ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದಲಾವಣೆ ಹಾದಿಯಲ್ಲಿ ವಿಐಎಸ್ಎಲ್ ಕಾರ್ಖಾನೆ

ನೂತನ ಇಡಿ ನೇಮಕ l ಉನ್ನತ ಮಟ್ಟದ ಸಮಿತಿ ಭೇಟಿ l ಕೆಲಸ ನೀಡಲು ಆಗ್ರಹ
Last Updated 21 ಮೇ 2018, 10:14 IST
ಅಕ್ಷರ ಗಾತ್ರ

ಭದ್ರಾವತಿ: ಕೇಂದ್ರ ಉಕ್ಕು ಸಚಿವ ಚೌಧರಿ ಬೀರೇಂದ್ರ ಸಿಂಗ್ ಭೇಟಿ ನಂತರ ಇಲ್ಲಿನ ವಿಐಎಸ್ಎಲ್ ಕಾರ್ಖಾನೆಯು ಆಡಳಿತಾತ್ಮಕ ವಿಷಯದಲ್ಲಿ ಒಂದಿಷ್ಟು ಬದಲಾವಣೆ ಕಂಡಿದೆ.

ಈ ವರ್ಷದ ಮಾರ್ಚ್ 16ರಂದು ಕಾರ್ಖಾನೆಗೆ ಭೇಟಿ ನೀಡಿದ್ದ ಕೇಂದ್ರ ಸಚಿವರು ಆಗಿನ ಸಂಸದ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ವಿವಿಧ ಘಟಕಗಳನ್ನು ಖುದ್ದು ಪರಿಶೀಲಿಸಿ ಉತ್ಪಾದನೆ ಮಾಡುವತ್ತ ಅನುಸರಿಸಬೇಕಾದ ಕ್ರಮಗಳ ಕುರಿತಂತೆ ಚರ್ಚೆ ನಡೆಸಿದ್ದರು.

ಭೇಟಿ ವೇಳೆ ಕಾರ್ಮಿಕ ಸಂಘ, ಅಧಿಕಾರಿಗಳ ಸಂಘ ಹಾಗೂ ಗುತ್ತಿಗೆ ಕಾರ್ಮಿಕರ ಜತೆ ಮಾತುಕತೆ ನಡೆಸಿದ್ದ ಅವರು ತುರ್ತು ಅಗತ್ಯದ ವಿಷಯಗಳ ಕುರಿತು ಮನವಿಗಳನ್ನು ಸ್ವೀಕರಿಸಿದ್ದರು.

ಕಾಯಂ ಇಡಿ: ಕಾರ್ಖಾನೆ ಆಡಳಿತ ನಿರ್ವಹಣೆ ಮಾಡಲು ಮೂರ್ನಾಲ್ಕು ವರ್ಷಗಳಿಂದ ಕಾಯಂ ಕಾರ್ಯಪಾಲಕ ನಿರ್ದೇಶಕರ ನೇಮಕವಾಗದೆ ಇದ್ದುದರಿಂದ ಪ್ರಭಾರಗಳು ಅದರ ನಿರ್ವಹಣೆ ನಡೆಸಿದ್ದರು.

ಸಚಿವರಿಗೆ ಸಲ್ಲಿಸಿದ ಬೇಡಿಕೆ ಪಟ್ಟಿಯಲ್ಲಿ ಪ್ರಮುಖವಾದ ಸಂಗತಿಯನ್ನು ಕೇಂದ್ರ ಉಕ್ಕು ಪ್ರಾಧಿಕಾರ ಪೂರೈಸಿದ್ದು, ಈಗ ಕಾಯಂ ಎಕ್ಸಿಕ್ಯೂಟಿವ್‌ ಡೈರೆಕ್ಟರ್‌ ಆಗಿ ವಿವೇಕ್ ಗುಪ್ತಾ ಅವರನ್ನು ನೇಮಕ ಮಾಡಿರುವುದು ಒಳ್ಳೆಯ ಬೆಳವಣಿಗೆ’ ಎಂಬುದು ಜನರ ಅನಿಸಿಕೆ.

ಯಾವುದೇ ನಿರ್ಧಾರ ತೆಗೆದುಕೊಳ್ಳಲಾರದ ಪರಿಸ್ಥಿತಿಯಲ್ಲಿದ್ದ ಕಾರ್ಖಾನೆಯಲ್ಲಿ ಈಗ ಅಧಿಕಾರಿ ನೇಮಕ ಒಳ್ಳೆಯ ಬೆಳವಣಿಗೆ ಎನ್ನುತ್ತಾರೆ ಬಿಎಂಎಸ್ ಜಿಲ್ಲಾ ಕಾರ್ಯದರ್ಶಿ ಎಚ್.ಎಲ್.ವಿಶ್ವನಾಥ.

ಮತ್ತೊಂದು ಸರ್ವೆ: ‘ಈ ಹಿಂದೆ ಕಾರ್ಖಾನೆ ಪುನಶ್ಚೇತನ ಸಂಬಂಧ ಹಲವು ಖಾಸಗಿ ಕಂಪನಿಗಳು ವರದಿ ಸಲ್ಲಿಸಿದ್ದವು. ಅದರ ಆಧಾರದ ಮೇಲೆ ಯಾವುದೇ ನಿರ್ಧಾರ ಮಾಡಲು ಸಾಧ್ಯವಿಲ್ಲ’ ಎಂದು ಭೇಟಿ ವೇಳೆ ಹೇಳಿದ್ದ ಕೇಂದ್ರ ಸಚಿವರು, ‘ಒಂದು ತಿಂಗಳೊಳಗೆ ಮತ್ತೊಮ್ಮೆ ಖಾಸಗಿ ಕಂಪನಿ ಕಳುಹಿಸಿ ವರದಿ ತರಿಸಿಕೊಳ್ಳಲಾಗುವುದು’ ಎಂಬ ಭರವಸೆ ನೀಡಿದ್ದರು. ಅದಕ್ಕೆ ಪೂರಕವೆಂಬಂತೆ ಕಳೆದ ತಿಂಗಳು ಮೆಕಾನ್ ಹೆಸರಿನ ಖಾಸಗಿ ಸಂಸ್ಥೆ ಹಾಗೂ ಭಾರತೀಯ ಉಕ್ಕು ಪ್ರಾಧಿಕಾರದ ತಜ್ಞರ ಸಮಿತಿ ಕಾರ್ಖಾನೆಗೆ ಭೇಟಿ ನೀಡಿ ಮೂರು ದಿನಗಳ ಕಾಲ ಸತತ ಅಧ್ಯಯನ ನಡೆಸಿ ವರದಿ ಸಿದ್ಧಪಡಿಸಿದೆ.

ಈ ವರದಿಯ ಆಧಾರದ ಮೇಲೆ ಭವಿಷ್ಯದಲ್ಲಿ ಕಾರ್ಖಾನೆಗೆ ಅಗತ್ಯ ಇರುವ ಬೇಡಿಕೆ ಪೂರೈಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮುಂದಿನ ಕ್ರಮ ಜರುಗಿಸಲಿದೆ ಎಂದು ಸ್ವತಃ ಸಚಿವರು ಹೇಳಿದ್ದರಿಂದ ತಜ್ಞರ ಸಮಿತಿಯ ವರದಿಯು ಮಹತ್ವ ಪಡೆದಿದೆ.

ತಾತ್ಕಾಲಿಕ ಶಮನ: ಗುತ್ತಿಗೆ ಕಾರ್ಮಿಕರ ಕೆಲಸ ಕಡಿತ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವರ ಭೇಟಿ ನಂತರ ಒಂದಿಷ್ಟು ಸಮಾಧಾನಕರ ಬೆಳವಣಿಗೆ ಕಂಡರೂ ಕೆಲಸ ಕಳೆದುಕೊಂಡ 36 ಗುತ್ತಿಗೆ ಕಾರ್ಮಿಕರ ಸೇರ್ಪಡೆ ಸಂಬಂಧ ಸ್ಪಷ್ಟ ನಿಲುವು ಬಾರದಿರುವುದು ಅಸಮಾಧಾನ ಹೆಚ್ಚಿಸಿದೆ.

ಮೂರು ತಿಂಗಳ ಕಾಲ ಇರುವ ಗುತ್ತಿಗೆ ಕಾರ್ಮಿಕರನ್ನು ಮುಂದುವರಿಸುವ ಪ್ರಸ್ತಾವಕ್ಕೆ ಸಚಿವರ ಭೇಟಿ ನಂತರ ಒಪ್ಪಿಗೆ ಸಿಕ್ಕಿದ್ದು, ಅದು ಮೇ ಅಂತ್ಯಕ್ಕೆ ಮುಕ್ತಾಯವಾಗಲಿದೆ. ಅದನ್ನು ಪುನಃ ಮುಂದುವರಿಸಬೇಕು ಎನ್ನುವ ಕೂಗು ಎದ್ದಿದೆ. ನೂತನ ಇಡಿ  ಅವರನ್ನು ಭೇಟಿ ಮಾಡಿರುವ ಗುತ್ತಿಗೆ ಕಾರ್ಮಿಕರ ಸಂಘದ ಪದಾಧಿಕಾರಿಗಳು ತಿಂಗಳ ಅಂತ್ಯದೊಳಗೆ ನಿರ್ಧಾರ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ.

ಇದಕ್ಕೆ ಆಡಳಿತ ಮಂಡಳಿ ಬಜೆಟ್ ಇಲ್ಲ ಎಂದು ನೀಡಿರುವ ಉತ್ತರ ಗುತ್ತಿಗೆ ಕಾರ್ಮಿಕರ ಹೋರಾಟ ಕಿಚ್ಚನ್ನು ಹೆಚ್ಚು ಮಾಡಿದೆ. ಈ ಸಂಬಂಧ ನಡೆದಿರುವ ಪ್ರಯತ್ನಗಳಿಗೆ ಫಲ ಸಿಗದಿದ್ದಲ್ಲಿ ಹೋರಾಟದ ತೀವ್ರತೆ ಹೆಚ್ಚುವ ಸಾಧ್ಯತೆ ಇದೆ ಎನ್ನುತ್ತಾರೆ ಗುತ್ತಿಗೆ ಕಾರ್ಮಿಕರ ಸಂಘದ ಸುರೇಶ್.

ಗುತ್ತಿಗೆ ಕಾರ್ಮಿಕರ ಭವಿಷ್ಯವನ್ನು ರಕ್ಷಿಸುವ ಸಲುವಾಗಿ ಈಗಾಗಲೇ ಪಕ್ಷದ ಮುಖಂಡರಿಗೆ ಮನವಿ ಮಾಡಲಾಗಿದ್ದು, ಉತ್ತಮ ಫಲಿತಾಂಶ ಬರುವ ಸಾಧ್ಯತೆ ಇದೆ. ಇದರಲ್ಲಿ ಯಾವುದೇ ಗೊಂದಲವಿಲ್’ ಎನ್ನುತ್ತಾರೆ ಬಿಜೆಪಿ ಮುಖಂಡ ಜಿ.ಧರ್ಮಪ್ರಸಾದ್.

ಕೇಂದ್ರ ಸಚಿವರ ಭೇಟಿ ನಂತರ ಬೇಡಿಕೆಗೆ ತಕ್ಕಂತೆ ಒಂದಿಷ್ಟು ಹೊಸ ಬದಲಾವಣೆ ನಡೆದರೂ ಅಧಿಕ ಸಂಖ್ಯೆಯಲ್ಲಿರುವ ಗುತ್ತಿಗೆ ಕಾರ್ಮಿಕರ ಸಮಸ್ಯೆ ಪರಿಹಾರವಾದಲ್ಲಿ ಮಾತ್ರ ಕ್ಷೇತ್ರದ ಆರ್ಥಿಕ ಮಟ್ಟ ಸುಧಾರಿಸಲಿದೆ ಎಂಬುದು ಜನರ ಅಭಿಪ್ರಾಯ.

**
ಗುತ್ತಿಗೆ ಕಾರ್ಮಿಕರನ್ನು ಮುಂದುವರೆಸಲು ಈಗಾಗಲೇ ಮನವಿ ಸಲ್ಲಿಸಿದ್ದು, ಇದು ಈಡೇರದಿದ್ದಲ್ಲಿ ಹೋರಾಟ ಮಾಡಲು ನಾವು ಸಿದ್ಧರಿದ್ದೇವೆ
ಸುರೇಶ್, ಅಧ್ಯಕ್ಷರು, ವಿಐಎಸ್ಎಲ್ ಗುತ್ತಿಗೆ ಕಾರ್ಮಿಕರ ಸಂಘ

–ಕೆ.ಎನ್. ಶ್ರೀಹರ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT