ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜ್ಞೆಯಲ್ಲೇ ಅಂತರ್ಗತವಾದ ಕೋಮುವಾದ

ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಚಂದ್ರಪೂಜಾರಿ ಅಭಿಮತ
Last Updated 20 ಮೇ 2018, 6:21 IST
ಅಕ್ಷರ ಗಾತ್ರ

ದಾವಣಗೆರೆ: ಈ ಮೊದಲು ಜಾತಿ, ಧರ್ಮಗಳ ನಡುವೆ ಗಲಾಟೆ ಎಬ್ಬಿಸಿ ಅಶಾಂತಿ ಸೃಷ್ಟಿಸುವುದೇ ಕೋಮುವಾದವಾಗಿತ್ತು. ಆದರೆ, ಇತ್ತೀಚೆಗೆ ಕೋಮುವಾದದ ಸ್ವರೂಪ ಬದಲಾಗಿದೆ. ಎಲ್ಲರ ಪ್ರಜ್ಞೆಯೊಳಗೆ ಕೋಮುವಾದ ತುರುಕಲಾಗುತ್ತಿದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಚಂದ್ರಪೂಜಾರಿ ಹೇಳಿದರು.

ಇಲ್ಲಿನ ಸದ್ಯೋಜಾತ ಹಿರೇಮಠದ ಆವರಣದಲ್ಲಿ ಶನಿವಾರ ಬಿಎಸ್‌ಎನ್‌ಎಲ್‌ ಎಂ‍ಪ್ಲಾಯಿಸ್‌ ಯೂನಿಯನ್‌ ಕಾಮ್ರೆಡ್‌ ಮೋನಿ ಬೋಸ್‌ ಅವರ ಸ್ಮರಣೆ ಅಂಗವಾಗಿ ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮುಸ್ಲಿಮರ ಸಂಖ್ಯೆ ಹೆಚ್ಚುತ್ತಿದೆ. ಮೀಸಲಾತಿ ನೆಪದಲ್ಲಿ ದಲಿತರು ನಮ್ಮ ಅವಕಾಶಗಳನ್ನು ಕಿತ್ತುಕೊಳ್ಳುತ್ತಿದ್ದಾರೆ. ಮೇಲ್ಜಾತಿಯವರು ನಮ್ಮ ಮೇಲೆ ಅಧಿಕಾರ ಚಲಾಯಿಸುವ ಹುನ್ನಾರ ನಡೆಸುತ್ತಿದ್ದಾರೆ ಎಂಬ ಭಾವನೆಯನ್ನು ಶಿಕ್ಷಿತರಲ್ಲೂ ಗಾಢವಾಗಿ ಬೆಳೆಸಲಾಗುತ್ತಿದೆ. ಮನುಷ್ಯರನ್ನು ಮಾನವೀಯ ನೆಲೆಯಲ್ಲಿ ಕಾಣುವ ಮನಸ್ಥಿತಿ ಮಾಯವಾಗಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಜಾತಿಯ ಸ್ಪರ್ಧಾತ್ಮಕ ಸಂಘಟನೆಯೂ ಕೋಮುವಾದವೇ. ಆದರೆ, ಮತ್ತೊಂದು ಜಾತಿ, ಧರ್ಮದ ಬಗೆಗೆ ಅಸಹನೆ, ಆತಂಕ ಬೆಳೆಸುವುದು ಅಪಾಯಕಾರಿ. ರಾಜಕಾರಣಿಗಳು ನಕಾರಾತ್ಮಕ ಕೋಮುವಾದ ಬೆಳೆಸುತ್ತಿದ್ದಾರೆ. ಈ ಅಸ್ತ್ರ ಬಳಸಿಯೇ ಚುನಾವಣೆಯಲ್ಲಿ ಆಯ್ಕೆಯಾಗಿ ಬಂದು, ದೇಶವನ್ನು ಲೂಟಿ ಹೊಡೆಯುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಉದಾರೀಕರಣದ ನಂತರ ಶ್ರೀಮಂತರು ಇನ್ನಷ್ಟು ಶ್ರೀಮಂತ ರಾದರು. ರಾಜಕಾರಣವನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಉದಾರೀಕರಣವನ್ನು ಆರ್ಥ ವ್ಯವಸ್ಥೆಯಲ್ಲಿ ಇನ್ನಷ್ಟು ವಿಸ್ತರಿಸಿದರು. ಶ್ರೀಮಂತರ ಬೆಂಬಲಿಗರೇ ಮತ್ತೆ ಆಯ್ಕೆಯಾಗಿ ಬರಲಿ ಎಂಬ ಕಾರಣಕ್ಕೆ ಕೋಮುವಾದದ ವಿಷಬೀಜ ಬಿತ್ತುತ್ತಿದ್ದಾರೆ. ದೇಶದಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳು ತೀರಾ ಹದಗೆಟ್ಟಿವೆ. ಬಡವರ ಕೈಗೆಟುಕದಷ್ಟು ದುಬಾರಿಯಾಗಿವೆ. ಈ ವಿಷಯಗಳನ್ನು ಚರ್ಚಿಸುವ ಬದಲಾಗಿ ರಾಜಕಾರಣಿಗಳು ಧರ್ಮದ ಬಗೆಗೆ ಪುಕಾರು ಎಬ್ಬಿಸುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಸರಿಯಾದ ಆರೋಗ್ಯ ಸೇವೆ ಸಿಗದೇ ದೇಶದಲ್ಲಿ ಪ್ರತಿ ವರ್ಷ 10 ಲಕ್ಷ ಜನ ಸಾಯುತ್ತಿದ್ದಾರೆ. ಆರೋಗ್ಯಕ್ಕಾಗಿ ಖರ್ಚು ಮಾಡುತ್ತಾ ಪ್ರತಿ ವರ್ಷ 60 ಲಕ್ಷ ಜನರು ಇನ್ನಷ್ಟು ಬಡವರಾಗುತ್ತಿದ್ದಾರೆ. ನೆರೆಯ ಶ್ರೀಲಂಕಾ, ಬಾಂಗ್ಲಾದೇಶ, ಮಲೇಷಿಯಾ ದೇಶಗಳಿಗಿಂತಲೂ ಆರೋಗ್ಯ ಕ್ಷೇತ್ರ ಭಾರತದಲ್ಲಿ ಹದಗೆಟ್ಟಿದೆ.
ಸಾಮಾನ್ಯರಿಗೆ ಉನ್ನತ ಶಿಕ್ಷಣ ಸಿಗುತ್ತಿಲ್ಲ ಎಂದು ಸದನ ಸಮಿತಿಯೇ ಅಧ್ಯಯನ ನಡೆಸಿ ವರದಿ ಕೊಟ್ಟಿದೆ ಎಂದು ತಿಳಿಸಿದರು.

ಕಾರ್ಪೊರೇಟ್‌ ವ್ಯವಸ್ಥೆ ಕೋಮುವಾದವನ್ನು ರಾಜಕೀಯ ಅಸ್ತ್ರದಂತೆ ಬಳಸಿಕೊಳ್ಳುತ್ತಿದೆ. ಎನ್‌ಡಿಎ, ಯುಪಿಎ, ಎಡ ಪಕ್ಷಗಳು, ತೃತೀಯ ರಂಗ... ಹೀಗೆ ಯಾವುದೇ ಪಕ್ಷಗಳು ಅಧಿಕಾರಕ್ಕೆ ಬಂದರೂ ರಾಜಕೀಯ ವ್ಯವಸ್ಥೆ ಬದಲಾಗದು. ಆರ್‌ಬಿಐ, ಸಿಬಿಐ ದುರ್ಬಲವಾಗುತ್ತಿವೆ. ನ್ಯಾಯಾಂಗ ವ್ಯವಸ್ಥೆ ಮೇಲೆಯೂ ನಿಯಂತ್ರಣ ಹೆಚ್ಚಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸಂಘಟಿತ ವಲಯದಲ್ಲಿ ಅಸಂಘಟಿತ ಕಾರ್ಮಿಕರ ಸಂಖ್ಯೆಯನ್ನು ಹೆಚ್ಚಿಸಲಾಗುತ್ತಿದೆ. ಅಸಂಘಟಿತ ಕಾರ್ಮಿಕರ ಅಭದ್ರತೆ ಹೆಚ್ಚಿಸಲಾಗಿದೆ. ಹೀಗಾಗಿ, ಕಾರ್ಮಿಕ ಸಂಘಟನೆಗಳು ಏಕೀಕರಣ ಗೊಳ್ಳಬೇಕಿದೆ. ಹಾಗೆಯೇ ರಾಜಕೀಯ ವ್ಯವಸ್ಥೆ ಬದಲಾಯಿಸುವಂಥ ಹೋರಾಟ ರೂಪಿಸಿಕೊಳ್ಳಬೇಕು. ಆ ಮೂಲಕ ರಾಜಕೀಯ ನಾಯಕತ್ವ ಪಡೆಯಬೇಕು. ಇಲ್ಲದಿದ್ದರೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಕಾರ್ಪೊರೇಟ್‌ ವ್ಯವಸ್ಥೆ ಹಾಳುಗೆಡವಲಿದೆ ಎಂದು ಎಚ್ಚರಿಸಿದರು.

ಬಿಎಸ್‌ಎನ್‌ಎಲ್‌ ಎಂಪ್ಲಾಯಿಸ್‌ ಯೂನಿಯನ್‌ ವೃತ್ತ ಅಧ್ಯಕ್ಷ ಎಂ.ಸಿ. ಬಾಲಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಯೂನಿಯನ್‌ನ ಪದಾಧಿಕಾರಿಗಳಾದ ಬಿ.ಪಿ. ನಾರಾಯಣ, ಎಚ್‌.ವಿ. ಸುದರ್ಶನ್, ಪಿ. ಗಂಗಾಧರಪ್ಪ, ಈರಣ್ಣ, ಸುರೇಶ್‌, ಸಿ.ಕೆ.ಗುಂಡಣ್ಣ ಅವರೂ ಇದ್ದರು.

**
ಮತ್ತೊಂದು ಜಾತಿಯನ್ನು ಅನುಸರಿಸಿ ಸಾಂಸ್ಕೃತಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಬೆಳೆಯುವುದು ಸಕಾರಾತ್ಮಕ ಕೋಮುವಾದ. ಇಂಥ ಬೆಳವಣಿಗೆ ಸಮಾಜಕ್ಕೆ ಬೇಕು
- ಡಾ.ಚಂದ್ರಪೂಜಾರಿ, ಪ್ರಾಧ್ಯಾಪಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT