ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರ್‍ಯಾಂಬೊ ಬೆಡಗಿ

Last Updated 17 ಮೇ 2018, 19:30 IST
ಅಕ್ಷರ ಗಾತ್ರ

‘ನಾನು ಚಿತ್ರರಂಗಕ್ಕೆ ಬಂದಿದ್ದು ಅನಿರೀಕ್ಷಿತ. ಈಗ ಇಲ್ಲಿಯೇ ಉಳಿಯುವಂತಾಗಿದೆ’

ಹೀಗೆಂದು ಒಂದೇ ಸಾಲಿನಲ್ಲಿ ತಾವು ಚಿತ್ರರಂಗ ಪ್ರವೇಶಿಸಿದ ಕಥೆ ಹೇಳಿದರು ನಟಿ ಆಶಿಕಾ ರಂಗನಾಥ್‌. ಬೆಂಗಳೂರಿನಲ್ಲಿ ನಡೆದ ‘ಪ್ರೆಶ್‌ ಫೇಸ್‌’ ಸ್ಪರ್ಧೆಯಲ್ಲಿ ಅವರು ರನ್ನರ್‌ ಅಫ್ ಆಗಿದ್ದರು. ಆಗಲೇ ಅವರ ಛಾಯಾಚಿತ್ರಗಳು ನಿರ್ದೇಶಕರಿಗೆ ತಲುಪಿ ಚಂದನವನಕ್ಕೆ ಕರೆಯಿತ್ತರಂತೆ.

‘ಕ್ರೇಜಿ ಬಾಯ್’ ಆಶಿಕಾ ನಟಿಸಿದ ಮೊದಲ ಚಿತ್ರ. ಮೂರು ವರ್ಷದ ಹಿಂದೆ ಚಿತ್ರರಂಗ ಪ್ರವೇಶಿಸಿದ ಅವರು ನಟನೆಯಲ್ಲಿ ಸಾಕಷ್ಟು ಪಳಗಿದ್ದಾರೆ. ‘ರ್‍ಯಾಂಬೊ 2’ ಚಿತ್ರದಲ್ಲಿನ ಪಾತ್ರ ಇದಕ್ಕೊಂದು ನಿದರ್ಶನ.

‘ನನ್ನ ಹಿಂದಿನ ಚಿತ್ರಗಳಲ್ಲಿ ಪ್ರೀತಿ, ಕೌಟುಂಬಿಕ ಬದುಕಿನ ಸುತ್ತ ಹೆಣೆದ ಪಾತ್ರಗಳಲ್ಲಿ ನಟಿಸಿದ್ದೆ. ಈ ಚಿತ್ರದಲ್ಲಿ‌ ಬೋಲ್ಡ್‌ ಹುಡುಗಿಯ ಪಾತ್ರ. ಕಾಸ್ಟ್ಯೂಮ್‌ನಿಂದ ಹಿಡಿದು ನಟನೆವರೆಗೂ ಸಾಕಷ್ಟು ಬದಲಾವಣೆ ಕಾಣಬಹುದು. ಇಲ್ಲಿ ಬದುಕಿನ ಪರಿಧಿ ಅರಿಯದ ಮುಗ್ಧೆ.

ಜೀವನವನ್ನು ಎಂಜಾಯ್‌ ಮಾಡುವಂತಹ ಥೇಟ್‌ ಗೋವಾ ಹುಡುಗಿ. ಚಿತ್ರದ ಮೊದಲಾರ್ಧದಲ್ಲಿ ಖುಷಿಯ ಬದುಕಿದ್ದರೆ ದ್ವಿತೀಯಾರ್ಧದಲ್ಲಿ ಭಾವುಕ ಸನ್ನಿವೇಶಗಳಿವೆ. ಕೊನೆಯಲ್ಲಿ ಬದುಕಿನ ಅರ್ಥ ಗ್ರಹಿಸುತ್ತೇನೆ’ ಎಂದು ತಮ್ಮ ಪಾತ್ರದ ಕುರಿತು ವಿವರಿಸುತ್ತಾರೆ.

ನಿಜಜೀವನದಲ್ಲಿ ಆಶಿಕಾ ಅಂತಹ ಹುಡುಗಿಯಲ್ಲವಂತೆ. ಇಲ್ಲಿಯವರೆಗೆ ಅವರು ಸಂಪ್ರದಾಯಸ್ಥ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದೇ ಹೆಚ್ಚು. ‘ಈ ಚಿತ್ರದಲ್ಲಿನ ಪಾತ್ರಕ್ಕೆ ಸಾಕಷ್ಟು ಹೋಂವರ್ಕ್‌ ಮಾಡಿದ್ದೇನೆ. ನನ್ನ ಹಿಂದಿನ ಸಿನಿಮಾಗಳಿಗಿಂತ ಭಿನ್ನವಾದ ಪಾತ್ರ ಇದು’ ಎಂದು ಮುಗುಳುನಗೆ ಬೀರುತ್ತಾರೆ.

ಈ ಚಿತ್ರದ ಪಾತ್ರ ಅವರಿಗೆ ಸಾಕಷ್ಟು ಖುಷಿ ಕೊಟ್ಟಿದೆಯಂತೆ. ‘ನಾನು ಇಲ್ಲಿಯವರೆಗೂ ಅಂತಹ ಪಾತ್ರಗಳಲ್ಲಿ ನಟಿಸಿಲ್ಲ. ಇದು ನನ್ನ ನಟನಾ ಪಯಣಕ್ಕೆ ಹೊಸದಿಕ್ಕು ನೀಡಲಿದೆ’ ಎಂಬ ನಂಬಿಕೆ ಅವರದು. ಜೊತೆಗೆ, ನಾಯಕಿ ಪ್ರಧಾನ ಪಾತ್ರಗಳಲ್ಲಿಯೂ ಅವರಿಗೆ ನಟಿಸಲು ಇಷ್ಟವಿದೆ. ಅಂತಹ ಅವಕಾಶಗಳು ಸಿಕ್ಕಿದರೆ ಅಭಿನಯಿಸಲು ಅವರು ಸಿದ್ಧರಿದ್ದಾರೆ.

‘ಒಂದೇ ರೀತಿಯ ಪಾತ್ರ ಮಾಡುವುದು ಕಲಾವಿದರಿಗೆ ಒಳ್ಳೆಯದಲ್ಲ. ಪ್ರತಿಯೊಬ್ಬ ನಟಿಯೂ ನಾಯಕಿ ಪ್ರಧಾನ ಚಿತ್ರಗಳನ್ನು ಅಪೇಕ್ಷಿಸುವುದು ಸಹಜ. ಆ ಮೂಲಕ ನಮ್ಮೊಳಗಿನ ನಟನಾ ಸಾಮರ್ಥ್ಯ ಸಾಬೀತುಪಡಿಸಲು ಸಾಧ್ಯ. ಜೊತೆಗೆ, ಪ್ರೇಕ್ಷಕರನ್ನು ತಲುಪಬಹುದು’ ಎಂಬುದು ಅವರ ವಿಶ್ವಾಸದ ನುಡಿ.

ಆಶಿಕಾ ಹುಟ್ಟಿ, ಬೆಳೆದಿದ್ದು ತುಮಕೂರಿನಲ್ಲಿ. ತಂದೆ ವೃತ್ತಿಯಲ್ಲಿ ಗುತ್ತಿಗೆದಾರರು. ತಾಯಿ ಗೃಹಿಣಿ. ಅವರು ತಂದೆ, ತಾಯಿಯ ಮುದ್ದಿನ ಪುತ್ರಿ. ಮಗಳ ಶಿಕ್ಷಣಕ್ಕಾಗಿ ಪೋಷಕರು ಬೆಂಗಳೂರಿಗೆ ಸ್ಥಳಾಂತರಗೊಂಡಿದ್ದಾರೆ. ಸದ್ಯಕ್ಕೆ ಆಶಿಕಾ ಬಿ.ಕಾಂ. ಅಂತಿಮ ವರ್ಷದ ಪರೀಕ್ಷೆಯ ಸಿದ್ಧತೆಯಲ್ಲಿದ್ದಾರೆ.

‘ರ್‍ಯಾಂಬೊ 2 ಚಿತ್ರದಲ್ಲಿ ಪಾತ್ರಗಳ ಸುತ್ತ ಕಥೆ ಹೆಣೆಯಲಾಗಿದೆ. ಇದೊಂದು ಪಯಣದ ಕಥೆ. ಕಾಮಿಡಿ ಮೂಲಕ ಬದುಕಿನ ಅರ್ಥ ತಿಳಿಸಲು ಪ್ರಯತ್ನಿಸಲಾಗಿದೆ. ಶರಣ್‌ ಮತ್ತು ನನ್ನ ಪಾತ್ರ ಒಟ್ಟಾಗಿಯೇ ಸಾಗುತ್ತದೆ.

ಅವರ ಪಾತ್ರಕ್ಕೆ ನೀಡಿರುವಷ್ಟೇ ಪ್ರಾಧಾನ್ಯ ನನಗೂ ಸಿಕ್ಕಿದೆ. ಅವರೊಂದಿಗೆ ಕೆಲಸ ಮಾಡಿದ್ದು ಖುಷಿಕೊಟ್ಟಿದೆ. ಚಿತ್ರದ ಒಂದು ಸಾಲು ಕೇಳಿ ನಟಿಸಲು ಒಪ್ಪಿಕೊಂಡೆ. ಯಾವುದೋ ಒಂದು ಹಾಡಿನಲ್ಲಿ ಕುಣಿದು ಹೋಗುವುದು ಇದರಲ್ಲಿ ಇಲ್ಲ. ಅಂತಹ ಪಾತ್ರಗಳು ನನಗೆ ಇಷ್ಟವೂ ಇಲ್ಲ’ ಎನ್ನುತ್ತಾರೆ.

ಚಿತ್ರರಂಗಕ್ಕೆ ಅಂಟಿಕೊಂಡಿರುವ ಕಾಸ್ಟಿಂಗ್‌ ಕೌಚ್‌ ಜಾಢ್ಯ ಅವರಲ್ಲಿ ಬೇಸರ ತರಿಸಿದೆ. ‘ಚಿತ್ರರಂಗದಲ್ಲಿ ಪೈಪೋಟಿ ಇರುವುದು ನಿಜ. ಹಾಗೆಂದು ಅಡ್ಡಮಾರ್ಗದ ಮೂಲಕ ಅವಕಾಶ ಗಿಟ್ಟಿಸಿಕೊಳ್ಳಲು ಯತ್ನಿಸಬಾರದು. ಇದು ನಮ್ಮ ಸಂಸ್ಕೃತಿಯಲ್ಲ. ಇದಕ್ಕೆ ಯಾರೊಬ್ಬರೂ ಪ್ರೋತ್ಸಾಹ ನೀಡಬಾರದು. ಪ್ರತಿಭೆಯಿಂದ ಮಾತ್ರ ಚಿತ್ರರಂಗದಲ್ಲಿ ಉಳಿಯಲು ಸಾಧ್ಯ’ ಎನ್ನುತ್ತಾರೆ ಅವರು.

ಸದ್ಯಕ್ಕೆ ಅವರು ‘ತಾಯಿಗೆ ತಕ್ಕ ಮಗ’ ಚಿತ್ರೀಕರಣದಲ್ಲಿ ಬ್ಯುಸಿ. ತೆಲುಗು ಚಿತ್ರರಂಗದಿಂದ ಅವರಿಗೆ ಅವಕಾಶ ಹುಡುಕಿಕೊಂಡು ಬರುತ್ತಿವೆಯಂತೆ. ಇಲ್ಲಿಯೇ ಅವರಿಗೆ ಸಾಕಷ್ಟು ಅವಕಾಶ ಲಭಿಸುತ್ತಿವೆ. ವೈಯಕ್ತಿಕ ಕಾರಣಗಳ ಹಿನ್ನೆಲೆಯಲ್ಲಿ ಬೇರೆ ಭಾಷೆಯ ಚಿತ್ರಗಳಲ್ಲಿ ನಟಿಸಲು ಸಾಧ್ಯವಾಗಿಲ್ಲವಂತೆ.

‘ಕನ್ನಡದಲ್ಲಿ ಗಟ್ಟಿಯಾಗಿ ನೆಲೆಯೂರಿದ ಬಳಿಕ ಪರಭಾಷಾ ಚಿತ್ರಗಳಲ್ಲಿ ನಟಿಸುತ್ತೇನೆ. ಅಲ್ಲಿಯೂ ಉತ್ತಮ ಕಥೆಗಳಿಗಷ್ಟೇ ನನ್ನ ಮೊದಲ ಆದ್ಯತೆ’ ಎನ್ನುವುದು ಅವರ ದೃಢ ನಿಲುವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT