ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಾಲುವೆ ನೀರು ಹರಿಸದಿರುವುದೇ ಸೋಲಿಗೆ ಕಾರಣ’

ಚುನಾವಣೋತ್ತರ ವಿಶ್ಲೇಷಣೆ; ಮತದಾನದ ಮೂಲಕ ಬಾದರ್ಲಿ ತಿರಸ್ಕರಿಸಿದ ರೈತ ಸಮುದಾಯ
Last Updated 17 ಮೇ 2018, 7:29 IST
ಅಕ್ಷರ ಗಾತ್ರ

ಸಿಂಧನೂರು: ಈ ಬಾರಿ ನಡೆದ ವಿಧಾನಸಭಾ ಚುನಾವಣೆಗೆ ತುಂಗಭದ್ರಾ ಎಡದಂಡೆ ನಾಲೆಯ ನೀರಾವರಿ ವಿಷಯವೆ ನಿರ್ಣಾಯಕವಾಗಿ ಪರಿಣಮಿಸಿತ್ತು. ಕಾಲುವೆ ನೀರು ನಿರ್ವಹಣೆಯ ವೈಫಲ್ಯವು ವಿರೋಧ ಪಕ್ಷಗಳಿಗೆ ಪ್ರಮುಖ ಆಹಾರವಾಗಿ ಶಾಸಕರಾಗಿದ್ದ ಹಂಪನಗೌಡರ ಸೋಲಿನಲ್ಲಿ ಪರ್ಯಾವಸಾನಗೊಂಡಿದೆ.

ತುಂಗಭದ್ರಾ ಜಲಾಶಯದಲ್ಲಿ ನೀರಿನ ಕೊರತೆ ಉಂಟಾಗಿ ಬೇಸಿಗೆ ಬೆಳೆಗೆ ನೀರಿಲ್ಲದ ಕಾರಣ ಒಂದೇ ಬೆಳೆಗೆ ಸೀಮಿತರಾದ ರೈತರು ಮೂರು ವರ್ಷಗಳಿಂದ ತೀವ್ರ ತೊಂದರೆ ಅನುಭವಿಸುತ್ತಾ ಬಂದಿದ್ದರು. ಕಳೆದ ವರ್ಷ ಜುಲೈ ತಿಂಗಳಲ್ಲಿ ಜಲಾಶಯದಲ್ಲಿ ನೀರಿನ ಮಟ್ಟ ಕಡಿಮೆಯಿದೆ ಎನ್ನುವ ಆಧಾರದ ಮೇಲೆ ನೀರಾವರಿ ಸಲಹಾ ಸಮಿತಿ ಮುಂಗಾರು ಬೆಳೆಗೆ ನೀರು ಹರಿಸದಿರಲು ತೀರ್ಮಾನ ಕೈಗೊಂಡಿತು. ಜಲಾಶಯದಲ್ಲಿ ನೀರಿದ್ದರೂ ಸರ್ಕಾರದ ಬೇಜವಾಬ್ದಾರಿಯಿಂದ ಕಾಲುವೆಗೆ ನೀರು ಬಿಡುತ್ತಿಲ್ಲವೆಂದು ಜೆಡಿಎಸ್ ಮುಖಂಡರು ರೈತರನ್ನು ಕರೆದುಕೊಂಡು ಧರಣಿ, ರಸ್ತೆ ತಡೆ ಚಳವಳಿ ಮಾಡಿದರು.

ನೀರಾವರಿ ಇಲಾಖೆ ಮುಂಗಾರು ಬೆಳೆಗೆ ನೀರು ಕೊಡುವುದಿಲ್ಲ, ಒಣ ಬೇಸಾಯದ ಬೆಳೆಗಳನ್ನು ಬೆಳೆಯುವಂತೆ ರೈತರಿಗೆ ಸಲಹೆ ನೀಡಿತು. ಇದರಿಂದ ಹಲವಾರು ರೈತರು ಮುಂಗಾರು ಬೆಳೆಗೆ ಭತ್ತ ನಾಟಿ ಮಾಡದೆ ಜೋಳ, ಹತ್ತಿ, ಸೂರ್ಯಕಾಂತಿ ಮತ್ತಿತರ ಬೆಳೆಗಳನ್ನು ನಾಟಿ ಮಾಡಿದರು. ಅತಿವೃಷ್ಟಿಯಿಂದ ಒಣ ಬೇಸಾಯದ ಬೆಳೆಗಳು ಹಾನಿಯಾದವು. ನೀರಾವರಿ ಇಲಾಖೆಯ ಸೂಚನೆಯನ್ನು ಲಕ್ಷಿಸದೆ ಭತ್ತ ನಾಟಿ ಮಾಡಿದ ರೈತರಿಗೆ ಮುಂಗಾರು ಬೆಳೆ ಕೈ ಹಿಡಿಯಿತು. ಸರ್ಕಾರದ ತೀರ್ಮಾನದಿಂದಾಗಿಯೇ ತಮ್ಮ ಬೆಳೆ ನಷ್ಟವಾಯಿತೆಂದು ರೈತರು ಅಳಲು ವ್ಯಕ್ತಪಡಿಸಿದರು. ಇದಕ್ಕೆ ಹಂಪನಗೌಡ ಬಾದರ್ಲಿ ಅವರನ್ನೆ ನೇರ ಹೊಣೆ ಮಾಡಿದರು. ಇದೇ ಅಸಮಾಧಾನಕ್ಕೆ ವಿರೋಧ ಪಕ್ಷಗಳು ನೀರೆರೆದವು.

ಬೇಸಿಗೆ ಬೆಳೆಗಾದರೂ ಭತ್ತ ನಾಟಿ ಮಾಡೋಣ ಎಂದು ಯೋಚಿಸಿದ್ದ ರೈತರಿಗೆ ಮತ್ತೊಂದು ಆಘಾತ ಕಾದಿತ್ತು. ಪುನಃ ಜಲಾಶಯದಲ್ಲಿ ನೀರಿನ ಅಭಾವವಿದೆ ಎನ್ನುವ ಕಾರಣದಿಂದ ಫೆ. 28ರ ವರೆಗೆ ಮಾತ್ರ ಇರುವಷ್ಟು ನೀರನ್ನು ಹಂಚುವುದಾಗಿ ನೀರಾವರಿ ಸಲಹಾ ಸಮಿತಿ ತೀಮಾನಿಸಿತು. ಆದರೆ ಶಾಸಕರ ಕೆಲ ಹಿಂಬಾಲಕರು ಮಾರ್ಚ್‌ 10 ರವರೆಗೆ ನೀರು ಕೊಡುಬಹುದೆಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ಇದನ್ನು ನಂಬಿದ ರೈತರು ಭತ್ತ ನಾಟಿ ಮಾಡಿದ್ದರು. ತೆಲಂಗಾಣ ಮತ್ತು ಆಂಧ್ರಪ್ರದೇಶದ ಪಾಲಿನ 7 ಟಿಎಂಸಿ ನೀರನ್ನು ಬಳಸಿಕೊಳ್ಳಲು ಸಚಿವ ಎಂ.ಬಿ.ಪಾಟೀಲ್ ನೇತೃತ್ವದಲ್ಲಿ ಪ್ರಯತ್ನಿಸುತ್ತಿರುವುದಾಗಿ ಶಾಸಕರಾಗಿದ್ದ ಹಂಪನಗೌಡ ಬಾದರ್ಲಿ ಅವರು ಹೇಳಿದ್ದರು.

ಈ ಎಲ್ಲ ಘಟನೆಗಳಿಂದ ರೈತರು ಕಲ್ಪಿಸಿಕೊಂಡಿದ್ದ ಬೇಸಿಗೆ ಬೆಳೆ ಕಮರಿ ಹೋಗುವಂತಾಯಿತು. ಇದರಿಂದ ರೈತ ಸಮುದಾಯ ಮತದಾನದ ಮೂಲಕ ನೋವನ್ನು ಹೊರ ಹಾಕಿದೆ.

ಮಾಜಿ ಶಾಸಕ ವೆಂಕಟರಾವ್ ನಾಡಗೌಡ ಅವರು ಕ್ಷೇತ್ರದ ತುಂಬೆಲ್ಲ ಪಾದಯಾತ್ರೆ ಮಾಡಿ, ತದನಂತರ ರೈತರ ಸಮಸ್ಯೆಗಳನ್ನು ಎತ್ತಿಕೊಂಡು ಹಲವಾರು ಹೋರಾಟಗಳನ್ನು ಮಾಡುವ ಮೂಲಕ ಪಕ್ಷ ಸಂಘಟನೆಯನ್ನು ಬಲಪಡಿಸಿದ್ದರು. ಅಲ್ಲದೆ ನೀರಿನ ವಿಷಯ ಕುರಿತು ಹಲವು ಬಗೆಯ ಸಭೆ, ಧರಣಿ, ರಸ್ತೆ ತಡೆ ಮತ್ತಿತರ ಚಳವಳಿಯನ್ನು ಮಾಡುವ ಮೂಲಕ ರೈತರ ವಿಶ್ವಾಸ ಗಳಿಸಿಕೊಂಡದ್ದು ಸಹ ನಾಡಗೌಡರ ಗೆಲುವಿಗೆ ಸಹಾಯಕವಾಯಿತು ಎನ್ನುವ ಮಾತುಗಳು ಕ್ಷೇತ್ರದಲ್ಲಿ ಕೇಳುತ್ತಿವೆ.

ಗಂಗಾವತಿ, ರಾಯಚೂರು ಮುಖ್ಯರಸ್ತೆಯ ಮೇಲ್ಭಾಗದ ಹಳ್ಳಿ ಮತ್ತು ಕ್ಯಾಂಪ್‌ಗಳು, ನದಿಯ ಮೂಲಕ ನೀರು ಪಡೆಯುವ ಏತ ನೀರಾವರಿ ಒಳಗೊಂಡ ಗ್ರಾಮಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅತ್ಯಂತ ಕಡಿಮೆ ಮತದಾನ ಆಗಿರುವುದೇ ಇದಕ್ಕೆ ಸಾಕ್ಷಿ ಎಂದು ವಿಶ್ಲೇಷಿಸಲಾಗುತ್ತಿದೆ.

ಸಿಂಧನೂರು ತಾಲ್ಲೂಕಿನಲ್ಲಿ ಪ್ರಬಲ ರಾಜಕೀಯ ವಿರೋಧಿ ಶಕ್ತಿಗಳು ಒಂದುಗೂಡಿದ ಸಮಯದಲ್ಲಿ ಎರಡು ಶಕ್ತಿಗಳ ವಿರುದ್ಧ ಮತ್ತೊಂದು ಶಕ್ತಿ ಉದಯಿಸಿರುವ ಹಲವಾರು ಉದಾಹರಣೆಗಳಿವೆ. ನಾಲ್ಕು ಬಾರಿ ಶಾಸಕರಾಗಿರುವ ಹಂಪನಗೌಡರ ವಿರುದ್ದದ ಆಡಳಿತದ ಅಲೆ, ವೀರಶೈವ ಲಿಂಗಾಯತ ಧರ್ಮದ ಪ್ರಕರಣ, ಬಿಜೆಪಿ ಅಭ್ಯರ್ಥಿ ಹೆಚ್ಚಿನ ಮತ ಗಳಿಸದಿರುವುದು ಸಹ ಅವರ ಸೋಲಿಗೆ ಮತ್ತೊಂದು ಕಾರಣವಾಗಿದೆ ಎಂದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.

ಡಿ.ಎಚ್‌. ಕಂಬಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT