ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನಸೌಧದತ್ತ ಎಲ್ಲರ ಚಿತ್ತ : ‘ವಿಶ್ವಾಸ’ದ ಸದನ ಕುತೂಹಲ

Last Updated 18 ಮೇ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಎಲ್ಲರ ಚಿತ್ತ ವಿಧಾನಸೌಧದತ್ತ ನೆಟ್ಟಿದೆ. ಬಹುಮತ ಇಲ್ಲದಿದ್ದರೂ ಮುಖ್ಯಮಂತ್ರಿ ಗದ್ದುಗೆ ಏರಿರುವ ಬಿ.ಎಸ್‌. ಯಡಿಯೂರಪ್ಪ, ಸದನದಲ್ಲಿ ಶನಿವಾರ ವಿಶ್ವಾಸ ಮತ ಸಾಬೀತು ಪಡಿಸಬೇಕಿದೆ. ಈ ‘ಅಗ್ನಿಪರೀಕ್ಷೆ’ಯಲ್ಲಿ ಅವರು ಗೆಲ್ಲುತ್ತಾರೆಯೇ, ‘ನಂಬರ್ ಗೇಮ್‌’ನಲ್ಲಿ ಯಾರ ‘ಕೈ’ ಮೇಲಾಗುತ್ತದೆ ಎಂಬ ಕುತೂಹಲ ಮೂಡಿದೆ.

ವಿಶ್ವಾಸ ಮತ ಸಾಬೀತುಪಡಿಸಲು ಸುಪ್ರೀಂ ಕೋರ್ಟ್‌ ಶುಕ್ರವಾರ ಗಡುವು ವಿಧಿಸುತ್ತಿದ್ದಂತೆ, ರಾಜ್ಯ ರಾಜಕೀಯದಲ್ಲಿನ ಚಟುವಟಿಕೆ ದಿಢೀರ್‌ ತಿರುವು ಪಡೆದುಕೊಂಡವು. ಬಿಜೆಪಿ ಆಮಿಷದಿಂದ ತಪ್ಪಿಸಿ, ತಮ್ಮ ಸುಪರ್ದಿಯಲ್ಲಿಟ್ಟುಕೊಳ್ಳಲು ಶಾಸಕರನ್ನು ಹೈದರಾಬಾದ್‌ಗೆ ಕರೆದೊಯ್ದಿದ್ದ ಕಾಂಗ್ರೆಸ್‌– ಜೆಡಿಎಸ್‌ ನಾಯಕರು, ವಾಪಸು ಬೆಂಗಳೂರಿಗೆ ಮುಖ ಮಾಡಿದರು.

ವಿಧಾನಸಭೆಯ 222 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 78 ಸ್ಥಾನ ಗೆದ್ದ ಕಾಂಗ್ರೆಸ್‌ ಮತ್ತು 38 ಸ್ಥಾನ ಗೆದ್ದ ಜೆಡಿಎಸ್‌, ಇಬ್ಬರು ಪಕ್ಷೇತರನ್ನೂ ಜೊತೆಗಿಟ್ಟು ಮೈತ್ರಿ ಸರ್ಕಾರ ರಚಿಸುವ ಪ್ರಸ್ತಾವ ಮುಂದಿಟ್ಟಿದ್ದರೂ, 104 ಸ್ಥಾನ ಗೆದ್ದ ಬಿಜೆಪಿಗೆ ಸರ್ಕಾರ ರಚಿಸಲು ರಾಜ್ಯಪಾಲ ವಜುಭಾಯಿ ವಾಲಾ ಆಹ್ವಾನ ನೀಡಿದ್ದರು. ಗುರುವಾರ ಬೆಳಿಗ್ಗೆ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಅವರಿಗೆ ಪ್ರಮಾಣ ವಚನ ಬೋಧಿಸಿದ್ದ ಅವರು, ಬಹುಮತ ಸಾಬೀತುಪಡಿಸಲು 15 ದಿನಗಳ ಸಮಯ ನೀಡಿದ್ದರು.

ರಾಜ್ಯಪಾಲರ ಈ ನಿರ್ಧಾರ ಪ್ರಶ್ನಿಸಿ ಬುಧವಾರ ರಾತ್ರಿ ಕಾಂಗ್ರೆಸ್– ಜೆಡಿಎಸ್‌ ಸಲ್ಲಿಸಿದ್ದ ಅರ್ಜಿಯ ಮುಂದುವರಿದ ವಿಚಾರಣೆಯನ್ನು ಶುಕ್ರವಾರ ನಡೆಸಿದ ನ್ಯಾಯಮೂರ್ತಿ ಎ.ಕೆ. ಸಿಕ್ರಿ ನೇತೃತ್ವದ ತ್ರಿಸದಸ್ಯ ಪೀಠ, ‘ಶನಿವಾರ ಸಂಜೆ 4 ಗಂಟೆಗೆ ಯಡಿಯೂರಪ್ಪ ವಿಶ್ವಾಸ ಮತ ಸಾಬೀತುಪಡಿಸಬೇಕು. ಹಂಗಾಮಿ ಸ್ಪೀಕರ್ ಈ ಪ್ರಕ್ರಿಯೆ ಪೂರ್ಣಗೊಳಿಸಲಿ. ಎಲ್ಲ ಶಾಸಕರ ಭದ್ರತೆ ಹೊಣೆಯನ್ನು ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ವಹಿಸಿಕೊಳ್ಳಲಿ’ ಎಂದು ಆದೇಶಿಸಿದೆ.

ಈ ಆದೇಶ ಹೊರಬೀಳುತ್ತಿದ್ದಂತೆ ವಿಧಾನಸಭೆ ಅಧಿವೇಶನ ಕರೆಯಲು ರಾಜ್ಯಪಾಲರಿಗೆ ಮನವಿ ಮಾಡುವ ಸಂಬಂಧ ಯಡಿಯೂರಪ್ಪ ತುರ್ತು ಸಂಪುಟ ಸಭೆ ನಡೆಸಿದರು.

ತನ್ನ ಶಾಸಕರನ್ನು ನಗರದ ಶಾಂಗ್ರಿಲಾ ಹೋಟೆಲ್‌ನಲ್ಲಿ ಒಟ್ಟು ಸೇರಿಸಿದ ಬಿಜೆಪಿ ನಾಯಕರು, ಬಹುಮತ ಸಾಬೀತುಪಡಿಸುವವರೆಗೆ ಎಲ್ಲಿಯೂ ಹೋಗ
ದಂತೆ ಸೂಚಿಸಿದರು. ಜೊತೆಗೆ, ಕಾಂಗ್ರೆಸ್‌– ಜೆಡಿಎಸ್‌ ಶಾಸಕರನ್ನು ಸೆಳೆದು ಸಂಖ್ಯಾಬಲ ಹೊಂದಿಸುವ ತಂತ್ರಗಾರಿಕೆ ಮುಂದುವರಿಸಿದ್ದಾರೆ.

‘ಶಾಸಕರ ಖರೀದಿ’ ಭೀತಿಯಿಂದ ಬಿಡದಿಯ ಈಗಲ್‌ಟನ್‌ ರೆಸಾರ್ಟ್‌ ನಲ್ಲಿದ್ದ ಶಾಸಕರನ್ನು ಗುರುವಾರ ರಾತ್ರಿ ಹೈದರಾಬಾದ್‌ನ ತಾಜ್‌ ಕೃಷ್ಣಾ ಹೋಟೆಲ್‌ಗೆ ಕಾಂಗ್ರೆಸ್‌ ಸ್ಥಳಾಂತರಿಸಿತು. ಶಾಂಗ್ರಿಲಾ ಹೋಟೆಲ್‌ ನಲ್ಲಿದ್ದ ತನ್ನ ಶಾಸಕರ ವಾಸ್ತವ್ಯವನ್ನೂ ಜೆಡಿಎಸ್‌ ಹೈದರಾಬಾದ್‌ಗೆ  ಬದಲಿಸಿತು.

ರಾಜ್ಯಪಾಲರ ನಡೆ ವಿರೋಧಿಸಿ ಬೆಳಿಗ್ಗೆ ರಾಜಭವನ ಚಲೋ ನಡೆಸಲು ಮುಂದಾಗಿದ್ದ ಕಾಂಗ್ರೆಸ್‌ ನಾಯಕರನ್ನು ಪೊಲೀಸರು ತಡೆದರು.

ಈ ವೇಳೆ ಮಾತನಾಡಿದ ಸಿದ್ದರಾಮಯ್ಯ, ‘ಬಿಜೆಪಿಯವರು ಶಾಸಕರ ಖರೀದಿಗೆ ಮುಂದಾಗಿರುವುದಕ್ಕೆ ನಮ್ಮಲ್ಲಿ ಸಾಕ್ಷ್ಯಗಳಿವೆ. ಮುಂದಿನ ದಿನಗಳಲ್ಲಿ ಬಿಡುಗಡೆ ಅದನ್ನು ಮಾಡುತ್ತೇನೆ’ ಎಂದರು.

‘ಶಾಸಕ ಆನಂದ್‍ ಸಿಂಗ್ ಅವರನ್ನು ಅಪಹರಿಸಿ ದೆಹಲಿಯಲ್ಲಿ ಅಕ್ರಮವಾಗಿ ಬಂಧಿಸಿಡಲಾಗಿದೆ. ಮಸ್ಕಿ ಶಾಸಕ ಪ್ರತಾಪ್‍ ಗೌಡ ಕಾಂಗ್ರೆಸ್‍ಗೆ ಬೆಂಬಲ ನೀಡುವುದಾಗಿ ಮೇ 16ರಂದು ಪತ್ರಕ್ಕೆ ಸಹಿ ಮಾಡಿದ್ದರು. ಅವರನ್ನೂ ಹಿಡಿದಿಟ್ಟುಕೊಳ್ಳುವ ಪ್ರಯತ್ನ ನಡೆದಿದೆ’ ಎಂದು ಅವರು ದೂರಿದರು.

ಬೋಪಯ್ಯ ನೇಮಕಕ್ಕೆ ಆಕ್ಷೇಪ

ಹಿರಿಯ ಶಾಸಕ ಕೆ.ಜೆ. ಬೋಪಯ್ಯ ಹಂಗಾಮಿ ಸ್ಪೀಕರ್ ಆಗಿ ನೇಮಕಗೊಂಡಿದ್ದಾರೆ. ನೂತನ ಶಾಸಕರಿಗೆ ಪ್ರಮಾಣ ವಚನ ಬೋಧಿಸಲಿರುವ ಅವರು, ವಿಶ್ವಾಸಮತ ಯಾಚನೆ ಪ್ರಕ್ರಿಯೆಯನ್ನೂ ನಿರ್ವಹಿಸಲಿದ್ದಾರೆ. ಈ ನೇಮಕಕ್ಕೆ ತಕರಾರು ತೆಗೆದಿರುವ ಕಾಂಗ್ರೆಸ್, ಸುಪ್ರೀಂ ಕೋರ್ಟ್‌ ಕದ ತಟ್ಟಿದೆ.

ಈ ಅರ್ಜಿಯನ್ನು ನ್ಯಾಯಮೂರ್ತಿ ಎ.ಕೆ. ಸಿಕ್ರಿ ನೇತೃತ್ವದ ಪೀಠವು ‘ಶನಿವಾರ (ಮೇ 19) ಬೆಳಿಗ್ಗೆ 10.30ಕ್ಕೆ ವಿಚಾರಣೆಗೆ
ಎತ್ತಿಕೊಳ್ಳಲಿದೆ.

ಶನಿವಾರ ನಡೆಯಲಿರುವ ಬಹುಮತದ ಪರೀಕ್ಷೆ ಅಂತಿಮವಾಗಿ ನ್ಯಾಯಾಂಗ ಪರಿಶೀಲನೆಗೆ ಒಳಪಟ್ಟಿರುತ್ತದೆ. ಒಂದು ವೇಳೆ ಈ ಪ್ರಕ್ರಿಯೆಯಲ್ಲಿ ಏನಾದರೂ ದೋಷವಿದೆ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್‌ ಅತೃಪ್ತಿ ವ್ಯಕ್ತಪಡಿಸಿದರೆ ಅದನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲು ಅವಕಾಶವಿದೆ’ ಎಂಬುದು ಕಾನೂನು ತಜ್ಞರ ಅಭಿಪ್ರಾಯ.

ಏನೇನು ಆಗಬಹುದು?

ವಿಶ್ವಾಸ ಮತ ಗೆಲ್ಲಲು ಬಿಜೆಪಿ ಪ್ರಬಲ ತಂತ್ರ ಹೆಣೆದಿದ್ದರೆ, ಅದನ್ನು ಮಣಿಸಲು ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿ ಕೂಟ ಪ್ರತಿ ತಂತ್ರ ರೂಪಿಸಿದೆ.

l ಕಾಂಗ್ರೆಸ್–ಜೆಡಿಎಸ್‌ನ 15 ಶಾಸಕರಿಗೆ ವಿವಿಧ ಆಮಿಷ ಒಡ್ಡಿ, ಸದನಕ್ಕೆ ಹಾಜರಾಗದಂತೆ ‘ನೋಡಿ’ಕೊಂಡರೆ ಯಡಿಯೂರಪ್ಪ ವಿಶ್ವಾಸ ಮತ ಗೆಲ್ಲಬಹುದು. ಆಗ ಪಕ್ಷಾಂತರ ನಿಷೇಧ ಅನ್ವಯವಾಗದು. ಲಿಂಗಾಯತ, ರೆಡ್ಡಿ, ನಾಯಕ (ವಾಲ್ಮೀಕಿ) ಸಮುದಾಯಕ್ಕೆ ಸೇರಿರುವ 12ಕ್ಕೂ ಹೆಚ್ಚು ಶಾಸಕರು ಹಾಗೂ ಇಬ್ಬರು ಪಕ್ಷೇತರ ಶಾಸಕರನ್ನು ಸೆಳೆಯುವ ಯತ್ನವನ್ನು ಬಿಜೆಪಿ ಮುಂದುವರಿಸಿದೆ.

l 8–10 ಶಾಸಕರು ಯಡಿಯೂರಪ್ಪ ಪರ ಮತ ಹಾಕುವಂತೆ (ಅಡ್ಡಮತದಾನ) ಒಲಿಸಿಕೊಳ್ಳುವುದು. ಹೀಗಾದರೂ ಯಡಿಯೂರಪ್ಪ ಅಧಿಕಾರ ಉಳಿಯಲಿದೆ. ಶಾಸಕರನ್ನು ಅನರ್ಹಗೊಳಿಸಲು ಕಾಂಗ್ರೆಸ್‌–ಜೆಡಿಎಸ್ ಮನವಿ ಸಲ್ಲಿಸಿದರೂ ಸ್ಪೀಕರ್ ಬಿಜೆಪಿಯವರೇ ಆಗಿರುವುದರಿಂದ ಅದು ತತ್‌ ಕ್ಷಣಕ್ಕೆ ಜಾರಿಗೆ ಬರುವುದಿಲ್ಲ. ಆಗ ಕೋರ್ಟ್‌ ಮೊರೆ ಹೋಗಬೇಕಾಗುತ್ತದೆ. ಅದಕ್ಕೆ ಸುದೀರ್ಘ ಸಮಯ ತೆಗೆದುಕೊಳ್ಳುತ್ತದೆ.

l ಎಲ್ಲ ತಂತ್ರಗಾರಿಕೆ ವಿಫಲವಾಗಿ ಅಧಿಕಾರ ಕಳೆದುಕೊಳ್ಳುವುದು ಖಚಿತ ಎಂದಾದರೆ, ಲಿಂಗಾಯತರಿಗೆ ಅನ್ಯಾಯ ಮಾಡಲಾಯಿತು, ಮೂರನೇ ಬಾರಿ ಮುಖ್ಯಮಂತ್ರಿ ಹುದ್ದೆಯಿಂದ ಇಳಿಯುವಂತಾಯಿತು ಎಂದು ವಿದಾಯ ಭಾಷಣ ಮಾಡಿ, ಯಡಿಯೂರಪ್ಪ ರಾಜೀನಾಮೆ ನೀಡಬಹುದು.

l ಮತ ಯಾಚನೆ ವೇಳೆ ಸದನದಲ್ಲಿ ಗದ್ದಲ ಎಬ್ಬಿಸಿ, ಹೆಚ್ಚಿನ ಮತಗಳು ವಿಶ್ವಾಸಮತ ಪರವಾಗಿದೆ, ವಿಶ್ವಾಸ ಮತ ಗೆದ್ದಿದೆ ಎಂದು ತಮ್ಮವರೇ ಆದ ಹಂಗಾಮಿ ಸ್ಪೀಕರ್ ಎಂದು ಘೋಷಿಸಬಹುದು. (ಸುಪ್ರೀಂಕೋರ್ಟ್‌ ಕಣ್ಗಾವಲಿನಲ್ಲಿ ವಿಶ್ವಾಸ ಮತ ಯಾಚನೆ ನಡೆಯುತ್ತಿರುವುದರಿಂದಾಗಿ ಈ ಹಾದಿ ಕಷ್ಟ)

l ಒಂದು ವೇಳೆ ವಿಶ್ವಾಸ ಮತದಲ್ಲಿ ಗೆದ್ದರೆ ಮತ್ತೆ ಆರು ತಿಂಗಳು ಈ ಪ್ರಕ್ರಿಯೆ ನಡೆಸುವ ಅವಶ್ಯ ಇರುವುದಿಲ್ಲ. ಈ ಅವಧಿಯಲ್ಲಿ ಏನೂ ಬೇಕಾದರೂ ಆಗಬಹುದು.

ಕಾಂಗ್ರೆಸ್‌–ಜೆಡಿಎಸ್‌ ಪರ್ಯಾಯವೇನು?

l ವಿಶ್ವಾಸಮತದ ವಿರುದ್ಧವಾಗಿ ಮತ ಹಾಕಿ ಯಡಿಯೂರಪ್ಪ ಅವರನ್ನು ಸೋಲಿಸಬಹುದು. ಆಗ, ಅವರು ರಾಜೀನಾಮೆ ನೀಡಬೇಕಾಗುತ್ತದೆ. ಸರ್ಕಾರ ರಚಿಸಲು ಕುಮಾರಸ್ವಾಮಿಗೆ ಆಹ್ವಾನ ನೀಡಬೇಕಾಗುತ್ತದೆ.

l ಯಡಿಯೂರಪ್ಪ ಸೋಲಿಸಲು ಪಣತೊಟ್ಟಿರುವ ಈ ಪಕ್ಷಗಳು ತಮ್ಮ ಶಾಸಕರಿಗೆ ಸರ್ಪಗಾವಲು ಹಾಕಿ ಕಾಯುತ್ತಿವೆ. ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಕೂಡಲೇ ವಿಪ್ ಜಾರಿ ಮಾಡಬಹುದು.

l ವಿಪ್ ಉಲ್ಲಂಘಿಸಿದರೆ ಶಾಸಕತ್ವ ಅನರ್ಹವಾಗುವುದರಿಂದ ಶಾಸಕರು ಆ ಕೆಲಸ ಮಾಡುವುದಿಲ್ಲ ಎಂಬ ವಿಶ್ವಾಸ ಈ ಪಕ್ಷಗಳಲ್ಲಿದೆ.

l ಅಡ್ಡ ಮತದಾನ ಮಾಡಿದವರನ್ನು ಅನರ್ಹಗೊಳಿಸಲು ಸ್ಪೀಕರ್ ಕ್ರಮ ಕೈಗೊಳ್ಳದೇ ಇದ್ದರೆ, ಎರಡೂ ಪಕ್ಷಗಳು ಕೋರ್ಟ್ ಮೆಟ್ಟಿಲೇರಬಹುದು.

***

ಹೀಗಿದೆ ಸಂಖ್ಯಾಬಲ ಲೆಕ್ಕಾಚಾರ

ವಿಧಾನಸಭೆಯ ಸದಸ್ಯ ಬಲ: 224

ಸದ್ಯದ ಸಂಖ್ಯೆ: 222

ಪ್ರಮಾಣ ವಚನದ ಬಳಿಕ: 221( 2 ಕಡೆ ಗೆದ್ದಿರುವ ಕುಮಾರಸ್ವಾಮಿ 1 ಕ್ಷೇತ್ರ ತ್ಯಜಿಸಲೇಬೇಕು)

ಪಕ್ಷಗಳ ಬಲಾಬಲ:

ಬಿಜೆಪಿ: 104 (ಹಂಗಾಮಿ ಸ್ಪೀಕರ್‌ ಸೇರಿ, ಇವರು ಮತದಾನ ಮಾಡಬಹುದು)

ಕಾಂಗ್ರೆಸ್‌ 78+ ಜೆಡಿಎಸ್‌ 36+ (ಬಿಎಸ್‌ಪಿ+ ಕೆಪಿಜೆಪಿ+ಪಕ್ಷೇತರ ತಲಾ 1): ಒಟ್ಟು 117

ಸರ್ಕಾರ ರಚಿಸಲು ಬೇಕಿದ್ದ ಮ್ಯಾಜಿಕ್ ಸಂಖ್ಯೆ–111

ಬಿಜೆಪಿ ಗೆಲುವು ಸಾಧಿಸಬೇಕಾದರೆ, ಕಾಂಗ್ರೆಸ್‌–ಜೆಡಿಎಸ್‌ನ 8 ರಿಂದ 10 ಶಾಸಕರು ಅಡ್ಡ ಮತದಾನ ಮಾಡಬೇಕು. ಆಗ ಬಿಜೆಪಿ ಬಲ 112ರಿಂದ 114ಕ್ಕೆ ಏರಲಿದೆ.

ಕಾಂಗ್ರೆಸ್‌–ಜೆಡಿಎಸ್‌ನ 14–15 ಸದಸ್ಯರು ಗೈರಾದರೂ ಬಿಜೆಪಿ ಗೆಲುವು ಸಾಧ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT