ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ ಕ್ಷೇತ್ರಕ್ಕೆ ಶೀಘ್ರ ಉಪ ಚುನಾವಣೆ

ಜೆಡಿಎಸ್‌ನಿಂದ ಅನಿತಾ ಕುಮಾರಸ್ವಾಮಿ ಹೆಸರು ಚಾಲ್ತಿಯಲ್ಲಿ; ಕಾಂಗ್ರೆಸ್ ಪಕ್ಷದ ನಡೆ ಬಗ್ಗೆ ಕುತೂಹಲ
Last Updated 20 ಮೇ 2018, 13:00 IST
ಅಕ್ಷರ ಗಾತ್ರ

ರಾಮನಗರ: ಇಲ್ಲಿನ ವಿಧಾನಸಭಾ ಕ್ಷೇತ್ರದಿಂದ ನಾಲ್ಕನೇ ಬಾರಿಗೆ ಆಯ್ಕೆಯಾಗಿದ್ದ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಶನಿವಾರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು.ಇದರಿಂದಾಗಿ ರಾಮನಗರ ಉಪ ಚುನಾವಣೆ ಎದುರಿಸುವುದು ಖಚಿತವಾಗಿದೆ.

ಒಬ್ಬರು ಶಾಸಕರು ಒಂದೇ ಕ್ಷೇತ್ರವನ್ನು ಪ್ರತಿನಿಧಿಸುವ ಅವಕಾಶ ಇದ್ದು, ಈ ಕಾರಣಕ್ಕೆ ಎಚ್‌ಡಿಕೆ ರಾಜೀನಾಮೆ ನೀಡುವುದು ಅನಿವಾರ್ಯವಾಗಿತ್ತು. ಹಲವು ರಾಜಕೀಯ ಲೆಕ್ಕಾಚಾರದ ಬಳಿಕ ಅಂತಿಮವಾಗಿ ಕುಮಾರಸ್ವಾಮಿ ತಮಗೆ ರಾಜಕೀಯ ಪುನರ್ಜನ್ಮ ನೀಡಿದ ಕ್ಷೇತ್ರವನ್ನೇ ಬಿಟ್ಟುಕೊಡುವ ದೃಢನಿರ್ಧಾರ ಕೈಗೊಂಡಿದ್ದಾರೆ. ಇದರಿಂದಾಗಿ ಇನ್ನು ಕೆಲವು ತಿಂಗಳುಗಳ ಒಳಗೆ ಕ್ಷೇತ್ರದಲ್ಲಿ ಮತ್ತೊಂದು ಚುನಾವಣೆಯು ನಡೆಯಲಿದೆ.

ತಮ್ಮ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಅನಿತಾ ಕುಮಾರಸ್ವಾಮಿ ಅವರನ್ನು ಚುನಾವಣೆಗೆ ನಿಲ್ಲಿಸಲಾಗುತ್ತದೆ ಎಂಬ ಮಾತುಗಳು ಹೆಚ್ಚಾಗಿ ಕೇಳಿಬರುತ್ತಿವೆ. ಕಳೆದ ಚುನಾವಣೆಯಲ್ಲಿ ಅನಿತಾ ಚನ್ನಪಟ್ಟಣದಲ್ಲಿ ಸ್ಪರ್ಧಿಸಿ ಪರಾಭವಗೊಂಡಿದ್ದರು. ಈ ಬಾರಿಯೂ ಅಲ್ಲಿಂದ ಅವರ ಸ್ಪರ್ಧೆಗೆ ಕಾರ್ಯಕರ್ತರಿಂದ ಒತ್ತಡ ಕೇಳಿಬಂದಿತ್ತು. ಆದರೆ ಕುಟುಂಬ ರಾಜಕಾರಣಕ್ಕೆ ಹೆಚ್ಚು ಅವಕಾಶ ನೀಡಬಾರದು ಎಂಬ ಕಾರಣಕ್ಕೆ ಸ್ವತಃ ಕುಮಾರಸ್ವಾಮಿ ಚನ್ನಪಟ್ಟಣದಿಂದಲೂ ಸ್ಪರ್ಧಿಸುವ ನಿರ್ಧಾರಕ್ಕೆ ಬಂದಿದ್ದರು.

ಈ ಬಾರಿ ರಾಮನಗರದಲ್ಲಿ ಅನಿತಾ ಅವರಿಗೆ ಅವಕಾಶ ಸಿಗುತ್ತದೆ ಎಂಬುದು ಇಲ್ಲಿನ ಜೆಡಿಎಸ್‌ ಕಾರ್ಯಕರ್ತರ ಅಭಿಪ್ರಾಯವಾಗಿದೆ.

ಒಂದು ವೇಳೆ ಅನಿತಾ ಅವರಿಗೆ ಟಿಕೆಟ್ ನೀಡದೇ ಹೋದರೆ ಸಾಮಾನ್ಯ ಕಾರ್ಯಕರ್ತರೊಬ್ಬರಿಗೆ ಈ ಅವಕಾಶ ಸಿಗುವ ನಿರೀಕ್ಷೆ ಇದೆ. ಯಾರಿಗೆ ಅ ಅದೃಷ್ಟ ಒಲಿಯಲಿದೆ ಎನ್ನುವ ಕುತೂಹಲವಿದೆ. ಈ ಬಗ್ಗೆ ಸದ್ಯ ಜೆಡಿಎಸ್‌ನ ಆಂತರಿಕ ವಲಯದಲ್ಲಿ ಯಾವುದೇ ಚರ್ಚೆ ನಡೆದಿಲ್ಲ.

ಸ್ಪರ್ಧೆ ಒಡ್ಡುತ್ತಾ ಕಾಂಗ್ರೆಸ್‌: ಸದ್ಯ ರಾಜ್ಯ ರಾಜಕಾರಣದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್‌ ಮೈತ್ರಿ ಮಾಡಿಕೊಂಡಿವೆ. ಹೀಗಾಗಿ ರಾಮನಗರದಲ್ಲಿ ನಡೆಯಲಿರುವ ಉಪ ಚುನಾವಣೆಯಲ್ಲಿ ಈ ಎರಡೂ ಪಕ್ಷಗಳು ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲಿವೆಯೇ ಅಥವಾ ಒಬ್ಬರು ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿ ಮತ್ತೊಬ್ಬರು ಬೆಂಬಲಕ್ಕೆ ನಿಲ್ಲರಿದ್ದಾರೆಯೇ ಎಂಬುದು ಇನ್ನಷ್ಟೇ ಸ್ಪಷ್ಟವಾಗಬೇಕಿದೆ.

ಪಕ್ಷದ ಮೂಲಗಳ ಪ್ರಕಾರ ಇಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವ ಸಾಧ್ಯತೆ ಹೆಚ್ಚಿದೆ. ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಅದಕ್ಕೆ ವಿರುದ್ಧವಾಗಿ ಅಭ್ಯರ್ಥಿಯನ್ನು ಘೋಷಣೆ ಮಾಡುವ ಸಾಧ್ಯತೆ ಕಡಿಮೆ. ವಾರದ ಹಿಂದಷ್ಟೇ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಹುಸೇನ್ ಜೆಡಿಎಸ್‌ಗೆ ತೀವ್ರ ಪೈಪೋಟಿ ಒಡ್ಡಿದ್ದರು. ಈಗ ಅವರಿಗೆ ಮತ್ತೊಂದು ಅವಕಾಶ ಸಿಗಲಿದೆಯೇ ಎನ್ನುವ ಅನುಮಾನ ಮೂಡಿದೆ.

ಚುನಾವಣೆಗೆ ನಿಲ್ಲುತ್ತಾರ ಯೋಗೇಶ್ವರ್‌?

ಪಕ್ಷ ಬಯಸಿದಲ್ಲಿ ಉಪ ಚುನಾವಣೆಗೆ ಸಿದ್ಧ ಎಂದು ಚನ್ನಪಟ್ಟಣ ಕ್ಷೇತ್ರದ ಬಿಜೆಪಿ ಪರಾಜಿತ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಮೊದಲೇ ಘೋಷಣೆ ಮಾಡಿದ್ದಾರೆ. ರಾಮನಗರದಲ್ಲಿ ಅವರು ಕುಮಾರಸ್ವಾಮಿ ಎದುರಿಗೆ ಸ್ಪರ್ಧೆ ಮಾಡಲಿದ್ದಾರ ಎನ್ನುವ ಬಗ್ಗೆ ಕುತೂಹಲವಿದೆ. ಬಿಜೆಪಿ ಸದ್ಯ ಅಧಿಕಾರ ಕಳೆದುಕೊಂಡಿರುವುದರಿಂದ ಅವರಲ್ಲಿ ಮೊದಲಿನಷ್ಟೇ ಉತ್ಸಾಹ ಉಳಿದಿದೆಯೇ ಎಂಬ ಸಂದೇಹವೂ ಇದೆ.

ಹಿಂದೆಯೂ ನಡೆದಿತ್ತು ಉಪಚುನಾವಣೆ

ಈ ಹಿಂದೆಯೂ ಕ್ಷೇತ್ರದಲ್ಲಿ ಒಮ್ಮೆ ಉಪ ಚುನಾವಣೆ ನಡೆದಿತ್ತು. ಅದು ಎಚ್.ಡಿ. ಕುಮಾರಸ್ವಾಮಿ ರಾಜೀನಾಮೆ ನೀಡಿದ ಕಾರಣದಿಂದ. 2008ರ ವಿಧಾನಸಭೆ ಚುನಾವಣೆಯಲ್ಲಿ ಇಲ್ಲಿಂದ ಎರಡನೇ ಬಾರಿಗೆ ಶಾಸಕರಾಗಿ ಕುಮಾರಸ್ವಾಮಿ ಆಯ್ಕೆಯಾದರು. ಆದರೆ ಅಧಿಕಾರ ಅವರ ಕೈ ಹಿಡಿಯಲಿಲ್ಲ. 2009ರ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ ಅವರು ರಾಮನಗರ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಅವರ ಸ್ಥಾನದಲ್ಲಿ ಜೆಡಿಎಸ್‌ ಅಭ್ಯರ್ಥಿ ಕೆ, ರಾಜು ಸ್ಪರ್ಧಿಸಿ ಗೆಲುವು ಸಾಧಿಸಿದರು.

**
ಉಪ ಚುನಾವಣೆಗೆ ಸ್ಪರ್ಧೆ ವಿಚಾರವು ಪಕ್ಷದ ವರಿಷ್ಠರಿಗೆ ಬಿಟ್ಟದ್ದು. ಅವರು ನಿಲ್ಲು ಎಂದರೆ ನಿಲ್ಲುತ್ತೇನೆ. ಇಲ್ಲವೇ ಮನೆಯಲ್ಲಿರುತ್ತೇನೆ
ಇಕ್ಬಾಲ್ ಹುಸೇನ್‌, ಕಾಂಗ್ರೆಸ್ ಪರಾಜಿತ ಅಭ್ಯರ್ಥಿ

**
ಕುಮಾರಸ್ವಾಮಿ ಅವರು ಅನಿವಾರ್ಯ ಕಾರಣಗಳಿಂದ ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದಾರೆ. ಆದರೆ ಮುಖ್ಯಮಂತ್ರಿಯಾಗಿ ಇಲ್ಲಿನ ಅಭಿವೃದ್ದಿ ಮಾಡಲಿದ್ದಾರೆ 
– ರಾಜಶೇಖರ್, ಅಧ್ಯಕ್ಷ, ಜೆಡಿಎಸ್ ತಾಲ್ಲೂಕು ಘಟಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT