ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ವಿಶಿಷ್ಟಾದ್ವೈತ!

Last Updated 17 ಮೇ 2018, 19:30 IST
ಅಕ್ಷರ ಗಾತ್ರ

‘ಒಂದು ಸಿನಿಮಾ ನೋಡಿ, ಪ್ರೇಕ್ಷಕರು ಈ ಚಿತ್ರದ ಛಾಯಾಗ್ರಹಣ ಚೆನ್ನಾಗಿದೆ’ ಎಂದು ಹೇಳಿದರೆ ಅದು ಛಾಯಾಗ್ರಾಹಕನ ಸೋಲು. ಇಡೀ ಸಿನಿಮಾ ಒಂದು ಅನುಭವವಾಗಿ ಅವರ ಮನಸ್ಸಿಗೆ ತಾಕಬೇಕು. ಯಾವುದೋ ಒಂದು ವಿಭಾಗ ಪ್ರತ್ಯೇಕವಾಗಿ ಎದ್ದು ಕಾಣಬಾರದು. ಹಾಗೆ ಸಿನಿಮಾದ ಒಟ್ಟಾರೆ ಅನುಭವದಿಂದ ಪ್ರತ್ಯೇಕವಾಗಿ ಕಾಣಿಸದ ಹಾಗೆ ಚಿತ್ರೀಕರಿಸುವುದೇ ಛಾಯಾಗ್ರಹಣದ ಗೆಲುವು’

–ಇಷ್ಟು ಸ್ಪಷ್ಟವಾಗಿ ಮತ್ತು ಪ್ರಬುದ್ಧವಾಗಿ ಛಾಯಾಗ್ರಹಣ ಕುರಿತು ಮಾತನಾಡುವ ಅದ್ವೈತ ಗುರುಮೂರ್ತಿ ಕನ್ನಡದ ಪ್ರತಿಭಾವಂತ ಯುವ ಛಾಯಾಗ್ರಾಹಕರು.

‘ದೇವರ ನಾಡಿನಲ್ಲಿ’, ‘ಉಪ್ಪಿನ ಕಾಗದ’, ‘ರಾಕೆಟ್‌’, ‘ಯು ಟರ್ನ್‌’, ‘ಚೂರಿಕಟ್ಟೆ’, ‘ಫಿರಂಗಿಪುರ’, ‘ಕವಲು ದಾರಿ’, ‘ಪ್ರೀಮಿಯರ್‌ ಪದ್ಮಿನಿ’ ಹೀಗೆ ಇವರು ಛಾಯಾಗ್ರಾಹಕರಾಗಿ ಕೆಲಸ ಮಾಡಿದ, ಮಾಡುತ್ತಿರುವ ಸಿನಿಮಾಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಈ ಪಟ್ಟಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಕಲಾತ್ಮಕ ಮತ್ತು ವಾಣಿಜ್ಯ ಎಂಬ ಎರಡು ಕವಲುಗಳ ಸಂಗಮವೂ ಕಾಣಿಸುತ್ತದೆ. ಇದೇ ಅದ್ವೈತ ಗುರುಮೂರ್ತಿ ಅವರ ವೈಶಿಷ್ಟ್ಯ.

ಇವರು ಹುಟ್ಟಿ ಬೆಳೆದಿದ್ದೆಲ್ಲ ಬೆಂಗಳೂರಿನಲ್ಲಿಯೇ. ಎಂಇಎಸ್‌ ಕಾಲೇಜಿನಲ್ಲಿ ಬಿ.ಎಸ್‌.ಸಿ. ಪದವಿ ಮುಗಿಸಿದ ಅದ್ವೈತ ಅವರಿಗೆ ಏಳನೇ ತರಗತಿಯಿಂದಲೂ ರಂಗಭೂಮಿಯ ನಂಟು ಇತ್ತು. ಸುರೇಶ ಆನಗಳ್ಳಿ ಅವರ ‘ಅನೇಕ’ ರಂಗತಂಡದಲ್ಲಿ ಹಲವು ವರ್ಷಗಳ ಕೆಲಸ ಮಾಡಿದ ಅನುಭವ ಅವರಿಗಿತ್ತು. ಆದರೆ, ಸಿನಿಮಾಟೋಗ್ರಾಫರ್‌ ಆಗಬೇಕು ಎಂಬ ಹಂಬಲವೇನೂ ಇರಲಿಲ್ಲ. ಸುಚಿತ್ರ ಫಿಲಂ ಸೊಸೈಟಿಯಲ್ಲಿ ನಡೆದ ಸಿನಿಮಾಟೋಗ್ರಫಿ ಶಿಬಿರದಲ್ಲಿ ಭಾಗವಹಿಸಿದ ಮೇಲೆಯೇ ಆ ಮಾಧ್ಯಮದ ಮೇಲೆ ಅವರಿಗೆ ಆಸಕ್ತಿ ಹುಟ್ಟಿಕೊಂಡಿದ್ದು. ನಂತರ ಹಿರಿಯ ಛಾಯಾಗ್ರಾಹಕ ಜಿ.ಎಸ್‌. ಭಾಸ್ಕರ್‌ ಅವರ ಸಲಹೆಯಂತೆ ಪುಣೆಗೆ ಹೋಗಿ ಛಾಯಾಗ್ರಹಣದ ಅಲ್ಪಾವಧಿ ಕೋರ್ಸ್‌ ಒಂದನ್ನೂ ಮುಗಿಸಿಕೊಂಡು ಬಂದರು.

ಹೀಗೆ ಛಾಯಾಗ್ರಹಣದ ಪ್ರಾಥಮಿಕ ಪಾಠಗಳನ್ನು ಕಲಿತುಕೊಂಡ ಅವರು ಮೊದಲು ಕೆಲಸಕ್ಕೆ ಸೇರಿಕೊಂಡಿದ್ದು ಮಧು ಅಂಬತ್‌ ಅವರ ಬಳಿ. ಕವಿತಾ ಲಂಕೇಶ್‌ ಅವರ ‘ಅವ್ವ’ ಸಿನಿಮಾದ ಮೂಲಕ ಮಧು ಅಂಬತ್ ಸಹಾಯಕರಾಗಿ ಕೆಲಸ ಆರಂಭಿಸಿದ ಅವರು ನಂತರ ಎರಡೂವರೆ ವರ್ಷಗಳಲ್ಲಿ ಅವರ ಜತೆ ಎಂಟು ಸಿನಿಮಾಗಳಿಗೆ ಕೆಲಸ ಮಾಡಿದರು. ನಂತರ ಚೆನ್ನೈನ ಎಲ್‌.ವಿ. ಪ್ರಸಾದ್‌ ಫಿಲಂ ಆ್ಯಂಡ್‌ ಟಿ.ವಿ ಅಕಾಡೆಮಿಯಲ್ಲಿ ಡಿಪ್ಲೊಮಾ ಕೋರ್ಸ್‌ ಅನ್ನೂ ಮಾಡಿದರು.

ಡಿಪ್ಲೊಮಾದಲ್ಲಿ ಅವರ ಛಾಯಾಗ್ರಹಣದ ‘ಇಂದಿಯಮ್‌’ ಕಿರುಚಿತ್ರಕ್ಕೆ ‘ಇಂದ್ರಧನುಷ್‌’ ಪ್ರಶಸ್ತಿ ಬಂದಿತ್ತು. ಹಾಗೆಯೇ ಪೋಲೆಂಡ್‌ನ ಕ್ಯಾಮೆರಿಮೇಜ್‌ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿಯೂ ಪ್ರದರ್ಶನ ಕಂಡಿತು.

ಚೆನ್ನೈನಲ್ಲಿ ಕೋರ್ಸ್‌ ಮುಗಿಸಿ ಬಂದ ಅದ್ವೈತ ಮತ್ತೆ ಮಧು ಅಂಬತ್‌ ಅವರ ಬಳಿಯೇ ಸಹಾಯಕರಾಗಿ ಸೇರಿಕೊಂಡು ಮತ್ತಷ್ಟು ಸಿನಿಮಾಗಳಿಗೆ ಕೆಲಸ ಮಾಡಿದರು.

ಅದ್ವೈತ ಅವರು ಮೊದಲ ಬಾರಿಗೆ ಸ್ವತಂತ್ರ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದು ಬಿ. ಸುರೇಶ ಅವರ ‘ದೇವರ ನಾಡಿನಲ್ಲಿ’ ಚಿತ್ರಕ್ಕೆ. ನಂತರ ‘ರಾಕೆಟ್‌’, ‘ಉಪ್ಪಿನ ಕಾಗದ’, ‘ಯೂ ಟರ್ನ್‌’ ಹೀಗೆ ಒಂದಾದನಂತರ ಒಂದು ಅವಕಾಶಗಳು ಸಿಗುತ್ತಲೇ ಹೋದವು.

‘ಕಿರಿಕ್‌ ಪಾರ್ಟಿ’ ತೆಲುಗು ಅವತರಣಿಕೆಗೂ ಅದ್ವೈತ ಅವರ ಕ್ಯಾಮೆರಾ ಚಳಕವೇ ಇದೆ.

ಕಲಾತ್ಮಕ ಮತ್ತು ವಾಣಿಜ್ಯ ಸಿನಿಮಾಗಳೆರಡನ್ನೂ ಒಪ್ಪಿಕೊಂಡು ಮುನ್ನಡೆಯುತ್ತಿದ್ದರೂ ಹೀಗೆ ಸಿನಿಮಾವನ್ನು ವರ್ಗೀಕರಿಸುವುದು ಅವರಿಗೆ ಇಷ್ಟವಿಲ್ಲ. ‘ನನಗೆ ಸಿನಿಮಾಗಳನ್ನು ಕಲಾತ್ಮಕ– ವಾಣಿಜ್ಯ ಎಂದು ಗೆರೆ ಕೊರೆದಂತೆ ವಿಭಾಗಿಸುವುದು ಸಾಧ್ಯವಿಲ್ಲ. ನನಗೆ ಒಂದು ಸಿನಿಮಾದ ಕಥೆ ಏನನ್ನು ಬೇಡುತ್ತದೆ ಮತ್ತು ನಿರ್ದೇಶಕ ಏನನ್ನು ನಿರೀಕ್ಷಿಸುತ್ತಿದ್ದಾನೆ ಎನ್ನುವುದು ತುಂಬ ಮುಖ್ಯ. ಆ ಕಥೆಗೆ ಹತ್ತು ರೂಪಾಯಿ ಹಾಕಿದರೆ ಆ ಅಷ್ಟೂ ರೂಪಾಯಿಗಳು ತೆರೆಯ ಮೇಲೆ ಕಾಣಿಸಬೇಕು.

‘ಉಪ್ಪಿನ ಕಾಗದ’ದಂಥ ಅತ್ಯಂತ ಕಡಿಮೆ ಬಜೆಟ್‌ ಸಿನಿಮಾವನ್ನೂ ನಾನು ಮಾಡಿದ್ದೇನೆ. ಆ ಸಿನಿಮಾದ ಛಾಯಾಗ್ರಹಣಕ್ಕೆ ಸಾಕಷ್ಟು ಮೆಚ್ಚುಗೆಯೂ ವ್ಯಕ್ತವಾಗಿದೆ. ಇರುವ ಸಂಪನ್ಮೂಲಗಳಲ್ಲಿಯೇ ಹೊಸ ಸಾಧ್ಯತೆಗಳ ಹುಡುಕಿ ಸಾಧ್ಯವಾದಷ್ಟೂ ಉತ್ಕೃಷ್ಟವಾಗಿ ಚಿತ್ರೀಕರಿಸುವುದು ಹೇಗೆ ಎಂಬುದನ್ನು ನಾನು ಯೋಚಿಸುತ್ತೇನೆ. ಇಂಥ ಸವಾಲುಗಳೇ ನನ್ನನ್ನು ಬೆಳೆಸುತ್ತವೆ’ ಎನ್ನುತ್ತಾರೆ ಅದ್ವೈತ ಗುರುಮೂರ್ತಿ.

ಹಾಗೆಯೇ ‘ಪ್ರೇಕ್ಷಕರಿಗೆ ಎಲ್ಲವನ್ನೂ ವಾಚ್ಯವಾಗಿ ಎದ್ದು ಕಾಣುವಂತೆ ತೋರಿಸಬೇಕಿಲ್ಲ’ ಎಂದೂ ಅವರು ಹೇಳುತ್ತಾರೆ. ‘ಪ್ರೇಕ್ಷಕರಿಗೆ ಏನೂ ಅರ್ಥ ಆಗುವುದಿಲ್ಲ ಎನ್ನುವ ಭಾವನೆ ಹಲವು ಸಿನಿಮಾಕರ್ತರಲ್ಲಿದೆ. ಆದರೆ ಇದು ಸುಳ್ಳು. ಪ್ರೇಕ್ಷಕರನ್ನು ಬುದ್ದಿವಂತ ಎಂದು ಪರಿಗಣಿಸಿದ್ದರಿಂದಲೇ ಮಲಯಾಳಂ ಸಿನಿಮಾರಂಗ ಅಷ್ಟು ಮುಂದುವರಿದಿದೆ. ಅಷ್ಟೊಂದು ಪ್ರಯೋಗ ಮಾಡುವುದು ಸಾಧ್ಯವಾಗಿದೆ.

ನಾವೂ ಅಂಥ ನಂಬಿಕೆಯಿಂದಲೇ ಸಿನಿಮಾ ಮಾಡಬೇಕು. ಈಗೀಗ ನಮ್ಮಲ್ಲಿಯೂ ಅಂಥ ಪ್ರಯತ್ನಗಳು ನಡೆಯುತ್ತಿವೆ. ಕನ್ನಡದಲ್ಲಿಯೂ ಕಮರ್ಷಿಯಲ್‌ ಚೌಕಟ್ಟಿನಲ್ಲಿಯೇ ಕಲಾತ್ಮಕ ಸಾಧ್ಯತೆಗಳ ಹುಡುಕಾಟ ನಡೆದಿದೆ’ ಎನ್ನುವ ಅವರಿಗೆ ‘ಬಹುಬೇಗನೇ ಕನ್ನಡ ಚಿತ್ರರಂಗ ‌ಮಲಯಾಳಂ ಚಿತ್ರರಂಗವನ್ನು ಸರಿಗಟ್ಟಲಿದೆ’ ಎಂಬ ಆಶಾವಾದವೂ ಇದೆ.

ಕನ್ನಡ ಚಿತ್ರಗಳ ಜತೆಗೆ ತೆಲುಗು ಭಾಷೆಯಿಂದಲೂ ಇವರಿಗೆ ಅವಕಾಶಗಳು ಅರಸಿಕೊಂಡು ಬರುತ್ತಿವೆ. ಈಗಾಗಲೇ ಎರಡು ಸಿನಿಮಾಗಳು ಮಾತುಕತೆಯ ಹಂತದಲ್ಲಿವೆ. ಹೀಗೆ ಹಲವು ನೆಲೆಗಳಲ್ಲಿ ಬೇರೂರಿಕೊಂಡು ಬೆಳೆಯುತ್ತಿರುವ ಅದ್ವೈತ ಅವರಿಗೆ ತಾವು ಬೆಳೆಯುವುದರೊಟ್ಟಿಗೆ ಚಿತ್ರರಂಗವನ್ನೂ ಬೆಳೆಸುವ ಮಹತ್ವಾಕಾಂಕ್ಷೆಯಿದೆ. ಈ ಆಶಯವೇ ಅವರನ್ನು ಮುನ್ನಡೆಸುವ ಚೈತನ್ಯಶಕ್ತಿಯೂ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT