ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಗಿಲು ಮುಟ್ಟಿದ ಸಂಭ್ರಮ

ಪಟಾಕಿ ಸಿಡಿಸಿ, ಸಿಹಿ ವಿತರಿಸಿ ವಿಜಯೋತ್ಸವ
Last Updated 16 ಮೇ 2018, 12:01 IST
ಅಕ್ಷರ ಗಾತ್ರ

ಹಾಸನ: ನಗರದ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜು ಮುಂಭಾಗ ಮಂಗಳವಾರ ಬೆಳಿಗ್ಗೆ 8 ಗಂಟೆಗೆ ಸರಿಯಾಗಿ ಮತ ಎಣಿಕೆ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆಯೇ ಜಮಾಯಿಸತೊಡಗಿದ ಅಭ್ಯರ್ಥಿಗಳ ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕರ್ತರ ಪಡೆಯಲ್ಲಿ ದುಗುಡ ಮನೆ ಮಾಡಿತ್ತು.

ವಿಜಯ ಮಾಲೆ ಯಾರ ಕೊರಳಿಗೆ ಬೀಳಲಿದೆ ಎಂಬ ಕಾತರ ಎಲ್ಲರಲ್ಲೂ ಕಂಡು ಬಂತು. ಮೊದಲ ಸುತ್ತಿನ ಮತ ಎಣಿಕೆ ಮುಗಿದು, ಅಭ್ಯರ್ಥಿಗಳು ಪಡೆದ ಮತಗಳನ್ನು ಘೋಷಿಸುತ್ತಿದ್ದಂತೆಯೇ ಚಪ್ಪಾಳೆ ತಟ್ಟಿ ಸಂಭ್ರಮಿಸುತ್ತಿದ್ದರು.
ಹಾಸನ ಕ್ಷೇತ್ರದಲ್ಲಿ ಮೊದಲ ಹಂತದ ಎಣಿಕೆ ಮುಕ್ತಾಯವಾದಾಗ ಮುಂದಿದ್ದ ಜೆಡಿಎಸ್‌ ಎಚ್‌.ಕೆ.ಪ್ರಕಾಶ್‌ ಅವರ ಬೆಂಬಲಿಗರು ಕರತಾಡನ ಕಾರ್ಯಕ್ಕೆ ನಾಂದಿ ಹಾಡಿದರು.

ಜಿಲ್ಲೆಯಿಂದ ಬಂದಿದ್ದ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ಫಲಿತಾಂಶ ಬಂದಂತೆ ಚಪ್ಪಾಳೆ, ಶಿಳ್ಳೆ, ಕೇಕೆ ಕೇಳಲಾರಂಭಿಸಿ ಗೆಲುವಿ ಗಾಗಿ ಕುತುಹೂಲ ಹೆಚ್ಚುತ್ತ ಸಾಗಿತು. ಡೇರಿ ವೃತ್ತದಲ್ಲಿ ಬಿಜೆಪಿ, ಜೆಡಿಎಸ್‌ ಕಾರ್ಯಕರ್ತರು ಕುಣಿದು ಕುಪ್ಪಳಿಸಿದರು. ವಿಜಯಮಾಲೆ ಧರಿಸಿದ ಅಭ್ಯರ್ಥಿಗಳನ್ನು ಹೆಗಲ ಮೇಲೆ ಹೊತ್ತು ಜೈ ಕಾರ ಹಾಕಿದರು.

ಹಾಸನ ಕ್ಷೇತ್ರದ ಅಂತಿಮ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಬಿಜೆಪಿ ಬೆಂಬಲಿಗರ ಸಂತೋಷಕ್ಕೆ ಪಾರವೇ ಇರಲಿಲ್ಲ. ಫಲಿತಾಂಶ ಪ್ರಕಟವಾದ ಕೂಡಲೇ ಬಿಜೆಪಿ ಧ್ವಜ ಹಾರಾಡತೊಡಗಿತು. ಪ್ರೀತಮ್ ಅವರಿಗೆ ಹೂವಿನ ಹಾರ ಹಾಗೂ ಮೈಸೂರು ಪೇಟ ತೊಡಿಸಿ ಜೈಕಾರ ಹಾಕಿದರು. ಕಾರ್ಯಕರ್ತರು ಪಟಾಕಿ ಸಿಡಿಸಿ, ಪರಸ್ಪರ ಬಣ್ಣ ಹಚ್ಚಿ ಸಂಭ್ರಮಪಟ್ಟರು. ಯುವಕರು ನಗರದಲ್ಲಿ ಬೈಕ್‌ರ‍್ಯಾಲಿ ನಡೆಸಿ ಪ್ರೀತಮ್ ಪರ ಘೋಷಣೆ ಕೂಗಿದರು. ನಗರದ ಪ್ರಮುಖ ರಸ್ತೆಗಳಲ್ಲಿ ಪ್ರೀತಂ ರೋಡ್‌ ಷೋ ನಡೆಸಿ, ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು.

ಜಿಲ್ಲೆಯ ಆರು ಕ್ಷೇತ್ರಗಳಲ್ಲಿ ಜೆಡಿಎಸ್‌ ಅಭ್ಯರ್ಥಿಗಳು ಜಯ ಸಾಧಿಸುತ್ತಿದ್ದಂತೆಯೇ ಕಾರ್ಯಕರ್ತರು, ಅಭಿಮಾನಿಗಳು ದೇವೇಗೌಡ ಹಾಗೂ ಕುಮಾರಸ್ವಾಮಿ ಪರ ಘೋಷಣೆ ಮೊಳಗಿಸಿದರು.

ಶ್ರವಣಬೆಳಗೊಳದ ಸಿ.ಎನ್‌.ಬಾಲಕೃಷ್ಣ ಅವರ ಅಭಿಮಾನಿಗಳು ಸಂಭ್ರಮಾ ಚರಣೆಯಲ್ಲಿ ತೊಡಗು ತ್ತಿದ್ದಂತೆಯೇ ಅರಸೀಕೆರೆ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಕೆ.ಎಂ.ಶಿವಲಿಂಗೇಗೌಡ, ಹೊಳೆನರಸೀಪುರದ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಎಚ್‌.ಡಿ.ರೇವಣ್ಣ, ಬೇಲೂರು ಕ್ಷೇತ್ರದ ಕೆ.ಎಸ್‌.ಲಿಂಗೇಶ್‌, ಅರಕಲಗೂಡು ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಎ.ಟಿ.ರಾಮಸ್ವಾಮಿ ಅವರಿಗೆ ಗೆಲುವಿನ ಮಾಲೆ ಲಭಿಸಿದ ಫಲಿತಾಂಶ ಹೊರಬಿದ್ದು, ಅಭಿಮಾನಿಗಳ ಸಂತಸದ ಕಟ್ಟೆ ಒಡೆಯಿತು.

ಮೀಸಲು ಕ್ಷೇತ್ರ ಸಕಲೇಶಪುರಕ್ಕೆ ಸಂಬಂಧಿಸಿದಂತೆ ಕೊನೆಯವರೆಗೂ ಚಂಚಲಚಿತ್ತಳಾದ ವಿಜಯಲಕ್ಷ್ಮೀ ಕಡೆಗೆ ಎಚ್‌.ಕೆ.ಕುಮಾರಸ್ವಾಮಿ ಅವರತ್ತ ವಾಲುತ್ತಿದ್ದಂತೆಯೇ ಜೆಡಿಎಸ್‌ ಅಭಿಮಾನಿಗಳ ಸಂತಸ ಮೇರೆ ಮೀರಿತು.
ಅರಲಗೂಡು, ಹಾಸನ, ಶ್ರವಣಬೆಳಗೊಳ, ಬೇಲೂರು, ಸಕಲೇಶಪುರ, ಹೊಳೆನರಸೀಪುರದಲ್ಲಿ ಎಲ್ಲಿ ನೋಡಿದರಲ್ಲಿ ಜೆಡಿಎಸ್ ಬಾವುಟ, ಪಟಾಕಿಗಳ ಸದ್ದು, ಅಭಿಮಾನಿಗಳ ಕೇಕೆ, ಬಣ್ಣದೋಕಳಿಯ ರಂಗು, ಗೆದ್ದ ಅಭ್ಯರ್ಥಿಗಳ ಮೆರವಣಿಗೆ ಅವರ ಸಂಭ್ರಮಕ್ಕೆ ಸಾಕ್ಷಿಯಾದವು.

ಶ್ರವಣಬೆಳಗೊಳದ ಸಿ.ಎನ್.ಬಾಲಕೃಷ್ಣ 53,462 ಮತಗಳ ಅಂತರದಲ್ಲಿ ಗೆಲವು ಸಾಧಿಸಿ ಎಲ್ಲಾ ಏಳು ಕ್ಷೇತ್ರಗಳ ಪೈಕಿ ಅತಿ ಹೆಚ್ಚು ಮತಗಳ ಅಂತರದಲ್ಲಿ ಜಯಸಿದ ಅಭ್ಯರ್ಥಿಯಾಗಿ ಹೊರಹೊಮ್ಮಿದರೆ, ಸಕಲೇಶಪುರದ ಎಚ್‌.ಕೆ.ಕುಮಾರಸ್ವಾಮಿ 4942 ಮತಗಳ ಅಂತರದಲ್ಲಿ ಗೆಲುವು ಸಾಧಿಸಿ ಅತಿ ಕಡಿಮೆ ಅಂತರದಲ್ಲಿ ಜಯಿಸಿದ ಕೀರ್ತಿಗೆ ಪಾತ್ರರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT