ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌, ಜೆಡಿಎಸ್‌ ಲೆಕ್ಕಾಚಾರ ಏನು?

ದೋಸ್ತಿಯಾದ ಬೆನ್ನಲ್ಲೇ ಬಂದಿದೆ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆ
Last Updated 21 ಮೇ 2018, 5:44 IST
ಅಕ್ಷರ ಗಾತ್ರ

ಮೈಸೂರು: ಜೆಡಿಎಸ್‌ ಹಾಗೂ ಕಾಂಗ್ರೆಸ್‌ ದೋಸ್ತಿಯಾದ ಬೆನ್ನಲೇ ವಿಧಾನ ಪರಿಷತ್‌ನ ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಚುನಾವಣೆ ಎದುರಾಗಿದ್ದು, ಈ ಎರಡೂ ಪಕ್ಷಗಳ ಅಭ್ಯರ್ಥಿಗಳು ಸ್ಪರ್ಧೆಗಿಳಿದಿರುವುದು ಕುತೂಹಲ ಮೂಡಿಸಿದೆ.

ಜೆಡಿಎಸ್‌ನಿಂದ ಮರಿತಿಬ್ಬೇಗೌಡ ಹಾಗೂ ಕಾಂಗ್ರೆಸ್‌ನಿಂದ ಎಂ.ಲಕ್ಷ್ಮಣ್‌ ಕಣದಲ್ಲಿದ್ದಾರೆ. ಎರಡೂ ಪಕ್ಷಗಳು ಪ್ರತ್ಯೇಕವಾಗಿ ಚುನಾವಣೆ ಎದುರಿಸಲಿವೆಯೇ ಅಥವಾ ಇಲ್ಲೂ ಮೈತ್ರಿಗೆ ಮುಂದಾಗಲಿವೆಯೇ ಎಂಬುದು ಮತದಾರರಲ್ಲಿ ಗೊಂದಲಕ್ಕೆ ಕಾರಣವಾಗಿದೆ. ಉಭಯ ಪಕ್ಷಗಳ ನಿಲುವಿನ ಬಗ್ಗೆ ರಾಜಕೀಯ ಲೆಕ್ಕಾಚಾರ ಆರಂಭವಾಗಿದೆ. ಬಿಜೆಪಿಯಿಂದ ಬಿ.ನಿರಂಜನಮೂರ್ತಿ ಕಣಕ್ಕಿಳಿದಿದ್ದು, ಹೊಸ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.

ವಿಧಾನ ಪರಿಷತ್‌ನಲ್ಲಿ ಉಪಸಭಾಪತಿಯೂ ಆಗಿರುವ ಮರಿತಿಬ್ಬೇಗೌಡ ಅವರ ಅವಧಿ ಜೂನ್‌ 21ಕ್ಕೆ ಕೊನೆಗೊಳ್ಳಲಿದೆ. ಸತತ ನಾಲ್ಕನೇ ಬಾರಿ ಗೆಲುವಿನ ಮೇಲೆ ಕಣ್ಣಿಟ್ಟಿರುವ ಅವರು ಈಗಾಗಲೇ ನಾಮಪತ್ರ ಸಲ್ಲಿಸಿದ್ದಾರೆ.

ನಾಮಪತ್ರ ಸಲ್ಲಿಕೆಗೆ ಮೇ 22ರವರೆಗೆ ಅವಕಾಶವಿದ್ದು, ಉಮೇದುವಾರಿಕೆ ಹಿಂಪಡೆಯಲು ಮೇ 25 ಕೊನೆಯ ದಿನ. ಜೂನ್ 8ರಂದು ಮತದಾನ ನಡೆಯಲಿದ್ದು, 12ರಂದು ಮತ ಎಣಿಕೆ ಇದೆ. ದಕ್ಷಿಣ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡಿಸಿರುವ ಸರ್ಕಾರಿ, ಅನುದಾನ, ಅನುದಾನರಹಿತ ಪ್ರೌಢಶಾಲಾ, ಕಾಲೇಜು ಶಿಕ್ಷಕರು ಮತದಾನ ಮಾಡಬಹುದು. ಸುಮಾರು 21 ಸಾವಿರ ಮತದಾರರು ನೋಂದಣಿಯಾಗಿದ್ದಾರೆ. ಈ ಪೈಕಿ ಮೈಸೂರು ಹಾಗೂ ಮಂಡ್ಯದಲ್ಲಿ ಹೆಚ್ಚು ಮತದಾರರು ಇದ್ದಾರೆ.

ದಕ್ಷಿಣ ಶಿಕ್ಷಕರ ಕ್ಷೇತ್ರದ ವ್ಯಾಪ್ತಿಗೆ ಚಾಮರಾಜನಗರ, ಮೈಸೂರು, ಮಂಡ್ಯ ಮತ್ತು ಹಾಸನ ಜಿಲ್ಲೆಗಳು ಸೇರುತ್ತವೆ. ಈ ಕ್ಷೇತ್ರ ಈತನಕ ಜೆಡಿಎಸ್‌ನ ಭದ್ರಕೋಟೆಯಾಗಿದೆ. ಹೀಗಾಗಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಿಲುವು ಕುತೂಹಲ ಮೂಡಿಸಿದೆ. ಪ್ರತ್ಯೇಕವಾಗಿ ಕಣಕ್ಕಿಳಿದರೆ ಪ‍್ರಚಾರ ವೈಖರಿ ಹೇಗಿರಲಿದೆ ಎಂಬುದರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಈಗಾಗಲೇ ಉಭಯ ಪಕ್ಷಗಳಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದ್ದು, ಅಭ್ಯರ್ಥಿಗಳು ಕ್ಷೇತ್ರ ಸುತ್ತಾಟದಲ್ಲಿ ತೊಡಗಿದ್ದಾರೆ.

‘ಇನ್ನೂ ಸರ್ಕಾರ ರಚನೆ ಆಗಿಲ್ಲ. ಅಲ್ಲದೇ, ಉಮೇದುವಾರಿಕೆ ಹಿಂಪಡೆಯಲು ಮೇ 25 ಕೊನೆಯ ದಿನ. ಹೀಗಾಗಿ, ತರಾತುರಿಯಲ್ಲಿ ಹೊಂದಾಣಿಕೆ ವಿಚಾರ ನಡೆಯುವುದಿಲ್ಲ. ಕ್ಷೇತ್ರದಲ್ಲಿ ಜೆಡಿಎಸ್‌ ಪ್ರಾಬಲ್ಯ ಹೊಂದಿದ್ದು, ವರಿಷ್ಠರ ನಿರ್ಧಾರವೇ ಅಂತಿಮ’ ಎಂದು ಜೆಡಿಎಸ್‌ನ ಮರಿತಿಬ್ಬೇಗೌಡ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘18 ವರ್ಷಗಳಿಂದ ಈ ಕ್ಷೇತ್ರದಿಂದ ಆಯ್ಕೆಯಾಗಿ ಶೈಕ್ಷಣಿಕ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಕೆಲಸ ಮಾಡಿದ್ದೇನೆ‌‌. 38 ಸಾವಿರ ಶಿಕ್ಷಕರ ಹುದ್ದೆ ಖಾಲಿ ಇವೆ. ಅನುದಾನರಹಿತ ಶಾಲೆಗಳಲ್ಲಿ ಓದುತ್ತಿರುವ ಬಡಮಕ್ಕಳಿಗೆ ಸರಿಯಾದ ಸೌಲಭ್ಯ ಇಲ್ಲ. ಇಂಥ ಹಲವು ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಉದ್ದೇಶ ಹೊಂದಿದ್ದೇನೆ’ ಎಂದರು.

ಅವರು 2000ರಲ್ಲಿ ಮೊದಲ ಬಾರಿ ಕಾಂಗ್ರೆಸ್‌ನಿಂದ ಟಿಕೆಟ್‌ ಗಿಟ್ಟಿಸಿ ಯಶಸ್ವಿಯಾಗಿದ್ದರು. 2006ರಲ್ಲಿ ಪಕ್ಷೇತರರಾಗಿ ಕಣಕ್ಕಿಳಿದು ಎರಡನೇ ಬಾರಿ ಗೆಲುವು ಸಾಧಿಸಿದ್ದರು. 2012ರಲ್ಲಿ ಜೆಡಿಎಸ್‌ ಟಿಕೆಟ್‌ನಿಂದ ಮೇಲ್ಮನೆ ಪ್ರವೇಶಿಸಿದ್ದರು.

ಎಸಿಐಸಿಎಂನ ಸಂಚಾಲಕ ಎಂ.ಲಕ್ಷ್ಮಣ್ ಅವರು ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಈ ಹಿಂದೆ 2010ರಲ್ಲಿ ಪದವೀಧರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವಗೊಂಡಿದ್ದರು. 2012ರಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಶಿಕ್ಷಕರ ಕ್ಷೇತ್ರದಿಂದ ಅಲ್ಪ ಮತಗಳಿಂದ ಸೋಲು ಕಂಡಿದ್ದರು. ಇದೀಗ ಶಿಕ್ಷಕರ ಕ್ಷೇತ್ರದಿಂದ ಮತ್ತೆ ಕಾಂಗ್ರೆಸ್‌ ಟಿಕೆಟ್‌ ಗಿಟ್ಟಿಸಿದ್ದಾರೆ.

‘ನಮ್ಮ ಎದುರಾಳಿ ಜೆಡಿಎಸ್‌, ಬಿಜೆಪಿ. ಈ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ನನಗೆ ಕಾಂಗ್ರೆಸ್‌ ‘ಬಿ’ ಫಾರಂ ಲಭಿಸಿದೆ. ಎರಡೂ ಪಕ್ಷಗಳನ್ನು ಮಣಿಸುವುದೇ ನನ್ನ ಗುರಿ’ ಎಂದು ಲಕ್ಷ್ಮಣ್‌ ಪ್ರತಿಕ್ರಿಯಿಸಿದರು.‌

‘ಶಿಕ್ಷಕರಿಗೆ ಕಾಲಬಡ್ತಿ–ಮುಂಬಡ್ತಿ , ಹೆಚ್ಚುವರಿ ವೇತನ ಕೊಡಿಸುವಲ್ಲಿ ಯಶಸ್ವಿಯಾಗಿದ್ದೇನೆ. ಇದೇ ವಿಚಾರ ಇಟ್ಟುಕೊಂಡು ಮತದಾರರ ಬಳಿ ಹೋಗುತ್ತೇನೆ’ ಎಂದರು.

ಇತ್ತ ಬಿಜೆಪಿ ಅಭ್ಯರ್ಥಿ ನಿರಂಜನಮೂರ್ತಿ ಕೂಡ ಮತಯಾಚನೆಯಲ್ಲಿ ತೊಡಗಿದ್ದಾರೆ. ‘ಶಿಕ್ಷಕರ ಹಲವು ಸಮಸ್ಯೆಗಳಿಗೆ ಇನ್ನೂ ಪರಿಹಾರ ಲಭಿಸಿಲ್ಲ. ಮೈಸೂರು ವಿಶ್ವವಿದ್ಯಾಲಯಕ್ಕೆ ಕುಲಪತಿ ನೇಮಿಸಲು ಕಾಂಗ್ರೆಸ್‌ ಸರ್ಕಾರಕ್ಕೆ ಸಾಧ್ಯವಾಗಲಿಲ್ಲ. ಈ ನಿಟ್ಟಿನಲ್ಲಿ ಒತ್ತು ನೀಡಿ ಕೆಲಸ ಮಾಡುತ್ತೇನೆ’ ಎಂದು ಅವರು ತಿಳಿಸಿದರು.

**
ಚುನಾವಣೆಗೆ ಕೆಲವೇ ದಿನಗಳು ಉಳಿದಿರುವುದರಿಂದ ಹೊಂದಾಣಿಕೆ ಸಾಧ್ಯತೆ ಕಡಿಮೆ. ಈ ಬಗ್ಗೆ ಸಮನ್ವಯ ಸಮಿತಿಯೇ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕು -
ಮರಿತಿಬ್ಬೇಗೌಡ, ದಕ್ಷಿಣ ಶಿಕ್ಷಕರ ಕ್ಷೇತ್ರ, ಜೆಡಿಎಸ್‌ ಅಭ್ಯರ್ಥಿ
**

ಯಾವುದೇ ಕಾರಣಕ್ಕೂ ಹೊಂದಾಣಿಕೆ ಇಲ್ಲ. ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿಯು ಸರ್ಕಾರ ರಚನೆಗೆ ಮಾತ್ರ ಸೀಮಿತವಾಗಿದ್ದು, ಚುನಾವಣೆ ಪೈಪೋಟಿಗೆ ಅಲ್ಲ
- ಎಂ.ಲಕ್ಷ್ಮಣ್‌, ದಕ್ಷಿಣ ಶಿಕ್ಷಕರ ಕ್ಷೇತ್ರ, ಕಾಂಗ್ರೆಸ್‌ ಅಭ್ಯರ್ಥಿ

**
ಜೆಡಿಎಸ್‌, ಕಾಂಗ್ರೆಸ್‌ ಮೈತ್ರಿಯಿಂದ ಮತದಾರರು ಗೊಂದಲಕ್ಕೆ ಒಳಗಾಗಿದ್ದಾರೆ. ಆದರೆ, ನಾನು ಯಾರ ವಿರುದ್ಧವೂ ಟೀಕೆ ಮಾಡದೆ ಚುನಾವಣೆ ಎದುರಿಸುತ್ತೇನೆ
- ಬಿ.ನಿರಂಜನಮೂರ್ತಿ‌, ದಕ್ಷಿಣ ಶಿಕ್ಷಕರ ಕ್ಷೇತ್ರ, ಬಿಜೆಪಿ ಅಭ್ಯರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT