ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಸಿ ನಾಯಕ! ನಿಜ ನಾಯಕಿ...

ಹೆಣ್ಮಕ್ಳೆ ಸ್ಟ್ರಾಂಗು ಗುರು...
ಅಕ್ಷರ ಗಾತ್ರ

ಕಾಲೇಜಿನಲ್ಲಿ ಪರೀಕ್ಷೆಗಳಿಗೆ ಸಿದ್ಧತೆ ನಡೆದಿದೆ. ಮಗಳು ಪಿಕ್‍ನಿಕ್ ಹೋಗಬೇಕು ಎಂದು ಹಟ ಹಿಡಿದು ಕುಳಿತಿದ್ದಾಳೆ. ಪಿಕ್‍ನಿಕ್‍ಗೆ ಇದು ಸರಿಯಾದ ಸಮಯ ಅಲ್ಲ ಎಂದು ಹೇಳುತ್ತಿರುವ ಅಮ್ಮನೊಡನೆ ಅವಳ ಪ್ರತಿಭಟನೆ, ಜಟಾಪಟಿ ಮುಂದುವರೆದಿದೆ. ಅಪ್ಪನ ಮನಸ್ಸನ್ನು ಓಲೈಸಿ ಪಿಕ್‍ನಿಕ್‍ಗೆ ಅಪ್ಪಣೆ ಪಡೆದಾಗಿದೆ.

ಅಮ್ಮನ ಮುಂದಿರುವುದು ಎರಡೇ ಆಯ್ಕೆ. ಖಂಡತುಂಡವಾಗಿ ಮಗಳನ್ನು ನಿರ್ಬಂಧಿಸಿ ಮನೆಯೊಳಗೆ ಕೂಡಿ ಹಾಕುವುದು ಅಥವಾ ಅವಳ ಉತ್ಸಾಹಕ್ಕೆ ಅಡ್ಡಬಾರದೇ ಒಪ್ಪಿಗೆ ಸೂಚಿಸುವುದು. ಅಮ್ಮನ ಮಾತಿಗೆ ಕಟ್ಟುಬಿದ್ದು ಮಗಳು ಪಿಕ್‍ನಿಕ್ ಹೋಗದೇ ಇರುವುದರಿಂದ ಅವಳ ಅರಿವಿನಲ್ಲೇನೂ ವಿಸ್ತಾರವಾಗುವುದಿಲ್ಲ.

ಪರೀಕ್ಷಾ ಸಮಯದಲ್ಲಿ ಮನಸ್ಸು ಪ್ರಶಾಂತವಾಗಿರಬೇಕು ಎಂಬ ನಿಟ್ಟಿನಲ್ಲಿ ಅಮ್ಮ ಪಿಕ್‍ನಿಕ್ ಬೇಡ ಎನ್ನುತ್ತಿದ್ದಾಳೆ ಎಂಬ ಅರಿವು ಮಗಳಲ್ಲಿ ಮೂಡಿದರೆ, ಅಮ್ಮನ ವಿರೋಧದ ಉದ್ದೇಶ ಯಶಸ್ವಿಯಾದಂತೆ. ಮಗಳ ಮನಸ್ಸನ್ನೇ ಕೇಂದ್ರೀಕರಿಸುತ್ತ, ಅವಳಲ್ಲಿ ಈ ಅರಿವು ಮೂಡಿದೆಯೇ ಎಂಬುದನ್ನು ಅರಿಯಲು ಅಮ್ಮ ಯತ್ನಿಸುತ್ತಾಳೆ. ಅರಿವನ್ನು ಪಡೆಯಲು ಕೆಲವೊಮ್ಮೆ ನಷ್ಟವನ್ನೂ ಮಾಡಿಕೊಳ್ಳಬೇಕಾಗುತ್ತದೆ.

ಕೊನೆಯ ಕ್ಷಣದವರೆಗೂ ಪಿಕ್‍ನಿಕ್ ರದ್ದುಪಡಿಸಲು ಮುಂದಾಗದ ಮಗಳನ್ನು ಕಂಡು, ಅಮ್ಮನೇ ಬುತ್ತಿ ಕಟ್ಟಿಕೊಡುತ್ತಾಳೆ. ‘ಬಂದಮೇಲೆ ಪಟ್ಟಾಗಿ ಕುಳಿತು ಓದು, ಈಗ ಜೋಪಾನವಾಗಿ ಹೋಗಿ ಬಾ’ ಎಂಬ ಕಿವಿಮಾತು ಹೇಳುತ್ತಾಳೆ. ಅವಳ ಮನಸ್ಸಿಗೆ ಸ್ಪಷ್ವವಾಗಿ ಗೊತ್ತಿದೆ - ವಾಪಸ್ಸು ಬಂದು ಓದಿಗೆ ಕುಳಿತಾಗ ಮಗಳಿಗೆ ತನ್ನ ಮಾತಿನ ನಿಜ ಅರಿವಾಗುತ್ತದೆ ಎಂಬುದು. ಪಿಕ್‍ನಿಕ್‍ಗೆ ಹೋಗದೇ ಇರುವುದು ಸದ್ಯದ ಒಳಿತಾದರೆ, ಹೋಗಿ ಬಂದ ಮೇಲಾದರೂ ಮಗಳಲ್ಲಿ ಮೂಡಬಹುದಾದ ಅರಿವು ಜೀವನಪಾಠ.

ಹೀಗೆ ಕೆಲವೊಮ್ಮೆ ಸೋಲುತ್ತ, ಬೈಯುತ್ತ, ಮತ್ತೆ ಕೆಲವೊಮ್ಮೆ ಸಿಟ್ಟುಮಾಡಿಕೊಳ್ಳುತ್ತ, ಸುಖಾಸುಮ್ಮನೇ ಮುಖ ಊದಿಸಿಕೊಳ್ಳುತ್ತ ಪ್ರತಿಕ್ಷಣವೂ ಮನೆಯ ಮುನ್ನಡೆಗಾಗಿ ಯೋಚಿಸುವ ಇಂತಹ ಅಮ್ಮಂದಿರನ್ನು ಯಾರೂ ಹೆಚ್ಚಾಗಿ ಗಮನಿಸುವುದಿಲ್ಲ. ಆದರೆ ಕುಟುಂಬ ನಿರ್ವಹಣೆಯ ಸೂತ್ರವೊಂದು ಅವರ ಕೈಯಲ್ಲಿ ಇದ್ದೇ ಇರುತ್ತದೆ.

ಸಾಮಾನ್ಯವಾಗಿ ಮನೆಯ ವ್ಯವಹಾರದಲ್ಲಿ ಅಮ್ಮ, ಅತ್ತೆ ಅಥವಾ ಹೆಂಡತಿಯ ಪಟ್ಟದಲ್ಲಿ ನಿಂತು ಕುಟುಂಬದ ಸೂತ್ರವನ್ನು ಬಿಗಿಯಾಗಿ ಹಿಡಿಯುವ ಮಹಿಳೆಗೆ ನಾಯಕತ್ವದ ಪಟ್ಟವೇನೂ ಇರುವುದಿಲ್ಲ. ಆದರೆ ಕುಟುಂಬದ ನಾವೆಯು ಚಲಿಸಲು ಅಗತ್ಯವಿರುವ ಹಾಯಿಯಂತೆ ಆಕೆ ಪ್ರಧಾನವಾಗಿ ಇರುತ್ತಾಳೆ. ಅಷ್ಟೇ ಏಕೆ, ಹಣಕಾಸಿನ ಸೂತ್ರವೂ ಆಕೆಯ ಕೈಯಲ್ಲಿ ಇಲ್ಲದೇ ಇರಬಹುದು.

ಆದರೆ ಇನ್ನೆರಡು ತಿಂಗಳ ಬಳಿಕ ನಿಕ್ಕಿ ಆಗಿರುವ ಗಂಡನ ಸೋದರತ್ತೆಯ ಮಗಳ ಮದುವೆಗೆ ತಕ್ಕನಾದ ಉಡುಗೊರೆಗೆ ಹಣ ಹೊಂದಿಸಬೇಕಾಗಿದೆ ಎಂಬ ಅರಿವು ಆಕೆಯಲ್ಲಿರುತ್ತದೆ. ಗಂಡನ ಅಂತಸ್ತಿಗೆ ತಕ್ಕಂತೆ ಉಡುಗೊರೆ ಸಿದ್ಧವಾಗಬೇಕು ಎಂಬುದೂ, ಈ ಅಂತಸ್ತನ್ನು ನಿಭಾಯಿಸುವ ಭರಾಟೆಯಲ್ಲಿ ತನ್ನ ಮನೆಯ ಅಡಿಪಾಯಕ್ಕೆ ಅಪಾಯವಾಗಬಾರದು ಎಂಬುದನ್ನೂ ಆಕೆ ಅರಿತಿರುತ್ತಾಳೆ.

ನಿಭಾಯಿಸುವ ಈ ಕಲೆ ತಲೆಮಾರಿನಿಂದ ತಲೆಮಾರಿಗೆ ದಾಟಿ ಬಂದುದು ಎಂದು ಆಪ್ತಸಮಾಲೋಚಕಿಯೂ ಆಗಿರುವ ವಾಣಿಶ್ರೀ ಹೇಳುತ್ತಾರೆ. ಕೊತ್ತಂಬರಿ ಸೊಪ್ಪು ಒಲ್ಲೆನೆನ್ನುವ ಗಂಡನನ್ನು, ನೂಡಲ್ಸ್ ಬೇಕು ಎನ್ನುವ ಮಕ್ಕಳನ್ನು, ಸೀರೆಯನ್ನೇ ಉಡು ಎಂದು ನಯವಾಗಿ ಒತ್ತಾಯಿಸುವ ಮಾವನನ್ನೂ, ಮುಟ್ಟಾದುದೇ ಮಹಾ ಅಪರಾಧ ಎನ್ನುವ ಮನೆಯ ಅಜ್ಜಿಯನ್ನೂ ಆಯಾ ಕ್ಷಣಕ್ಕೆ ನಿಭಾಯಿಸುತ್ತಾ ಇರುವ ಅಮ್ಮನನ್ನು ನೋಡುತ್ತ ಮಗಳು ಬೆಳೆಯುತ್ತಾಳೆ.

ಯಾವುದೇ ಸಾಂಪ್ರದಾಯಿಕ ಶಿಕ್ಷಣವಿಲ್ಲದೇ ಈ ನಿಭಾಯಿಸುವ ‘ಕಲೆಗಾರಿಕೆ’ ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿನ ಹೆಣ್ಣೊಬ್ಬಳಿಗೆ ವರ್ಗಾವಣೆ ಆಗಿರುತ್ತದೆ. ಎಲ್ಲ ಪರಿಸ್ಥಿತಿಗಳಲ್ಲಿಯೂ ಅನ್ವಯವಾಗುವ ಸೂತ್ರವೊಂದೇ – ಯಾರದೇ ‘ಅಹಂ’ಗೆ ಪೆಟ್ಟಾಗದಂತೆ, ಅವರ ಮನಸ್ಸಿನಲ್ಲಿ ಬದಲಾವಣೆ ಬರುವಂತೆ ಅನುಸರಿಸುವ ಜಾಣ ನಡೆಯದು. ಇದನ್ನು ಮಹಿಳೆ ಅನಿವಾರ್ಯವಾಗಿ ಕಲಿತಿರುತ್ತಾಳೆ ಎನ್ನುವುದು ಬಹುತೇಕರ ತರ್ಕ.

ಈ ತರ್ಕವನ್ನು ಎಲ್ಲರೂ ಒಪ್ಪುತ್ತಾರೆ ಎಂದಲ್ಲ. ‘ಹೆಣ್ಣು ಸಹನೆಯಿಂದ ಎಲ್ಲವನ್ನೂ ನಿಭಾಯಿಸಬಲ್ಲಳೆಂದು ಹೇಳುವುದು, ಆಕೆಯಲ್ಲಿ ತಾಳ್ಮೆ ನಿಸರ್ಗಸಹಜವಾಗಿಯೇ ಮೈಗೂಡಿದೆ ಎಂದು ಹೊಗಳುವುದು ಬರೀ ಸಾಮಾಜಿಕ ತಂತ್ರ’ ಎಂದು ವಿವರಿಸುತ್ತಾರೆ, ಗೃಹಿಣಿ ಸಿಂಧೂರಿ.

ಹಿಂದಿನ ಕಾಲದಲ್ಲಿ ಸಮಾಜದಲ್ಲಿ ಮತ್ತು ಕುಟುಂಬದಲ್ಲಿ ಜೀವನವನ್ನು ನಿರ್ವಹಿಸುವುದೇ ಎಷ್ಟೋ ಮಹಿಳೆಯರಿಗೆ ಸವಾಲಾಗಿತ್ತು. ಹೆಣ್ಣುಮಕ್ಕಳನ್ನೇ ಹೆತ್ತಳೆಂದು ಮತ್ತೊಂದು ಮದುವೆಯಾಗುವ, ಪಿಳ್ಳೆ ನೆವ ಹೇಳಿ ಆಕೆಯನ್ನು ಮನೆಯಿಂದ ಹೊರಗಟ್ಟುವ, ಮತ್ತೇನೋ ಕಾರಣಗಳನ್ನು ಮುಂದೊಡ್ಡಿ ಮದುವೆಯೇ ಇಲ್ಲದೇ ಸಮಾಜದ ಕೊಂಕುನುಡಿಗಳಿಗೆ ಈಡಾಗುವ ಎಂತೆಂಥ ಸಂದರ್ಭಗಳನ್ನು ಮಹಿಳೆ ದಾಟಿ ಬಂದಿದ್ದಾಳೆ.

ಅಂತಹ ಸಂದರ್ಭಗಳಲ್ಲಿ ಕುಟುಂಬದೊಳಗಿನ ಮಹಿಳೆ ಅನಿವಾರ್ಯವಾಗಿ ಈ ನಿಭಾಯಿಸುವ ಕಲೆಯನ್ನು ಕಲಿತಿದ್ದಾಳೆಯೇ ಹೊರತು ಇದು ನಿಸರ್ಗಸಹಜ ಎಂದು ಹೇಳುವುದು ಸರಿಯಲ್ಲ. ಹಲವು ಬಾರಿ ಇಂತಹ ವಿಶೇಷಣಗಳೇ ಮಹಿಳೆಯ ಮೇಲೆ ಪರೋಕ್ಷವಾಗಿ ಮತ್ತಷ್ಟು ಒತ್ತಡವನ್ನು ಹೇರುತ್ತವೆ ಎನ್ನುವ ಲಲಿತಾ, ‘ಕಲೆಗಾರಿಕೆ’ ಎಂಬ ವಿಶೇಷಣವನ್ನು ಖಂಡಿಸುತ್ತಾರೆ.

ಮನಸ್ಸು ಮಾಡಿದರೆ ಪುರುಷರೂ ತಾಳ್ಮೆ-ಸಹನೆಯನ್ನು ಮೈಗೂಡಿಸಿಕೊಳ್ಳುವುದು ಕಷ್ಟವಲ್ಲ. ಎಷ್ಟೋ ಸಂದರ್ಭಗಳಲ್ಲಿ ಅದು ಸಾಬೀತಾಗುವುದುಂಟು. ಆದರೆ ನಾಯಕತ್ವದ ಪಟ್ಟವೊಂದು ಗಂಡಸರಿಗೆ ದಕ್ಕಿಬಿಡುವುದರಿಂದ ‘ನಿಭಾಯಿಸುವ’ ಪರಿಕಲ್ಪನೆಯ ಬಗ್ಗೆ ಯೋಚಿಸುವ ಅವಕಾಶಗಳೇ ಅವರ ಪಾಲಿಗೆ ಸೃಷ್ಟಿಯಾಗುವುದಿಲ್ಲ ಎನ್ನುವುದು ಲಲಿತಾ ಅವರ ಅನಿಸಿಕೆ.

‘ಸುಮಾರು ಏಳೆಂಟು ದಶಕಗಳ ಹಿಂದೆ ಮಹಿಳೆ ಮನೆಯ ಹೊಸಿಲು ದಾಟಿ ಹಣ ಸಂಪಾದನೆಗೆ ತೊಡಗಿದಾಗ ನೂರಾರು ಮಾತುಗಳನ್ನು ಮೌನವಾಗಿ ನಿಭಾಯಿಸಿದ ಮಹಿಳೆಯರ ಸಂಖ್ಯೆ ಬಹುದೊಡ್ಡದು. ಮನೆಯೊಳಗೆ ಕೆಲಸವೆಲ್ಲವನ್ನೂ ನಿಭಾಯಿಸಿ ಬಳಿಕ ಮನೆಯ ಹೊರಗೆ ದುಡಿದು, ಮನೆಗೆ ಬರುತ್ತಲೇ ಮತ್ತೆ ಕೆಲಸಗಳ ಹೊರೆಯೇರಿಸಿಕೊಂಡು ದುಡಿದ ಮಹಿಳೆಯರ ಮಾತುಗಳು ದಾಖಲಾಗಿರುವುದು ಕಡಿಮೆ ಎಂದೇ ಹೇಳಬೇಕು.

ಅಂತಹ ಸಂದರ್ಭಗಳಲ್ಲಿ ಮನೆಯಲ್ಲಿ ಹಿರಿಯ ಹೆಂಗಸರ ಬೆಂಬಲವೂ ಅವರಿಗೆ ಸಿಕ್ಕಿದ್ದಿಲ್ಲ. ಆದರೆ ಇಂದು ಮುಕ್ತ ಚರ್ಚೆಗೆ ಅವಕಾಶಗಳು ಸೃಷ್ಟಿಯಾಗಿವೆ. ಆದ್ದರಿಂದ ನಿಭಾಯಿಸುವ ಕಲೆಯನ್ನು, ಸೋತು ಗೆಲ್ಲುವ ಕಲೆಯನ್ನೂ ಅವರು ಕಲಿಯುವ ಸಂದರ್ಭಗಳು ಎದುರಾಗಿವೆ’  ಎನ್ನುತ್ತಾರೆ ಉಪನ್ಯಾಸಕಿ ಐಶ್ವರ್ಯ.

ಅಷ್ಟೇ ಅಲ್ಲ, ಈ ಮುಕ್ತ ಚರ್ಚೆಯು ಪುರುಷರ ಮೇಲೆಯೂ ಪರಿಣಾಮ ಬೀರುತ್ತಿದೆ. ವಿಭಕ್ತ ಕುಟುಂಬಗಳಲ್ಲಿ ನಿಭಾಯಿಸುವ ಹೊಣೆಗಾರಿಕೆಯನ್ನು ಮಹಿಳೆಯೊಬ್ಬಳ ತಲೆಗೆ ಕಟ್ಟಿ ಕುಳಿತರೆ ಸಾಕಾಗುವುದಿಲ್ಲ. ಮನೆಯಾಕೆ ಕಚೇರಿಗೆ ಹೋಗಬೇಕಾಗಿದೆ ಎಂಬ ಅರಿವು ಗಂಡಂದಿರಲ್ಲಿ ಮೂಡಿದೆ. ಆ ಹೊತ್ತಿಗೆ ಸ್ಪಂದಿಸಬೇಕಾದ ಜರೂರನ್ನು ಪರಿಸ್ಥಿತಿ ಕಲಿಸಿಕೊಡುತ್ತಿದೆ. ಸಹನೆಯ ಗುತ್ತಿಗೆಯನ್ನು ಜಂಟಿಯಾಗಿ ನಿರ್ವಹಿಸಬೇಕಾಗಿದೆ ಎಂಬ ಅರಿವು  ಇತ್ತೀಚೆಗಿನ ಯುವಜನತೆಗೆ ಗೊತ್ತಾಗುತ್ತಿದೆ ಎಂದು ತಮ್ಮದೇ ಮನೆಯ ಉದಾಹರಣೆಯನ್ನು ಕೊಡುತ್ತಾರೆ ಐಶ್ವರ್ಯ.

ಅದೇನೇ ಇರಲಿ, ಮನೆಯ ಬೇಕು ಬೇಡಗಳಿಗೆ ಕಿವಿಯಾಗುತ್ತ ಎಲ್ಲವನ್ನೂ ನಿಭಾಯಿಸಿ, ಯಾವುದೇ ಕ್ರೆಡಿಟ್ಟನ್ನೂ ಬಯಸದೇ ತಣ್ಣಗೆ ನಿಂತ ಅಮ್ಮಂದಿರು ಸದಾ ಕುಟುಂಬದ ನಾಯಕಿಯರಾಗಿಯೇ ಇದ್ದವರು. ಸೋಲಬೇಕಾದ ಪ್ರತಿರೋಧವಿಲ್ಲದೇ ಸೋಲುತ್ತ, ಗೆಲುವು ಸಿಕ್ಕಾಗ ಎದುರಿಗಿದ್ದವರ ಅಹಂಗೆ ಪೆಟ್ಟಾದೀತು ಎಂದು ಅಳುಕಿ ಯಾವುದೇ ಸಂಭ್ರಮಾಚರಣೆಯನ್ನೂ ಮಾಡದೇ ಪರಿಸ್ಥಿತಿಯ ಮುಮ್ಮುಖ ಚಲನೆಗೆ ಹುಟ್ಟು ಹಾಕಿದವರು.

ಕೌಟುಂಬಿಕವಾಗಿ ಹೀಗೆ ಸೂತ್ರಧಾರಿಣಿಯಾಗಿ ಕೆಲಸ ನಿರ್ವಹಿಸುತ್ತ, ತಮಗರಿವಿಲ್ಲದಂತೆಯೇ ಒಟ್ಟು ಸಮಾಜದ ಆರೋಗ್ಯಕ್ಕಾಗಿಯೂ ಕೆಲಸ ಮಾಡಿದವರು ಎಂದರೆ ತಪ್ಪಾಗಲಾರದು. ತನ್ನ ಸೋಲಿನಲ್ಲಿ ಅರಿವಿನ ಬೆಳಕೊಂದು ಮೂಡಲಿ ಎಂದು ಹಾರೈಸುತ್ತಾ, ಒಳಿತಿಗಾಗಿಯೇ ಶ್ರಮಿಸುತ್ತ ಸಾಗಿದ ಮಹಿಳೆಯರ ಸಾಲು ದೊಡ್ಡದು.

ಅದೇ ಜವಾಬ್ದಾರಿಯನ್ನು ನಿರ್ವಹಿಸಬೇಕಾದ ಅನಿವಾರ್ಯತೆಯು ಇಂದು ಗಂಡಿನ ಮುಂದೆಯೂ ನಿಂತಿದೆ. ಹೊಳೆಯಲ್ಲಿ ಬೃಹತ್‌ ಪ್ರವಾಹವೊಂದು ಹರಿಯುತ್ತಿರುವಂತೆಯೇ ತಳದಲ್ಲಿನ ಮರಳು ಕೊಂಚವಾದರೂ ಹೊರಳಲೇಬೇಕಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT