ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹5 ಕೋಟಿಗೆ ಬೇಡಿಕೆಯಿಟ್ಟ ನಿರ್ದೇಶಕ ಸೇರಿ ನಾಲ್ವರ ಬಂಧನ

Last Updated 21 ಮೇ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಪ್ರವಾಸದ ವೇಳೆ ಚಿತ್ರೀಕರಿಸಿದ್ದ ದಂಪತಿಯ ಖಾಸಗಿ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡುವುದಾಗಿ ಹೇಳಿ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ ಸಿನಿಮಾ ನಿರ್ದೇಶಕ ಸೇರಿದಂತೆ ನಾಲ್ವರನ್ನು ಸೈಬರ್ ಕ್ರೈಂ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಕೆಂಗೇರಿಯ ಕಾನ್ಸೆಪ್ಟ್‌ ಸಿಟಿ ಲೇಔಟ್‌ನ ಎನ್‌. ಸಂತೋಷ್‌ ಕುಮಾರ್ (27), ಪ್ರಶಾಂತ್‌ ಮಲೆಯೂರು (26), ಸುರೇಶ್‌ (24) ಹಾಗೂ ಪ್ರದೀಪ್ (22) ಬಂಧಿತರು. ಅವರಿಂದ ಲ್ಯಾಪ್‌ಟಾಪ್‌, ತಲಾ 5 ಮೊಬೈಲ್‌ಗಳು, ಸಿಮ್‌ ಕಾರ್ಡ್‌ಗಳು, ತಲಾ 3 ಎಟಿಎಂ ಕಾರ್ಡ್‌ಗಳು ಹಾಗೂ ಪೆನ್‌ಡ್ರೈವ್‌ಗಳನ್ನು ಜಪ್ತಿ ಮಾಡಲಾಗಿದೆ.

ಕನ್ನಡ ಸಿನಿಮಾ ನಿರ್ದೇಶಕ ಆಗಿರುವ ಆರೋಪಿ ಸಂತೋಷ್‌ ಕುಮಾರ್, ‘ಗ್ರಾಂಡ್‌ ಸಹರ ಮೂವಿ ಪ್ರೊಡಕ್ಷನ್ಸ್‌’ ಹೆಸರಿನ ಪ್ರೊಡಕ್ಷನ್ ಹೌಸ್‌ ತೆರೆದಿದ್ದ. ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಕ್ರಿಯಾ ಸಮಿತಿಯ ಸದಸ್ಯನೂ ಆಗಿದ್ದ. ಇನ್ನೊಬ್ಬ ಆರೋಪಿ ಪ್ರಶಾಂತ್‌, ಸಹಾಯಕ ನಿರ್ದೇಶಕ. ಉಳಿದಿಬ್ಬರು ಆರೋಪಿಗಳು, ಪ್ರೊಡಕ್ಷನ್ ಹೌಸ್‌ನಲ್ಲಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದರು.

ಸಹಾಯಕ ನಿರ್ದೇಶಕನಾಗಿ ಕನ್ನಡ, ತೆಲುಗು ಸಿನಿಮಾಗಳಲ್ಲಿ ಕೆಲಸ ಮಾಡಿದ್ದ ಸಂತೋಷ್, ‘ಮೈಸೂರಲ್ಲಿ ರಾಜಾರಾಣಿ’ ಹೆಸರಿನ ಕನ್ನಡ ಸಿನಿಮಾವನ್ನು ಸ್ವತಂತ್ರವಾಗಿ ನಿರ್ದೇಶಿಸಲು ಯೋಜನೆ ರೂಪಿಸಿದ್ದ. ಅದಕ್ಕೆ ನಿರ್ಮಾಪಕರಾಗುವಂತೆ ಪರಿಚಯಸ್ಥರೇ ಆಗಿದ್ದ ದಂಪತಿಯನ್ನು ಕೋರಿದ್ದ.

ಆದರೆ, ಹಣ ನೀಡಲು ದಂಪತಿ ನಿರಾಕರಿಸಿದ್ದರು. ಅದೇ ಕಾರಣಕ್ಕೆ ಅವರಿಬ್ಬರ ಖಾಸಗಿ ದೃಶ್ಯಗಳನ್ನು ಸಂಗ್ರಹಿಸಿದ್ದ ಆರೋಪಿಗಳು, ಅವುಗಳನ್ನು ದಂಪತಿಯ ವಾಟ್ಸ್‌ಆ್ಯಪ್‌ಗೆ ಕಳುಹಿಸಿದ್ದರು. ಅದೇ ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡುವುದಾಗಿ ಬೆದರಿಸಿದ್ದರು. ಆ ರೀತಿ ಮಾಡಬಾರದೆಂದರೆ ₹5 ಕೋಟಿ ನೀಡುವಂತೆ ಬೇಡಿಕೆ ಇಟ್ಟಿದ್ದರು ಎಂದು ಪೊಲೀಸರು ಮಾಹಿತಿ ನೀಡಿದರು.‌

ಈ ಸಂಬಂಧ ಪತಿಯು ಮೇ 16ರಂದು ದೂರು ನೀಡಿದ್ದರು. ಹಣ ನೀಡುವುದಾಗಿ ಹೇಳಿ ಆರೋಪಿಗಳನ್ನು ಕೆಂಗೇರಿಗೆ ಕರೆಸಿಕೊಂಡು ಬಂಧಿಸಲಾಯಿತು ಎಂದರು.

ಪ್ರವಾಸಕ್ಕೆ ಹೋದಾಗ ದೃಶ್ಯ ವರ್ಗಾಯಿಸಿಕೊಂಡಿದ್ದ; ಆರೋಪಿ ಸಂತೋಷ್‌ಕುಮಾರ್, ದೂರುದಾರ ದಂಪತಿಗೆ ಪರಿಚಯಸ್ಥನಾಗಿದ್ದರಿಂದ ಎಲ್ಲರೂ ಒಟ್ಟಿಗೆ ಹೊರ ರಾಜ್ಯದ ಪ್ರವಾಸಕ್ಕೆ ಹೋಗಿದ್ದರು. ಅದೇ ವೇಳೆ ಆರೋಪಿ, ಪ್ರವಾಸ ತಾಣಗಳ ಫೋಟೊ ಹಾಗೂ ವಿಡಿಯೊಗಳನ್ನು ಸೆರೆ ಹಿಡಿದಿದ್ದ. 

ಅದೇ ಫೋಟೊ ಹಾಗೂ ವಿಡಿಯೊಗಳನ್ನು ವರ್ಗಾವಣೆ ಮಾಡುವುದಾಗಿ ಹೇಳಿದ್ದ ಆರೋಪಿ, ಪತಿಯ ಮೊಬೈಲ್‌ ಪಡೆದುಕೊಂಡಿದ್ದ. ನಂತರ, ಅವರ ಮೊಬೈಲ್‌ನಲ್ಲಿದ್ದ ದಂಪತಿಯ ಏಕಾಂತದ ವಿಡಿಯೊಗಳನ್ನು ತನ್ನ ಮೊಬೈಲ್‌ಗೆ ವರ್ಗಾವಣೆ ಮಾಡಿಕೊಂಡಿದ್ದ. ಅವುಗಳನ್ನು ಇಟ್ಟುಕೊಂಡು ದಂಪತಿಗೆ ಬೆದರಿಕೆ ಹಾಕುತ್ತಿದ್ದ ಎಂದು ಪೊಲೀಸರು ಹೇಳಿದರು.

ಕದ್ದ ಮೊಬೈಲ್ ಬಳಕೆ; ಆರೋಪಿಗಳಾದ ಸುರೇಶ್‌ ಹಾಗೂ ಪ್ರದೀಪ್, ಮೈಸೂರಿನಿಂದ ಬೆಂಗಳೂರಿಗೆ ರೈಲಿನಲ್ಲಿ ಬರುವಾಗ ಚಾರ್ಜಿಂಗ್‌ಗೆ ಇಟ್ಟಿದ್ದ ಮೊಬೈಲ್‌ ಕದ್ದಿದ್ದರು. ಅದರಿಂದಲೇ ವಾಟ್ಸ್‌ಆ್ಯಪ್‌ನಲ್ಲಿ ದೂರುದಾರ ಹಾಗೂ ಅವರ ಪತ್ನಿಗೆ ಖಾಸಗಿ ದೃಶ್ಯಗಳನ್ನು ಕಳುಹಿಸಿದ್ದರು ಎಂದು ಪೊಲೀಸರು ಹೇಳಿದರು.

ಆ ನಂತರ, ದಂಪತಿಯ ಮೊಬೈಲ್‌ಗೆ ನಿರಂತರವಾಗಿ ಸಂದೇಶ ಕಳುಹಿಸುತ್ತಿದ್ದರು. ದಂಪತಿ ಹಣ ಕೊಡುವುದು ವಿಳಂಬವಾಗಿದ್ದರಿಂದ ಕರೆ ಮಾಡಿಯೂ ಬೆದರಿಸುತ್ತಿದ್ದರು ಎಂದರು.

ಕೊಲೆ ಪ್ರಕರಣ ಆರೋಪಿ

‘2010ರಲ್ಲಿ ತನ್ನ ಅತ್ತೆಯನ್ನು ಕೊಲೆ ಮಾಡಿದ್ದ ಆರೋಪದಡಿ ಸಂತೋಷ್‌ಕುಮಾರ್‌ನನ್ನು ಮೈಸೂರಿನ ನಜರಬಾದ್ ಪೊಲೀಸರು ಬಂಧಿಸಿದ್ದರು. ಆ ಪ್ರಕರಣದಲ್ಲಿ ಜಾಮೀನು ಪಡೆದು ಜೈಲಿನಿಂದ ಹೊರಬಂದಿದ್ದ ಆತ, ಸಿನಿಮಾ ಮಾಡಲು ಮುಂದಾಗಿದ್ದ. ಅದಕ್ಕೆ ಹಣ ಹೊಂದಿಸಲೆಂದು ಸ್ನೇಹಿತರ ಜತೆ ಸೇರಿ ಈ ಕೃತ್ಯ ಎಸಗಿದ್ದಾನೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT