ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಯೊ’ ಸಾಧನ: ಇನ್ನಷ್ಟು ಮಾಹಿತಿ...

Last Updated 18 ಮೇ 2018, 19:30 IST
ಅಕ್ಷರ ಗಾತ್ರ

ಮನೆಯಲ್ಲೇ ವೀರ್ಯಪರೀಕ್ಷೆ ನಡೆಸಬಹುದಾದ ‘ಯೊ’ ಸಾಧನದ ಬಗ್ಗೆ ಮೇ 5ರ ಸಂಚಿಕೆಯ ಅಂಕಣದಲ್ಲಿ ಪರಿಚಯಿಸಲಾಗಿತ್ತು. ಇದಕ್ಕೆ ಸಂಬಂಧಪಟ್ಟಂತೆ ಕೆಲವು ಪ್ರಶ್ನೆಗಳೂ ಕೇಳಿಬರುತ್ತಿವೆ. ಅಂಥ ಕೆಲವು ಪ್ರಶ್ನೆಗಳಿಗೆ ಇಲ್ಲಿ ಉತ್ತರವನ್ನು ಕಂಡುಕೊಳ್ಳೋಣ.

ಚಲನಶೀಲ ವೀರ್ಯಶೇಖರಣೆಯನ್ನು ಪರೀಕ್ಷಿಸುವ ಅಗತ್ಯವಾದರೂ ಏನು?

ಸಂತಾನಶಕ್ತಿ ಎನ್ನುವ ವಿಷಯ ವೀರ್ಯದ ಸಂಖ್ಯೆಯ ಮೇಲೆ ಅವಲಂಬಿತವಾಗಿರುತ್ತದೆ. ಹೆಚ್ಚು ಚಲನಶೀಲವೀರ್ಯವನ್ನು ಹೊಂದಿದ್ದೀರಿ ಎಂದಾದರೆ, ಅಂಡಾಣುವನ್ನು ಫಲಿಸಲು ಸಮರ್ಥ ಎಂದರ್ಥ. ಸಹಜವಾದ ಲೈಂಗಿಕ ಕ್ರಿಯೆಯ ಸಂದರ್ಭದಲ್ಲಿ, ಅಂಡಾಣುವನ್ನು ತಲುಪಲು ವೀರ್ಯದ ಚಲನೆ ಅತಿಮುಖ್ಯವಾಗಿರುತ್ತದೆ.

ಆದ್ದರಿಂದ ವೀರ್ಯವು ಸಹಜವಾಗಿದೆಯೇ ಅಥವಾ ಕಡಿಮೆ ಸಂಖ್ಯೆಯಲ್ಲಿದೆಯೇ ಎಂಬುದನ್ನು ಪರೀಕ್ಷಿಸಿಕೊಳ್ಳುವುದೂ ಮುಖ್ಯ. ಇದು ಸಂತಾನಶಕ್ತಿಯ ಸಾಮರ್ಥ್ಯವನ್ನು ನೇರ ತಿಳಿಸಿದಂತೆ. ‘ಯೊ’ಯಿಂದ ಸುಲಭವಾಗಿ ವೀರ್ಯದ ಚಲನವನ್ನು ಗಮನಿಸಬಹುದು. ಈ ಮೂಲಕ ವಿಶ್ಲೇಷಣೆಯೂ ಸುಲಭವಾಗುತ್ತದೆ.

ಭಾರತೀಯ ಮಾರುಕಟ್ಟೆಯಲ್ಲಿ ಯೊ ಸಾಧನ ಎಷ್ಟು ಅವಶ್ಯಕವೆನಿಸುತ್ತದೆ?

ಈಗೀಗ ಸಂತಾನಹೀನತೆಯ ಸಮಸ್ಯೆಗಳಲ್ಲಿ ಅಂದಾಜು ಶೇ 40ರಿಂದ 50ರಷ್ಟು ಪುರುಷರ ಪಾಲೇ ಇರುತ್ತದೆ. ದಂಪತಿಗೆ ಮಗುವಾಗದೇ ಇದ್ದಾಗ ಮೊದಲು ಮಹಿಳೆಯನ್ನು ಪರೀಕ್ಷಿಸಿ, ಅದೂ ಫಲಿಸದೇ ಹೋದಾಗ ಒಂದು ವರ್ಷದ ನಂತರ ಪುರುಷನನ್ನು ಪರೀಕ್ಷೆಗೊಳಪಡಿಸುವ ರೂಢಿ ಇದೆ. ಈ ರೀತಿ ತಡ ಮಾಡುವುದು, 30 ಆದಾಗ ಮಗುವನ್ನು ಪಡೆಯಲು ನಿರ್ಧರಿಸುವುದು, ದಂಪತಿಗಳಲ್ಲಿ ಆತಂಕಕ್ಕೆ ಕಾರಣವಾಗುತ್ತದೆ.

ಅಷ್ಟೇ ಅಲ್ಲದೇ, ಮಗುವನ್ನು ಪಡೆಯುವ ಸಾಮರ್ಥ್ಯವೂ ವಯಸ್ಸಾಗುತ್ತಿದ್ದಂತೆ ಮಹಿಳೆಯರಲ್ಲಿ ಕುಂಠಿತಗೊಳ್ಳುತ್ತದೆ. ಆದರೆ ಈ ಯೊ ಸಾಧನದಿಂದ ವೀರ್ಯದ ಪ್ರಮಾಣವನ್ನು ಟ್ರ್ಯಾಕ್ ಮಾಡುವುದು ಸುಲಭ. ವೀರ್ಯದ ಆರೋಗ್ಯವನ್ನು ಗಮನಿಸುವುದು ಎಲ್ಲಾ ರೀತಿಯಿಂದಲೂ ಅವಶ್ಯಕವೇ. ಗರ್ಭಧಾರಣೆಗೆ ಸೂಕ್ತ ಸಮಯವನ್ನೂ ನಿರ್ಧರಿಸಿಕೊಳ್ಳಬಹುದು.

ಈ ಸಾಧನದ ಕಾರ್ಯವೈಖರಿ ಹೇಗಿದೆ?

ಯೊ-ಮನೆಯಲ್ಲೇ ವೀರ್ಯಪರೀಕ್ಷೆ ನಡೆಸುವ ಸಾಧನ ಹಾಗೂ ಇದರೊಂದಿಗೆ ಸ್ಮಾರ್ಟ್‍ಫೋನ್ ಆ್ಯಪ್ ಅನ್ನು ಡೌನ್‍ಲೋಡ್ ಮಾಡಿಕೊಳ್ಳಬೇಕಾಗುತ್ತದೆ. ವೀರ್ಯದ ಪರಿಸ್ಥಿತಿಯನ್ನು ವಿಶ್ಲೇಷಿಸಿ ಅದರ ಫಲಿತಾಂಶವನ್ನೂ ತಕ್ಷಣವೇ ನೀಡುವ ಸಾಧನ.

ಈ ಸಾಧನವನ್ನು ಯಾರು ಹೆಚ್ಚಾಗಿ ಬಳಸುತ್ತಾರೆ?

ಸಂತಾನಸಾಮರ್ಥ್ಯದ ಬಗ್ಗೆ ಕೌತುಕ ಹೊಂದಿರುವ ಪುರುಷರು, ಗರ್ಭಧಾರಣೆಯನ್ನು ಎದುರು ನೋಡುವ ದಂಪತಿ ಆ ಸಾಧ್ಯತೆಯನ್ನು ತಿಳಿದುಕೊಳ್ಳಲು ಹೆಚ್ಚಾಗಿ ಬಳಸುತ್ತಾರೆ.

ಕೀಮೋಥೆರಪಿಗೆ ಒಳಗಾದ ಅಥವಾ ಇನ್ನಿತರ ವೈದ್ಯಕೀಯ ಚಿಕಿತ್ಸೆಗೆ ಒಳಗಾದವರು ಈ ಪ್ರಕ್ರಿಯೆ ತಮ್ಮ ಸಂತಾನಶಕ್ತಿಯ ಮೇಲೆ ಪರಿಣಾಮ ಬೀರಿದೆಯೇ ಎಂದು ಅರಿತುಕೊಳ್ಳಲು ಈ ಸಾಧನದಿಂದ ಪರೀಕ್ಷೆ ಮಾಡಿಕೊಳ್ಳುತ್ತಾರೆ. ವಯಸ್ಸಾದ ಪುರುಷರು, ಮಗುವನ್ನು ಪಡೆಯಲು ಬಯಸುವಾಗಲೂ ಈ ಸಾಧನದ ಮೊರೆ ಹೋಗುತ್ತಾರೆ. ಒಟ್ಟಾರೆ ಆರೋಗ್ಯಕ್ಕೂ ವೀರ್ಯದ ಆರೋಗ್ಯಕ್ಕೂ ಸಂಬಂಧವಿರುವುದರಿಂದ ಅದರ ಪರೀಕ್ಷೆಗೆ ಈ ಸಾಧನವನ್ನು ಬಳಸುತ್ತಾರೆ. ತಮ್ಮ ಜೀವನಶೈಲಿಯಲ್ಲಿನ ಬದಲಾವಣೆ ವೀರ್ಯದ ಮೇಲೆ ಎಷ್ಟು ಪರಿಣಾಮ ಬೀರಿದೆ ಎಂಬುದನ್ನು ಅರಿತುಕೊಳ್ಳಲು ಇದನ್ನು ಬಳಸುತ್ತಾರೆ.

ಈ ಪರೀಕ್ಷೆ ಎಷ್ಟು ನಿಖರತೆಯನ್ನು ಹೊಂದಿದೆ?

ಲ್ಯಾಬ್ ಪರೀಕ್ಷೆಗೆ ಹೋಲಿಸಿದರೆ, ಯೊ ಪರೀಕ್ಷೆ ಶೇ 97ರಷ್ಟು ನಿಖರತೆಯನ್ನು ಹೊಂದಿದೆ. ಪರೀಕ್ಷಾ ಪ್ರಕ್ರಿಯೆಯ ಹಂತಗಳನ್ನು ಸರಿಯಾಗಿ ಪಾಲಿಸದೇ ಇದ್ದರೆ ತಪ್ಪಾಗಬಹುದು.

ಇನ್ನಿತರ ಪರೀಕ್ಷೆಗಿಂತಲೂ ಯೊ ಹೇಗೆ ಭಿನ್ನ?

ಎಫ್‍ಡಿಎ ಹಾಗೂ ಯುರೋಪ್‍ನ ಸಿಇಯಿಂದ ಈ ಸಾಧನ ದೃಢೀಕರಣ ಹೊಂದಿದೆ. ಸ್ಮಾರ್ಟ್‍ಫೋನ್ ಮೂಲಕ ಉತ್ತಮ ಫಲಿತಾಂಶವನ್ನು ಸುಲಭವಾಗಿ ಪಡೆಯುವಂಥ ಸಾಧನ ಹಾಗೂ ವಿಡಿಯೊ ಕೂಡ ಲಭ್ಯವಿರುವುದು ಇದರ ಉಪಯುಕ್ತತೆಯನ್ನು ತೋರುತ್ತದೆ. ತತ್‌ಕ್ಷಣವೇ ಫಲಿತಾಂಶ ನೀಡುವ ಸ್ಮಾರ್ಟ್‍ಫೋನ್ ಬೆಂಬಲಿತ ಬೇರೆ ಯಾವ ಪರೀಕ್ಷೆಗಳೂ ಲಭ್ಯವಿಲ್ಲ. ಬೇರೆ ಪರೀಕ್ಷೆಗಳಲ್ಲಿ ಕೇವಲ ವೀರ್ಯದ ಸಂಖ್ಯೆಯನ್ನು ಗಮನಿಸಬಹುದು. ಆದರೆ ಇದರಲ್ಲಿ ಚಲನಶೀಲವೀರ್ಯದ ಹಂತವನ್ನು ಕಂಡುಕೊಳ್ಳಬಹುದು. ಇದು ಇನ್ನಿತರ ಸಂತಾನಹೀನತೆಯ ಸಮಸ್ಯೆಗಳನ್ನು ಗುರುತಿಸಲು ಸಹಕಾರಿ.

ಈ ಸಾಧನದ ಬಿಡುಗಡೆಗೆ ಮುನ್ನ ಬೇರೆ ಪರೀಕ್ಷೆಗಳನ್ನು ನಡೆಸಲಾಗಿದೆಯೇ?

ಮೂರು ವರ್ಷದ ಬಹು ವೈದ್ಯಕೀಯ ಪರೀಕ್ಷೆಗಳನ್ನು ನಡೆಸಿಯೇ ಜನರಿಗೆ ಇದನ್ನು ಪರಿಚಯಿಸಲಾಗಿದೆ. ಪ್ರಾಯೋಗಿಕ ಹಂತದಲ್ಲಿ ಮುನ್ನೂರು ಮಂದಿ ಯೊದಿಂದ ಪರೀಕ್ಷೆ ಮಾಡಿಕೊಂಡಿದ್ದಾರೆ. ಡಿಸೆಂಬರ್ 2013ರಲ್ಲೇ ಯೊ ತಂಡ ಎಫ್‍ಡಿಎಗೆ ಈ ಮಾದರಿಯನ್ನು ಒಪ್ಪಿಸಿತ್ತು. ಈ ರೀತಿ ಸ್ಮಾರ್ಟ್‍ಫೋನ್ ಅವಲಂಬಿತ ಪರೀಕ್ಷೆಯನ್ನು ಇದೇ ಮೊದಲ ಬಾರಿ ಕಂಡು ಅವರಿಗೆ ಅಚ್ಚರಿಯೂ ಆಗಿತ್ತು. ನವೆಂಬರ್ 2016ರಲ್ಲಿ ಈ ಸಾಧನದ ಬಗ್ಗೆ ದೃಢೀಕರಣವೂ ದೊರೆಯಿತು.

ಮುಂದುವರೆಯುತ್ತದೆ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT