ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಟಿನ್‌, ನರೇಂದ್ರ ಮೋದಿ ಮಾತುಕತೆ

ಸೋಚಿಯಲ್ಲಿ ಅನೌಪಚಾರಿಕ ಸಭೆ: ಭಾರತ–ರಷ್ಯಾ ಸಂಬಂಧ ವೃದ್ಧಿ ಕುರಿತು ಸಮಾಲೋಚನೆ
Last Updated 21 ಮೇ 2018, 19:40 IST
ಅಕ್ಷರ ಗಾತ್ರ

ಸೋಚಿ: ರಷ್ಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಇಲ್ಲಿ ಆಯೋಜಿಸಿದ್ದ ಪ್ರಥಮ ಅನೌಪಚಾರಿಕ ಸಭೆಯಲ್ಲಿ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರ ಜತೆ ಮಾತುಕತೆ ನಡೆಸಿದರು.

ಬಳಿಕ ಮಾತನಾಡಿದ ನರೇಂದ್ರ ಮೋದಿ, ’ರಷ್ಯಾ ಮತ್ತು ಭಾರತದ ನಡುವಣ ಸಹಭಾಗಿತ್ವ ಈಗ ಮತ್ತಷ್ಟು ಬಲಿಷ್ಠಗೊಂಡಿದೆ’ ಎಂದು ಬಣ್ಣಿಸಿದರು.

‘ಹಲವು ದಶಕಗಳಿಂದ ಭಾರತ ಮತ್ತು ರಷ್ಯಾ ನಡುವೆ ಉತ್ತಮ ಸ್ನೇಹ ಬಾಂಧವ್ಯ ಇದೆ. ಪ್ರಥಮ ಅನೌಪಚಾರಿಕ ಸಭೆಗೆ ನನ್ನನ್ನು ಆಹ್ವಾನಿಸಿರುವುದಕ್ಕೆ ಪುಟಿನ್‌ ಅವರಿಗೆ ಧನ್ಯವಾದಗಳು’ ಎಂದು ತಿಳಿಸಿದರು.

‘ಎಂಟು ರಾಷ್ಟ್ರಗಳ ಶಾಂಘೈ ಸಹಕಾರ ಸಂಘಟನೆಯಲ್ಲಿ ಭಾರತಕ್ಕೆ ಶಾಶ್ವತ ಸದಸ್ಯತ್ವ ದೊರೆಯಲು ರಷ್ಯಾ ಪ್ರಮುಖ ಪಾತ್ರ ವಹಿಸಿದ್ದು ಶ್ಲಾಘನೀಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಭಾರತ ಮತ್ತು ಪಾಕಿಸ್ತಾನ ಕಳೆದ ವರ್ಷ ಈ ಸಂಘಟನೆಯ ಸದಸ್ಯತ್ವ ಪಡೆದಿದ್ದವು.

ಮೋದಿ ಅವರನ್ನು ಸ್ವಾಗತಿಸಿದ ಪುಟಿನ್‌, ‘ಭಾರತದ ಪ್ರಧಾನಿ ಭೇಟಿಯಿಂದ ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧಗಳಿಗೆ ಮತ್ತಷ್ಟು ಅನುಕೂಲವಾಗಿದೆ. ರಕ್ಷಣಾ ಕ್ಷೇತ್ರದಲ್ಲಿ ಉಭಯ ದೇಶಗಳ ಸಹಕಾರ ಉತ್ತಮವಾಗಿದ್ದು, ರಕ್ಷಣಾ ಸಚಿವರು ನಿರಂತರ ಸಂಪರ್ಕದಲ್ಲಿದ್ದಾರೆ’ ಎಂದು ಹೇಳಿದರು.

‘ಉಭಯ ದೇಶಗಳ ನಡುವಣ ವ್ಯಾಪಾರ ಕಳೆದ ವರ್ಷ ವೃದ್ಧಿಯಾಗಿತ್ತು. ಈ ವರ್ಷ ಇದುವರೆಗೆ ಶೇಕಡ 17ರಷ್ಟು ಹೆಚ್ಚಾಗಿದೆ’ ಎಂದು ತಿಳಿಸಿದರು.

ಪ್ರಮುಖ ಜಾಗತಿಕ ಮತ್ತು ಪ್ರಾದೇಶಿಕ ವಿಷಯಗಳ ಕುರಿತು ಸಮಾಲೋಚನೆ ನಡೆಸಲು ಪುಟಿನ್‌ ಮತ್ತು ನರೇಂದ್ರ ಮೋದಿ ಅವರ ನಡುವೆ ಅನೌ
ಪಚಾರಿಕ ಸಭೆ ಆಯೋಜಿಸಲಾಗಿತ್ತು. ಯಾವುದೇ ರೀತಿಯ ಕಾರ್ಯಸೂಚಿ ಇಲ್ಲದೆ ಇಬ್ಬರು ನಾಯಕರು ನಾಲ್ಕರಿಂದ ಆರು ಗಂಟೆಗಳ ಕಾಲ ಮಾತುಕತೆ ನಡೆಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇರಾನ್‌ನ ಪರಮಾಣು ಒಪ್ಪಂದದಿಂದ ಅಮೆರಿಕ ಹಿಂದೆ ಸರಿದಿರುವುದರಿಂದ ಉಭಯ ದೇಶಗಳ ಮೇಲೆ ಉಂಟಾಗುವ ಆರ್ಥಿಕ ಪರಿಣಾಮಗಳು, ಅಫ್ಗಾನಿಸ್ತಾನ ಮತ್ತು ಸಿರಿಯಾದಲ್ಲಿನ ಪರಿಸ್ಥಿತಿ, ಭಯೋತ್ಪಾದನೆ, ಶಾಂಘೈ ಸಹಕಾರ ಸಂಘಟನೆ ಮತ್ತು ಬ್ರಿಕ್ಸ್‌ ಶೃಂಗಸಭೆ ಕುರಿತು ಪುಟಿನ್‌ ಮತ್ತು ಮೋದಿ ಅವರು ಸಮಾಲೋಚನೆ ನಡೆಸಿದರು.

ವಾಜಪೇಯಿ ನೆನಪಿಸಿಕೊಂಡ ಮೋದಿ

ಅಟಲ್‌ ಬಿಹಾರಿ ವಾಜಪೇಯಿ ಅವರ ಜತೆ ರಷ್ಯಾಗೆ ಭೇಟಿ ನೀಡಿದ್ದನ್ನು ಪ್ರಧಾನಿ ನರೇಂದ್ರ ಮೋದಿ ಈ ಸಂದರ್ಭದಲ್ಲಿ ನೆನಪಿಸಿಕೊಂಡ‌‌ರು. ತಮ್ಮ ಭಾಷಣದಲ್ಲಿ ಏಳು ಬಾರಿ ವಾಜಪೇಯಿ ಅವರನ್ನು ಸ್ಮರಿಸಿದರು.

‘ನನ್ನ ರಾಜಕೀಯ ಜೀವನದಲ್ಲಿ ರಷ್ಯಾ ಮತ್ತು ಪುಟಿನ್‌ ಅವರಿಗೆ ವಿಶಿಷ್ಟ ಸ್ಥಾನ ಇದೆ. 2001ರಲ್ಲಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ನಾನು ಅವರ ಜತೆ ರಷ್ಯಾಗೆ ಬಂದಿದ್ದೆ. ರಷ್ಯಾಗೆ ಅದು ನನ್ನ ಮೊದಲ ಭೇಟಿಯಾಗಿತ್ತು’ ಎಂದು  ನೆನಪಿಸಿಕೊಂಡರು.

‘ಅಟಲ್‌ ಬಿಹಾರಿ ವಾಜಪೇಯಿ ಮತ್ತು ಪುಟಿನ್‌ ಅವರು ಉಭಯ ದೇಶಗಳ ನಡುವಣ ಸಂಬಂಧ ಬಲಪಡಿಸಲು ಕೈಗೊಂಡ ಕ್ರಮಗಳಿಂದ ವಿಶೇಷ ಸಹಭಾಗಿತ್ವಕ್ಕೆ ಕಾರಣವಾಗಿದೆ’ ಎಂದು ಪ್ರಧಾನಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

‘ಗುಜರಾತ್‌ ಮುಖ್ಯಮಂತ್ರಿಯಾಗಿದ್ದಾಗ ಪುಟಿನ್‌ ಅವರನ್ನು ಭೇಟಿಯಾಗಿದ್ದೆ. ವಿದೇಶದ ನಾಯಕರನ್ನು ಭೇಟಿಯಾಗಿದ್ದು ಅದೇ ಮೊದಲು. ಹೀಗಾಗಿ, ನನ್ನ ಅಂತರರಾಷ್ಟ್ರೀಯ ಸಂಬಂಧಗಳು ರಷ್ಯಾ ಮತ್ತು ಪುಟಿನ್ ಅವರಿಂದ ಆರಂಭವಾದವು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT