ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರೀಚಿಕೆಯಾದ ಭದ್ರಾ ಮೇಲ್ದಂಡೆ ಯೋಜನೆ

ಜಗಳೂರು: ನೀರಿಲ್ಲದೆ ಸೊರಗಿದ 50ಕ್ಕೂ ಹೆಚ್ಚು ಕೆರೆಗಳು: ನೀರಿಗಾಗಿ ಹಾಹಾಕಾರ
Last Updated 22 ಮೇ 2018, 8:03 IST
ಅಕ್ಷರ ಗಾತ್ರ

ಜಗಳೂರು: ರಾಜ್ಯದ ಅತ್ಯಂತ ಕಡಿಮೆ ಮಳೆ ಬೀಳುವ ತಾಲ್ಲೂಕುಗಳಲ್ಲಿ ಒಂದಾದ ಜಗಳೂರಿನಲ್ಲಿ ನೀರಿಗೆ ಸದಾ ಹಾಹಾಕಾರ. ನೀರಾವರಿ, ಹಳ್ಳಿಗಾಡಿನಲ್ಲಿ ಸಾರಿಗೆ ಸಂಪರ್ಕ, ಕೈಗಾರಿಕೆ, ಶುದ್ಧ ಕುಡಿಯುವ ನೀರಿನ ಪೂರೈಕೆ ಸೇರಿದಂತೆ ದಶಕಗಳಿಂದ ತಾಲ್ಲೂಕಿನಲ್ಲಿ ಮೂಲ ಸೌಕರ್ಯಗಳ ಸಮಸ್ಯೆಗೆ ಇನ್ನೂ ಪರಿಹಾರ ಸಿಕ್ಕಿಲ್ಲ.

ಯಾವುದೇ ನದಿ ಅಥವಾ ಜಲಾಶಯ ಮೂಲಗಳಿಲ್ಲದ ಈ ಪ್ರದೇಶದಲ್ಲಿ ಕುಡಿಯುವ ನೀರು ಮತ್ತು ನೀರಾವರಿಗೆ ಅಂತರ್ಜಲವೇ ಏಕೈಕ ಆಧಾರ. ಈ ಹಿನ್ನೆಲೆಯಲ್ಲಿ ಶಾಶ್ವತ ಬರಪೀಡಿತ ತಾಲ್ಲೂಕು ಎಂಬ ಹಣೆಪಟ್ಟಿ ಅಂಟಿಕೊಂಡಿದೆ.

ಬರಿದಾದ ಕೆರೆಗಳು: ತಾಲ್ಲೂಕಿನ ಜೀವನಾಡಿಯಾಗಿರುವ 50ಕ್ಕೂ ಹೆಚ್ಚು ದೊಡ್ಡ ಕೆರೆಗಳು ದಶಕಗಳಿಂದ ನೀರಿಲ್ಲದೆ ಸೊರಗಿವೆ. ಅಂತರ್ಜಲ ಪಾತಾಳ ತಲುಪಿದ್ದು, ನೂರಾರು ಹಳ್ಳಿಗಳಲ್ಲಿ ಪ್ರತಿ ಬೇಸಿಗೆಯ ಸಂದರ್ಭ
ದಲ್ಲಿ ಹನಿ ನೀರಿಗೂ ತತ್ವಾರ ಸಾಮಾನ್ಯ. ಕೃಷಿ ಚಟುವಟಿಕೆಗಳಿಗೆ ಹಿನ್ನಡೆಯಾಗಿ, ಬಹುತೇಕ ಹಳಳಿಗಳಲ್ಲಿ ಕೂಲಿಕಾರ್ಮಿಕರು ಹೊಟ್ಟೆಪಾಡಿಗಾಗಿ ಸಾಮೂಹಿಕವಾಗಿ ಗುಳೆ ಹೋಗುವ ಸ್ಥಿತಿ ಇದೆ.

ನೀರಾವರಿ ಯೋಜನೆ ನೇಪಥ್ಯಕ್ಕೆ: ಭದ್ರಾ ಮೇಲ್ದಂಡೆ ಯೋಜನೆಯಡಿ ತಾಲ್ಲೂಕು ಸೇರ್ಪಡೆ ಮಾಡುವ ಐದು ದಶಕಗಳ ಬೇಡಿಕೆ ಇನ್ನೂ ಬೇಡಿಕೆಯಾಗಿಯೇ ಉಳಿದಿದೆ. ಈ ಹಿಂದೆ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಈ ಯೋಜನೆಯಡಿ 18,600 ಎಕೆರೆಗೆ ನೀರಾವರಿ ಕಲ್ಪಿಸಲು ಆದೇಶಿಸಿದ್ದರು. ನಂತರದಲ್ಲಿ ಐದಾರು ವರ್ಷಗಳಲ್ಲಿ ಯೋಜನೆಯಲ್ಲಿ ಮಹತ್ವದ ಬೆಳವಣಿಗೆಯಾಗಿಲ್ಲ.

ಶಾಖಾ ಕಾಲುವೆ ಮಾರ್ಗ ಬದಲಾವಣೆಗೆ ಸಂಬಂಧಿಸಿದಂತೆ ಅಧಿಕಾರಿಗಳ ಕ್ರಮದ ವಿರುದ್ಧ ಮಠಾಧಿಪತಿಗಳು, ತಾಲ್ಲೂಕಿನ ರೈತರು ಹಲವು ಬಾರಿ ಹೆದ್ದಾರಿ ಬಂದ್‌ ಚಳವಳಿ ನಡೆಸಿದ್ದರು. ನಂತರದಲ್ಲಿ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ನಿಯೋಗ ತೆರಳಿದಾಗ ಮಾರ್ಗ ಬದಲಾವಣೆಗೆ→ ಸಮಿತಿ ರಚಿಸಲಾಗಿತ್ತು. ಆದರೆ ಸಮಿತಿ ಇದುವರೆಗೂ →ವರದಿ ಸಲ್ಲಿಸಿಲ್ಲ.

ಈ ಬಗ್ಗೆ ಸಂಸದ ಜಿ.ಎಂ. ಸಿದ್ದೇಶ್ವರ ಅವರು ಹಲವು ಬಾರಿ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ದರು. ಕಾಲುವೆ ನಿರ್ಮಾಣಕ್ಕೆ ಭೂ ಸ್ವಾಧೀನ ಅಥವಾ ಸರ್ವೆ ಕಾರ್ಯವೂ ಆಗಿಲ್ಲ. ಕಾಲಹರಣ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದರು.

‘ಈವರೆಗೆ ಆಡಳಿತ ನಡೆಸಿದ ಸರ್ಕಾರಗಳು ತಾಲ್ಲೂಕಿಗೆ ನೀರಾವರಿ ಕಲ್ಪಿಸುವ ವಿಷಯದಲ್ಲಿ ಬರೀ ಸುಳ್ಳು ಹೇಳಿಕೊಂಡು ಬಂದಿವೆ. ಇಲ್ಲಿನ ರೈತರು, ಮತ್ತು ಜನ ಸಮುದಾಯದ ಹಿತದೃಷ್ಟಿಯಿಂದ ಭದ್ರಾ ಮೇಲ್ದಂಡೆ ಯೋಜನೆ ಜಾರಿಯಾಗಲೇಬೇಕು. ಜನರು ಹಿಂದಿನಂತೆ ಒಟ್ಟಾಗಬೇಕು. ಜೈಲಿಗೆ ಹೋದರೂ ಚಿಂತೆ ಇಲ್ಲ. ಬೇಡಿಕೆ ಈಡೇರುವವರೆಗೆ ಚಳವಳಿ ತೀವ್ರಗೊಳಿಸಬೇಕು’ ಎಂದು ಮುಸ್ಟೂರಿನ ಹುಚ್ಚನಾಗಲಿಂಗಸ್ವಾಮಿ ಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ  ಅಭಿಪ್ರಾಯಪಟ್ಟರು.

‘ನೂತನ ಶಾಸಕ ಎಸ್‌.ವಿ.ರಾಮಚಂದ್ರ ಅವರ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಶಾಸಕರ ನೇತೃತ್ವದಲ್ಲಿ ಮುಖ್ಯಮಂತ್ರಿಯ ಭೇಟಿ ಮಾಡಿ ಯೋಜನೆಯ ತ್ವರಿತ ಜಾರಿಗೆ ಒತ್ತಡ ತರಬೇಕು’ ಎಂದು
ಆಗ್ರಹಿಸಿದರು.

ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ತಾಲ್ಲೂಕಿನ 157 ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆಯ ಮಹತ್ವದ ಯೋಜನೆಯನ್ನು 7 ವರ್ಷಗಳ ಹಿಂದೆ ರೂಪಿಸಲಾಗಿತ್ತು. ತಜ್ಞ ಅಧಿಕಾರಿಗಳ ನೇತೃತ್ವದಲ್ಲಿ ಕ್ರಿಯಾಯೋಜನೆ
ತಯಾರಿಸಿ ಸರ್ಕಾರದ ಹಂತದಲ್ಲಿ ಅನುಮೋದನೆಗೆ ಸಲ್ಲಿಸಲಾಗಿತ್ತು. ಈವರೆಗೂ ಈ ಯೋಜನೆಯಲ್ಲಿ ಸ್ವಲ್ಪವೂ ಪ್ರಗತಿ ಕಾಣದೆ ನನೆಗುದಿಗೆ ಬಿದ್ದಿದೆ.

‘ದಶಕಗಳ ಸಮಸ್ಯೆಗೆ ಸ್ಪಂದನೆ ಅಗತ್ಯ’

ಜಗಳೂರಿನಲ್ಲಿ ಸರ್ಕಾರಿ ಬಸ್‌ ನಿಲ್ದಾಣ ಇದೆ. ಕೇವಲ ನಾಲ್ಕೈದು ಬಸ್‌ಗಳು ಮಾತ್ರ ಇದ್ದು, ಹಳ್ಳಿಗಳಿಗೆ ಬಸ್ ಸೌಲಭ್ಯ ಇಲ್ಲ. ಬಹುತೇಕ ಹಳ್ಳಿಗಳು ಬಸ್‌ಗಳ ಮುಖವನ್ನೇ ಇಂದಿಗೂ ಕಂಡಿಲ್ಲ. ಇದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ತೊಂದರೆಯಾಗುತ್ತಿದೆ. ರಾತ್ರಿ 8 ಗಂಟೆಯ ನಂತರ ಜಿಲ್ಲಾ ಕೇಂದ್ರದಿಂದ ಜಗಳೂರಿಗೆ ಹಾಗೂ ಜಗಳೂರಿನಿಂದ ದಾವಣಗೆರೆಗೆ ಒಂದೂ ಬಸ್‌ ಇಲ್ಲ. ರಾತ್ರಿ 8 ನಂತರ ಜಗಳೂರು ಅಕ್ಷರಶಃ ದ್ವೀಪವಾಗಿ ಪರಿಣಮಿಸುತ್ತದೆ. ದಶಕಗಳಿಂದ ಈ ಸಮಸ್ಯೆ ಇದ್ದರೂ ಯಾರೂ ಸ್ಪಂದಿಸಿಲ್ಲ ಎಂದು ಜಗಳೂರು ಗೊಲ್ಲರಹಟ್ಟಿ ಗ್ರಾಮದ ಗ್ರಾಮ ಪಂಚಾಯಿತಿ ಸದಸ್ಯ ವಿ. ವೆಂಕಟೇಶ್‌ ಹೇಳಿದರು.

**
ಬರಪೀಡಿತ ಪ್ರದೇಶವಾಗಿರುವ ಜಗಳೂರಿನಲ್ಲಿ ಕುಡಿಯುವ ನೀರಿನಲ್ಲಿ ಫ್ಲೋರೈಡ್‌ ಅಂಶ ಅಧಿಕವಾಗಿದ್ದು, ಶುದ್ಧ ಕುಡಿಯುವ ನೀರಿನ ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು
ಜೆ. ಅನುಲಾಕ್ಷಿ, ಮುಸ್ಟೂರು ಗ್ರಾಮದ ಎಂಬಿಎ ವಿದ್ಯಾರ್ಥಿನಿ 

– ಡಿ.ಶ್ರೀನಿವಾಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT