ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನ ಸಂಚಾರಕ್ಕೂ ಸಂಕಷ್ಟಮಯ ರಸ್ತೆ

ಜನಸಂದಣಿ ಮಾರ್ಗದಲ್ಲಿ ದೂಳು ದುಮ್ಮಾನ ಕೇಳುವವರಿಲ್ಲ!
Last Updated 21 ಮೇ 2018, 11:27 IST
ಅಕ್ಷರ ಗಾತ್ರ

ರಾಯಚೂರು: ನಗರದ ಇನ್‌ಫೆಂಟ್ ಜೀಸಸ್ ಶಾಲೆಯ ಬಳಿ ಬೀಜನಗೆರಾ ಮಾರ್ಗದಿಂದ ಬೊಳಮಾನದೊಡ್ಡಿ ಮಾರ್ಗಕ್ಕೆ ಸಂಪರ್ಕಿಸುವ ರಸ್ತೆಯು ಸಂಪೂರ್ಣ ಹಾಳುಬಿದ್ದು, ನೀರಿಲ್ಲದ ಕೆರೆಯಂತೆ ಕಾಣುತ್ತಿದೆ. ಜನರು ನಡೆದುಕೊಂಡು ಹೋಗುವುದು ಕೂಡ ಸಂಕಷ್ಟಮಯವಾಗಿದೆ.

ಕಚ್ಚಾರಸ್ತೆಗಿಂತಲೂ ಕರಕಷ್ಟದ ರಸ್ತೆ ಇದು. ಈ ಮಾರ್ಗದಿಂದ ನಡೆದುಕೊಂಡು ಹೋಗುವ ಜನರಿಗೆ, ಬೈಕ್ ಹಾಗೂ ಇನ್ನಿತರೆ ತೆರೆದ ವಾಹನಗಳಲ್ಲಿ ಹೋಗುವವರಿಗೆ ದೂಳಿನ ಮಜ್ಜನವಾಗುತ್ತದೆ. ದೂಳಿನಿಂದ ಅವೃತವಾಗುವ ಈ ರಸ್ತೆಗೆ ಹೊಂದಿಕೊಂಡಿರುವ ಜನವಸತಿಗಳು ಸದಾ ಬಾಗಿಲು ಮುಚ್ಚಿಕೊಂಡು ಇರಬೇಕಾಗಿದೆ. ಇಡೀ ರಸ್ತೆಯು ಕಿತ್ತುಹೋಗಿ ಭಾರಿ ಅಗಲದ ತಗ್ಗುಗಳು ನಿರ್ಮಾಣವಾಗಿವೆ. ವಾಹನ ಸವಾರರು ತಗ್ಗುಗಳಲ್ಲಿ ರಸ್ತೆ ಹುಡುಕಿಕೊಂಡು ಸಾಗಬೇಕು. ಯಾಮಾರಿ ವಾಹನ ಓಡಿಸಿದರೆ, ವಾಹನಗಳು ಜಖಂ ಆಗುವುದಲ್ಲದೆ, ಆಯತಪ್ಪಿ ಅಪಘಾತಕ್ಕೀಡಾಗಬೇಕಾಗುತ್ತದೆ.

ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಂದ ಹಲವು ವರ್ಷಗಳಿಂದ ದಿವ್ಯ ನಿರ್ಲಕ್ಷ್ಯಕ್ಕೆ ಒಳಗಾದ ರಸ್ತೆಗೆ ದುರಸ್ತಿ ಭಾಗ್ಯ ಬರುತ್ತಿಲ್ಲ. ದಿನದಿಂದ ದಿನಕ್ಕೆ ಸಮಸ್ಯೆಯ ಆಳ ಹೆಚ್ಚಾಗುತ್ತಿದ್ದರೂ ಜನರ ಗೋಳು ಕೇಳುವವರಿಲ್ಲ.

ಬೇಸಿಗೆಯಲ್ಲಿ ದೂಳಿನ ಸಮಸ್ಯೆ ಯಾದರೆ, ಮಳೆಗಾಲದಲ್ಲಿ ವಾಹನಗಳು ಸಂಚರಿಸುವುದು ಅಸಾಧ್ಯ. ತಗ್ಗುಗಳಲ್ಲಿ ನೀರು ಸಂಗ್ರಹಗೊಂಡು, ರಸ್ತೆ ಎಲ್ಲಿದೆ ಎನ್ನುವುದೇ ಗೊತ್ತಾಗುವುದಿಲ್ಲ. ರಸ್ತೆಯ ಆಳ, ಅಗಲದ ಅರಿವಿಲ್ಲದವರು ಸಂಚರಿಸಿ ಪಜೀತಿಗೆ ಅನೇಕರು ಒಳಗಾಗುತ್ತಾರೆ. ಇಷ್ಟೊಂದು ಸಮಸ್ಯಾತ್ಮಕವಾಗಿರುವ ಈ ರಸ್ತೆ ಸುಧಾರಣೆಗೆ ಕನಿಷ್ಠ ಕಾಯಕಲ್ಪವೂ ಆಗಿಲ್ಲ.

ಜವಾಹರ ನಗರ, ವಾಸವಿ ನಗರ ಸೇರಿದಂತೆ ಬೊಳಮಾನದೊಡ್ಡಿ ಮಾರ್ಗದಲ್ಲಿರುವ ಬಡಾವಣೆಗಳಿಗೆ ಹೋಗುವವರಿಗೆ ಇದು ಪ್ರಮುಖ ರಸ್ತೆ. ದೂಳಿನಿಂದ ಕೂಡಿದ ಈ ರಸ್ತೆ ಸುಧಾರಣೆಗಾಗಿ ವಿವಿಧ ಸಂಸ್ಥೆಗಳು ನಗರಸಭೆಗೆ ಒತ್ತಾಯಿಸುತ್ತಾ ಬಂದಿವೆ. ಜನರ ಬೇಡಿಕೆಗೆ ಸೂಕ್ತ ಸ್ಪಂದನೆ ಮಾತ್ರ ಇಲ್ಲಿಯವರೆಗೆ ಸಿಗುತ್ತಿಲ್ಲ. ಶಾಲಾ, ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಬೆಳಿಗ್ಗೆ ದೂಳುಮಯ ವಾತಾವರಣದಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ. ವಯೋವೃದ್ಧರು ಈ ರಸ್ತೆ ಮೂಲಕ ನಡೆದುಕೊಂಡು ಹೋಗುವುದೇ ದುಸ್ತರ. ದೂಳಿನಲ್ಲಿ ರಸ್ತೆಯೆ ಕಾಣುವುದಿಲ್ಲ!

**
ಹೊಸ ಮತ್ತು ಹಳೇ ಬಡಾವಣೆ ಗಳಿಗೆ ಹೋಗುವ ಜನರು ಪ್ರತಿನಿತ್ಯ ಸಂಕಷ್ಟ ಅನುಭವಿಸುತ್ತಿದ್ದಾರೆ. ನಗರಸಭೆಯು ಈ ಬಗ್ಗೆ ಯಾವ ಕ್ರಮವನ್ನೂ ಕೈಗೊಳ್ಳುತ್ತಿಲ್ಲ
ಎಚ್. ಮಾರುತಿ, ವಾಸವಿ ನಗರ ನಿವಾಸಿ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT