂಗ್ರೆಸ್‌ನ ಅಭ್ಯರ್ಥಿ ವಿನೋದ ಅಸೂಟಿ 37, 813 ಮತಗಳನ್ನು ಪಡೆದು ಮೂರನೇ ಸ್ಥಾನ ಪಡೆದರು.
‘ಕೇಂದ್ರದಲ್ಲಿ, ರಾಜ್ಯದಲ್ಲಿ ಮತ್ತು ನಿಮ್ಮ ಕ್ಷೇತ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೆ ಮಹದಾಯಿ ನೀರು ಸುಲಭವಾಗಿ ಬರುತ್ತದೆ’ ಎಂದು ಮೋದಿ  ಹೇಳಿದ್ದರು. ಸಾವಿರಾರು ದಿನಗಳ ನಿತ್ಯ ಹೋರಾಟ, ಪ್ರತಿಭಟನೆಗಳನ್ನು ಮಾಡುತ್ತಿರುವ ರೈತರಿಗೆ ಮೋದಿ ಅವರ ಈ ಮಾತು ಭರವಸೆಯಾಗಿ ಕಂಡಿದೆ. ಇದರಿಂದ ಮತದಾರರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಂಕರ ಪಾಟೀಲ ಮುನೇನಕೊಪ್ಪ ಅವರಿಗೆ ಮಣೆ ಹಾಕಿದ್ದಾರೆ. ಹಿಂದೆ ಶಾಸಕರಾಗಿದ್ದ ಎನ್‌.ಎಚ್‌. ಕೋನರಡ್ಡಿ ಸೋಲು ಅನುಭವಿಸಿದ್ದಾರೆ.

ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿಯನ್ನು ಗೆಲ್ಲಿಸಬೇಕೆಂದು ನವಲಗುಂದದಲ್ಲಿ ‘ಕುಮಾರ ಪರ್ವ’ ಕಾರ್ಯಕ್ರಮ ಆಯೋಜಿಸಿ ಜೆಡಿಎಸ್‌ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಪ್ರಚಾರ ಮಾಡಿದ್ದರು. ಆಗ ಕೋನರಡ್ಡಿ ಸಾವಿರಾರು ಜನರನ್ನು ಸೇರಿಸಿ ಜನಶಕ್ತಿ ಪ್ರತಿನಿಧಿಸಿದ್ದರು. ಕ್ಷೇತ್ರದಲ್ಲಿ ಅವರಿಗೆ ಒಳ್ಳೆಯ ಹೆಸರು ಮತ್ತು ಉತ್ತಮ ಕೆಲಸಗಾರ ಎನ್ನುವ ಹೆಸರು ಇದ್ದರೂ, ಬಿಜೆಪಿ ಅಭ್ಯರ್ಥಿಗಿಂತ ಇಲ್ಲಿ ಮೋದಿ ಹವಾ ಕೆಲಸ ಮಾಡಿದೆ ಎನ್ನುವುದು ಸ್ಪಷ್ಟ.
ನರೇಂದ್ರ ಮೋದಿ ಅವರು ಗದಗನಲ್ಲಿ ನಡೆದ ಚುನಾವಣಾ ಪ್ರಚಾರದ ವೇಳೆ ಮಹದಾಯಿ ನದಿ ನೀರು ಹಂಚಿಕೆ ವಿವಾದ ಇತ್ಯರ್ಥ ಪಡಿಸುವುದಾಗಿ ಭರವಸೆ ನೀಡಿದ್ದು ಮುನೇನಕೊಪ್ಪ ಅವರಿಗೆ ವರವಾಗಿದೆ.

ಪ್ರತಿಸ್ಪರ್ಧಿ ಜೆಡಿಎಸ್‌ನಿಂದ ತೀವ್ರ ಪೈಪೋಟಿ ಎದುರಿಸಿದರೂ ಅಂತಿಮವಾಗಿ ಬಿಜೆಪಿ ಜಯಭೇರಿ ಬಾರಿಸಿತು.  ಸ್ವತಃ ರೈತ ನಾಯಕರಾಗಿ ಗುರುತಿಸಿಕೊಂಡು, ವಿಧಾನಸಭೆಗೆ ಆಯ್ಕೆಯಾಗಿದ್ದ  ಕೋನರೆಡ್ಡಿ ತಮ್ಮ ಅಧಿಕಾರಾವಧಿಯಲ್ಲಿ ರೈತರ ಬೇಡಿಕೆ ಹಾಗೂ ಹೋರಾಟಕ್ಕೆ ಸ್ಪಂದಿಸಿಲ್ಲ ಎನ್ನುವ ಅಸಮಾಧಾನ ಕೂಡ ಕೆಲವು ಜನರಲ್ಲಿತ್ತು.

ಇನ್ನು ಕಾಂಗ್ರೆಸ್‌ ಅಭ್ಯರ್ಥಿ ವಿನೋದ ಅಸೂಟಿ ನೆಲಕಚ್ಚಲು ಆ ಪಕ್ಷದಲ್ಲಿ ಬಂಡಾಯ ಪ್ರಮುಖ ಕಾರಣ. ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ವಿನಯ್‌ ಕುಲಕರ್ಣಿ ಅವರ ಸೋದರ ವಿಜಯ್‌ ಕುಲಕರ್ಣಿ ಹಾಗೂ ಅಣ್ಣಿಗೇರಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾಗಿದ್ದ ಪ್ರಕಾಶ್‌ ಅಂಗಡಿಗೆ ಟಿಕೆಟ್‌ ಕೈ ತಪ್ಪಿದ್ದು ಬಂಡಾಯಕ್ಕೆ ಕಾರಣ. ಬಂಡಾಯಗಾರರ ಒಲವು ಬಿಜೆಪಿ ಮತಗಳಾಗಿ ಪರಿವರ್ತನೆಯಾಗಿ ಮುನೇನಕೊಪ್ಪ ಅವರಿಗೆ ಲಾಭ ತಂದುಕೊಟ್ಟಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT