ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭರತವರ್ಷದಲ್ಲಿ ಕಮಲ ಅರಳಿದ ಕಥೆ

Last Updated 19 ಮೇ 2018, 19:30 IST
ಅಕ್ಷರ ಗಾತ್ರ

ಇಂದಿನ ಬಿಜೆಪಿಯ ಮೂಲ ರೂಪವಾದ ಭಾರತೀಯ ಜನಸಂಘ ಜನಿಸಿದ್ದು ಸ್ವಾತಂತ್ರ್ಯಾನಂತರ. ಭಿನ್ನಾಭಿಪ್ರಾಯಗಳ ಕಾರಣ 1950ರ ಏಪ್ರಿಲ್‌ನಲ್ಲಿ ನೆಹರೂ ಸಂಪುಟದಿಂದ ಹೊರಬಿದ್ದ ಪಂಡಿತ್ ಶ್ಯಾಮಪ್ರಸಾದ್ ಮುಖರ್ಜಿ ಪಕ್ಷವೊಂದರ ಹುಡುಕಾಟದಲ್ಲಿದ್ದರು. ರಾಷ್ಟ್ರೀಯ ಸ್ವಯಂಸೇವಕ ಸಂಘವು (ಆರ್.ಎಸ್.ಎಸ್.) ಪ್ರಭಾವಿ ರಾಜಕೀಯ ನಾಯಕನೊಬ್ಬನನ್ನು ಅರಸತೊಡಗಿತ್ತು.

ಹೀಗೆ 1951ರ ಅಕ್ಟೋಬರ್ 21ರಂದು ಹುಟ್ಟಿತ್ತು ಭಾರತೀಯ ಜನಸಂಘ. ಅದರ ಸಂಸ್ಥಾಪನಾ ಅಧ್ಯಕ್ಷರಾದರು ಶ್ಯಾಮಪ್ರಸಾದ್ ಮುಖರ್ಜಿ. ಜನಸಂಘ ಮೂಲಭೂತವಾಗಿ ಆರ್.ಎಸ್.ಎಸ್ ಸೃಷ್ಟಿ. ಹುಟ್ಟಿನಿಂದ ಸಂಘದ ಸೈದ್ಧಾಂತಿಕ ಮತ್ತು ಸಾಂಸ್ಥಿಕ ನಿಯಂತ್ರಣದಲ್ಲಿದೆ. ಜನಸಂಘವನ್ನು ನಡೆಸಿದ್ದ ಆರ್.ಎಸ್.ಎಸ್., ಬಿಜೆಪಿಯನ್ನೂ ನಡೆಸುತ್ತಿದೆ.

ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ 2000ರ ಫೆಬ್ರುವರಿ ಎಂಟರಂದು ಅಲೀಗಢದಲ್ಲಿ ನೀಡಿದ್ದ ಹೇಳಿಕೆ ಈ ಮಾತಿಗೊಂದು ಚಿಕ್ಕ ಉದಾಹರಣೆ- ‘ನನ್ನ ಬದುಕಿನ ಬಹುಭಾಗವನ್ನು ನಾನು ಈ ಸಂಸ್ಥೆಯಲ್ಲಿ (ಆರ್.ಎಸ್.ಎಸ್.) ಕಳೆದಿದ್ದೇನೆ. ಬಿಜೆಪಿಯಲ್ಲಿ ಚುನಾವಣೆ ಟಿಕೆಟ್ ಹಂಚಿಕೆಯಿಂದ ಹಿಡಿದು ಸಂಪುಟದರ್ಜೆಯ ಮಂತ್ರಿಗಳ ಆಯ್ಕೆ ತನಕ ಆರ್.ಎಸ್.ಎಸ್. ಮಾತೇ ನಡೆಯುತ್ತದೆ.’

ಬೇರುಮಟ್ಟದ ಕಾರ್ಯಕರ್ತರು, ತರಬೇತಾದ ಅನುಶಾಸಿತ ಕಾರ್ಯಕರ್ತ, ಪದಾಧಿಕಾರಿ ಶ್ರೇಣಿ ಹಾಗೂ ಸಂಘಟಕರು ಹಾಗೂ ಜನಸಂಘ- ಬಿಜೆಪಿಯ ಬಹುತೇಕ ಉಚ್ಚ ನಾಯಕರು ಎರವಲು ಸೇವೆಯ ಮೇರೆಗೆ ಆರ್.ಎಸ್.ಎಸ್.ನಿಂದ ಬಂದವರಾಗಿರುತ್ತಾರೆ.

1953ರಲ್ಲಿ ಮುಖರ್ಜಿ ಮರಣದವರೆಗೆ ಜನಸಂಘ ಗಣನೀಯ ಪ್ರಮಾಣದ ಸ್ವಾತಂತ್ರ್ಯವುಳ್ಳ ಸ್ವಾಯತ್ತ ಪಕ್ಷವೇ ಆಗಿತ್ತು. ಆದರೆ, ಆಗಲೂ ಅದರ ಹಾಯಿಪಟ ಆರೆಸ್ಸೆಸ್ಸೇ ಆಗಿತ್ತು. ಮುಖರ್ಜಿ ನಂತರ ಹೊಸ ಅಧ್ಯಕ್ಷ ಮೌಳಿಚಂದ್ರ ಶರ್ಮ ಆರ್.ಎಸ್.ಎಸ್. ಹಿಡಿತವನ್ನು ಪ್ರತಿಭಟಿಸಿ ರಾಜೀನಾಮೆ ನೀಡಬೇಕಾಯಿತು.

ಉತ್ತರ ಭಾರತದ ಬ್ರಾಹ್ಮಣ- ಬನಿಯಾ ಪಾರ್ಟಿ ಎಂಬ ಆರಂಭಿಕ ವರ್ಚಸ್ಸಿನಿಂದ ಹೊರಬರಲು ಈ ಪಕ್ಷ ಬಹುದೂರ ನಡೆಯಬೇಕಾಯಿತು. ಪಂಡಿತ ದೀನದಯಾಳ ಉಪಾಧ್ಯಾಯ ಅವರ ಮರಣದ ನಂತರ ಜನಸಂಘದ ಅಧ್ಯಕ್ಷತೆಯ ಹೊಣೆ 1968ರಲ್ಲಿ ಅಟಲಬಿಹಾರಿ ವಾಜಪೇಯಿ ಅವರ ಹೆಗಲೇರಿತು. ನಾನಾಜಿ ದೇಶಮುಖ್, ಬಲರಾಜ್ ಮಧೋಕ್ ಹಾಗೂ ಲಾಲ್‌ಕೃಷ್ಣ ಅಡ್ವಾಣಿ ಅವರೊಂದಿಗೆ ಪಕ್ಷವನ್ನು ಜನರ ಬಳಿಗೆ ಒಯ್ಯಲು ಹೆಣಗಿದ್ದರು ವಾಜಪೇಯಿ.

ಒಂದು ಕಾಲಕ್ಕೆ ಅಟಲ ಬಿಹಾರಿ ವಾಜಪೇಯಿ ಮತ್ತು ಜಗನ್ನಾಥರಾವ್ ಜೋಷಿ ಅವರ ಭಾಷಣ ಕೇಳಲೆಂದು ಜನ ದೊಡ್ಡ ಸಂಖ್ಯೆಯಲ್ಲಿ ನೆರೆಯುತ್ತಿದ್ದುದು ಉಂಟು. ಹಿಂದೂ- ಮುಸ್ಲಿಂ ಧ್ರುವೀಕರಣ ಅಬ್ಬರಿಸಿ ಪ್ರಕಟ ಆಗಿರದ ದಿನಗಳು ಅವು.

ವಾಜಪೇಯಿ ಜನಪ್ರಿಯತೆಯು ಜನಸಂಘ- ಬಿಜೆಪಿಯ ಆಚೆಗೆ ಓದು, ಬರಹ ಬಲ್ಲ ಪ್ರಜ್ಞಾವಂತ ವಲಯದಲ್ಲಿ ಪಸರಿಸಿತ್ತು. ಆದರೆ, ಬಿಜೆಪಿ ಮುಖ್ಯಧಾರೆಯ ಪಕ್ಷವಾಗಿ ಹೊರಹೊಮ್ಮಲು ಅಷ್ಟೇ ಸಾಲದಾಗಿತ್ತು. ತೀಕ್ಷ್ಣ ಹಿಂದುತ್ವ, ಹಿಂದೂ- ಮುಸ್ಲಿಂ ಧ್ರುವೀಕರಣ- ಉಗ್ರ ರಾಷ್ಟ್ರವಾದ- ಅಭಿವೃದ್ಧಿ- ಜಾತಿಗಳ ಸಾಮಾಜಿಕ ಸಮೀಕರಣ ಹಾಗೂ ಕಾಂಗ್ರೆಸ್ ಪಕ್ಷದ ಏಳು ದಶಕಗಳ ಆಡಳಿತ- ಅಸ್ತಿತ್ವಗಳ ಮೇಲಿನ ದಾಳಿ, ಪ್ರಾದೇಶಿಕ ಪಕ್ಷಗಳೊಂದಿಗೆ ಅತ್ಯಂತ ಜಾಣತನದ ಚುನಾವಣಾ ಮೈತ್ರಿಗಳು- ನರೇಂದ್ರ ಮೋದಿಯವರಂತಹ ಆಕ್ರಮಣಕಾರಿ- ವರ್ಚಸ್ವಿ ಮಾತುಗಾರನನ್ನು ಬೆರೆಸಿ ತಯಾರಿಸಿದ ಹೊಸ ಮಿಶ್ರಣ ಬಿಜೆಪಿಯನ್ನು ಇಂದಿನ ಯಶಸ್ಸಿನ ತುತ್ತತುದಿಗೆ ತಲುಪಿಸಿದೆ.

ಜನಸಂಘ ಹುಟ್ಟಿದ ಮರುವರ್ಷ 1952ರಲ್ಲಿ ನಡೆದ ಲೋಕಸಭಾ ಚುನಾವಣೆಗಳಲ್ಲಿ ಜನಸಂಘ ಮೂರು ಸ್ಥಾನ ಗೆದ್ದಿತು. ಗಳಿಸಿದ್ದ ಮತಗಳ ಪ್ರಮಾಣ ಶೇ 3.06. 1957ರಲ್ಲಿ ನಾಲ್ಕು ಸ್ಥಾನಗಳನ್ನು (ಶೇ 5.93 ಮತ), 1962ರಲ್ಲಿ 14 ಸ್ಥಾನಗಳು (ಶೇ 6.44), 1967ರಲ್ಲಿ 35 ಸ್ಥಾನಗಳನ್ನು (ಶೇ 9.41ಮತಗಳು), 1971ರಲ್ಲಿ 22 (ಶೇ 7.35ರಷ್ಟು ಮತಗಳು) ಗೆದ್ದಿತ್ತು.

ಇಂದಿರಾಗಾಂಧಿ ಹೇರಿದ ಕರಾಳ ತುರ್ತುಪರಿಸ್ಥಿತಿಯ ನಂತರ ಪ್ರತಿಪಕ್ಷಗಳು ಒಗ್ಗೂಡಿದ 1977ರ ದಿನಗಳಲ್ಲಿ ಜನತಾ ಪಕ್ಷ ಜನಿಸಿತ್ತು. ಭಾರತೀಯ ಜನಸಂಘ ಈ ಹೊಸ ಪಕ್ಷದಲ್ಲಿ ವಿಲೀನಗೊಂಡಿತ್ತು. ಏಕಕಾಲಕ್ಕೆ ಆರ್.ಎಸ್.ಎಸ್. ಮತ್ತು ಜನತಾ ಪಕ್ಷದ ಸದಸ್ಯತ್ವ ಹೊಂದುವಂತಿಲ್ಲ ಎಂಬ ದ್ವಿಸದಸ್ಯತ್ವ ವಿವಾದ ಭುಗಿಲೆದ್ದಿತ್ತು. ಜನಸಂಘ ಜನತಾ ಪಕ್ಷದಿಂದ ಹೊರಬಂದಿತು. 1980ರ ಏಪ್ರಿಲ್ 5ರಂದು ಭಾರತೀಯ ಜನತಾ ಪಕ್ಷ (ಬಿಜೆಪಿ) ಎಂಬ ಹೊಸ ಹೆಸರು ಧರಿಸಿತು ಹಳೆಯ ಜನಸಂಘ. ಜಯಪ್ರಕಾಶ ನಾರಾಯಣ ಅವರ ಅಪೂರ್ಣ ಕನಸುಗಳನ್ನು ಪೂರ್ಣಗೊಳಿಸುವುದೇ ಹೊಸ ಪಕ್ಷದ ಗುರಿ ಎಂದು ಘೋಷಿಸಿದರು ವಾಜಪೇಯಿ.

ರಾಷ್ಟ್ರವಾದ ಮತ್ತು ರಾಷ್ಟ್ರೀಯ ಸಮಗ್ರತೆ, ಜನತಂತ್ರ, ‘ಸಕಾರಾತ್ಮಕ ಜಾತ್ಯತೀತವಾದ’, ಗಾಂಧೀ ಪ್ರಣೀತ ಸಮಾಜವಾದ ಹಾಗೂ ಮೌಲ್ಯಾಧಾರಿತ ರಾಜಕಾರಣ ಎಂಬ ಪಂಚ ಪ್ರತಿಬದ್ಧತೆಗಳನ್ನು ಸಾರಿತ್ತು ಬಿಜೆಪಿ. ಇಂದಿರಾ ಹತ್ಯೆಯ ನಂತರ 1984ರಲ್ಲಿ ದೇಶದಾದ್ಯಂತ ಸಹಾನುಭೂತಿಯ ಬಿರುಗಾಳಿಯೇ ಬೀಸಿತ್ತು. ಆ ವರ್ಷ ಜರುಗಿದ ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿ ಗೆದ್ದ ಸ್ಥಾನಗಳು ಎರಡೇ ಎರಡು. ಎ.ಕೆ. ಪಟೇಲ್ ಮತ್ತು ಚೆಂದುಪಾಟ್ಲ ಜಂಗಾ ರೆಡ್ಡಿ ಹೆಸರಿನ ಈ ಇಬ್ಬರು ಸದಸ್ಯರನ್ನು ಅಂದಿನ ಪ್ರಧಾನಿ ರಾಜೀವ್‌ ಗಾಂಧಿ ‘ನಾವಿಬ್ಬರು ನಮಗಿಬ್ಬರು’ ಎಂದು ಲೇವಡಿ ಮಾಡಿದ್ದುಂಟು.

ಬಿಜೆಪಿಯ ಕಾರ್ಯಕರ್ತ ಸೇನೆ ಬಯಸಿದ್ದು ಜನಸಂಘದ ಸಿದ್ಧಾಂತವೇ ವಿನಾ ಜಯಪ್ರಕಾಶ ನಾರಾಯಣರ ವಿಚಾರಪ್ರಣಾಲಿ ಅಲ್ಲ. ಹೀಗಾಗಿ, ಪಂಚ ಪ್ರತಿಬದ್ಧತೆಗಳು ಕಾರ್ಯಕರ್ತರು ಮತ್ತು ಬೆಂಬಲಿಗರನ್ನು ಹುರಿದುಂಬಿಸುವ ಬದಲು ನಿರಾಸೆಗೊಳಿಸಿದ್ದವು.

ಸೇವಾಭಾರತಿ, ವನವಾಸಿ ಕಲ್ಯಾಣ ಆಶ್ರಮ ಸಂಘಟನೆಗಳು ಮಾಡಿದ ಸೇವಾಕಾರ್ಯ ಮಧ್ಯಭಾರತದ ಆದಿವಾಸಿಗಳು ಮತ್ತು ಕೆಳಸಮುದಾಯಗಳನ್ನು ಪ್ರವೇಶಿಸಲು ಬಿಜೆಪಿಗೆ ಕಿರುದಾರಿ ತೆರೆದವು. ಆದರೆ, ಮುಖ್ಯವಾಹಿನಿಯ ಹೆದ್ದಾರಿ ದೂರವೇ ಉಳಿದಿತ್ತು. ಇಂತಹ ಸನ್ನಿವೇಶದಲ್ಲಿ ಹಠಾತ್ತನೆ ‘ರಾಜಕೀಯ ಚಿನ್ನದ ನಿಕ್ಷೇಪ’ವೇ ಬಿಜೆಪಿಗೆ ಎದುರಾಗಿತ್ತು. 1986ರ ಜನವರಿ 31ರಂದು ಬಾಬ್ರಿ ಮಸೀದಿ ಆವರಣದ ಗೇಟುಗಳ ಬೀಗವನ್ನು ತೆರೆಯಲಾಯಿತು. 1986ರ ಮೇ ಒಂಬತ್ತರಂದು ಲಾಲ್‌ಕೃಷ್ಣ ಅಡ್ವಾಣಿ  ಬಿಜೆಪಿಯ ಅಧ್ಯಕ್ಷರಾದರು.

ಪಕ್ಷಕ್ಕೆ ಸಾಮೂಹಿಕ ಆಂದೋಲನದ ರೂಪ ನೀಡುವ ಸವಾಲು ಅಡ್ವಾಣಿ ಮತ್ತು ಅಂದಿನ ಆರ್.ಎಸ್.ಎಸ್. ಮುಖ್ಯಸ್ಥ ಬಾಳಾಸಾಹೇಬ ದೇವರಸ್ ಮುಂದಿತ್ತು. ಶತಮಾನಗಳ ಹಿಂದೆ ‘ಆಕ್ರಮಣಕಾರರ’ ದಾಳಿಗೆ ತುತ್ತಾದ ಹಿಂದೂ ಪವಿತ್ರ ಸ್ಥಳಗಳನ್ನು ಮರಳಿ ವಶಪಡಿಸಿಕೊಳ್ಳುವ ದಿಸೆಯಲ್ಲಿ ಸಂಘ ಪರಿವಾರದ ಅಂಗವೇ ಆದ ವಿಶ್ವಹಿಂದೂ ಪರಿಷತ್ ಅದಾಗಲೆ ಆಯೋಧ್ಯೆ (ರಾಮಜನ್ಮಭೂಮಿ) ಆಂದೋಲನ ಆರಂಭಿಸಿತ್ತು.

ಚುನಾವಣೆಯಲ್ಲಿ ತೀವ್ರ ಮುಖಭಂಗ ಎದುರಿಸಿದ್ದ ಬಿಜೆಪಿ ಮತ್ತೆ ತಲೆಯೆತ್ತಲು ‘ಹಿಂದೂ ಹೆಮ್ಮೆ’ಯ ಘೋಷಣೆಗೆ ಶರಣಾಗಿತ್ತು. ಬಾಬ್ರಿ ಮಸೀದಿ ನಿಂತಿದ್ದ ಜಾಗದಲ್ಲಿ ರಾಮಮಂದಿರ ನಿರ್ಮಾಣವನ್ನು ಚುನಾವಣಾ ವಿಷಯವಾಗಿ ಘೋಷಿಸಿದರು ಅಡ್ವಾಣಿ.

ಈ ವಿಷಯ ಬಿಜೆಪಿಗೆ ಮತಗಳನ್ನು ಗಳಿಸಿಕೊಡುವುದು ನಿಶ್ಚಿತ ಎಂದರು. ಆ ಹೊತ್ತಿಗೆ ಬೋಫೋರ್ಸ್ ಹಗರಣ ಪ್ರಧಾನಿ ರಾಜೀವ್‌ ಗಾಂಧಿಯವರನ್ನು ಹಿಂದಕ್ಕೆ ಜಗ್ಗಿತ್ತು. ಇದೇ ಹಗರಣ ಮುಂದೆ ಮಾಡಿ ಕಾಂಗ್ರೆಸ್‌ನಿಂದ ಹೊರ ಸಿಡಿದಿತ್ತು ವಿ.ಪಿ. ಸಿಂಗ್ ಗುಂಪು. ಎರಡನೆಯ ಕಾಂಗ್ರೆಸ್ಸೇತರ ಸರ್ಕಾರಕ್ಕೆ ಭೂಮಿಕೆ ಸಿದ್ಧಗೊಳಿಸಲು ಅಡ್ವಾಣಿ- ವಾಜಪೇಯಿ ಶ್ರಮಿಸಿದ್ದರು. ಅಡ್ವಾಣಿ ರಣತಂತ್ರ ಫಲಿಸಿತ್ತು. ದೀನದಯಾಳ ಉಪಾಧ್ಯಾಯ ಮತ್ತು ನಾನಾಜಿ ದೇಶಮುಖ್ ಕಟ್ಟಿದ್ದ ಜನಸಂಘದ ಸಂಘಟನೆಯ ಮೇಲೆ ಅಡ್ವಾಣಿ ಹಿಡಿತ ಸಾಧಿಸಿದ್ದರು.

1989ರ ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿ 85 ಸ್ಥಾನಗಳನ್ನು ಗೆದ್ದಿತ್ತು. 2ರಿಂದ 85ಕ್ಕೆ ಅಸಾಧಾರಣ ನೆಗೆತ! ವಿ.ಪಿ. ಸಿಂಗ್ ಸರ್ಕಾರಕ್ಕೆ ಬಿಜೆಪಿ ಬಾಹ್ಯ ಬೆಂಬಲ ನೀಡಿತ್ತು. ಅಯೋಧ್ಯೆ (ರಾಮಮಂದಿರ) ಕಾರ್ಯಸೂಚಿ ಎಷ್ಟು ಪ್ರಬಲವಾಗಿತ್ತೆಂದರೆ ರಾಜೀವ್‌ ಗಾಂಧಿ ಕೂಡ ಅದರ ಪ್ರಭಾವದಿಂದ ತಪ್ಪಿಸಿಕೊಳ್ಳಲಾಗಲಿಲ್ಲ.

1984ರಲ್ಲಿ ಬಿಜೆಪಿಯನ್ನು ಲೇವಡಿ ಮಾಡಿದ್ದ ಅವರು, 1989ರ ತಮ್ಮ ಚುನಾವಣಾ ಪ್ರಚಾರವನ್ನು ಅಯೋಧ್ಯೆಯಿಂದಲೇ ಆರಂಭಿಸಬೇಕಾಯಿತು ಅಡ್ವಾಣಿ ಕೊಡುಗೆ ಮಹತ್ತರವಾದರೂ ಕಟ್ಟರ್ ವಾದಿ ಎಂಬ ಹಣೆಪಟ್ಟಿ ಧರಿಸಬೇಕಾಯಿತು. ತಮ್ಮ ರಾಜಕಾರಣದ ಬಹುಭಾಗವನ್ನು ಸಮ್ಮಿಶ್ರ ರಾಜಕಾರಣ ಯುಗದ ‘ಉದಾರವಾದಿ’ ವಾಜಪೇಯಿಯವರ ನೆರಳಲ್ಲೇ ದೂಡಬೇಕಾಯಿತು.

ಹಿಂದುಳಿದ ವರ್ಗಗಳಿಗೆ ಶೇ 27ರ ಮೀಸಲಾತಿ ಕಲ್ಪಿಸುವ ಮಂಡಲ ಆಯೋಗದ ವರದಿಯನ್ನು ಜಾರಿ ಮಾಡಿದ ವಿ.ಪಿ. ಸಿಂಗ್ ನಡೆಯನ್ನು ಬಿಜೆಪಿ ವಿರೋಧಿಸಿತ್ತು. ವಿ.ಪಿ. ಸಿಂಗ್ ಸರ್ಕಾರಕ್ಕೆ ತನ್ನ ಬೆಂಬಲ ವಾಪಸ್‌ ಪಡೆಯಲು ಸಕಾಲಕ್ಕೆ ಕಾದು ಕುಳಿತಿತು. ರಾಮರಥ ಯಾತ್ರೆಯನ್ನು ಬಿಹಾರದ ಲಾಲುಪ್ರಸಾದ್ ಸರ್ಕಾರ ತಡೆದು ನಿಲ್ಲಿಸಿ ಅಡ್ವಾಣಿಯವರನ್ನು ಬಂಧಿಸಿದ ಹಂತದಲ್ಲಿ ಬೆಂಬಲ ವಾಪಸ್‌ ಪಡೆಯಿತು. ಕಾಂಗ್ರೆಸ್ ಪಕ್ಷದ ಬಾಹ್ಯ ಬೆಂಬಲದೊಂದಿಗೆ ರಚನೆಯಾದ ಚಂದ್ರಶೇಖರ್ ನೇತೃತ್ವದ ಸರ್ಕಾರ ಬಹುಶೀಘ್ರವಾಗಿ ಪತನಗೊಂಡಿತು. 1991ರ ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿ ತನ್ನ ಸೀಟುಗಳ ಸಂಖ್ಯೆಯನ್ನು 85ರಿಂದ 120ಕ್ಕೆ ಏರಿಸಿಕೊಂಡಿತು.

ರಾಮರಥ ಯಾತ್ರೆ ಬಡಿದೆಬ್ಬಿಸಿದ್ದ ಹಿಂದುತ್ವದ ರಾಜಕಾರಣದ ಫಲವಾಗಿಯೇ ಉತ್ತರಪ್ರದೇಶ, ಮಧ್ಯಪ್ರದೇಶ, ಹಿಮಾಚಲ ಪ್ರದೇಶ ಹಾಗೂ ರಾಜಸ್ಥಾನದ ಬಿಜೆಪಿ ಸರ್ಕಾರಗಳು ಅಸ್ತಿತ್ವಕ್ಕೆ ಬಂದಿದ್ದವು. 1992ರ ಡಿಸೆಂಬರ್‌ನಲ್ಲಿ ಬಾಬ್ರಿ ಮಸೀದಿ ನೆಲಸಮದ ನಂತರ ಈ ಸರ್ಕಾರಗಳನ್ನು ಪಿ.ವಿ. ನರಸಿಂಹರಾವ್ ನೇತೃತ್ವದ ಕೇಂದ್ರ ಸರ್ಕಾರ ವಜಾ ಮಾಡಿತು. ಮರುವರ್ಷದ ಚುನಾವಣೆಗಳಲ್ಲಿ ರಾಜಸ್ಥಾನ ಹೊರತುಪಡಿಸಿ ಉಳಿದ ಮೂರೂ ರಾಜ್ಯಗಳಲ್ಲಿ ಬಿಜೆಪಿ ಸೋತಿತು. ಸಾಕಷ್ಟು ಸೀಟುಗಳು ದಕ್ಕಲಿಲ್ಲ ನಿಜ. ಆದರೆ, ಹಿಂದಿನ ಚುನಾವಣೆಗಿಂತ ಹೆಚ್ಚು ಮತಗಳನ್ನು ಗಳಿಸಿತು.

‘ವಿಚಾರಗಳಿಗೆ ಅವುಗಳದೇ ತಾಕತ್ತು ಇರುತ್ತದೆ. ಚುನಾವಣೆ ಗಣಿತದಲ್ಲಿ ಆಗುವ ಹಿನ್ನಡೆಗಳು ನಮ್ಮ ವೈಚಾರಿಕ ಅಭಿಯಾನಗಳ ಮೇಲೆ ಹೆಚ್ಚು ಪ್ರಭಾವ ಬೀರುವುದಿಲ್ಲ. ನಮ್ಮ ವಿಚಾರಧಾರೆಯನ್ನು ಜನ ತಿರಸ್ಕರಿಸಲಿಲ್ಲ. ಹಿಂದಿಗಿಂತಲೂ ಹೆಚ್ಚಿನ ವೋಟುಗಳು ಬಂದಿರುವುದೇ ಈ ಮಾತಿಗೆ ಪುರಾವೆ. ರಾಮಮಂದಿರದಿಂದ ರಾಮರಾಜ್ಯದೆಡೆಗೆ ನಮ್ಮ ವಿಚಾರ- ಆಚಾರ ಭೂಮಿಕೆಯನ್ನು ವಿಸ್ತರಿಸಿ ಜನರಿಗೆ ತಲುಪಿಸುವಲ್ಲಿ ಹಿಂದೆ ಬಿದ್ದೆವು ಅಷ್ಟೇ’ ಎಂಬುದಾಗಿ ಈ ಫಲಿತಾಂಶಗಳನ್ನು ಅಂದಿನ ಬಿಜೆಪಿ ವಕ್ತಾರ ಕೆ.ಎನ್. ಗೋವಿಂದಾಚಾರ್ಯ ವ್ಯಾಖ್ಯಾನ ಮಾಡಿದರು. ಆದರೆ, ರಾಮಮಂದಿರ ಆಂದೋಲನ ‘ಕೆಳ ಜಾತಿಗಳ’ ಮತದಾರರನ್ನು ಪ್ರಭಾವಿಸಲಿಲ್ಲ ಎಂಬುದು ರಾಜಕೀಯ ವಿಶ್ಲೇಷಕರ ಅಭಿಮತ.

‘ಮೇಲ್ಜಾತಿ’ಗಳನ್ನು ಉಳಿಸಿಕೊಂಡು ‘ಕೆಳಜಾತಿ’ಗಳ ಬೆಂಬಲ ಗಳಿಸುವುದು ಹೇಗೆಂಬ ಬಿಕ್ಕಟ್ಟನ್ನು ಬಿಜೆಪಿ ಎದುರಿಸಿತು.

1996ರ ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿ ನೇತೃತ್ವದ ಚುನಾವಣಾಪೂರ್ವ ಮೈತ್ರಿಕೂಟ 161 ಸೀಟುಗಳನ್ನು ಗೆದ್ದುಕೊಂಡಿತು. 1998ರಲ್ಲಿ ಈ ಸಂಖ್ಯೆ 182ನ್ನು ಮುಟ್ಟಿತು. 1999ರಲ್ಲಿ ಮತ್ತೆ ಅಷ್ಟೇ ಸಂಖ್ಯೆಯ ಸ್ಥಾನಗಳನ್ನು ಗೆದ್ದಿತು. ವಾಜಪೇಯಿ ನೇತೃತ್ವದ ಎನ್.ಡಿ.ಎ. ಸರ್ಕಾರ ರಚನೆಯಾಯಿತು. ಕರ್ನಾಟಕವೂ ಸೇರಿದಂತೆ ದೇಶದ ಯುವಜನ ವಾಜಪೇಯಿ ಅವರನ್ನು ದೊಡ್ಡ ರೀತಿಯಲ್ಲಿ ಬೆಂಬಲಿಸಿದರು. ಮೂವತ್ತಕ್ಕೂ ಹೆಚ್ಚು ಪಕ್ಷಗಳ ಸಮ್ಮಿಶ್ರ ಸರ್ಕಾರವನ್ನು ವಾಜಪೇಯಿ ಅತ್ಯಂತ ಜಾಣ್ಮೆಯಿಂದ ನಿಭಾಯಿಸಿದ್ದರು.

ಉತ್ತಮ ಸಂಸದೀಯ ಪಟು ಎಂದು ನೆಹರೂ ಅವರಿಂದ ಮೆಚ್ಚುಗೆಗಳಿಸಿದ್ದ ವಾಜಪೇಯಿ, ಮೊರಾರ್ಜಿ ದೇಸಾಯಿ ಅವರ ಜನತಾ ಪಕ್ಷದ ಸರ್ಕಾರದಲ್ಲಿ ವಿದೇಶಾಂಗ ಮಂತ್ರಿಯಾಗಿ ಜನಪ್ರಿಯರಾದರು. ವಿಶ್ವಸಂಸ್ಥೆಯ ಅಧಿವೇಶನದಲ್ಲಿ ಹಿಂದಿಯಲ್ಲಿ ಭಾಷಣ ಮಾಡಿದ ಮೊದಲ ಭಾರತೀಯ ಎಂಬ ಅಗ್ಗಳಿಕೆಗೆ ಪಾತ್ರರಾದರು. ಪ್ರಧಾನಿ ಸ್ಥಾನ ಅವರನ್ನು ಹುಡುಕಿಕೊಂಡು ಬರುವ ವೇಳೆಗೆ ದೇಶ ಅವರನ್ನು ಒಬ್ಬ ರಾಜಕೀಯ ಮುತ್ಸದ್ದಿ ಎಂದು ನೋಡುತ್ತಿತ್ತು. ಆದರೆ, 2004ರಲ್ಲಿ ಅವರ ಪಕ್ಷ- ಮಿತ್ರ ಪಕ್ಷಗಳಿಗೆ ಪುನಃ ಬಹುಮತ ಸಿಗಲಿಲ್ಲ. ‘ಭಾರತ ಪ್ರಕಾಶಿಸುತ್ತಿದೆ’ ಎಂಬ ಅಬ್ಬರದ ಚುನಾವಣಾ ಪ್ರಚಾರದ ನಡುವೆ ಬಿಜೆಪಿ ಅಧಿಕಾರ ಕಳೆದುಕೊಂಡಿತು.

ಅಂದು ಕಳೆದುಕೊಂಡ ಅಧಿಕಾರವನ್ನು ಬಿಜೆಪಿಗೆ ದೊಡ್ಡ ರೀತಿಯಲ್ಲಿ ಮರಳಿ ಗಳಿಸಿಕೊಟ್ಟವರು ನರೇಂದ್ರ ಮೋದಿ.

2002ರ ಫೆಬ್ರುವರಿಯಲ್ಲಿ ಅಯೋಧ್ಯೆಯಿಂದ ಮರಳುತ್ತಿದ್ದ ರೈಲುಗಾಡಿಗೆ ಗುಜರಾತಿನ ಗೋಧ್ರಾದಲ್ಲಿ ಬೆಂಕಿ ಬಿದ್ದಿತ್ತು. 58 ಮಂದಿ ಕರಸೇವಕರು ಈ ಬೆಂಕಿಯಲ್ಲಿ ಬೆಂದು ಹೋದ ದುರ್ಘಟನೆ ಜರುಗಿತು. ಗುಜರಾತ್ ತಿಂಗಳುಗಟ್ಟಲೆ ಹೊತ್ತಿ ಉರಿಯಿತು. ಮುಸಲ್ಮಾನರ ಮೇಲೆ ಹಿಂದೂ ದಾಳಿಗಳು ನಡೆದವು. ಸಾವಿರಕ್ಕೂ ಹೆಚ್ಚು ಮಂದಿ ಸತ್ತರು.

ಸತ್ತವರ ಪೈಕಿ ಹೆಚ್ಚಿನವರು ಮುಸಲ್ಮಾನರು. ನೂರಾರು ಮಂದಿ ಕಾಣೆಯಾದರು. ಅಲ್ಪಸಂಖ್ಯಾತರ ಈ ಮಾರಣಹೋಮಕ್ಕೆ ಕುಮ್ಮಕ್ಕು ನೀಡಿತು ಎಂಬ ಆಪಾದನೆಯನ್ನು ಅಂದಿನ ನರೇಂದ್ರ ಮೋದಿ ನೇತೃತ್ವದ ರಾಜ್ಯ ಸರ್ಕಾರ ಎದುರಿಸಿತು.

ಸುಪ್ರೀಂ ಕೋರ್ಟ್ ನೇಮಕ ಮಾಡಿದ್ದ ವಿಶೇಷ ತನಿಖಾ ತಂಡವು ಮೋದಿಯವರನ್ನು ಈ ಆಪಾದನೆಯಿಂದ ಮುಕ್ತಗೊಳಿಸಿ ವರದಿ ನೀಡಿತ್ತು. ಗುಜರಾತಿನ ಕುಖ್ಯಾತ ಕೋಮು ದಂಗೆಗಳು ಮೋದಿಯವರನ್ನು ರಾಷ್ಟ್ರಮಟ್ಟದಲ್ಲಿ ಬಿಂಬಿಸಿದವು. ಹಿಂದುತ್ವದ ಪ್ರತಿಪಾದಕರೆಂದು ಖ್ಯಾತರಾದ ಅವರನ್ನು ಹಿಂದೂ ಹೃದಯ ಸಾಮ್ರಾಟ ಎಂದು ಬಣ್ಣಿಸಲಾಯಿತು.

ಉಗ್ರ ಹಿಂದುತ್ವ ಪ್ರತಿಪಾದಕ ತಾವೆಂದು ರುಜುವಾತು ಮಾಡಿದ ಮೋದಿ ಆನಂತರದ ದಿನಗಳಲ್ಲಿ ಅಭಿವೃದ್ಧಿಯ ಹರಿಕಾರ ಎಂಬ ವರ್ಚಸ್ಸನ್ನೂ ಬೆಳೆಸಿಕೊಂಡರು. ಆಕ್ರಮಣಕಾರಿ ಮಾತುಗಾರಿಕೆಗೂ ಹೆಸರಾದ ಅವರು ಆನಂತರದ ದಿನಗಳಲ್ಲಿ ಮುಟ್ಟಿದ್ದೆಲ್ಲ ಯಶಸ್ಸು ಪಡೆಯಿತು. ರಾಮರಥ ಯಾತ್ರೆ- ಬಾಬ್ರಿ ಮಸೀದಿ ನೆಲಸಮ- ಗೋಧ್ರೋತ್ತರ ಗುಜರಾತ್ ಕೋಮು ದಂಗೆ- ನರೇಂದ್ರ ಮೋದಿ ನಾಯಕತ್ವದ ನಾಲ್ಕು ಮುಖ್ಯ ಮಜಲುಗಳು ಬಿಜೆಪಿಯನ್ನು ಮುಖ್ಯಧಾರೆಯ ಪಕ್ಷವನ್ನಾಗಿ ಕಟ್ಟಿದವು.

ಹೊಸ ಸಾಮಾಜಿಕ ಸಮೀಕರಣಗಳ ಮಾದರಿಯನ್ನೇ ಕಟ್ಟಿದ ನರೇಂದ್ರ ಮೋದಿ ಮಂಡಲ ವರದಿ ಆಧಾರದ ಮತ್ತು ‘ಅಲ್ಪಸಂಖ್ಯಾತ ತುಷ್ಟೀಕರಣ ರಾಜಕಾರಣ’ಕ್ಕೆ ಪ್ರತಿಯಾಗಿ ಉಗ್ರ ಹಿಂದುತ್ವ- ಅಭಿವೃದ್ಧಿ ಮಾದರಿಯ ರಾಜಕಾರಣವನ್ನು ರೂಪಿಸಿದರು. ಬಿಜೆಪಿಯನ್ನು ಅದರ ಸಾಂಪ್ರದಾಯಿಕ ನೆಲೆಗಳ ಆಚೆಗೂ ಪಸರಿಸಿ ಗೆಲ್ಲಿಸಿದರು.

ಆರ್.ಎಸ್.ಎಸ್. ತನ್ನ ವಿಚಾರಧಾರೆಯನ್ನು ದೊಡ್ಡ ರೀತಿಯಲ್ಲಿ ಮುಂದಕ್ಕೆ ಒಯ್ಯುವ ಹೆದ್ದಾರಿಯನ್ನು ಮೋದಿಯವರ ಈ ಹೊಸ ಮಾದರಿ ತೆರೆಯಿತು.

ಬಿಜೆಪಿ ಮತ್ತು ಸಂಘ ಪರಿವಾರದ ಪಾಲಿಗೆ ಇಂದಿನ ಕಾಲಘಟ್ಟ ಉಜ್ವಲ ಮತ್ತು ಚಾರಿತ್ರಿಕ. ಆರ್.ಎಸ್.ಎಸ್. ಮತ್ತು ಬಿಜೆಪಿಯಲ್ಲಿ ಬೆಳೆದು ಮಾಗಿದ ರಾಮನಾಥ ಕೋವಿಂದ್ ಅವರು ರಾಷ್ಟ್ರಪತಿ, ವೆಂಕಯ್ಯನಾಯ್ಡು ಉಪರಾಷ್ಟ್ರಪತಿ ಹಾಗೂ ನರೇಂದ್ರ ಮೋದಿ ಪ್ರಧಾನಮಂತ್ರಿ. ಲೋಕಸಭೆಯಲ್ಲಿ ಮೊದಲ ಬಾರಿಗೆ ಬಿಜೆಪಿ ತನ್ನದೇ ಬಹುಮತ ಹೊಂದಿದೆ. ಮೂರನೆಯ ಎರಡಕ್ಕಿಂತ ಹೆಚ್ಚಿನ ರಾಜ್ಯಗಳಲ್ಲಿ ಬಿಜೆಪಿ- ಮಿತ್ರ ಪಕ್ಷಗಳ ಸರ್ಕಾರಗಳಿವೆ. ಈ ಮುನ್ನ ಅಟಲ್ ಬಿಹಾರಿ ವಾಜಪೇಯಿ ಮತ್ತು ಭೈರೋಸಿಂಗ್ ಶೇಖಾವತ್ ಕೆಲಕಾಲ ಪ್ರಧಾನಿ ಮತ್ತು ಉಪರಾಷ್ಟ್ರಪತಿ ಹುದ್ದೆಗಳನ್ನು ಏಕಕಾಲಕ್ಕೆ ಅಲಂಕರಿಸಿದ್ದುಂಟು.

ಎಪ್ಪತ್ತು ವರ್ಷಗಳಲ್ಲಿ ಉಳಿದೆಲ್ಲ ರಾಷ್ಟ್ರಪತಿಗಳು, ಉಪರಾಷ್ಟ್ರಪತಿಗಳು ಹಾಗೂ ಪ್ರಧಾನಮಂತ್ರಿಯವರು ಬಿಜೆಪಿ- ಸಂಘ ಪರಿವಾರದ ಹೊರಗಿನವರಾಗಿದ್ದರು. ವಿ.ಪಿ. ಸಿಂಗ್ ಕಾಲ ಬಡಿದೆಬ್ಬಿಸಿದ್ದ ‘ಮಂಡಲ ರಾಜಕಾರಣ’ವನ್ನು ‘ಕಮಂಡಲ ರಾಜಕಾರಣ’ ತನ್ನ ಅನುಕೂಲಕ್ಕೆ ತಿರುಗಿಸಿಕೊಂಡು ನುಂಗಿ ಜೀರ್ಣಿಸಿಕೊಂಡಿರುವ ಕಾಲ.

ರಾಷ್ಟ್ರಪತಿ ದಲಿತರಾದರೆ, ಉಪರಾಷ್ಟ್ರಪತಿ ಮತ್ತು ಪ್ರಧಾನಮಂತ್ರಿ ಹಿಂದುಳಿದ ವರ್ಗಗಳಿಗೆ ಸೇರಿದವರು. ಮುಖ್ಯಧಾರೆಯ ರಾಜಕಾರಣದಿಂದ ದಶಕಗಟ್ಟಲೆ ಮೂಲೆಗೆ ತಳ್ಳಿಸಿಕೊಂಡು ಬಂದಿದ್ದ ಸಂಘ ಪರಿವಾರದ ಪಾಲಿಗೆ ಈ ಸಾಧನೆ ಸಣ್ಣದೇನೂ ಅಲ್ಲ.

ಬಿಜೆಪಿ ಈಗ ಕೇವಲ ‘ಮೇಲ್ಜಾತಿ’ಗಳ ಅಥವಾ ಉತ್ತರ ಭಾರತದ ಪಕ್ಷ ಅಲ್ಲ. ಮೋದಿ- ಅಮಿತ್ ಶಾ ಜೋಡಿ ಈ ಪಕ್ಷವನ್ನು ಎಲ್ಲ ಜನವರ್ಗಗಳ ನಡುವೆ ನುಗ್ಗಿಸುವಲ್ಲಿ ಯಶಸ್ಸು ಕಂಡಿದೆ. 2014ರ ಉತ್ತರಪ್ರದೇಶ ಲೋಕಸಭಾ ಚುನಾವಣೆಗಳಿಗೆ ವರ್ಷಗಳಿಂದ ನಡೆಸಿದ ಸಿದ್ಧತೆಯ ಉದಾಹರಣೆ ನೋಡಬಹುದು. ಆ ದಿನಗಳಲ್ಲಿ ಪಕ್ಷದಲ್ಲಿ ಮೇಲಿನಿಂದ ಕೆಳಗಿನ ತನಕ ಶೇ 7ರಷ್ಟು ಹಿಂದುಳಿದ ವರ್ಗಗಳು ಮತ್ತು ಶೇ 3ರಷ್ಟು ದಲಿತರಿದ್ದರು.

ಎರಡೇ ವರ್ಷಗಳಲ್ಲಿ ಈ ಪ್ರಮಾಣ ಶೇ 30ಕ್ಕೆ ಏರಿತು. 75 ಜಿಲ್ಲಾ ಘಟಕಗಳ ಪೈಕಿ 34ರಲ್ಲಿ ಹಿಂದುಳಿದ ವರ್ಗಗಳಿಗೆ ಸೇರಿದವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು. ಮೂರು ಜಿಲ್ಲೆಗಳಲ್ಲಿ ಪರಿಶಿಷ್ಟ ಜಾತಿಗಳ ಅಧ್ಯಕ್ಷರು. ಪಕ್ಷದ ರಾಜ್ಯ ಘಟಕ ಅಧ್ಯಕ್ಷ ಕೇಶವಪ್ರಸಾದ್ ಮೌರ್ಯ ಕೂಡ ಹಿಂದುಳಿದ ಜಾತಿಗೆ ಸೇರಿದವರಾಗಿದ್ದರು. ಮೊದಲ ಸಲ ಕಾಂಗ್ರೆಸ್ಸಿಗಿಂತ ಹೆಚ್ಚು ದಲಿತ ಮತ್ತು ಹಿಂದುಳಿದ ಮತಗಳನ್ನು ಗಳಿಸಿತ್ತು ಬಿಜೆಪಿ.

ಇತ್ತೀಚೆಗೆ ಈಶಾನ್ಯರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ನಂತರ ಭಾರತ ದೇಶದ ರಾಜಕೀಯ ಭೂಪಟದ ರಂಗು ಕಡು ಕೇಸರಿಯತ್ತ ತಿರುಗತೊಡಗಿದೆ.

ದೇಶದ ಮೂರನೆಯ ಎರಡಕ್ಕೂ ಹೆಚ್ಚಿನ ಜನಸಂಖ್ಯೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಬಿಜೆಪಿ ಸರ್ಕಾರಗಳಡಿ ಬಂದಿದೆ.

ವಿಶಾಲ ಉತ್ತರ ಭಾರತದ ‘ಕೇಸರಿ ಸಮುದ್ರ’ದಲ್ಲಿ ಬಿಜೆಪಿಯೇತರ ಪುಟ್ಟ ನಡುಗಡ್ಡೆಗಳು ಎರಡೇ ಎರಡು, ಪಂಜಾಬ್ (ಕಾಂಗ್ರೆಸ್) ಮತ್ತು ದೆಹಲಿ (ಆಪ್). ಮೊನ್ನೆ ನಡೆದ ಕರ್ನಾಟಕ ವಿಧಾನಸಭೆ ಚುನಾವಣೆ ಅತಂತ್ರ ವಿಧಾನಸಭೆಯ ಸನ್ನಿವೇಶವನ್ನು ಚಿಮ್ಮಿಸಿದೆ. ಇಲ್ಲಿಯೂ ಶತಾಯ ಗತಾಯ ತನ್ನ ಪತಾಕೆ ಹಾರಿಸಲು ಬಿಜೆಪಿ ನಡೆಸಿರುವ ಪ್ರಯತ್ನ ಎಷ್ಟರಮಟ್ಟಿಗೆ ಸಫಲ ಆದೀತು ಎಂಬುದನ್ನು ಮುಂಬರುವ ದಿನಗಳೇ ಹೇಳಬೇಕು.ಒಟ್ಟು 29ರ ಪೈಕಿ 20 ರಾಜ್ಯಗಳು ಬಿಜೆಪಿಯ ನಿಯಂತ್ರಣಕ್ಕೆ ಬಂದಿವೆ!

ಈ ಹಿಂದೆ ಯಾವ ರಾಜಕೀಯ ಪಕ್ಷವೂ ಏಕಕಾಲಕ್ಕೆ ಇಷ್ಟೊಂದು ರಾಜ್ಯಗಳಲ್ಲಿ ಅಧಿಕಾರ ನಡೆಸಿರಲಿಲ್ಲ! 24 ವರ್ಷಗಳ ಹಿಂದೆ 1993ರಲ್ಲಿ ಕಾಂಗ್ರೆಸ್ ಪ್ರಾಬಲ್ಯದ ಕಾಲಕ್ಕೆ ದೇಶದಲ್ಲಿ ಒಟ್ಟು 26 ರಾಜ್ಯಗಳಿದ್ದವು. ಇವುಗಳ ಪೈಕಿ 15 ರಾಜ್ಯಗಳಲ್ಲಿ ಕಾಂಗ್ರೆಸ್ ನೇರ ಅಧಿಕಾರ ಹಿಡಿದಿತ್ತು. ಮತ್ತೊಂದು ರಾಜ್ಯವನ್ನು ಮೈತ್ರಿ ಸರ್ಕಾರದ ಮೂಲಕ ನಿಯಂತ್ರಿಸಿತ್ತು. ಎರಡು ರಾಜ್ಯಗಳಲ್ಲಿ ಸಿಪಿಐ(ಎಂ) ಅಧಿಕಾರದಲ್ಲಿತ್ತು ಮತ್ತು ಸಿಪಿಐ(ಎಂ) ಅಂದಿನ ದಿನಗಳಲ್ಲಿ ಕೇಂದ್ರ ಕಾಂಗ್ರೆಸ್ ಸರ್ಕಾರವನ್ನು ಬೆಂಬಲಿಸಿತ್ತು.

ಈ ಹದಿನೆಂಟರ ಸನಿಹಕ್ಕೆ ಬಂದಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ 2006ರಲ್ಲಿ 17 ಸರ್ಕಾರಗಳನ್ನು ಹೊಂದಿತ್ತು. ಇಂದು ಕಾಂಗ್ರೆಸ್ ಬಳಿ ಉಳಿದಿರುವ ರಾಜ್ಯಗಳು ಪಂಜಾಬ್, ಮಿಜೋರಾಂ ಹಾಗೂ ಕೇಂದ್ರಾಡಳಿತ ರಾಜ್ಯ ಪುದುಚೆರಿ. ವರ್ಷಾಂತ್ಯದಲ್ಲಿ ಮಿಜೋರಂ ಕೂಡ ಚುನಾವಣೆಗೆ ತೆರಳಲಿದೆ. ಮಿಜೋರಂ ಕೂಡ ‘ಕೈ’ ಬಿಡಲಿದೆಯೇ ಎಂಬ ಪ್ರಶ್ನೆಗೆ ಕಾಲವೇ ಉತ್ತರ ಹೇಳಲಿದೆ. ಆದರೆ, ತನ್ನ ಅಧಿಕಾರದ ನೆಲೆಯನ್ನು ವಿಸ್ತರಿಸುವ ಆಕ್ರಮಣಕಾರಿ ಉತ್ಸಾಹದಲ್ಲಿ ಮೋದಿ- ಶಾ ನೇತೃತ್ವದ ಬಿಜೆಪಿ, ಜನತಾಂತ್ರಿಕ ಮೌಲ್ಯಗಳನ್ನು ಗಾಳಿಗೆ ತೂರಿರುವ ನಿಚ್ಚಳ ಉದಾಹರಣೆಗಳಿವೆ. ಗೋವಾ, ಮಣಿಪುರ, ಮೇಘಾಲಯ ಈ ಮಾತಿಗೆ ತಾಜಾ ಉದಾಹರಣೆಗಳು.

ತಾನು ತುಳಿದದ್ದೇ ಸರಿಯಾದ ಹಾದಿ, ಮಾಡಿದ್ದೇ ನ್ಯಾಯ ಎಂಬ ಭ್ರಮೆ- ಅಹಂಕಾರ ಇಂದಿನ ಬಿಜೆಪಿಯನ್ನು ಆವರಿಸಿವೆ.

ಬಿಜೆಪಿಯ ಈ ಸಾಲು ಸಾಲು ಗೆಲುವಿನ ಶ್ರೇಯಸ್ಸಿನ ಸಿಂಹಪಾಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಸಲ್ಲಬೇಕು. 2014ರಲ್ಲಿ ಕಣ್ಣು ಕೋರೈಸುವ ಗೆಲುವಿನ ಮೂಲಕ ಕೇಂದ್ರದ ಗದ್ದುಗೆ ಏರಿದ ಮೋದಿ ಒಂದರ ನಂತರ ಮತ್ತೊಂದರಂತೆ ರಾಜ್ಯಗಳನ್ನು ಬಿಜೆಪಿಗೆ ಗೆಲ್ಲಿಸಿಕೊಟ್ಟರು ಮತ್ತು ಬಿಜೆಪಿಯ ತಳಹದಿಯನ್ನು ವಿಸ್ತರಿಸಿದರು. ತಮ್ಮ ಅಸಾಧಾರಣ ಅನುಯಾಯಿ ಅಮಿತ್ ಶಾ ಜೊತೆಗೂಡಿ ದೇಶದ ಉದ್ದಗಲಕ್ಕೆ ಬಿಜೆಪಿಯ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದಾರೆ ಮೋದಿ.

ದೇಶ ಬದಲಾವಣೆಯನ್ನು ಬಯಸಿತ್ತು. ದೆಹಲಿಯ ಕದಗಳು ತೆರೆಯದಿದ್ದರೆ ಒದ್ದುಕೊಂಡು ಬರುವುದಾಗಿ ಸಾರಿದ್ದ ಮೋದಿಯವರನ್ನು ಬಿಜೆಪಿ ತನ್ನ ಪ್ರಧಾನಿ ಅಭ್ಯರ್ಥಿಯನ್ನಾಗಿ ಮುಂದೆ ಮಾಡಿತ್ತು. ಉಳಿದದ್ದು ಇತಿಹಾಸ. ಅಲ್ಲಿಂದ ಅವರು ಹಿಂದಿರುಗಿ ನೋಡಲೇ ಇಲ್ಲ.

ಇಂದಿರಾ ಹತ್ಯೆಯ ನಂತರ ನಡೆದ 1984ರ ಲೋಕಸಭಾ ಚುನಾವಣೆಗಳಲ್ಲಿ ಸಹಾನುಭೂತಿಯ ಅಲೆಗಳು ಪ್ರತಿಪಕ್ಷಗಳನ್ನು ಅಪ್ಪಳಿಸಿ ಅಳಿಸಿ ಹಾಕಿದ್ದವು. 533 ಸೀಟುಗಳ ಪೈಕಿ 404ನ್ನು ಬಾಚಿಕೊಂಡಿತ್ತು ರಾಜೀವ್‌ ಗಾಂಧಿ ನೇತೃತ್ವದ ಕಾಂಗ್ರೆಸ್. ಅದೇ ಕಡೆ. 33 ವರ್ಷಗಳ ಭಾರೀ ಅಂತರದ ನಂತರ ಮತ್ತೊಂದು ಮಜಬೂತಾದ ಜನಾದೇಶ ಸಿಕ್ಕಿದ್ದು ಮೋದಿ ನೇತೃತ್ವದ ಬಿಜೆಪಿಗೆ. ಕಮಲದ ಗುರುತು 282 ಸೀಟುಗಳನ್ನು ಗೆದ್ದಿತು.

ಮಿತ್ರಪಕ್ಷಗಳು ಗೆದ್ದ  54 ಸೀಟುಗಳನ್ನು ಸೇರಿಸಿದರೆ 336 ಸೀಟುಗಳ ಭಾರೀ ಬಹುಮತ ಎನ್.ಡಿ.ಎ.ಗೆ ದಕ್ಕಿತ್ತು. ಇತ್ತೀಚಿನ ದಶಕಗಳ ರಾಜಕಾರಣದಲ್ಲಿ ಮೋಡಿ ಮಾಡುವ ಮಾತುಗಾರಿಕೆಯಲ್ಲಿ ಮೋದಿಯವರನ್ನು ಮೀರಿಸಿದವರು ಮತ್ತೊಬ್ಬರಿಲ್ಲ. ಜನಸಮೂಹಗಳು ತಲೆದೂಗುವಂತೆ ಆಶೋತ್ತರಗಳ ಕನಸನ್ನು ಅವರ ಮುಂದೆ ಹರವಿಬಿಡುವ ನಾಯಕ ಅವರು. ಇಷ್ಟೇ ಆಗಿದ್ದರೆ ಅಂತಹ ಯಶಸ್ಸು ಸಿಗುತ್ತಿರಲಿಲ್ಲವೇನೋ.

ಅಭಿವೃದ್ಧಿಯ ಆಶೋತ್ತರದ ಜೊತೆ ಜೊತೆಗೆ ಹಿಂದೂ- ಮುಸ್ಲಿಂ ಕೋಮು ಧ್ರುವೀಕರಣವನ್ನು ಬೆರೆಸಿ ಮತ್ತೇರಿಸುವ ಮಿಶ್ರಣವನ್ನು ತಯಾರಿಸುವ ಪ್ರಧಾನಿಯವರ ಅದ್ವಿತೀಯ ಸಾಮರ್ಥ್ಯ ಸ್ವಾತಂತ್ರ್ಯೋತ್ತರ ಭಾರತದ ಯಾವ ತಲೆಯಾಳಿಗೂ ಇರಲಿಲ್ಲ.

ಚುನಾವಣೆ ಎಂಬ ದೈತ್ಯಯಂತ್ರದ ಅಂತರಂಗವನ್ನು ಭೇದಿಸುವ ಜೊತೆಗೆ ಅತ್ಯಂತ ಪ್ರಭಾವಿ ಚುನಾವಣಾ ಮೈತ್ರಿಗಳನ್ನು ಬೆಸೆದು, ಯಶಸ್ವಿ ರಣನೀತಿ ಹೆಣೆದ ಶಾ ಅವರನ್ನು ‘ಚುನಾವಣಾ ರಾಜಕಾರಣದ ಚಾಣಕ್ಯ’ ಎಂದೇ ಬಿಜೆಪಿ ಬಣ್ಣಿಸಿದೆ.

ಕಾಂಗ್ರೆಸ್ ಆಡಳಿತದ ವಿರುದ್ಧ ರೇಜಿಗೆ, ಕಾರ್ಪೊರೇಟ್ ಮತ್ತು ಸಮೂಹ ಮಾಧ್ಯಮಗಳ ಬೆಂಬಲ, ಸಾಮಾಜಿಕ ಅಂತರ್ಜಾಲ ತಾಣಗಳನ್ನು ಕೈವಶ ಮಾಡಿಕೊಂಡು ನಡೆಸಿದ ಅಬ್ಬರದ ಪ್ರಚಾರ ಸಮರ, ಸಂಪನ್ಮೂಲಗಳ ಧಾರಾಳ ಬಳಕೆ ಬಿಜೆಪಿಯ ಸಾಲು ಸಾಲು ಗೆಲುವುಗಳಲ್ಲಿ ಪಾತ್ರ ವಹಿಸಿರುವ ಇತರೆ ಅಂಶಗಳು.

ಈ ಜೈತ್ರಯಾತ್ರೆಯನ್ನು ತಡೆದು ನಿಲ್ಲಿಸುವುದು ಅಸಾಧ್ಯವೇನೂ ಅಲ್ಲ. ಬಿಹಾರದ ನಿತೀಶ್- ಲಾಲೂ- ಕಾಂಗ್ರೆಸ್ ಮತ್ತಿತರೆ ಪಕ್ಷಗಳ ಮಹಾಮೈತ್ರಿಯ ವಿಜಯ ಮತ್ತು ಇತ್ತೀಚಿನ ಉತ್ತರಪ್ರದೇಶದ ಗೋರಖಪುರ- ಫೂಲ್ಪುರ ಲೋಕಸಭಾ ಕ್ಷೇತ್ರಗಳಲ್ಲಿ ಸಮಾಜವಾದಿ ಪಕ್ಷ- ಬಹುಜನ ಸಮಾಜ ಪಕ್ಷದ ಮೈತ್ರಿ ಕೂಟದ ಘನವಿಜಯಗಳು ಈ ದಿಕ್ಕಿಗೆ ತೋರಿದ ಕೈಮರಗಳು.

2019ರಲ್ಲಿ ಮೋದಿ- ಶಾ ಜೋಡಿ ನಿಜ ಅಗ್ನಿಪರೀಕ್ಷೆ ಎದುರಿಸಲಿದೆ.

ದಣಿದು ಸವೆದಿದ್ದ ಆಳುವ ಪಕ್ಷದ ವಿರುದ್ಧ ಸ್ಪರ್ಧಿಸಿದ್ದ ಹೊಸ ಪಕ್ಷವಾಗಿ 2014ರಲ್ಲಿ ಗೆದ್ದಿದ್ದ ಕ್ಷೇತ್ರಗಳನ್ನು 2019ರಲ್ಲಿ ಉಳಿಸಿಕೊಳ್ಳುವ ಕಠಿಣ ಸವಾಲು ಪಕ್ಷದ ಮುಂದಿದೆ. ಉದ್ಯೋಗಾವಕಾಶ ಕಲ್ಪಿಸುವಲ್ಲಿ ವೈಫಲ್ಯ, ನೋಟು ರದ್ದು  ಕ್ರಮ, ಜಿ.ಎಸ್.ಟಿ. ಜಾರಿ, ವ್ಯಾಪಕ ರೈತ ಅತೃಪ್ತಿಯ ಹಿನ್ನೆಲೆಯಲ್ಲಿ ಆಡಳಿತ ವಿರೋಧಿ ಭಾವನೆ ತನ್ನ ವಿರುದ್ಧ ಇರುವುದೇ ಇಲ್ಲ ಎಂದು ಎದೆ ತಟ್ಟಿ ಹೇಳುವ ಸ್ಥಿತಿಯಲ್ಲಿ ಬಿಜೆಪಿ ಇಲ್ಲ.

ಸದ್ಯಕ್ಕೆ ಚೆದುರಿ ಚೆಲ್ಲಾಪಿಲ್ಲಿ ಆಗಿರುವ ಪ್ರತಿಪಕ್ಷಗಳು ಯಾವುದೇ ಪ್ರಬಲ ಪರ್ಯಾಯ ನೀಡುವ ಸಾಧ್ಯತೆ ಇಲ್ಲ ಎಂಬುದು ಬಿಜೆಪಿಗೆ ವರದಾನ.

ಕಡು ಹಗೆಗಳಾಗಿದ್ದ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷಗಳು ಒಟ್ಟಿಗೆ ಬರುವ ದಟ್ಟ ಸಾಧ್ಯತೆ, ದಕ್ಷಿಣದಲ್ಲಿ ಆಂಧ್ರದ ತೆಲುಗುದೇಶಂ ಪಕ್ಷ ಮೈತ್ರಿಕೂಟದಿಂದ ಹೊರ ನಡೆದಿರುವುದು, ತೆಲಂಗಾಣದ ಟಿ.ಆರ್.ಎಸ್. ತೃತೀಯ ರಂಗದತ್ತ ಒಲವು ತೋರಿರುವುದು ಬಿಜೆಪಿ ಪಾಲಿಗೆ ಒಳ್ಳೆಯ ಸೂಚನೆಗಳಲ್ಲ.

**

ರಾಜಕೀಯ ಅಸ್ತಿತ್ವ

ಕರ್ನಾಟಕದಲ್ಲಿ ಅರಳಿ ಮುದುರಿ ಮತ್ತೆ ಅರಳಿದ ಕಮಲ ಕರ್ನಾಟಕದಲ್ಲಿ ಬಿಜೆಪಿಯ ರಾಜಕೀಯ ಅಸ್ತಿತ್ವ ಗರಿಗೆದರಿದ್ದು 1983ರ ಜನತಾ ಪಕ್ಷ ಸರ್ಕಾರದ ದಿನಗಳಲ್ಲಿ.

ಬಹುಮತದ ಕೊರತೆಯಿದ್ದ ರಾಮಕೃಷ್ಣ ಹೆಗಡೆ ನೇತೃತ್ವದ ಜನತಾ ಪಕ್ಷದ ಸರ್ಕಾರಕ್ಕೆ ಬಾಹ್ಯ ಬೆಂಬಲ ನೀಡಿತ್ತು. ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡದಲ್ಲಿ ಜನಬೆಂಬಲ ಹೊಂದಿದ್ದ ಪಕ್ಷ ಆಗ ಹೊಂದಿದ್ದ ಸ್ಥಾನಗಳು 18.

ಜನತಾಪಕ್ಷ- ಜನತಾದಳದ ಪತನದಿಂದ ಖಾಲಿಯಾದ ರಾಜಕೀಯ ಆವರಣವನ್ನು ಬಿಜೆಪಿ ತುಂಬಿದ ವಿದ್ಯಮಾನ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಜರುಗಿತ್ತು. ಈ ಮಾತಿಗೆ ಕರ್ನಾಟಕವೂ ಹೊರತಲ್ಲ. ಜನತಾ ಪಕ್ಷ- ಜನತಾದಳದ ವರ್ಚಸ್ವಿ ನಾಯಕ ರಾಮಕೃಷ್ಣ ಹೆಗಡೆಯವರು ಹೆಗಲಿಗೇರಿಸಿಕೊಂಡ ಬಿಜೆಪಿ ಕಾಲಾನುಕ್ರಮದಲ್ಲಿ ಕರ್ನಾಟಕದ ಜನತಾ ಪಕ್ಷ-ಜನತಾದಳವನ್ನು ಜೀರ್ಣಿಸಿಕೊಂಡು ಬೆಳೆಯಿತು.

ಜನತಾದಳದ ದೇವೇಗೌಡ ನೇತೃತ್ವದ ಬಣ ಜಾತ್ಯತೀತ ಜನತಾದಳ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿತು. ಜಾತ್ಯತೀತ ತತ್ವವನ್ನು ತನ್ನ ಹೆಸರಿನೊಡನೆ ಅಂಟಿಸಿಕೊಂಡಿರುವ ಈ ಪಕ್ಷವೂ ರಾಜ್ಯದಲ್ಲಿ ಬಿಜೆಪಿಯ ಬೇರುಗಳು ಇನ್ನಷ್ಟು ಭದ್ರವಾಗಲು ತನ್ನ ಕೊಡುಗೆ ನೀಡಿತು. ದೇವೇಗೌಡರ ಮಗ ಎಚ್.ಡಿ. ಕುಮಾರಸ್ವಾಮಿ ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸಿ ಮುಖ್ಯಮಂತ್ರಿಯಾದರು. 20 ತಿಂಗಳ ನಂತರ ಬಿಜೆಪಿಯ ಬಿ.ಎಸ್. ಯಡಿಯೂರಪ್ಪನವರಿಗೆ ಮುಖ್ಯಮಂತ್ರಿ ಹುದ್ದೆ ಬಿಟ್ಟುಕೊಡದೆ ‘ವಚನಭ್ರಷ್ಟತೆ’ಯ ಆರೋಪ ಎದುರಿಸಿದರು.

ಚುನಾವಣೆಗಳಲ್ಲಿ ಸಹಾನುಭೂತಿಯನ್ನು ಗಳಿಸಿದ ಬಿಜೆಪಿ ಪಕ್ಷೇತರ ಅಭ್ಯರ್ಥಿಗಳು ಮತ್ತು ‘ಆಪರೇಷನ್ ಕಮಲ’ದ ಮೂಲಕ ಯಡಿಯೂರಪ್ಪ ನೇತೃತ್ವದಲ್ಲಿ ಸ್ವತಂತ್ರ ಸರ್ಕಾರ ರಚಿಸುವಲ್ಲಿ ಯಶಸ್ವಿಯಾಯಿತು. ಒಳಜಗಳ ಮತ್ತು ಭ್ರಷ್ಟಾಚಾರದ ಕಳಂಕ ಅಂಟಿಸಿಕೊಂಡು 2014ರಲ್ಲಿ ಸೋತು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ದಾರಿ ಮಾಡಿತು.

ಒಳಜಗಳ ಮತ್ತು ನಿಷ್ಕ್ರಿಯೆಯ ಕಾರಣ ನಿಸ್ತೇಜವಾಗಿದ್ದ ರಾಜ್ಯ ಬಿಜೆಪಿಗೆ ಪುನಃ ಶಕ್ತಿ ತುಂಬಿ ಗೆಲುವಿನ ಹೊಸ್ತಿಲನ್ನು ತಲುಪಿಸಿರುವುದು ಇದೇ ಮೋದಿ- ಅಮಿತ್ ಶಾ ಜೋಡಿಯ ಕಾರನಾಮೆ. ರಾಜ್ಯದ ಉದ್ದಗಲಕ್ಕೆ ಮೋದಿ ನಡೆಸಿದ 21 ರ‍್ಯಾಲಿಗಳ ನಂತರವೂ ಬಿಜೆಪಿಗೆ ಸರಳ ಬಹುಮತ ದಕ್ಕಲಿಲ್ಲ ಎಂಬುದು ಕಟುವಾಸ್ತವ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT