ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮ್ಮಿಶ್ರ ಸರ್ಕಾರ: ಬೀಸುಮಾತು ಸರಿಯಲ್ಲ

Last Updated 20 ಮೇ 2018, 19:30 IST
ಅಕ್ಷರ ಗಾತ್ರ

‘ಈ ಜನಗಳಾದರೂ ಯಾರಾದರೊಬ್ಬರಿಗೆ ಸ್ಪಷ್ಟ ಬಹುಮತ ಕೊಡಬಾರದಾ, ಅಸಹ್ಯ ಎನಿಸುತ್ತದೆ’ ಎನ್ನುವುದು ರಾಜಕೀಯ ಚರ್ಚೆಯಾಗಿದೆ. ಆದರೆ ಇಂಥ ಸನ್ನಿವೇಶವೇ ಮಹತ್ವದ್ದು. ಯಾರಿಗೂ ಸ್ಪಷ್ಟ ಬಹುಮತವಿಲ್ಲದಾಗ ವ್ಯವಸ್ಥೆಯ ಒಳಗಿನ ಹುಳುಕುಗಳು ಹೊರಬರುತ್ತವೆ.

ರಾಜಕೀಯ ವಾಗ್ವಾದಗಳು ಬೆಳೆಯುತ್ತವೆ. ಅವೆಲ್ಲ ಸೇರಿ ರಾಜಕೀಯ ಚಿಂತನೆಯಾಗುತ್ತದೆ. ಆಮೇಲೆ ಅದೊಂದು ಸ್ಥಾಪಿತ ಶಾಸನವಾಗುತ್ತದೆ. ಭಾರತದ ಪ್ರಜಾಪ್ರಭುತ್ವ ಇನ್ನೂ ಪ್ರಯೋಗದ ಹಂತದಲ್ಲಿದೆ.

ಈ ಪ್ರಯೋಗಗಳ ಮೂಲಕ ಪ್ರಜಾಪ್ರಭುತ್ವ ಅದರ ಪಕ್ವತೆಯನ್ನು ಪಡೆಯುತ್ತದೆ. ಸಮಾಜವು ಶಾಶ್ವತ ಸಂಸ್ಥೆ. ರಾಜಕೀಯವು ಸಮಾಜದಿಂದ ಸೃಷ್ಟಿಯಾಗಿರುವ ಸಂಸ್ಥೆ. ತಾನು ಸೃಷ್ಟಿಸಿದ ಸಂಸ್ಥೆಯನ್ನು ಪರಿಶೀಲಿಸುವುದಕ್ಕಾಗಿ ಸಮಾಜವು ಮಾಡುವ ಯಾವ ಪ್ರಯೋಗವನ್ನೂ ಅಸಹ್ಯವೆಂದು ಭಾವಿಸುವುದು ಸೂಕ್ತ ಅಲ್ಲ.

ಭಾರತಕ್ಕೆ ಸಮ್ಮಿಶ್ರ ಸರ್ಕಾರ ಎನ್ನುವುದು ದೊಡ್ಡ ಸಮಸ್ಯೆಯಲ್ಲ. ಭಾರತದ ಸಮಾಜವೇ ಜಗತ್ತಿನ ಅತ್ಯಂತ ದೊಡ್ಡ ಸಮ್ಮಿಶ್ರ ವ್ಯವಸ್ಥೆಯಾಗಿದೆ. ಬಹುಮಟ್ಟಿಗೆ ಇಂದಿನ ಸಮಸ್ಯೆಗಳಿಗೆ ಕಾರಣ, ಸಂವಿಧಾನ ರಚನಾ ಸಭೆಯು ಸ್ಪಷ್ಟ ಬಹುಮತವಿಲ್ಲದ ಸ್ಥಿತಿಯೊಂದರ ಸಾಧ್ಯತೆಯನ್ನು ಊಹಿಸಿರುವುದು ಸಂವಿಧಾನದಲ್ಲಿ ಕಾಣದಿರುವುದು. ಈಗ ಅದನ್ನು ಸರಿಪಡಿಸಬೇಕಾದರೆ ಸಂವಿಧಾನದ ಮೂಲತತ್ವಕ್ಕೆ ಧಕ್ಕೆ ಬಾರದಂತೆಯೇ ಸರಿಪಡಿಸಬೇಕಾಗಿದೆ.

ಈ ಸಮಸ್ಯೆ ಯಾಕೆ ಬಂತು ಎಂದು ಕೇಳಿದರೆ ಅದಕ್ಕೆ ಕಾರಣ ಬಹುಪಕ್ಷೀಯ ಪದ್ಧತಿ. ದ್ವಿಪಕ್ಷೀಯ ಪದ್ಧತಿಯಲ್ಲಿ ಈ ಸಮಸ್ಯೆಯೇ ಉದ್ಭವಿಸುವುದಿಲ್ಲ. ಬಹು ಪಕ್ಷೀಯ ಪದ್ಧತಿಯಲ್ಲಿ ನಿಜವಾಗಿ ಸ್ಪಷ್ಟ ಬಹುಮತ ಪಡೆದ ಸರ್ಕಾರ ಕೂಡ ನಿಜವಾಗಿ ಬಹುಮತವನ್ನು ಹೊಂದಿರುವುದಿಲ್ಲ. ಅಂದರೆ ಒಂದು ಕ್ಷೇತ್ರದಲ್ಲಿ ಸೋತ ಐದಾರು ಅಭ್ಯರ್ಥಿಗಳಿಗೆ ಬಂದ ಮತಗಳನ್ನೆಲ್ಲ ಸೇರಿಸಿದರೆ ಸಾಮಾನ್ಯವಾಗಿ ಗೆದ್ದ ಅಭ್ಯರ್ಥಿ ಪಡೆದ ಒಟ್ಟು ಮತಗಳಿಗಿಂತ ಜಾಸ್ತಿಯಾಗುತ್ತದೆ.

ಹೀಗೆ ಗೆದ್ದ ಅಭ್ಯರ್ಥಿಗಳ ಸಂಖ್ಯೆ ಸ್ಪಷ್ಟ ಬಹುಮತದ ಸಂಖ್ಯೆಯಾಗಿದ್ದರೂ ನಿಜವಾಗಿ ಅವರನ್ನು ನಿರಾಕರಿಸಿ ಚಲಾವಣೆಯಾಗಿರುವ ಮತಗಳೇ ಜಾಸ್ತಿ ಇರುತ್ತವೆ. ಆದರೆ ಬಹುಪಕ್ಷೀಯ ಪದ್ಧತಿಯಲ್ಲಿ ನಿರಾಕರಿಸಲ್ಪಟ್ಟ ಮತಗಳಿಗೆ ಆದ್ಯತೆಯನ್ನು ಕೊಡದೆ ಇರುವ ತತ್ವವನ್ನು ಅನುಸರಿಸಬೇಕಾಗುತ್ತದೆ.

ಹಾಗೆಂದು ಬಹುಪಕ್ಷೀಯ ಪದ್ಧತಿಯನ್ನು ನಿರಾಕರಿಸುವಂತಿಲ್ಲ. ರಾಜಕೀಯ ಸ್ಥಿರತೆಗಿಂತ ಭಾರತದ ಬಹುತ್ವವನ್ನು ರಾಜಕೀಯವಾಗಿ ಪ್ರತಿನಿಧಿಸುವುದು ಮುಖ್ಯವೆಂದು ಸಂವಿಧಾನವು ಭಾವಿಸಿರುವುದರ ಪರಿಣಾಮ ಬಹುಪಕ್ಷೀಯ ಪದ್ಧತಿ. ಕಾಲಾನುಕ್ರಮದಲ್ಲಿ ಬದಲಾಗಬಾರದೆಂದೂ ಇಲ್ಲ. ಈಗ ವಿಶಾಲ ವ್ಯಾಪ್ತಿಯ ಧೋರಣೆಯ ಆಧಾರದಲ್ಲಿ ಪಕ್ಷಗಳನ್ನು ಮೂರು ವಿಭಾಗದಲ್ಲಿ ವಿಂಗಡಿಸಬಹುದು.

ಬಿಜೆಪಿ ಮತ್ತು ಅದರ ಮಾನಸಿಕತೆಗೆ ಹೊಂದುವ ಪಕ್ಷಗಳ ಕೂಟ. ಕಾಂಗ್ರೆಸ್ ಮತ್ತು ಅದರ ಮಾನಸಿಕತೆಗೆ ಹೊಂದುವ ಪಕ್ಷಗಳ ಕೂಟ. ಕಮ್ಯುನಿಸ್ಟ್ ಮತ್ತು ಅದರ ಮಾನಸಿಕತೆಗೆ ಹೊಂದುವ ಪಕ್ಷಗಳ ಕೂಟ. ಇವು ವಿಶಾಲ ವ್ಯಾಪ್ತಿಯಲ್ಲಿ ಒಟ್ಟಾದರೆ ಪಕ್ಷಗಳ ಸಂಖ್ಯೆ ಕಡಿಮೆಯಾಗುತ್ತದೆ.

ಆದರೆ ಹೀಗೆ ಒಟ್ಟುಗೂಡುವುದು ಸುಲಭವಿಲ್ಲ. ವೈಯಕ್ತಿಕ, ಸಾಮುದಾಯಿಕ, ಪ್ರಾದೇಶಿಕ ಹಿತಾಸಕ್ತಿಗಳೆಲ್ಲವೂ ಪಕ್ಷಗಳನ್ನು ಬೇರೆಬೇರೆಯಾಗಿ ಉಳಿಸುತ್ತವೆ ಮತ್ತು ಬಹುತ್ವವನ್ನು ಪ್ರತಿನಿಧಿಸುವುದು ದೇಶದ ಅವಶ್ಯಕತೆಯೂ ಆಗಿದೆ.ಈ ಎಲ್ಲ ಅಗತ್ಯಗಳನ್ನು ಪೂರೈಸುತ್ತಲೇ ಒಟ್ಟಾಗಲು ಒಂದು ದಾರಿಯನ್ನು ಕಂಡುಕೊಳ್ಳಬೇಕಾಗುತ್ತದೆ.

ಪಕ್ಷಗಳ ನಿರ್ವಹಣಾ ಶೈಲಿಯಲ್ಲಿ ವ್ಯತ್ಯಾಸಗಳಿವೆ. ಸನ್ನಿವೇಶವನ್ನು ನಿರ್ವಹಿಸಲು ಮಾತಿನ ಶಕ್ತಿಯನ್ನು ಪ್ರಧಾನವಾಗಿ ಬಳಸುವುದು ಬಿಜೆಪಿಯ ಶೈಲಿ. ಸಿದ್ಧಾಂತದ ಶಕ್ತಿಯನ್ನು ಬಳಸುವುದು ಕಮ್ಯುನಿಸ್ಟ್‌ನ ಶೈಲಿ. ಈಗ ತನ್ನಲ್ಲಿ ಚಿಂತನಶೀಲರ ಕೊರತೆಯಿಂದಾಗಿ ಏನು ಮಾಡಬೇಕೆಂದು ಗೊತ್ತಾಗದಿರುವ ಕಾಂಗ್ರೆಸ್ ಅದರ ಇತಿಹಾಸದಲ್ಲಿ ನಿರ್ವಹಣೆಗೆ ಪ್ರಧಾನವಾಗಿ ಬಳಸುತ್ತಾ ಬಂದದ್ದು ಬುದ್ಧಿಯ ಶಕ್ತಿಯನ್ನು. ಇವುಗಳ ಮಿತ್ರಕೂಟ ಎಂದಾಗ ಶೈಲಿಗಳ ಹೊಂದಾಣಿಕೆಯಾಗಬೇಕಾಗುತ್ತದೆ.

ಶೈಲಿಗಳ ಹೊಂದಾಣಿಕೆಯಾಗಬೇಕಾದರೆ ಸ್ವಭಾವಗಳ ಸಮಸ್ಯೆ ನಿವಾರಣೆಯಾಗಬೇಕು. ಉದಾಹರಣೆಗೆ ಹಿಂದೂಗಳನ್ನು ಪ್ರಧಾನವಾಗಿ ನಿರ್ದೇಶಿಸುವುದು ಬಿಜೆಪಿಯ ರಚನೆಯಲ್ಲೇ ಇರುವ ಸ್ವಭಾವ. ದಲಿತರನ್ನು ಪ್ರಧಾನವಾಗಿ ನಿರ್ದೇಶಿಸುವುದು ಬಿಎಸ್‌ಪಿಯಲ್ಲಿರುವಸ್ವಭಾವ.

ಆದರೆ ಧೋರಣಾತ್ಮಕವಾಗಿ ಭಿನ್ನವಾಗಿರುವ ಇವು ತಾತ್ವಿಕವಾಗಿ ಸಾಮಾನ್ಯ ತಳಹದಿಗೆ ಬರಲಾರವು. ಕಾಂಗ್ರೆಸ್‌ನೊಂದಿಗೆ ಬಿಎಸ್‌ಪಿ ತಾತ್ವಿಕ ತಳಹದಿಗೆ ಬರಬಲ್ಲುದು. ಆದರೆ ಅಲ್ಲಿ ಕಾಂಗ್ರೆಸ್‌ನ ಸ್ವಭಾವದ ಸಮಸ್ಯೆ ಇದೆ.

ದಲಿತರು ಮತ್ತು ಮುಸ್ಲಿಮರ ಬಗ್ಗೆ ಕೊಂಚ ಜಾಸ್ತಿ ಒಲವು ಇರಿಸಿಕೊಂಡಿದ್ದರೂ ತನ್ನ 132 ವರ್ಷಗಳ ಇತಿಹಾಸದಲ್ಲಿ ಅತ್ಯಂತ ಶ್ರೀಮಂತರಿಂದ ದಟ್ಟ ದರಿದ್ರರವರೆಗೆ, ಬ್ರಾಹ್ಮಣರಿಂದ ದಲಿತರವರೆಗೆ, ಮುಸ್ಲಿಮರಿಂದ ಯಹೂದ್ಯರವರೆಗೆ ಎಲ್ಲರನ್ನೂ ಪ್ರತಿನಿಧಿಸಿಕೊಂಡು ಬಂದ ದೇಶದ ಏಕೈಕ ಪಕ್ಷ ಅದು. ಅದು, ತಾನು ದಲಿತರನ್ನೇ ಕೇಂದ್ರೀಕರಿಸುತ್ತೇನೆ ಎಂದರೆ ಉಳಿದವರು ನಿಧಾನವಾಗಿ ಅದರಿಂದ ಕಳಚಿಕೊಳ್ಳುತ್ತಾರೆ. ಅದೇ ಸಮಯಕ್ಕೆ ಎಲ್ಲರನ್ನೂ ಪ್ರತಿನಿಧಿಸಿದ್ದರಿಂದಾಗಿಯೇ ಬಿಎಸ್‌ಪಿ ದಲಿತರಿಗೆ ಕೊಡಬಹುದಾದ್ದನ್ನು ಕೊಡಲು ಆಗಿರುವುದಿಲ್ಲ.

ಆಗ ದಲಿತರೂ ಇಡಿಯಾಗಿ ಅದರೊಂದಿಗೆ ಉಳಿದುಕೊಳ್ಳುವುದಿಲ್ಲ. ಸ್ಥಾಪಿತ ಸ್ವಭಾವದಿಂದಾಗಿ ಉಂಟಾಗುವ ಈ ರೀತಿಯ ಬಿಕ್ಕಟ್ಟುಗಳನ್ನು ಪರಿಹರಿಸಿಕೊಂಡು ಪಕ್ಷಗಳ ಒಕ್ಕೂಟ ಆಗಬೇಕಾಗುತ್ತದೆ. ಪ್ರಯೋಗಶೀಲ ಪ್ರಜಾಪ್ರಭುತ್ವವು ಪಕ್ಷಗಳಲ್ಲೂ ಪರಿವರ್ತನೆಯನ್ನು ತರುತ್ತದೆ. ಈ ರೀತಿಯ ಒಕ್ಕೂಟಗಳಾದರೆ ಪಕ್ಷಗಳೇ ಸಮ್ಮಿಶ್ರ ರೂಪದಲ್ಲಿರುತ್ತವೆ.

ಸಮ್ಮಿಶ್ರ ಸರ್ಕಾರದಲ್ಲಿ ಕೆಲಸ ಆಗುವುದಿಲ್ಲ ಎನ್ನುವಂತಹ ಬೀಸುಮಾತುಗಳು ಸರಿಯಲ್ಲ. ಸರ್ವಶಿಕ್ಷಣ ಅಭಿಯಾನದಂತಹ ಕೊಡುಗೆ, ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಂತಹ ಪರಿಹಾರವನ್ನು ಕೊಟ್ಟದ್ದು ಸಮ್ಮಿಶ್ರ ಸರ್ಕಾರಗಳೇ. ಸರ್ಕಾರ ನಡೆಸುವವರಿಗೆ ಕೊಂಚ ಕಷ್ಟವಾಗುತ್ತದೆ ನಿಜ. ಆದರೆ ಅಲ್ಲಿನ ಕಷ್ಟಗಳಿಗೆ ಕಾರಣ ನಾಯಕತ್ವದ ಸಮಸ್ಯೆಗಳು.

ಹಲವು ರಾಜ್ಯಗಳ ಪ್ರಸ್ತುತದ ಸಮಸ್ಯೆಗಳು ಯಾರು ಸಮ್ಮಿಶ್ರ ಸರ್ಕಾರ ಮಾಡಬೇಕು ಎನ್ನುವುದಾಗಿದೆ. ಇದರ ಬಗ್ಗೆ ಚರ್ಚೆಗಳು ಬೆಳೆಯಬೇಕು. ಉದಾಹರಣೆಗೆ ಆಯಾ ಪಕ್ಷಗಳು ಗೆದ್ದ ಕ್ಷೇತ್ರದಲ್ಲಿ ಅಭ್ಯರ್ಥಿಗಳಿಗೆ ಬಂದ ಒಟ್ಟೂ ಮತಗಳ ಸಂಖ್ಯೆಯಲ್ಲಿ ಯಾವ ಮೈತ್ರಿಗೆ ಜಾಸ್ತಿ ಮತಗಳು ಬಂದಿರುತ್ತವೋ ಅವರಿಗೆ ಮೊದಲ ಅವಕಾಶ ಎಂದು ಮಾಡಬಹುದು.

ಆದರೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಅದೇ ಪಕ್ಷಗಳ ಸೋತ ಅಭ್ಯರ್ಥಿಯ ಮತಗಳನ್ನು ಪರಿಗಣಿಸಬಾರದು. ಇದನ್ನು ಪರಿಗಣಿಸಿದರೆ ಸೋತ ಅಭ್ಯರ್ಥಿಗೂ ಶಾಸನಸಭೆಯಲ್ಲಿ ಹಕ್ಕು ಬಂದುಬಿಡುತ್ತದೆ. ಹೀಗೆ ಈ ರೀತಿಯ ಚರ್ಚೆಗಳ ಪರಿಣಾಮವಾಗಿ ಒಂದು ಶಾಸನ ರೂಪುಗೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT