ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಈಗಿನ ರೋಗಿಗಳಿಗೆ ವೈದ್ಯರಿಗಿಂತ ಗೂಗಲ್‌ ಮೇಲೇ ನಂಬಿಕೆ’

Last Updated 21 ಮೇ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ನವ ಪೀಳಿಗೆಯ ರೋಗಿಗಳು ವೈದ್ಯರನ್ನು ಸುಲಭವಾಗಿ ನಂಬುವುದಿಲ್ಲ. ನಾವು ಯಾವುದೇ ಔಷಧಿಗಳ ಕುರಿತು ಸಲಹೆ ನೀಡಿದರೂ ಗೂಗಲ್ ಮಾಡಿ ನೋಡುತ್ತಾರೆ’ ಎಂದು ಅಪೊಲೊ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ.ಬಿ.ರಮೇಶ್‌ ಹೇಳಿದರು.

ಭಾರತೀಯ ವೈದ್ಯಕೀಯ ಸಂಸ್ಥೆ ಆಯೋಜಿಸಿದ್ದ ‘ಸಾರ್ವಜನಿಕ ಆರೋಗ್ಯದ ಬಗ್ಗೆ ವೈದ್ಯಕೀಯ’ ಉಪನ್ಯಾಸ ಕಾರ್ಯಕ್ರಮದಲ್ಲಿ ‘ನವ ಪೀಳಿಗೆಯ ನೂತನ ಕಾಯಿಲೆ ಗೂಗಲ್‌ ಸಿಂಡ್ರೋಮ್‌’ ಕುರಿತು ಅವರು ಮಾತನಾಡಿದರು.

‘ಡಾಕ್ಟ್ರೇ ನೀವು ಹೇಳಿರುವ ಔಷಧಿಯಿಂದ ಏನೇನು ಅಡ್ಡಪರಿಣಾಮಗಳು ಇವೆ, ಗೊತ್ತೇ? ಗೂಗಲ್‌ನಲ್ಲಿ ನೋಡಿ ಎಂದು ರೋಗಿಗಳೇ ನಮಗೇ ಸಲಹೆ ನೀಡುತ್ತಾರೆ. ನಮ್ಮ ಸೂಚನೆಯಿಲ್ಲದೆ ಗೂಗಲ್‌ನಲ್ಲಿಯೇ ಪರೀಕ್ಷೆಗಳ ಬಗ್ಗೆ ತಿಳಿದುಕೊಂಡು ತಾವೇ, ಇಸಿಜಿ, ರಕ್ತಪರೀಕ್ಷೆಗಳನ್ನು ಮಾಡಿಸಿಕೊಂಡು ವಾಟ್ಸ್‌ಆ್ಯಪ್ ಮಾಡಿ ರಕ್ತದೊತ್ತಡ ಸರಿಯಿದೆಯೇ? ಆರೋಗ್ಯ ಸರಿಯಿದೆಯೇ? ಎಂದು ಸಂದೇಶ ಕಳಿಸುತ್ತಾರೆ’ ಎಂದರು.

‘ಈ ರೀತಿ ಅನಗತ್ಯವಾಗಿ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವುದು ತುಂಬಾ ಅಪಾಯಕಾರಿ. ಇದರ ಬಗ್ಗೆ ಶಿಕ್ಷಿತರಿಗೂ ಗೊತ್ತಿಲ್ಲ. ನಾವು ವೈದ್ಯರೇ ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಇಂತಹ ಸಂದೇಶಗಳಿಗೆ ಸರಿಯಾದ ಉತ್ತರ ನೀಡಬೇಕು’ ಎಂದು ಕಾರ್ಯಕ್ರಮದಲ್ಲಿ ಇದ್ದ ಯುವ ವೈದ್ಯರನ್ನು ಕುರಿತು ಹೇಳಿದರು.

‘ಎದೆ ನೋವು, ಕಾಲು ನೋವು ಎಂದು ಹೇಳಿಕೊಂಡು ಗಂಭೀರ ಸಮಸ್ಯೆಯಿಲ್ಲದಿದ್ದರೂ ಪದೇ ಪದೇ ಬರುವ ರೋಗಿಗಳನ್ನು ಕುರಿತು ‘ಏನೂ ಇಲ್ಲ ಹೋಗಿ’ ಎಂದು ರೇಗಬಾರದು. ಅಂತಹ ಸಂದರ್ಭದಲ್ಲಿ ತಟಸ್ಥರಾಗಿರುವುದೇ ಒಳ್ಳೆಯದು’ ಎಂದು ಕಿವಿಮಾತು ಹೇಳಿದರು.

‘ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ ಸ್ಟೇಟಸ್‌ಗಳ ಗೀಳು ಇರುವ ರೋಗಿಗಳು ಸಾಕಷ್ಟು ಮಂದಿ ಇರುತ್ತಾರೆ. ಇದರಲ್ಲಿ ಒಬ್ಬರು ನನ್ನ ಹತ್ತಿರ ಪರೀಕ್ಷೆ ಮಾಡಿಸಿಕೊಂಡು ಹೋದ ಬಳಿಕ ‘ತುಂಬಾ ಒಳ್ಳೆಯ ವೈದ್ಯರು ಸಿಕ್ಕಿದ್ದರು. ಮನೋವೈದ್ಯರ ರೀತಿಯಲ್ಲಿ ಉಪಚರಿಸಿದರು’ ಎಂದು ಅವರ ಮುಖಪುಟದಲ್ಲಿ ಬರೆದುಕೊಂಡಿದ್ದಾರೆ. ನೋಡಿ ಎಲ್ಲಿಗೆ ಬಂತು ಕಾಲ... ನಮ್ಮನ್ನು ಹೃದ್ರೋಗ ತಜ್ಞರಿಂದ ಮನೋರೋಗ ತಜ್ಞರಾಗಿ ಬದಲಾಯಿಸಿಬಿಟ್ಟರು’ ಎಂದು ಹೇಳಿ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸಿದರು.

‘ನವಪೀಳಿಗೆಯ ಜನರನ್ನು ನಾವು ದಡ್ಡರು ಎಂದುಕೊಳ್ಳುವ ಹಾಗಿಲ್ಲ. ಬೇರೆ ವೈದ್ಯರನ್ನು ಸಂಪರ್ಕಿಸಿ, ಇಲ್ಲವೇ ಗೂಗಲ್‌, ಪುಸ್ತಕಗಳ ಸಹಾಯದಿಂದ ಸಾಕಷ್ಟು ವಿಷಯಗಳನ್ನು ಸಂಗ್ರಹಿಸಿಯೇ ನಮ್ಮ ಬಳಿ ಬರುತ್ತಾರೆ. ರೋಗ ಮಾತ್ರ ಅಲ್ಲ ತಾತ್ವಿಕವಾಗಿಯೂ ನಮ್ಮ ಬಳಿ ಪ್ರಶ್ನೆ ಕೇಳುತ್ತಾರೆ. ಹೆಚ್ಚು ಓದಿಕೊಳ್ಳದಿದ್ದರೆ ನಮಗೆ ಉತ್ತರ ಹೇಳಲು ಆಗುವುದಿಲ್ಲ’ ಎಂದು ಹೇಳಿದರು.

‘ಹಿಂದೆ ಬುದ್ಧ ಸಾವಿಲ್ಲದ ಮನೆಯ ಸಾಸಿವೆ ಕಾಳನ್ನು ತರಲು ಹೇಳಿದ್ದ. ಇಂದಿನ ವೈದ್ಯರಾದ ನಾವು ಮಧುಮೇಹ ಇಲ್ಲದ ಮನೆಯಲ್ಲಿ ಸಕ್ಕರೆ ತರಲು ಹೇಳಬೇಕು. ಯಾಕೆಂದರೆ ವಿಶ್ವದ ನಾಲ್ಕು ಮಂದಿ ಮಧುಮೇಹಿಗಳಲ್ಲಿ ಭಾರತದವರು ಒಬ್ಬರಾಗಿರುತ್ತಾರೆ. ಭಾರತದ ಶೇ 50ರಷ್ಟು ಜನರಿಗೆ, ತಮಗೆ ಮಧುಮೇಹ ಇರುವುದೇ ಗೊತ್ತಿರುವುದಿಲ್ಲ’ ಎಂದು ಡಾ.ಎಂ.ಎಸ್‌. ರಾಜಣ್ಣ ಹೇಳಿದರು.

‘ಮೂತ್ರಪರೀಕ್ಷೆಯಿಂದ ನಾವು ಮಧುಮೇಹ ಇರುವ ಬಗ್ಗೆ ನಿಖರವಾಗಿ ಹೇಳಲು ಸಾಧ್ಯವಿಲ್ಲ. ರಕ್ತಪರೀಕ್ಷೆಯಲ್ಲಿ ಮಾತ್ರ ಇದನ್ನು ಸ್ಪಷ್ಟವಾಗಿ ಹೇಳಬಹುದು. ಆದರೆ ಕೆಲವರಿಗೆ ಇದರ ಬಗ್ಗೆ ಇಂದಿಗೂ ಅಜ್ಞಾನ ಇದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT