ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮಧಾನ್ಯದ ರೂಪಾಂತರ

Last Updated 17 ಮೇ 2018, 19:30 IST
ಅಕ್ಷರ ಗಾತ್ರ

ಕನಕದಾಸರು ಕನ್ನಡದ ಸಾಂಸ್ಕೃತಿಕ ಪರಂಪರೆಯಲ್ಲಿ ಬಹುಮುಖ್ಯರು. ಕೀರ್ತನೆಕಾರರಾಗಿ, ಸಂತರಾಗಿ, ಮಾನವತತ್ವವನ್ನು ಸಾರುವ, ತಾರತಮ್ಯವನ್ನು ಖಂಡಿಸುವ ಸುಧಾರಕರಾಗಿ ಪ್ರಸಿದ್ಧರು.

ಆದರೆ ಅವರು ತಮ್ಮ ಬದುಕಿನ ಪೂರ್ವಾಶ್ರಮದಲ್ಲಿ ಸೈನಿಕರಾಗಿದ್ದರು, ವೀರಯೋಧರಾಗಿದ್ದರು ಎಂಬ ಬಗ್ಗೆ ತಿಳಿದವರು ಕಡಿಮೆ. ಅದಕ್ಕಾಗಿ ಕನಕದಾಸರ ಬದುಕಿನ ಈ ಆಯಾಮವನ್ನೇ ಮುಖ್ಯವಾಗಿಟ್ಟುಕೊಂಡು ಸಿನಿಮಾ ಮಾಡಿದ್ದಾರೆ ಟಿ.ಎನ್‌. ನಾಗೇಶ್‌. ಈ ಚಿತ್ರದ ಹೆಸರು ‘ರಾಮಧಾನ್ಯ’. ಯೋಧನಾಗಿದ್ದ ತಿಮ್ಮಪ್ಪ, ಯುದ್ಧದ ಹಿಂಸೆಯಿಂದ ವೈರಾಗ್ಯ ತಾಳಿ ಸಂತಕನಕನಾದ ಕಥೆಯನ್ನು ಈ ಚಿತ್ರದಲ್ಲಿ ಬಿಂಬಿಸಲಾಗಿದೆ.

ಹಾಗಾದರೆ ಇದು ಕನಕದಾಸರ ‘ರಾಮಧಾನ್ಯ ಚರಿತೆ’ಯನ್ನು ಆಧರಿಸಿದ್ದೇ? ಅಥವಾ ಕನಕದಾಸರ ಜೀವನಚರಿತ್ರೆಯನ್ನು ಆಧರಿಸಿದ್ದೆ? ಯಾವುದೂ ಅಲ್ಲ ಎನ್ನುತ್ತದೆ ಚಿತ್ರತಂಡ. ಆದರೆ ಈ ಎರಡೂ ಆಯಾಮಗಳೂ ಈ ಚಿತ್ರದಲ್ಲಿವೆ. ಸಮಕಾಲೀನ ಕಥೆಯ ಒಂದು ಎಳೆಯ ಜತೆಗೆ ಕನಕದಾಸರ ಕಾಲಘಟ್ಟ ಮತ್ತು ಅವರ ‘ರಾಮಧಾನ್ಯ ಚರಿತೆ’ ಕೃತಿಯಲ್ಲಿ ಬರುವ ಕಥೆ ಹೀಗೆ ಮೂರು ಎಳೆಗಳನ್ನು ಇಟ್ಟುಕೊಂಡು ಈ ಸಿನಿಮಾವನ್ನು ಕಟ್ಟಲಾಗಿದೆ.

ಈ ಚಿತ್ರಕ್ಕೆ ಹತ್ತು ಜನ ನಿರ್ಮಾಪಕರು ಹಣ ಹೂಡಿದ್ದಾರೆ. ಮೇ 25ರಂದು ತೆರೆಗೆ ಬರಲು ಸಜ್ಜಾಗಿರುವ ಈ ಚಿತ್ರದ ಕುರಿತು ಮಾಹಿತಿ ಹಂಚಿಕೊಳ್ಳಲು ಇತ್ತೀಚೆಗೆ ತಂಡ ಪತ್ರಿಕಾಗೋಷ್ಠಿ ಕರೆದಿತ್ತು.

‘ಸತತವಾಗಿ ಒಂದು ವರ್ಷ ಚಿತ್ರೀಕರಣ ಮಾಡಿದ್ದೇವೆ. ಕಷ್ಟಪಟ್ಟು ಇಷ್ಟಪಟ್ಟು ಮಾಡಿದ ಸಿನಿಮಾ ಇದು’ ಎಂದು ನಿರ್ಮಾಪಕರ ಪರವಾಗಿ ಮಾತನಾಡಿದರು ಜಂಬಣ್ಣ ಹವಳದ.

‘ರಾಮಧಾನ್ಯ’ ಎಂಬ ನಾಟಕವನ್ನು ನೋಡಿ ಅದರಿಂದ ಪ್ರೇರಿತರಾಗಿ ಸಿನಿಮಾ ಮಾಡಿದ್ದಾರೆ ಟಿ.ಎನ್‌. ನಾಗೇಶ್‌. ‘ಇದು ಕನಕದಾಸರ ಬದುಕಿನ ಕುರಿತಾದ ಚಿತ್ರವಾಗಿದ್ದರೂ ಹಾಡು, ಫೈಟ್‌ ಹೀಗೆ ಎಲ್ಲ ರೀತಿಯ ಕಮರ್ಷಿಯಲ್‌ ಅಂಶಗಳೂ ಇರುತ್ತವೆ’ ಎಂದರು ಅವರು.

ಯಶಸ್‌ ಸೂರ್ಯ ಮತ್ತು ನಿಮಿಕಾ ಈ ಚಿತ್ರದಲ್ಲಿ ಮೂರು ಛಾಯೆಗಳುಳ್ಳ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ‘ಕಮರ್ಷಿಯಲ್‌ ಸಿನಿಮಾಗಳು ವರ್ಷಕ್ಕೆ ನೂರಾರು ಬರುತ್ತವೆ. ಆದರೆ ಇಂಥ ಚಿತ್ರಗಳು ಒಂದೆರಡು ಬರುವುದೂ ಕಷ್ಟ. ಇದೂ ಪಕ್ಕಾ ಕಮರ್ಷಿಯಲ್‌ ಚಿತ್ರವೇ. ಆದರೆ ಅದರ ಜತೆಗೆ ಒಂದೊಳ್ಳೆ ಸಂದೇಶವೂ ಇದೆ’ ಎಂದು ಯಶಸ್‌ ಸೂರ್ಯ ವಿವರಿಸಿದರು.

ನಿಮಿಕಾ ಅವರಿಗಿದು ನಾಯಕಿಯಾಗಿ ಮೊದಲ ಸಿನಿಮಾ. ‘ಕನಕದಾಸರು ತಮ್ಮ ಕೃತಿಯಲ್ಲಿ ಸಮಾಜದಲ್ಲಿನ ತಾರತಮ್ಯದ ಕುರಿತು ಮಾತನಾಡಿದ್ದಾರೆ. ಆ ಸಂದೇಶ ಇಂದಿಗೂ ಅಗತ್ಯ. ಯಾಕೆಂದರೆ ಇಂದೂ ತಾರತಮ್ಯ ಇದ್ದೇ ಇದೆ. ಆದರೆ ಅದರ ಸ್ವರೂಪ ಬದಲಾಗಿದೆ’ ಎಂದರು. ಅವರಿಗೆ ಮೊದಮೊದಲು ಹೀಗೊಂದು ಪೌರಾಣಿಕ ಪಾತ್ರಕ್ಕೆ ಜೀವತುಂಬುವುದು ಕಷ್ಟ ಅನಿಸಿತ್ತಂತೆ. ನಿರ್ದೇಶಕರ ಮಾರ್ಗದರ್ಶನದಿಂದ ನಿಭಾಯಿಸಿದ್ದೇನೆ ಎಂದರು.

ದೇಸಿ ಮೋಹನ್‌ ಈ ಚಿತ್ರದ ನಾಲ್ಕು ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ವೀರ್‌ ಸಮರ್ಥ್‌ ಹಿನ್ನೆಲೆ ಸಂಗೀತ ನೀಡಿದ್ದಾರೆ. ಬಸವರಾಜ್‌ ಸೂಳೇರಿಪಾಳ್ಯ ಸಂಭಾಷಣೆ ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT