ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಂತುರು ಮಳೆ; ಕುಸಿದ ಉಪ್ಪು ತಯಾರಿಕೆ

ಈವರೆಗೆ ಎಂಟು ಸಾವಿರ ಟನ್ ಉಪ್ಪು ತಯಾರಿ
Last Updated 21 ಮೇ 2018, 13:06 IST
ಅಕ್ಷರ ಗಾತ್ರ

ಕಾರವಾರ: ಕಳೆದ ಕೆಲವು ದಿನಗಳಿಂದ ಬರುತ್ತಿರುವ ತುಂತುರು ಮಳೆ ಗೋಕರ್ಣದ ಸಾಣಿಕಟ್ಟಾದಲ್ಲಿ ಉಪ್ಪು ತಯಾರಿಕೆ ಮೇಲೆ ಪರಿಣಾಮ ಬೀರಿದೆ. ಬಿಸಿಲು ಇದ್ದರೂ ಮಳೆ ಕಾರಣ ಉತ್ಪಾದನೆಯಲ್ಲಿ ಕುಸಿತಕಂಡಿದೆ.

ಇಲ್ಲಿ ಮೂರು ಶತಮಾನಗಳಿಂದ ಉಪ್ಪು ತಯಾರಿಸಲಾಗುತ್ತಿದೆ. ನೈಸರ್ಗಿಕವಾದ ಅಯೋಡಿನ್‌, ಕಬ್ಬಿಣದ ಅಂಶ ಹೊಂದಿರುವ  ಕಾರಣ ಇಡೀ ದಕ್ಷಿಣ ಭಾರತದಲ್ಲೇ ಹೆಚ್ಚು ಬೇಡಿಕೆ ಹೊಂದಿರುವ ಉಪ್ಪು ಇದಾಗಿದೆ.

ಮಳೆಯಿಂದ ಹಿನ್ನಡೆ: ‘ಇದು ಕೇವಲ 100 ದಿನಗಳ ಪ್ರಕ್ರಿಯೆ. ಆದರೆ, 2 ಮಿ.ಮೀ.ಗಿಂತ ಹೆಚ್ಚು ಮಳೆ ಬಂದರೆ ಉತ್ಪಾದನೆಗೆ ಸ್ವಲ್ಪ ಹಿನ್ನಡೆಯಾಗುತ್ತದೆ. ಈ ಬಾರಿ ಬಂದ ಗಾಳಿ, ಮಳೆಯಿಂದಾಗಿ ಸದ್ಯ 8 ಸಾವಿರ ಟನ್‌ಗೆ ಉತ್ಪಾದನೆ ಬಂದು ನಿಂತಿದೆ’ ಎನ್ನುತ್ತಾರೆ ನಾಗರಬೈಲ್‌ ಉಪ್ಪು ಮಾಲೀಕರ ಸಹಕಾರ ಸಂಘದ ಅಧ್ಯಕ್ಷ ಅರುಣ್‌ ನಾಡಕರ್ಣಿ.

‘ರಾಜ್ಯದ ಅತಿ ಹಳೆಯ ಮತ್ತು ಉಪ್ಪು ಉತ್ಪಾದನೆಯ ಬೃಹತ್ ಪ್ರದೇಶ ಇದಾಗಿದೆ. ಇಲ್ಲಿ 1720ರಿಂದ ನಿರಂತರವಾಗಿ ಉಪ್ಪನ್ನು ತಯಾರಿಸಲಾಗುತ್ತದೆ. ಒಟ್ಟು 565 ಎಕರೆ ಪ್ರದೇಶವನ್ನು ಉಪ್ಪು ತಯಾರಿಯ ವಿವಿಧ ಪ್ರಕ್ರಿಯೆಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಅದರಲ್ಲಿ 40 ಎಕರೆಯಲ್ಲಿ ಉಪ್ಪನ್ನು ಉತ್ಪಾದಿಸಲಾಗುತ್ತದೆ’ ಎನ್ನುತ್ತಾರೆ ಅವರು.

‘ಬೃಹತ್ ಕಂಪನಿಗಳು ವಿವಿಧ ಹೆಸರಿನಲ್ಲಿ ಶುದ್ಧ ಅಯೋಡಿನ್‌ಯುಕ್ತ ಹರಳು ಉಪ್ಪು ಎಂದು ಪ್ರಚಾರ ನೀಡುತ್ತ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಆದರೂ ಅವು ಇಲ್ಲಿನ ನೈಸರ್ಗಿಕ ಉಪ್ಪಿಗೆ ಸರಿಸಮಾನವಾಗಿಲ್ಲ. ಯಾವುದೇ ವ್ಯಾಪಕ ಪ್ರಚಾರವಿಲ್ಲದೇ ಇದ್ದರೂ ಇಲ್ಲಿನ ಉಪ್ಪಿಗೆ ಬೇಡಿಕೆ ಕುಸಿದಿಲ್ಲ. ಧಾರವಾಡ, ಶಿವಮೊಗ್ಗ ಹಾಗೂ ಬೆಳಗಾವಿ ಜಿಲ್ಲೆಗಳ ಅರ್ಧ ಭಾಗಕ್ಕೆ ಇಲ್ಲಿನ ಉಪ್ಪು ಸರಬರಾಜಾಗುತ್ತದೆ’ ಎಂದರು.

**
ಅಂದಾಜು 600 ಮಂದಿ ಉಪ್ಪು ತಯಾರಿಕೆಯಲ್ಲಿ ಕಾರ್ಯನಿರ್ವಹಿಸುತ್ತಾರೆ. ಅಘನಾಶಿನಿ ನದಿಯ ನೀರನ್ನು ಬಳಸಿಕೊಂಡು, ಯಾವುದೇ ಬೇರೆ ಪ್ರಕ್ರಿಯೆಗಳಿಲ್ಲದೇ ನೈಸರ್ಗಿಕವಾಗಿ ತಯಾರಿಸಲಾಗುತ್ತದೆ
– ಅರುಣ್ ನಾಡಕರ್ಣಿ, ನಾಗರಬೈಲ್‌ ಉಪ್ಪು ಮಾಲೀಕರ ಸಹಕಾರ ಸಂಘದ ಅಧ್ಯಕ್ಷ

ಅಂಕಿ – ಅಂಶ

250 ಟನ್
ದಿನಕ್ಕೆ ಉತ್ಪಾದನೆ

10 ಸಾವಿರ ಟನ್‌
ಪ್ರತಿವರ್ಷ ಸರಾಸರಿ ಉತ್ಪಾದನೆ

12 ಸಾವಿರ ಟನ್
ಕಳೆದ ವರ್ಷದ ಉತ್ಪಾದನೆ

40 ಎಕರೆ
ಉಪ್ಪು ಉತ್ಪಾದನಾ ಪ್ರದೇಶ

⇒–ದೇವರಾಜ ನಾಯ್ಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT