ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಡಿಎಸ್‌ ಕಾರ್ಯಕರ್ತರ ಸಂಭ್ರಮಾಚರಣೆ

ಮಳೆಯನ್ನು ಲೆಕ್ಕಿಸದೆ ಶಾಸಕ ಎ. ಮಂಜುನಾಥರನ್ನು ಮೆರವಣಿಗೆ ಮಾಡಿ ಅದ್ದೂರಿ ಸ್ವಾಗತ ಕೋರಿದ ಬೆಂಬಲಿಗರು
Last Updated 17 ಮೇ 2018, 7:17 IST
ಅಕ್ಷರ ಗಾತ್ರ

ಮಾಗಡಿ: ವಿಧಾನಸಭಾ ಕೇತ್ರದಿಂದ ಶಾಸಕರಾಗಿ ಆಯ್ಕೆಯಾಗಿರುವ ಎ.ಮಂಜುನಾಥ ಅವರು ತಿರುಮಲೆ ತಿರುವೆಂಗಳನಾಥ ರಂಗನಾಥ ಸ್ವಾಮಿ ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಜೆಡಿಎಸ್‌ ಕಾರ್ಯಕರ್ತರು ಮಳೆಯನ್ನು ಲೆಕ್ಕಿಸದೆ ದೇಗುಲದ ರಥಬೀದಿಯಲ್ಲಿ ಶಾಸಕ ಎ. ಮಂಜುನಾಥ ಅವರನ್ನು ಮಂಗಳ ವಾದ್ಯ ಸಹಿತ ಅದ್ದೂರಿ ಮೆರವಣಿಗೆಯಲ್ಲಿ ಸ್ವಾಗತಿಸಿದರು. ರಂಗನಾಥ ಸ್ವಾಮಿಗೆ ಪೂಜೆ ಸಲ್ಲಿಸಿದ ನಂತರ ಜೆಡಿಎಸ್‌ ಕಾರ್ಯಕರ್ತರು ನೂತನ ಶಾಸಕರನ್ನು ಹೆಗಲ ಮೇಲೆ ಹೊತ್ತು ಕುಣಿದರು.

ಪಟಾಕಿ ಸಿಡಿಸಿ, ಸಿಹಿ ವಿತರಿಸಲಾಯಿತು. ಅಭಿಮಾನಿಗಳು ಶಾಸಕ ಎ. ಮಂಜುನಾಥ ಅವರಿಗೆ ಹೂವಿನ ಹಾರಗಳನ್ನು ಅರ್ಪಿಸಿ ಜಯಕಾರ ಕೂಗಿದರು.

‘ಚುನಾವಣೆಯಲ್ಲಿ ಭಾರಿ ಬಹುಮತದಿಂದ ಆಯ್ಕೆ ಮಾಡಿರುವ ಮಾಗಡಿ ವಿಧಾನಸಭಾ ಕ್ಷೇತ್ರದ ಮತದಾರರ ಋಣ ತೀರಿಸಲು ಜೀವನ ಪರ್ಯಂತ ದುಡಿಯುತ್ತೇನೆ. ಬಡವರ ಮಗನನ್ನು ಶಾಸಕರನ್ನಾಗಿ ಆಯ್ಕೆ ಮಾಡಿರುವ ಮತದಾರರೇ ದೇವರು ಎಂಬ ನಂಬಿಕೆಯಿಂದ ಮತದಾರರ ಸೇವೆ ಮಾಡುತ್ತೇನೆ’ ಎಂದು ಮಂಜುನಾಥ ತಿಳಿಸಿದರು.

ಜೆಡಿಎಸ್‌ ಪಕ್ಷದ ಹಿಂದುಳಿದ ವರ್ಗಗಳ ರಾಜ್ಯ ಉಪಾಧ್ಯಕ್ಷ ಪಿ.ವಿ. ಸೀತಾರಾಮ್‌ ಮಾತನಾಡಿ, ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗುವುದು ಖಚಿತವಾಗಿದೆ. ಅತಿಹೆಚ್ಚು ಮತಗಳಿಸಿ ಶಾಸಕರಾಗಿ ಆಯ್ಕೆಯಾಗಿರುವ ಎ. ಮಂಜುನಾಥ ಅವರಿಗೆ ಮಂತ್ರಿ ಪದವಿ ನೀಡುವಂತೆ ದೇವೇಗೌಡರಲ್ಲಿ ಮನವಿ ಮಾಡಿರುವುದಾಗಿ ತಿಳಿಸಿದರು.

ಜೆಡಿಎಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ. ಕೃಷ್ಣಮೂರ್ತಿ, ಜೆಡಿಎಸ್‌ ಮುಖಂಡರಾದ ಲಕ್ಷ್ಮೀಮಂಜುನಾಥ, ಮಾಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಎನ್‌. ಮಂಜುನಾಥ, ಕಲ್ಕೆರೆ ಶಿವಣ್ಣ, ದೊಡ್ಡಯ್ಯ, ಹೊಂಬಾಳಮ್ಮನಪೇಟೆ ರಾಮು, ಜಯಲಕ್ಷ್ಮೀರೇವಣ್ಣ, ಹೊಸಪೇಟೆ ಅಶ್ವಥ್‌, ಎಂ.ಎನ್‌. ವೇಣುಗೋಪಾಲ್‌, ತಾಲ್ಲೂಕು ಸವಿತಾ ಸಮಾಜದ ಜಿಲ್ಲಾ ಘಟಕದ ಉಪಾಧ್ಯಕ್ಷ ಮುನಿಕೃಷ್ಣ, ತಾಲ್ಲೂಕು ಕಾಡುಗೊಲ್ಲರ ಯುವಸೇನೆ ಅಧ್ಯಕ್ಷ ಧನಂಜಯ, ಪೂಜಾರಿ ಚಿತ್ತಯ್ಯ, ರೂಪೇಶ್‌ ಕುಮಾರ್‌, ವಿಜಯಸಿಂಹ, ನರಸೇಗೌಡ ಹಾಗೂ ಜೆಡಿಎಸ್‌ ಕಾರ್ಯಕರ್ತರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

‘ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ’

ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಮತ್ತು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಅವರ ಮಾರ್ಗದರ್ಶನದಲ್ಲಿ ಕ್ಷೇತ್ರದ ಸರ್ವರ ಅಭಿವೃದ್ದಿಗೆ ಪಕ್ಷಭೇದ ಮರೆತು ಸರ್ಕಾರಿ ಸವಲತ್ತುಗಳನ್ನು ಕೊಡಿಸಿಕೊಡುತ್ತೇನೆ ಎಂದು ಶಾಸಕ ಎ.ಮಂಜು ತಿಳಿಸಿದರು.

ಹೇಮಾವತಿ ನದಿ ನೀರನ್ನು ತಾಲ್ಲೂಕಿನ 84 ಕೆರೆಗಳಿಗೆ ಹರಿಸುವ ಮೂಲಕ ಮತನೀಡಿರುವ ಮತದಾರರ ಋಣ ತೀರಿಸುತ್ತೇನೆ. ಗುರುಹಿರಿಯರ ಮಾರ್ಗದರ್ಶನದಲ್ಲಿ ತಾಲ್ಲೂಕಿನ ಸರ್ವಾಂಗೀಣ ಪ್ರಗತಿಗೆ ಶ್ರಮಿಸುತ್ತೇವೆ.

ರಂಗನಾಥ ಸ್ವಾಮಿ ಮತ್ತು ಸೋಮೇಶ್ವರ ಸ್ವಾಮಿ ದೇವರುಗಳ ಕೃಪೆಯಿಂದ ತಾಲ್ಲೂಕಿನಲ್ಲಿ ಮಳೆಬೆಳೆಯಾಗಿ ಜನಜಾನುವಾರುಗಳು ಆರೋಗ್ಯದಿಂದ ಸೌಹಾರ್ದ ಬದುಕು ನಡೆಸಲು ದೇವರಲ್ಲಿ ಪ್ರಾರ್ಥಿಸಿದ್ದೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT