ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಮಿಷದ ಕರೆ ಸುಳ್ಳಾದರೆ ರಾಜಕೀಯ ನಿವೃತ್ತಿ

Last Updated 21 ಮೇ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ವಿಶ್ವಾಸಮತ ಯಾಚನೆ ವೇಳೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಬೆಂಬಲಿಸುವಂತೆ ಕಾಂಗ್ರೆಸ್ ಶಾಸಕರೊಬ್ಬರ ಪತ್ನಿಗೆ ಆಮಿಷವೊಡ್ಡಿದ ದೂರವಾಣಿ ಸಂಭಾಷಣೆ ಸಾಚಾ ಅಲ್ಲ ಎಂದು ಸಾಬೀತುಪಡಿಸಿದರೆ, ನಾನು ಒಂದು ಕ್ಷಣವೂ ರಾಜಕೀಯದಲ್ಲಿ ಇರುವುದಿಲ್ಲ’ ಎಂದು ಕಾಂಗ್ರೆಸ್ ಮುಖಂಡ ವಿ.ಎಸ್ ಉಗ್ರಪ್ಪ ಬಿಜೆಪಿ ನಾಯಕರಿಗೆ ಸವಾಲು ಹಾಕಿದರು.

ಕೆಪಿಸಿಸಿ‌ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಾನು ಬಿಡುಗಡೆ ಮಾಡಿದ್ದು ನಕಲಿ ಆಡಿಯೊ ಅಲ್ಲ. ಅಲ್ಲಿ ನಡೆದಿರುವ ಸಂಭಾಷಣೆ ಸತ್ಯವಾದದ್ದು. ಅದು ಯಡಿಯೂರಪ್ಪ ಅವರ ಆಪ್ತ ಬಿ.ಜೆ.ಪುಟ್ಟಸ್ವಾಮಿ ಹಾಗೂ ವಿಜಯೇಂದ್ರ ಅವರದ್ದೇ ಧ್ವನಿ’ ಎಂದರು.

‘ಸಂಭಾಷಣೆಯಲ್ಲಿ ಪುಟ್ಟಸ್ವಾಮಿ ₹ 15 ಕೋಟಿ ಹಣ, ಇಲ್ಲವೇ ಮಂತ್ರಿ ಸ್ಥಾನ ಮತ್ತು ₹ 5 ಕೋಟಿ ಹಣ ಕೊಡುತ್ತೇನೆ ಎಂದು ಶಾಸಕರ ಪತ್ನಿಗೆ ಆಮಿಷ
ವೊಡ್ಡಿದ್ದಾರೆ. ಆದರೆ, ನಾನು ಯಾವ ಶಾಸಕರ ಹೆಸರನ್ನೂ ಉಲ್ಲೇಖಿಸಿಲ್ಲ’ ಎಂದರು.

‘ಪುಟ್ಟಸ್ವಾಮಿ ಸಂಭಾಷಣೆಗೆ ಪೂರಕವಾಗಿ ವಿಜಯೇಂದ್ರ ಮಾತನಾಡಿರುವುದರಲ್ಲಿ, ಪುಟ್ಟಸ್ವಾಮಿ ಅವರ ಭರವಸೆಗಳನ್ನು ಈಡೇರಿಸುವು
ದಾಗಿ, ಪ್ರಕರಣಗಳನ್ನು ರದ್ದು ಮಾಡುವುದಾಗಿ ಭರವಸೆ ನೀಡಿದ್ದಾರೆ. ಹಾಗಾಗಿ ಪುಟ್ಟಸ್ವಾಮಿ, ವಿಜಯೇಂದ್ರ ಮಾತನಾಡಿರುವುದು ಸತ್ಯ. ಬೇಕಾದರೆ ಇದನ್ನು ವಿಧಿವಿಜ್ಞಾನ ಪ್ರಯೋಗಾಲಯದ ಪರೀಕ್ಷೆಗೆ ಒಳಪಡಿಸಿ ಧ್ವನಿ ಪರೀಕ್ಷೆ ಮಾಡಿಸಲಿ’ ಎಂದು ಸವಾಲೆಸೆದರು.

‘ಬಿ.ಸಿ.ಪಾಟೀಲ್ ಅವರೊಟ್ಟಿಗೆ ಮುರಳೀಧರ ರಾವ್, ಯಡಿಯೂರಪ್ಪ ಮಾತನಾಡಿದ್ದಾರೆ. ಇದನ್ನು ಯಡಿಯೂರಪ್ಪ ಸದನದಲ್ಲಿಯೂ ಒಪ್ಪಿಕೊಂಡಿದ್ದಾರೆ. ಇದಕ್ಕಿಂತ ಸ್ಪಷ್ಟ ಸಾಕ್ಷಿ ಇನ್ನೇನು ಬೇಕು’ ಎಂದರು.

‘ಇದರಲ್ಲಿ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್, ಮುರಳೀಧರ ರಾವ್, ಯಡಿಯೂರಪ್ಪ, ಅನಂತ ಕುಮಾರ್, ಸದಾನಂದಗೌಡರ ಪಾತ್ರವೂ ಇದೆ. ಆದರೆ, ಇವರೆಲ್ಲಾ ಇಲ್ಲಿಯವರೆಗೂ ಉಸಿರೇ ಬಿಡದಿರುವುದನ್ನು ನೋಡಿದರೆ ಏನು ಹೇಳಬೇಕು ಗೊತ್ತಾಗುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ನಿಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ಮತ ಹಾಕಿ ಎಂದು ಹೇಳುವ ಮೂಲಕ ಯಡಿಯೂರಪ್ಪ ಕಾಂಗ್ರೆಸ್ ಮತ್ತು ಜೆಡಿಎಸ್‌ ಶಾಸಕರನ್ನು ಸೆಳೆಯಲು ಪ್ರಯತ್ನಿಸಿದ್ದನ್ನು ಸದನದಲ್ಲಿಯೇ ಒಪ್ಪಿಕೊಂಡಿದ್ದಾರೆ. ಆತ್ಮಸಾಕ್ಷಿಗೆ ಅನುಗುಣವಾಗಿ ಮತ ಹಾಕಿ ಎನ್ನುವುದು ಸಂವಿಧಾನದ 10ನೇ ಷೆಡ್ಯೂಲ್‌ ವ್ಯಾಪ್ತಿಗೆ ಒಳಪಡುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಯಡಿಯೂರಪ್ಪ ವಿಶ್ವಾಸಮತ ಯಾಚನೆ ಮಾಡದೆ ಪಲಾಯನ ಮಾಡಿದ್ದರಿಂದ ಮೋದಿ, ಶಾಗೆ ಸೋಲಾಗಿದೆ. ದೂರವಾಣಿ ಕರೆಯ ಬಗ್ಗೆ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆಯಾಗಲಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT