ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂದಿತಾ ದಾಸ್‌ ಸಾವಧಾನದ ಹಾದಿ

Last Updated 20 ಮೇ 2018, 19:30 IST
ಅಕ್ಷರ ಗಾತ್ರ

1990 ರ ದಶಕದ ನಡುಘಟ್ಟ. ‘ಫೈರ್’ ಹಿಂದಿ ಸಿನಿಮಾ ಬಂದಾಗ ಸಂಪ್ರದಾಯಸ್ಥರು ಕನಲಿದರು. ‘ಇದೆಂಥಾ ಸಿನಿಮಾ’ ಎಂಬ ಪ್ರಶ್ನೆ ಹಾಕಿ ಹುಬ್ಬೇರಿಸಿದರು.

ಸಿನಿಮಾದ ವಸ್ತುವಿನ ಚರ್ಚೆ ಒಂದು ಕಡೆ. ಅದರಲ್ಲಿ ಅಭಿನಯಿಸಿದ್ದ ಶಬಾನಾ ಆಜ್ಮಿ ಹಾಗೂ ನಂದಿತಾ ದಾಸ್ ಆಯ್ಕೆಯ ಕುರಿತ ಅಚ್ಚರಿ ಇನ್ನೊಂದು ಕಡೆ. ನಿರ್ದೇಶಕಿ ದೀಪಾ ಮೆಹ್ತಾ ಧಾರ್ಷ್ಟ್ಯದಿಂದ ಮಾಡಿದ್ದ ಸಿನಿಮಾ ಅದು.

ಕಪ್ಪು ಯುವತಿ ನಂದಿತಾ ದಾಸ್ ಅಂಥದೊಂದು ದಿಟ್ಟ ಸಿನಿಮಾದ ಭಾಗವಾಗುವ ಮೂಲಕ ಹೊಸ ನಿರೀಕ್ಷೆಯೊಂದನ್ನು ತೇಲಿಬಿಟ್ಟಿದ್ದರು. ಅವರನ್ನು ಆಗ ಸ್ಮಿತಾ ಪಾಟೀಲ್‌ಗೆ ಹೋಲಿಸಿ ಅನೇಕರು ಬರೆದಿದ್ದರು.

ಲಕ್ಷಣವಾದ ಮುಖ, ಆತ್ಮವಿಶ್ವಾಸದ ಕಣ್ಣುಗಳು, ಬಣ್ಣದ ಬಗೆಗೆ ತುಸುವೂ ಇಲ್ಲದ ಹಿಂಜರಿಕೆ ಎಲ್ಲವೂ ಅವರು ಭಿನ್ನ ಎಂಬ ಭಾವನೆ ತಳೆಯುವಂತೆ ಮಾಡಿದ್ದವು.

ವರ್ಷಗಳು ಉರುಳಿವೆ. ನಲವತ್ತಕ್ಕೂ ಹೆಚ್ಚು ಸಿನಿಮಾಗಳ ಭಾಗವಾಗಿರುವ ನಂದಿತಾ ವೈಯಕ್ತಿಕವಾಗಿಯೂ ಸ್ಥಿತ್ಯಂತರಗಳನ್ನು ಕಂಡಿದ್ದಾರೆ. ಈಗವರು ‘ಮಂಟೊ’ ಸಿನಿಮಾ ನಿರ್ದೇಶಕಿ ಎನ್ನುವ ಕಾರಣಕ್ಕೆ ಸುದ್ದಿಯಲ್ಲಿರುವುದು.

ನವಾಜುದ್ದೀನ್ ಸಿದ್ದಿಕಿ ಸಾದತ್ ಹಸನ್ ಮಂಟೊ ಪಾತ್ರದ ಪರಕಾಯ ಪ್ರವೇಶ ಮಾಡಲು ಮಾಡಿಕೊಂಡಿರುವ ಹೋಂವರ್ಕ್‌ಗಿಂತ, ಇಂಥ ಸಿನಿಮಾ ರೂಪಿಸಲು ನಂದಿತಾ ಮಾಡಿರುವ ಅಧ್ಯಯನವೇ ಹೆಚ್ಚು ಆಸಕ್ತಿಕರ.

ಚಿತ್ರ ಕಲಾವಿದ ಜತಿನ್ ದಾಸ್ ಮಗಳು. ಲೇಖಕಿ ವರ್ಷಾ ದಾಸ್ ಪುತ್ರಿ. ರಂಗಕರ್ಮಿ. ಸಿನಿಮಾ ನಟಿ. ಶಿಕ್ಷಕಿ, ಹೋರಾಟಗಾರ್ತಿ ಹಾಗೂ ನಿರ್ದೇಶಕಿ. ಇದು ನಲವತ್ತೊಂಬತ್ತು ವಸಂತಗಳನ್ನು ಕಂಡಿರುವ ನಂದಿತಾ ದಾಸ್‌ ವ್ಯಕ್ತಿ ಪರಿಚಯ.

ಪಾಕಿಸ್ತಾನದ ಲೇಖಕ ಸಾದತ್ ಹಸನ್ ಮಂಟೊ ನೇರವಂತಿಕೆ ಹಾಗೂ ಇತಿಹಾಸವನ್ನು ತನ್ನದೇ ಸೃಜನಶೀಲ ಶೈಲಿಯಲ್ಲಿ ದಾಖಲಿಸಿರುವ ರೀತಿ ಕಂಡು ನಂದಿತಾ ಬೆರಗಾಗಿದ್ದು ಕಾಲೇಜು ದಿನಗಳಲ್ಲಿ.

ಆಮೇಲೆ ಅವರ ಅಷ್ಟೂ ಬರಹಗಳನ್ನು ಓದತೊಡಗಿದಾಗಲೇ ಅವನ್ನೆಲ್ಲ ಇಟ್ಟುಕೊಂಡು ಮುಂದೊಂದು ದಿನ ಸಿನಿಮಾ ಮಾಡಬೇಕು ಎಂಬ ಹೆಬ್ಬಯಕೆ ಮೂಡಿದ್ದು.

ಮೊದಲಿನಿಂದಲೂ ನಂದಿತಾ ಅವರದ್ದು ಸಾವಧಾನದ ನಡೆ. ಮೃಣಾಲ್ ಸೆನ್, ಅಡೂರ್ ಗೋಪಾಲಕೃಷ್ಣನ್, ಶ್ಯಾಮ್ ಬೆನೆಗಲ್, ದೀಪಾ ಮೆಹ್ತಾ, ಮಣಿರತ್ನಂ ತರಹದ ದಿಗ್ಗಜ ನಿರ್ದೇಶಕರ ಗರಡಿಯಲ್ಲಿ ಕೆಲಸ ಮಾಡಿ ಮೊದಲು ಅನುಭವ ಪಡೆದುಕೊಂಡರು. ಬಾಲ್ಯದಲ್ಲಿ ತಮ್ಮ ಕಪ್ಪು ಬಣ್ಣದ ಕಾರಣಕ್ಕೆ ಕೆಲವರು ಮಾಡಿದ್ದ ಮೂದಲಿಕೆಗಳನ್ನು ಮೀರಲು ಒಂದಿಷ್ಟು ದಿನಗಳ ಕಾಲ ಅವರು ಹೆಣಗಾಡಿದ್ದು ನಿಜವಾದರೂ ಅದೇ ಮನಸ್ಸಿನಲ್ಲಿ ಸವಾರಿ ಮಾಡಲು ಅವರು ಬಿಡಲಿಲ್ಲ.

ಅಪ್ಪ–ಅಮ್ಮ ಓದಿನ ರುಚಿ ಹತ್ತಿಸಿದ ಮೇಲೆ ನಂದಿತಾ ಅದರಲ್ಲೇ ತಮ್ಮ ಜಗತ್ತನ್ನು ಕಾಣಲಾರಂಭಿಸಿದರು. ಇಂಗ್ಲಿಷ್, ಹಿಂದಿ, ಬಂಗಾಳಿ, ಮಲಯಾಳ, ತಮಿಳು, ತೆಲುಗು, ಉರ್ದು, ಮರಾಠಿ, ಒಡಿಯಾ, ಕನ್ನಡ ಇಷ್ಟೂ ಭಾಷೆಯ ಸಿನಿಮಾಗಳಲ್ಲಿ ನಂದಿತಾ ಅಭಿನಯಿಸಲು ಕಾರಣ ಜೀವನಾನುಭವ ಹಿಗ್ಗಿಸಿಕೊಳ್ಳುವ ಉಮೇದು. ನಲವತ್ತರ ಪ್ರಾಯಕ್ಕೆ ಬರುವ ಹೊತ್ತಿಗೆ ಅವರು ‘ಫಿರಾಕ್’ ಹಿಂದಿ ಸಿನಿಮಾ ನಿರ್ದೇಶಿಸಿದರು.

ಕ್ರೌರ್ಯದ ಹಿನ್ನೆಲೆಯಲ್ಲಿನ ಮನುಷ್ಯ ಸಂಬಂಧಗಳನ್ನು ಚಿತ್ರಿಸಿದ ಚಲನಚಿತ್ರ ಅದು. ಅದನ್ನು ನೋಡಿ ಹೆಸರಾಂತ ಲೇಖಕ ಸಲ್ಮಾನ್ ರಶ್ದಿ, ‘ಕತ್ತಲಲ್ಲಿ ಮಾನವೀಯ ಪಾತ್ರಗಳ ಬೆಳಕನ್ನು ಕಾಣಿಸುವ ಪ್ರಯತ್ನವಿದು’ ಎಂದು ಶ್ಲಾಘಿಸಿದ್ದರು.

‘ನಿರ್ದೇಶಕಿಯಾಗಿ ನಿಮ್ಮ ಮಹಿಳಾ ದೃಷ್ಟಿ ಹೇಗಿರುತ್ತದೆ’ ಎಂಬ ಪ್ರಶ್ನೆ ಎದುರಾದಾಗಲೆಲ್ಲ ಕಿರಿಕಿರಿ ಅನುಭವಿಸುವ ನಂದಿತಾ, ‘ಸ್ಟೇ ಅನ್‌ಫೇರ್’ (ಕಪ್ಪಗೇ ಇರಿ) ಎಂಬ ಚಳವಳಿಯಲ್ಲೂ ಮುಂಚೂಣಿಯಲ್ಲಿ ಇದ್ದರು. ಬೆಳ್ಳಗೆ ಮಾಡುವ ಕಾಸ್ಮೆಟಿಕ್‌ಗಳ ಮಾರುಕಟ್ಟೆ ವಿಸ್ತಾರಗೊಂಡಾಗ ಅದನ್ನು ವಿರೋಧಿಸಿ ನಡೆದ ಚಳವಳಿ ಇದು. ಆಗ ನೇರವಂತಿಕೆಯ ಮಾತುಗಳಿಂದ ಅವರು ಸುದ್ದಿಯಾಗಿದ್ದರು.

ಕೆಲವು ಕಂಪನಿಗಳಿಂದ ಅವರಿಗೆ ಮಾಡೆಲ್ ಆಗುವ ಆಮಿಷಗಳ ಗಾಳ ಎದುರಾದರೂ ಅದಕ್ಕೆ ಸಿಲುಕದೇ ಹೋದದ್ದು ಅವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ. ಅವರ ಕಣ್ಣುಗಳಲ್ಲಿ ಅಡಕವಾಗಿರುವ ಅಕ್ಷರಗಳು, ಅದರ ಜೊತೆಗೆ ಬೆರೆತ ಕನವರಿಕೆಗಳು ಆಸಕ್ತಿ ಹುಟ್ಟಿಸುವಂತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT