ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಗಮ್ಮ ಕರಗ ಇಂದು

Last Updated 21 ಮೇ 2018, 19:30 IST
ಅಕ್ಷರ ಗಾತ್ರ

ಗಂಗೆಯ ದೇವಾಲಯ ನಗರದ ಮಲ್ಲೇಶ್ವರದಲ್ಲಿದೆ. ಈ ಭಾಗದ ಆರಾಧ್ಯ ದೈವವಾಗಿರುವ ಗಂಗಮ್ಮ ದೇವಿಯ ಕರಗ ಮಹೋತ್ಸವವು ಮಂಗಳವಾರ ಹಾಗೂ ಬುಧವಾರ ಅದ್ದೂರಿಯಾಗಿ ನಡೆಯಲಿದೆ.

90 ವರ್ಷಗಳಿಂದ ಮಲ್ಲೇಶ್ವರದ ಕೋದಂಡ ರಾಮಪುರದಲ್ಲಿ ಗಂಗಮ್ಮ ದೇವಿಯ ಹಸಿ ಕರಗ ಹಾಗೂ ಜಾತ್ರಾ ಮಹೋತ್ಸವವನ್ನು ನಡೆಸಿಕೊಂಡು ಬರಲಾಗಿದೆ. ಕಾಡುಮಲ್ಲೇಶ್ವರ ದೇವಸ್ಥಾನದ ಸಮೀಪ ಇರುವ ಈ ದೇಗುಲಕ್ಕೆ ನಿತ್ಯ ಸಾವಿರಾರು ಭಕ್ತರು ಬಂದು ಹರಕೆ ಹೊತ್ತುಕೊಳ್ಳುತ್ತಾರೆ. ಕರಗದಂದು ಅಮ್ಮನವರಿಗೆ ಭಕ್ತಿಯಿಂದ ಅಂಬಲಿ ಸಿದ್ಧಪಡಿಸಿ ತಲೆ ಮೇಲೆ ಹೊತ್ತು ತರುತ್ತಾರೆ.

ಗಂಗಮ್ಮನ ಕರಗ ಹುಟ್ಟಿದ್ದು ತಮಿಳುನಾಡಿನ ಉತ್ತರ ಆರ್ಕಾಟ್‌ನ ಗುಡಿಯತ್ತಂನಲ್ಲಿ. ದಶಕಗಳಿಂದ ಕರಗ ಮಹೋತ್ಸವ ಭಕ್ತಿ ಪೂರ್ವಕವಾಗಿ ಆಚರಿಸಲಾಗುತ್ತದೆ. ಈ ಉತ್ಸವಕ್ಕೆ ತಮಿಳುನಾಡಿನಿಂದ ಭಾರಿ ಜನಸ್ತೋಮ ಹರಿದು ಬರುತ್ತದೆ.

ದಿವಂಗತ ಕಣ್ಣಪ್ಪ ನಾಯ್ಕರ್ ಅವರು 1928ರಲ್ಲಿ ಮಲ್ಲೇಶ್ವರದಲ್ಲಿ ಈ ಕರಗವನ್ನು ಪ್ರಾರಂಭಿಸಿದರು. ಅಲ್ಲಿಂದ ಪ್ರತಿ ವರ್ಷವೂ ಮೇ ತಿಂಗಳಿನಲ್ಲಿ ಅಮ್ಮನವರ ಹಸಿ ಕರಗ ಮಹೋತ್ಸವ ನಡೆಯುತ್ತ ಬಂದಿದೆ. ಅವರ ತಮ್ಮನಾದ ಚಂಗವಲರಾಯ ನಾಯ್ಕರ್ ಕೆಲ ವರ್ಷಗಳ ಕಾಲ ನಡೆಸಿಕೊಂಡು ಬಂದಿದ್ದರು. 1970ರಲ್ಲಿ ದಿವಂಗತ ಕಣ್ಣಪ್ಪ ನಾಯ್ಕರ ಪುತ್ರ ಕೆ.ನಟರಾಜನ್ ರವರಿಗೆ ಕರಗದ ಉಸ್ತುವಾರಿ ನೀಡಲಾಯಿತು. 45 ವರ್ಷಗಳಿಂದ ಕರಗ ಹೊತ್ತಿದ್ದ ನಟರಾಜನ್ ಈಗ ಮಗ ಸುಧಾಕರನ್ ಹಾಗೂ ತಮ್ಮನ ಮಗ ಕಿರಣ್ ಅವರುಗಳಿಗೆ ಕರಗ ಹೊರುವ ಜವಾಬ್ದಾರಿಯನ್ನು ವಹಿಸಿದ್ದಾರೆ.

ಮಲ್ಲೇಶ್ವರ 18ನೇ ಅಡ್ಡರಸ್ತೆಯ ಟಾಟಾ ಇನ್‌ಸ್ಟಿಟ್ಯೂಟ್ ವೃತ್ತದ ಮಧ್ಯ ಭಾಗದಲ್ಲಿರುವ ನೀರಿನ ತೊಟ್ಟಿ ಗ್ರಾಮದಲ್ಲಿ ಈ ಮೊದಲು ಕರಗ ನಡೆಯುತ್ತಿತ್ತು. ಇಲ್ಲಿ ಗಂಗಮ್ಮ ಮತ್ತು ಮಾರಮ್ಮನ ದೇವಾಲಯಗಳು ಇದ್ದವು. ಕ್ರಮೇಣ ನೀರಿನ ತೊಟ್ಟಿ ಗ್ರಾಮ ಬಡಾವಣೆಯ ರೂಪ ಪಡೆದು ಕರಗ ನಡೆಯುವ ಜಾಗವು ಕೋದಂಡರಾಮಪುರಕ್ಕೆ ಸ್ಥಳಾಂತರಗೊಂಡಿತು. ಬಳಿಕ ಈ ದೇಗುಲಗಳನ್ನು ವಿಂಗಡಿಸಲಾಯಿತು. ಗಂಗಮ್ಮ ದೇಗುಲವನ್ನು ಕೋದಂಡ ರಾಮಪುರದಲ್ಲೇ ಉಳಿಸಿಕೊಳ್ಳಲಾಯಿತು.

ನಟರಾಜನ್ ಅವರ ಪ್ರಯತ್ನದಿಂದ ಸರ್ಕಾರದಿಂದ ಜಾಗ ಪಡೆದು ಅಲ್ಲಿ ಗಂಗಮ್ಮ ದೇವಾಲಯವನ್ನು ಹೊಸದಾಗಿ ನಿರ್ಮಿಸಲಾಯಿತು. ಇಲ್ಲಿ ಐದೂವರೆ ಅಡಿ ಎತ್ತರದ ಕೃಷ್ಣ ಶಿಲೆಯ ಗಂಗಮ್ಮ ವಿಗ್ರಹವನ್ನು ನಿರ್ಮಿಸಲಾಗಿದೆ. ಇಲ್ಲಿ ನಿತ್ಯವು ಒಂದಿಲ್ಲೊಂದು ಪೂಜಾ ಕೈಂಕರ್ಯಗಳು ನಡೆಯುತ್ತಿವೆ.

ಗಂಗಮ್ಮ ದೇವಿಯ ಉತ್ಸವ: ವೈಶಾಖ ಮಾಸದ ಮೊದಲ ಶುಕ್ರವಾರ ರಾತ್ರಿ ಗಂಗಮ್ಮ ದೇವಿಯ ಶಿರದ ಭಾಗವನ್ನು ಸಿದ್ಧಗೊಳಿಸಲಾಗುತ್ತದೆ.  ಬಳಿಕ ಜೇಡಿ ಮಣ್ಣಿನಲ್ಲಿ ಗಂಗಮ್ಮ ಮೂರ್ತಿಯ ದೇಹದ ಭಾಗವನ್ನು ರಚಿಸಿ, ಅದಕ್ಕೆ ಶಿರವನ್ನು ಜೋಡಿಸಲಾಗುತ್ತದೆ. ಈ ವೇಳೆ ಮೂರ್ತಿಯ ಕಣ್ಣುಗಳಿಗೆ ಬಟ್ಟೆ ಕಟ್ಟಿ ಪೂಜಿಸಲಾಗುತ್ತದೆ. ಕರಗದಂದು ಮುಂಜಾನೆ ಪೂರ್ವಾಭಿಮುಖವಾಗಿ ದೇವಿಯನ್ನು ಕೂರಿಸಿ ಸೂರ್ಯನ ಕಿರಣಗಳಿಗೆ ಎದುರಾಗುವಂತೆ ಕಣ್ಣುಗಳಿಗೆ ಕಟ್ಟಿದ್ದ ಬಟ್ಟೆಯನ್ನು ತೆರೆಯಲಾಗುತ್ತದೆ.

ರಾಗಿ ಅಂಬಲಿ ನೀಡಿ, ಶಾಂತಿ ಮತ್ತು ನೆಮ್ಮದಿಗೆ ಅರಿಕೆ ಮಾಡಿಕೊಳ್ಳಲಾಗುತ್ತದೆ. ಈ ಸಂದರ್ಭದಲ್ಲಿ ದೇವರನ್ನು ದೂಷಿಸುವ ಸಾಂಪ್ರದಾಯಿಕ ಪದ್ಧತಿಯು ಜಾರಿಯಲ್ಲಿದೆ. ಅಂದು ಸಂಜೆ ಊರಿನ ಹೂವಿನ ಕರಗ ನೆರವೇರಿಸಲಾಗುತ್ತದೆ. ಮಲ್ಲೇಶ್ವರದ ತರಕಾರಿ ಮಾರುಕಟ್ಟೆಯ ವ್ಯಾಪಾರಿಗಳಿಂದ ತರಕಾರಿಯ ಅಲಂಕಾರ ಮಾಡುವುದು ಇಲ್ಲಿನ ವಿಶೇಷ.

ಮೂರನೇ ದಿನ ಸುಮಂಗಲಿ ಪೂಜೆ, ಅನ್ನದಾನ, ಹೂವಿನ ರಥೋತ್ಸವ ಮತ್ತು ಪೇಟೆ ಕರಗ ಜರುಗುತ್ತದೆ. ಈ ವೇಳೆ ಬೃಹತ್ ಹೂವಿನ ರಥದಲ್ಲಿ ಅಮ್ಮನವರ ಮೆರವಣಿಗೆ ವಿಜೃಂಭಣೆಯಿಂದ ನಡೆಯುತ್ತದೆ. ಮೈಗೆ ನಿಂಬೆ ಹಣ್ಣು ಚುಚ್ಚಿಕೊಂಡು, ಬಾಯಿಗೆ ಬೀಗ ಹಾಕಿಕೊಂಡು ಭಕ್ತಿಯ ಪರಾಕಾಷ್ಠೆ ಮೆರೆಯುತ್ತಾರೆ ಭಕ್ತರು.

ಇದರಲ ನಡುವೆ ನಂದಿಕೋಲಿನ ಕುಣಿತ, ಪಾಂಬೈ ಆಟಗಳು, ವಾದ್ಯಗೋಷ್ಠಿ, ಕಂಸಾಳೆ, ವೀರಭದ್ರ ಕುಣಿತ, ಪೂಜಾರಿ ಕುಣಿತ, ಕೇರಳ ವಾದ್ಯ, ಮೆಟ್ಟುಪಾಳ್ಯಂ ಡ್ರಮ್ಸ್, ಕೀಲು ಕುದುರೆ ಮುಂತಾದವುಗಳು ಜನಮನ ಸೆಳೆಯುತ್ತವೆ.
-ರೇಖಾ ಚವ್ಹಾಣ್. ಆರ್.ಇ

*****
ಹೂವಿನ ಪಲ್ಲಕ್ಕಿ, ಕರಗ ಮಹೋತ್ಸವ
ವಾಲ್ಮೀಕಿನಗರದ ರಾಜರಾಜೇಶ್ವರಿ ಪೂಜಮ್ಮ, ದಾಳಮ್ಮ, ಜ್ಯೋತಮ್ಮನವರ ದೇವಸ್ಥಾನದ ಕರಗ ಮಹೋತ್ಸವ ಹಾಗೂ ಹೂವಿನ ಪಲ್ಲಕ್ಕಿ ಉತ್ಸವವು ಮಂಗಳವಾರ ರಾತ್ರಿ 1.30ಕ್ಕೆ ನಡೆಯಲಿದೆ.

ಚಾಮರಾಜಪೇಟೆಯ ಮಧ್ವಾಚಾರ್ಯ ಮಠ ಸಮೀಪದ ಭಾವಿಯ ಬಳಿ ಕರಗವನ್ನು ಕಟ್ಟಲಾಗುತ್ತದೆ. ಸಂಪ್ರದಾಯದ ಪ್ರಕಾರ ಪೂಜಾ ಕಾರ್ಯಗಳು ನಡೆದ ಬಳಿಕ ಅಲ್ಲಿಂದಲೇ ಕರಗ ಮೆರವಣಿಗೆ ಪ್ರಾರಂಭವಾಗಲಿದೆ. ಪೂಜಾರಿ ಕೆಂಪಯ್ಯ ಅವರ ಮೊಮ್ಮಗ ಜ್ಯೋತಿಶ್ವರ ಅವರು ಕರಗ ಹೊರಲಿದ್ದಾರೆ.

ಚಾಮರಾಜಪೇಟೆ, ಟಿ.ಆರ್.ಮಿಲ್, ಮೈಸೂರು ವೃತ್ತ, ಅಜಾದ್‌ನಗರ, ವಾಲ್ಮೀಕಿನಗರದ ಮೂಲಕ ಸಾಗಿ ಬೆಳಿಗ್ಗೆ 6ಕ್ಕೆ ದೇಗುಲದ ಗರ್ಭಗುಡಿ ಸೇರಲಿದೆ. ಮೆರವಣಿಗೆಯ ಜತೆಜತೆಗೆ ರಾಜರಾಜೇಶ್ವರಿ, ಪೂಜಮ್ಮ, ದಾಳೇಶ್ವರಿ, ಜ್ಯೋತಮ್ಮನವರ ‌ಹೂವಿನ ಪಲ್ಲಕ್ಕಿಯ ಉತ್ಸವವೂ ಸಾಗಲಿದೆ. ಇದೇ 25ರ ವರೆಗೆ ವಿವಿಧ ಕಾರ್ಯಕ್ರಮಗಳು ದೇಗುಲದಲ್ಲಿ ನಡೆಯಲಿವೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT