ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸುಗಳಿಗೆ ಹಸಿ ಹುಲ್ಲು

Last Updated 21 ಮೇ 2018, 19:30 IST
ಅಕ್ಷರ ಗಾತ್ರ

ಡಾ. ಎಲ್.ಮಂಜುನಾಥ

ಬಹುವಾರ್ಷಿಕ ಸುಧಾರಿತ ಹಸಿರು ಮೇವು ಎಂದೊಡನೆ ಬಹುತೇಕ ಎಲ್ಲೆಡೆ ಕಾಣುವುದು ನೇಪಿಯರ್ ಹುಲ್ಲು. ಅತ್ಯುತ್ತಮ ಇಳುವರಿ ಕೊಡುವುದು ಹಾಗೂ ನಿರ್ವಹಣಾ ವೆಚ್ಚ ಕಡಿಮೆ ಇರುವುದು ಇದಕ್ಕೆ ಕಾರಣ. ಆದರೆ ಹುಲ್ಲು ದಪ್ಪ ಬೆಳದರೆ ಕಡ್ಡಿಯನ್ನು ದನಗಳು ತಿನ್ನದೇ ಬಿಡುವುದಿದೆ. ಎಲೆಗಳು ಸ್ವಲ್ಪ ಒರಟೂ ಹೌದು. ಮಿಗಿಲಾಗಿ ನೀರಾವರಿ ಸೌಲಭ್ಯವಿರುವ ರೈತರಿಗೆ ಮಾತ್ರ ಇದು ಸೀಮಿತ. ಈ ಮಿತಿಯನ್ನು ದಾಟಿದ ಉತ್ತಮ ಇಳುವರಿ ಕೊಡುವ, ಮೃದುವಾದ, ನೀರಾವರಿ ಮತ್ತು ಮಳೆಯಾಶ್ರಿತ ಪ್ರದೇಶಗಳಿಗೂ ಒಗ್ಗುವ, ಜನಮನ ಗೆದ್ದಿರುವ ಬಹುವಾರ್ಷಿಕ ಸುಧಾರಿತ ಮೇವಿನ ಜೋಳದ ತಳಿಗಳೆಂದರೆ ಸಿ.ಒ.ಎಫ್‌.ಎಸ್‌. 29 ಹಾಗೂ ಅದರ ನೂತನ ಆವೃತ್ತಿ ಸಿ.ಒ.ಎಫ್‌.ಎಸ್‌. 31. ಈ ಹುಲ್ಲನ್ನು ಬೆಳೆದಿರುವ ರೈತರು, ಅದರ ಇಳುವರಿ ಕುರಿತು ತೃಪ್ತಿ ವ್ಯಕ್ತಪಡಿಸಿದ್ದಾರೆ.

ಹಸಿರು ಮೇವೆಂದರೆ ಜಾನುವಾರುಗಳಿಗೆ ಪಂಚಪ್ರಾಣ. ರುಚಿಯಾಗಿರುವ ಹಸಿರು ಮೇವು ಜಾನುವಾರುಗಳ ಹೊಟ್ಟೆಯಲ್ಲಿ ಸುಲಭವಾಗಿ ಜೀರ್ಣ ಆಗುವುದು. ಪೋಷಕಾಂಶಗಳು ಹಾಗೂ ಜೀವಸತ್ವಗಳ ಆಗರವಾಗಿರುವ ಇದರ ಸೇವೆನೆಯಿಂದ ರಾಸುಗಳ ಆರೋಗ್ಯ ಉತ್ತಮವಾಗುವುದು. ಮಳೆಗಾಲದಲ್ಲಿ ಪ್ರಕೃತಿಯ ಉಡುಗೊರೆಯಾಗಿ ಎಲ್ಲಾ ರಾಸುಗಳಿಗೆ ಹಸಿರು ಮೇವು ಸಿಗುವುದು. ರೈತರು ತಮ್ಮ ರಾಸುಗಳನ್ನು ಹೊರಗಡೆ ಮೇಯಿಸುವುದರ ಜೊತೆಗೆ ಹೊಲಗಳಲ್ಲಿ ಸಿಗುವ ಮತ್ತು ಬದುಗಳಲ್ಲಿ ಬೆಳೆದಿರುವ ಹುಲ್ಲನ್ನು ತಂದು ಅವುಗಳಿಗೆ ನೀಡುವರು. ಹಲವರು ನಾಲ್ಕಾರು ಗುಂಟೆ ಜಮೀನಿನಲ್ಲಿ ಮೇವಿಗೆಂದೇ ಗೋವಿನ ಜೋಳ ಅಥವಾ ಇಬ್ಬನಿ ಜೋಳವನ್ನು ಬೆಳೆದು ಅದು ಮುಗಿಯುವ ತನಕ ದನಗಳಿಗೆ ತಿನ್ನಿಸುವರು. ಆದರೆ ಇವೆಲ್ಲ ಮಳೆಗಾಲಕ್ಕೆ ಮಾತ್ರ ಸೀಮಿತ. ಅದೂ ಒಂದು ಕಟಾವು ಮಾತ್ರ ಸಾಧ್ಯ. ಆದ್ದರಿಂದಲೇ ಬಹುವಾರ್ಷಿಕ ಹುಲ್ಲು ಬೆಳೆಯುವ ಪರಿಪಾಠ ಶುರುವಾಗಿದ್ದು.

ವಿಶೇಷತೆ: ಬಹುಮುಖ್ಯವಾಗಿ ಸಿ.ಒ.ಎಫ್‌.ಎಸ್‌. 29 ತಳಿಯ ಮೇವನ್ನು ನೀರಾವರಿ ಮತ್ತು ಮಳೆಯಾಶ್ರಿತ ಎರಡೂ ವಿಧವಾದ ಪ್ರದೇಶಗಳಲ್ಲಿ ಬೆಳೆಯಬಹದು. ಹಾಗೆಯೇ ಎಲ್ಲಾ ತರಹದ ಮಣ್ಣಿಗೂ ಸುಲಭವಾಗಿ ಒಗ್ಗುತ್ತದೆ. ಪ್ರತ್ಯೇಕವಾಗಿ ಅಥವಾ ಇತರೆ ತೋಟಗಾರಿಕೆ ಬೆಳೆಗಳಲ್ಲಿಯೂ ಅಂತರ ಬೆಳೆಯಾಗಿ ಬೆಳೆಯಬಹದು. ಇಳುವರಿಯೂ ಉತ್ತಮವಾಗಿದೆ. ನೀರಾವರಿ ಭೂಮಿಯಲ್ಲಿ ವರ್ಷಕ್ಕೆ ಕನಿಷ್ಠ 6-8 ಕಟಾವು ಮತ್ತು ಒಂದು ಎಕರೆಗೆ 70-75 ಟನ್ ಹುಲ್ಲಿನ ಇಳುವರಿ ಪಡೆಯಬಹದು. ಅದೇ ಮಳೆಯಾಶ್ರಿತ ಪ್ರದೇಶದಲ್ಲಿ 25-35 ಟನ್ ತೆಗೆಯಬಹುದು. ಸಿ.ಒ.ಎಫ್‌.ಎಸ್‌.. 31 ತಳಿಯಲ್ಲಿ ಇನ್ನೂ 6-8 ಎಂಟು ಟನ್ ಹೆಚ್ಚಿಗೆ ಮೇವು ಸಿಗುವುದು. ಹೀಗೆ ಮೂರು ವರ್ಷಗಳ ಕಾಲ ಫಸಲು ನೀಡುತ್ತದೆ.

‘ಮಳೆ ಪ್ರಾರಂಭದ ದಿನಗಳಲ್ಲಿ ಬಿತ್ತಿದರೆ ಮಳೆ ಕಡಿಮೆಯಾಗುವಷ್ಟರಲ್ಲಿ ಏನಿಲ್ಲ ಅಂದರೂ ಕನಿಷ್ಠ ಮೂರು ಕಟಾವು ಸಿಗ್ತದೆ ನೋಡಿ ಸರ್. ಕುಳೆ ಅಂಗೆ ಇದ್ದು ಮಳೆ ಬಂದಾಗ ಮತ್ತೆ ಚಿಗುರುತ್ತೆ. ದನ ಕರುಗಳು ಇಷ್ಟಪಟ್ಟು ತಿನ್ತವೆ. ಎಲ್ಲರೂ ಇದನ್ನ ಬೆಳಕೋಬಹುದು’ ಅಂತಾರೆ ಚಾಮರಾಜನಗರ ಜಿಲ್ಲೆಯ ಮಲೆಯೂರು ಗ್ರಾಮದ ರೈತ ವಿಜಯಕುಮಾರ್.

‘ಕುರಿ ಮತ್ತು ಮೇಕೆಗಳಿಗೆ ಇದು ಅತ್ಯುತ್ತಮ ಮೇವು. ಕಡ್ಡಿ ಸಣ್ಣದಾಗಿ ಮೃದುವಾಗಿ ಇರುವುದರಿಂದ ಕತ್ತರಿಸದೇ ಹಾಕಿದರೂ ಏನೂ ತಿನ್ನುತ್ತವೆ. ಆದರೆ ಬಲಿತ ಮೇಲೆ ಕಡ್ಡಿ ಗಟ್ಟಿ ಆಗುತ್ತದೆ. ಸರಿಯಾದ ಸಮಯಕ್ಕೆ ಕಟಾವು ಮಾಡಬೇಕು. ಸುಮಾರು 45 ದಿನಕ್ಕೆ ಕಟಾವು ಮಾಡಿದರೆ ಉತ್ತಮ’ ಎಂದು ಧನಗೂರು ಕುರಿ ಸಂವರ್ಧನಾ ಕೇಂದ್ರದ ಡಾ. ವೀರಭದ್ರಯ್ಯ ಹೇಳುತ್ತಾರೆ.

ಬೇಸಾಯ ಪದ್ಧತಿ: ಭೂಮಿಗೆ ಚೆನ್ನಾಗಿ ತಿಪ್ಪೆ ಗೊಬ್ಬರ ಹಾಕಿಸಿ 2ರಿಂದ 3 ಬಾರಿ ಉಳುವೆ ಮಾಡಿ ಹದಮಾಡಿಕೊಳ್ಳಬೇಕು. ಮಳೆಯಾದ ಮೇಲೆ ಹದ ನೋಡಿ ಒಂದು ಅಡಿ ಅಂತರದ ನೇರ ಸಾಲಗಳಲ್ಲಿ ಬೀಜ ಬಿತ್ತಬೇಕು. ಬೀಜವನ್ನು ಸಮ ಪ್ರಮಾಣದ ಮರಳಿನಲ್ಲಿ ಕಲಸಿಕೊಂಡರೆ ಉತ್ತಮ. ಒಂದು ಎಕರೆ ಜಮೀನಿಗೆ ನಾಲ್ಕು ಕೆ.ಜಿ. ಬೀಜ ಬೇಕಾಗುವುದು. ಬೀಜೋತ್ಪಾದನೆ ಮಾಡುವವರು ಎರಡು ಅಡಿ ಅಂತರ ಸಾಲುಗಳನ್ನು ಹೊಡೆದುಕೊಳ್ಳಬೇಕು. ಮಣ್ಣಿನ ಪರೀಕ್ಷೆ ಅನುಗುಣವಾಗಿ ರಸಗೊಬ್ಬರ ಹಾಕಬೇಕು.

ನೀರಾವರಿ ಸೌಲಭ್ಯವಿರುವವರು ತೇವಾಂಶ ನೋಡಿ 7-10 ದಿನಗಳಿಗೊಮ್ಮೆ ನೀರುಣಿಸುವುದು. ಬಿತ್ತನೆಯ 25-30 ದಿನದ ನಂತರ ಒಮ್ಮೆ ಕಳೆ ತೆಗೆಯುವುದು. ಬೆಳೆಯ ಸಂರಕ್ಷಣೆ ಸಾಮಾನ್ಯವಾಗಿ ಅಗತ್ಯವಿಲ್ಲ. ಪ್ರಥಮ ಕೊಯ್ಲು ನಾಟಿಯ 65-70 ದಿನಗಳ ನಂತರ ಮತ್ತು ಅದಾದನಂತರ ಪ್ರತಿ 45-50 ದಿನಗಳಿಗೊಮ್ಮೆ ಮೇವು ಬೆಳೆದಂತೆ ಕಟಾವು ಮಾಡಿಕೊಳ್ಳುವುದು.

ಬೀಜ ಎಲ್ಲೆಲ್ಲಿ ಲಭ್ಯ: ಭಾರತೀಯ ಹುಲ್ಲುಗಾವಲು ಮತ್ತು ಮೇವು ಸಂಶೋಧನಾ ಸಂಸ್ಥೆ, ಪ್ರಾದೇಶಿಕ ಸಂಶೋಧನಾ ಕೇಂದ್ರ, ಧಾರವಾಡ (0836 2447150); ಕೇಂದ್ರೀಯ ಬೀಜೋತ್ಪಾದನಾ ಕೇಂದ್ರ, ಹೆಸರಘಟ್ಟ, ಬೆಂಗಳೂರು (080 28466281); ಮಾರುತಿ ಸೀಡ್ಸ್ ಕಾರ್ಪೋರೇಶನ್, ಹೆಬ್ಬಾಳ, ಬೆಂಗಳೂರು (9945138552; 9590465963); ಕೃಷಿಕ ಆಗ್ರೋ ಫಾರ್ಮ್ ಡೆವೆಲಪರ್ಸ್, ಕೊತಬಾಳ, ಗದಗ (9481448990; 9980360362).

ಬೀಜೋತ್ಪಾದನೆಯೂ ಲಾಭದಾಯಕವೇ
ಸಿ.ಒ.ಎಫ್‌.ಎಸ್‌. 29 ಅಥವಾ 31 ಮೇವಿನ ತಳಿಯ ಬೀಜೋತ್ಪಾದನೆ ಒಂದು ಲಾಭದಾಯಕ ಕೃಷಿಯೇ! ಬಿತ್ತನೆಯ 110-125 ದಿನಕ್ಕೆ ಬೀಜ ಬಲಿಯುತ್ತೆ. ತೆನೆ ಮಾತ್ರ ಕತ್ತರಿಸಿ, ಮೂರು ನಾಲ್ಕು ದಿನ ಬಿಸಿಲನಲ್ಲಿ ಒಣಗಿಸಿ ಬಡಿದು ಬೀಜ ಮಾಡಿಕೊಳ್ಳಬಹದು. ಕಟಾವು ಆದ ಎರಡು ತಿಂಗಳು ನಂತರ ಬೀಜವನ್ನು ಬಳಸಬೇಕು. ಒಂದು ಎಕರೆ ಪ್ರದೇಶದಲ್ಲಿ ಸುಮಾರು 120 ಕಿಲೋಗ್ರಾಂನಷ್ಟು ಬೀಜ ಸಿಗುವುದು. ಬೀಜೋತ್ಪಾದನೆಗೆ ಸಿ.ಒ.ಎಫ್‌.ಎಸ್‌. 29 ಗಿಂತ ಸಿ.ಒ.ಎಫ್‌.ಎಸ್‌. 31 ಉತ್ತಮ. ಇದರಲ್ಲಿ ಬೀಜ ಉದುರಿ ನಷ್ಟವಾಗುವುದು ಕಡಿಮೆ ಮತ್ತು ಎಕೆರೆಗೆ 300-400 ಕಿಲೋಗ್ರಾಂನಷ್ಟು ಬೀಜ ಸಿಗುವುದು ಅನ್ನುತ್ತಾರೆ ತಜ್ಞರು.

ಸರ್ಕಾರಿ ಸಂಸ್ಥೆಗಳಲ್ಲಿ ಈಗಿನ ದರ ಕೆ.ಜಿ.ಗೆ 400 ರೂಪಾಯಿ. ಖಾಸಗಿ ಮಾರಾಟಗಾರರು 800-1000 ರೂಪಾಯಿ ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ನೆರೆ ಹೊರೆ ರೈತರು, ಕೃಷಿ ಪಶುವೈದ್ಯಾಧಿಕಾರಿಗಳು, ವಾಟ್ಸ್‌ ಆ್ಯಪ್‌, ಫೇಸ್‍ಬುಕ್, ಹೀಗೆ ಸಂಪರ್ಕಜಾಲ ವಿಸ್ತರಿಸಿಕೊಂಡು ಮಾರುಕಟ್ಟೆ ಬೆಳಸಿಕೊಂಡರೆ ಬೀಜೋತ್ಪಾದನೆಯಲ್ಲಿಯೂ ಲಾಭವಿದೆ. ಭಾರತೀಯ ಹುಲ್ಲುಗಾವಲು ಮತ್ತು ಮೇವು ಸಂಶೋಧನಾ ಸಂಸ್ಥೆಯ ಜತೆ ಮೊದಲೇ ಒಪ್ಪಂದ ಮಾಡಿಕೊಂಡು ಬೀಜ ಉತ್ಪಾದನೆ ಮಾಡಿಕೊಟ್ಟರೆ, ಸಂಸ್ಥೆ ಅದರ ಮಾರಾಟದ ಬೆಲೆಯ ಶೇ 80ರ ದರದಲ್ಲಿ ಮರುಖರೀದಿಯನ್ನು ಮಾಡಿಕೊಳ್ಳುವುದು. ರೈತರು ಮಳೆಗಾಲ ಪ್ರಾರಂಭವಾಗುವ ಮುನ್ನವೇ ಬೀಜ ಖರೀದಿ ಮಾಡಿ ಮುಂದಿನ ಹಾಂಗಾಮಿನಲ್ಲಿ ಹಲವು ಗುಂಟೆ ಜಮೀನಿನಲ್ಲಿ ಬೆಳೆದು ನೋಡಬಹುದು.

*
ನೇಪಿಯರ್ ಹುಲ್ಲಿನಲ್ಲಿ ಲವಣಾಂಶಗಳ ಪ್ರಮಾಣ ಹೆಚ್ಚಿಗೆ ಇರುವುದರಿಂದ ದನಗಳ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತೆ. ಆದ್ದರಿಂದ ಸಿ.ಒ.ಎಫ್‌.ಎಸ್‌. 29 ಅಥವಾ 31ನ್ನು ಬೆಳೆದುಕೊಳ್ಳಬಹುದು.
–ಡಾ. ಶಿವಕುಮಾರ್, ಮುಖ್ಯಸ್ಥರು, ಭಾರತೀಯ ಹುಲ್ಲುಗಾವಲು ಮತ್ತು ಮೇವು ಸಂಶೋಧನಾ ಸಂಸ್ಥೆ, ಪ್ರಾದೇಶಿಕ ಸಂಶೋಧನಾ ಕೇಂದ್ರ, ಧಾರವಾಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT