ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೀತಿಯಲ್ಲಿ ಕಾರ್ಮಿಕರು; ಶೆಡ್‌ ಖಾಲಿ ಖಾಲಿ..!

ಮನಗೂಳಿ ಹೊರ ವಲಯದ ಶೆಡ್‌ನಲ್ಲಿ 8 ವಿ.ವಿ.ಪ್ಯಾಟ್‌ (ಮತ ಖಾತ್ರಿ ಯಂತ್ರ) ಖಾಲಿ ಪೆಟ್ಟಿಗೆ ಪತ್ತೆ ಪ್ರಕರಣ
Last Updated 22 ಮೇ 2018, 9:32 IST
ಅಕ್ಷರ ಗಾತ್ರ

ಮನಗೂಳಿ (ವಿಜಯಪುರ): ಎಂಟು ವಿ.ವಿ.ಪ್ಯಾಟ್‌ಗಳು (ಮತ ಖಾತ್ರಿ ಯಂತ್ರ) ಖಾಲಿ ಇರುವ ಸ್ಥಿತಿಯಲ್ಲಿ ಪತ್ತೆಯಾದ ಪಟ್ಟಣದ ಹೊರವಲಯದ ಶೆಡ್‌ ಇದೀಗ ಖಾಲಿ ಖಾಲಿ...

ಶೆಡ್‌ನ ಒಂದು ಬದಿಯ ಕೋಣೆಯಲ್ಲಿ ಹೊದಿಕೆ, ಟಾರ್ಪಲ್‌, ತಲೆದಿಂಬು ಬಿದ್ದಿದ್ದರೆ; ಇನ್ನೊಂದು ಬದಿಯ ಕೋಣೆಯೊಳಗೆ ಅಡುಗೆ ಮಾಡುವ ಪಾತ್ರೆಗಳು, ಅಕ್ಕಿ, ಗೋದಿ ಹಿಟ್ಟಿನ ಪಾಕೆಟ್‌ಗಳು, ಉಪ್ಪು, ಖಾರದ ಪುಡಿ, ಎಣ್ಣೆಯ ಪಾಕೇಟ್‌, ಉಳ್ಳಾಗಡ್ಡಿ, ಮೆಣಸಿನಕಾಯಿ, ಬೆಂಡೆಕಾಯಿ, ಆಲೂಗಡ್ಡೆ ಬಿದ್ದಿದ್ದವು.

ಯಾರೊಬ್ಬರೂ ಇದರೊಳಗಿರಲಿಲ್ಲ. ಕೆಲವರನ್ನು ಪೊಲೀಸರು ವಿಚಾರಣೆಗಾಗಿ ಕರೆದೊಯ್ದಿದ್ದರೆ; ಉಳಿದವರು ಭೀತಿಯಿಂದ ನಾಪತ್ತೆಯಾಗಿದ್ದಾರೆ.

‘ಇಲ್ಲಿ ಚುನಾವಣಾ ಸಾಮಗ್ರಿಗಳಿದ್ದವು ಎಂಬುದೇ ಗೊತ್ತಿರಲಿಲ್ಲ. ವಿಜಯಪುರ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ನ ಪರಾಜಿತ ಅಭ್ಯರ್ಥಿ ಅಬ್ದುಲ್‌ ಹಮೀದ್‌ ಮುಶ್ರೀಫ್ ಬಂದಾಗಲೇ ನಮ್ಗೂ ಗೊತ್ತಾಗಿದ್ದು’ ಎಂದು ಹೆದ್ದಾರಿ ಕೆಲಸಕ್ಕೆ ಲಾರಿ ಬಾಡಿಗೆ ಓಡಿಸುತ್ತಿರುವ ಮನಗೂಳಿಯ ರಫೀಕ್‌ ದಳವಾಯಿ ‘ಪ್ರಜಾವಾಣಿ’ಗೆ ತಿಳಿಸಿದರು. ಮತ ಖಾತ್ರಿ ಯಂತ್ರದ ಖಾಲಿ ಪೆಟ್ಟಿಗೆ ದೊರೆತ ಶೆಡ್‌ನಿಂದ ಕೂಗಳತೆ ದೂರದಲ್ಲೇ ಮೂರ್ನಾಲ್ಕು ಶೆಡ್‌ಗಳಿವೆ. ಸೋಮವಾರ ಮಧ್ಯಾಹ್ನ ಕೆಲ ಕಾರ್ಮಿಕರು ವಿಶ್ರಾಂತಿ ಪಡೆಯುತ್ತಿದ್ದರೂ; ಪ್ರಕರಣದ ಕುರಿತಂತೆ ಮಾತನಾಡಲು ಹಿಂದೇಟು ಹಾಕಿದರು.

‘ಭಾನುವಾರ ರಾತ್ರಿ ಪೊಲೀಸರು ವಿಚಾರಣೆಗೆ ಇಲ್ಲಿದ್ದವರನ್ನು ಕರೆದೊಯ್ದಿದ್ದರು. ಆಗ ಶೆಡ್‌ಗಳಲ್ಲಿಟ್ಟಿದ್ದ ಮೊಬೈಲ್‌, ಚಾರ್ಜರ್‌, ಹೊಸ ಬಟ್ಟೆ ಕಳವು ಮಾಡಲಾಗಿದೆ. ಪೊಲೀಸರ ವಿಚಾರಣೆ, ವಸ್ತುಗಳ ಕಳವಿನಿಂದ ಇಲ್ಲಿನ ಕಾರ್ಮಿಕರು ಭಯ
ಭೀತರಾಗಿದ್ದಾರೆ. ಮಾತನಾಡಲು ಹಿಂಜರಿಯುತ್ತಿದ್ದಾರೆ’ ಎಂದು ರಫೀಕ್‌ ಹೇಳಿದರು.

ರಸ್ತೆ ಬದಿ ಸಿಕ್ಕಿದ್ದವು..!

‘ಗುಜರಾತಿನ ಸದ್‌ಭಾವ ಕನ್‌ಸ್ಟ್ರಕ್ಷನ್‌ ಕಂಪನಿ ವಿಜಯಪುರ–ಹೊಸಪೇಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಮನಗೂಳಿ ಬಳಿ ಮೇಲ್ಸೇತುವೆ ನಿರ್ಮಾಣ ಮಾಡುವ ಗುತ್ತಿಗೆ ಪಡೆದಿದೆ. ಒಂದು ವರ್ಷದಿಂದ ಕಾರ್ಮಿಕರು ಇಲ್ಲಿಯೇ ಶೆಡ್‌ ಹಾಕಿಕೊಂಡು ವಾಸವಿದ್ದಾರೆ.

ಬಿಹಾರ, ಉತ್ತರ ಪ್ರದೇಶ, ಛತ್ತೀಸ್‌ಗಡ, ಒಡಿಶಾ, ಗುಜರಾತ್‌, ರಾಜಸ್ಥಾನ ಸೇರಿದಂತೆ ವಿವಿಧ ರಾಜ್ಯಗಳ ಕೂಲಿ ಕಾರ್ಮಿಕರು ಇಲ್ಲಿದ್ದಾರೆ.

ರಾತ್ರಿ ವೇಳೆ ತಮ್ಮ ಕೆಲಸ ಪೂರೈಸಿಕೊಂಡು ಮರಳುವಾಗ ರಸ್ತೆ ಬದಿ ಬಿದ್ದಿದ್ದ ಖಾಲಿ ಬಾಕ್ಸ್‌ಗಳನ್ನು ತಮ್ಮ
ಶೆಡ್‌ಗೆ ತಂದಿಟ್ಟುಕೊಂಡು; ಅದರೊಳಗೆ ಬಟ್ಟೆ, ಇನ್ನಿತರೆ ಸಾಮಗ್ರಿ ತುಂಬಿಕೊಂಡಿದ್ದರು. 15ರಿಂದ 20 ಮಂದಿ ಆ ಶೆಡ್‌ನಲ್ಲಿ ವಾಸವಿದ್ದರು. ಭಾನುವಾರ ಸಂಜೆಯಿಂದ ಜನಜಾತ್ರೆಯೇ ನೆರೆದಿತ್ತು.

ಪೊಲೀಸರು ಅಲ್ಲಿದ್ದ ಎಲ್ಲರನ್ನೂ ಕರೆದೊಯ್ದಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ನಮ್ಮನ್ನೂ ಪ್ರಶ್ನಿಸಿದ್ದಾರೆ. ಆತಂಕ ಹೆಚ್ಚುತ್ತಿದೆ’ ಎಂದು ಹೆಸರು ಹೇಳಲು ಬಯಸದ ರಾಜಸ್ಥಾನದ ಕಾರ್ಮಿಕರೊಬ್ಬರು ಘಟನೆಯ ಮಾಹಿತಿ ನೀಡಿದರು. ‘ಶಾಲೆ ಕಲಿತವರಲ್ಲ. ರಸ್ತೆಯಲ್ಲಿ ಬಿದ್ದಿದ್ದ ಬಾಕ್ಸ್‌ಗಳನ್ನು ವಸ್ತುಗಳಿನ್ನಿಟ್ಟುಕೊಳ್ಳಲಷ್ಟೆ ತಂದಿದ್ದರು.

ಅದರ ಮೇಲೆ ಏನು ಬರೆದಿದೆ ಎಂಬುದು ಯಾರಿಗೂ ಅರ್ಥವಾಗಿರಲಿಲ್ಲ. ನಾವು ಕೂಲಿ ಕಾರ್ಮಿಕರು. ಈ ಬಗ್ಗೆ ನಮಗೆ ತಿಳಿಯಲ್ಲ. 10 ದಿನದ ಹಿಂದೆ ಈ ಬಾಕ್ಸ್‌ ದೊರಕಿವೆ’ ಎಂದು ಬಿಹಾರದ ಕೂಲಿ ಕಾರ್ಮಿಕ ಹರಮಿಂದರ್‌ ಸಾನಿ ಹೇಳಿದರು.

ಕೆರಳಿದ ಕುತೂಹಲ..!

ಶೆಡ್‌ನಲ್ಲಿ ವಿ.ವಿ.ಪ್ಯಾಟ್‌ ಯಂತ್ರಗಳ ಪೆಟ್ಟಿಗೆಯಿವೆ ಎಂಬ ವಿಷಯ ಎಲ್ಲೆಡೆ ಹಬ್ಬುತ್ತಿದ್ದಂತೆ ಜನ ತಂಡೋಪ ತಂಡವಾಗಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಸೋಮವಾರ ಸಹ ಮನಗೂಳಿ ಪೊಲೀಸ್ ಠಾಣೆ ಮುಂಭಾಗ ಜನರು ಜಮಾಯಿಸಿದ್ದರು.

ಮನಗೂಳಿ ಪಟ್ಟಣದ ಜೆಡಿಎಸ್‌ ಕಾರ್ಯಕರ್ತರು ಕಣ್ಗಾವಲಿನ ನಿಗಾವಿಟ್ಟಿದ್ದಾರೆ. ವಿಜಯಪುರ ನಗರ, ಬಬಲೇಶ್ವರ, ನಾಗಠಾಣ ಮೀಸಲು ವಿಧಾನಸಭಾ ಕ್ಷೇತ್ರ ಸೇರಿದಂತೆ ನೆರೆಯ ಅಥಣಿ ಕ್ಷೇತ್ರದ ವಿವಿಧ ಪಕ್ಷಗಳ ಕಾರ್ಯಕರ್ತರು, ಪರಾಜಿತರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಮೂರು ಪಕ್ಷಗಳ ಮುಖಂಡರು ಇವು ನಮ್ಮವೇ ಎಂದಿದ್ದಾರೆ. ಚುನಾವಣೆಗೆ ಬಳಕೆಯಾಗುವ ಯಂತ್ರಗಳ ಪೆಟ್ಟಿಗೆ ಶೆಡ್‌ವೊಂದರಲ್ಲಿ ಪತ್ತೆಯಾದವು ಅಂದರೇ ಏನು ? ಎಂಬುದೇ ತೀವ್ರ ಕುತೂಹಲ ಕೆರಳಿಸಿದೆ ಎಂದು ಪೊಲೀಸ್‌ ಠಾಣೆ ಮುಂದಿದ್ದ ರಾಜಶೇಖರ ಸಣಬೆಂಕಿ ತಿಳಿಸಿದರು.

**
2744 ವಿ.ವಿ.ಪ್ಯಾಟ್‌ಗಳು (ಮತ ಖಾತ್ರಿ ಯಂತ್ರ) ನಮ್ಮ ಬಳಿ ಸುರಕ್ಷತೆಯಿಂದಿವೆ. ಶೆಡ್‌ನಲ್ಲಿ ಪತ್ತೆಯಾದ ಖಾಲಿ ಬಾಕ್ಸ್‌ನಲ್ಲಿ ಯುನಿಕ್‌ ಐಡಿ ನಂಬರ್‌ ಇಲ್ಲ. ಪೊಲೀಸರು ವಿಚಾರಣೆ ನಡೆಸಿದ್ದಾರೆ
– ಎಸ್.ಬಿ.ಶೆಟ್ಟೆಣ್ಣವರ, ಜಿಲ್ಲಾಧಿಕಾರಿ

**
ಪ್ರಕರಣ ದಾಖಲಾಗಿದೆ. ವಿಜಯಪುರ ಡಿವೈಎಸ್‌ಪಿ ನೇತೃತ್ವದ ತಂಡ ತನಿಖೆ ಆರಂಭಿಸಿದೆ. ಚುನಾವಣಾ ಆಯೋಗದ ಅಧಿಕಾರಿಗಳು, ಬಿಇಎಲ್‌ ತಂತ್ರಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ
– ನಿಕ್ಕಂ ಪ್ರಕಾಶ್‌ ಅಮೃತ್‌, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

**
ವಿ.ವಿ.ಪ್ಯಾಟ್‌ ಯಂತ್ರಗಳನ್ನು ಬಿಇಎಲ್‌ ಎಂಜಿನಿಯರ್‌ ಮುಖೇಶ್‌ ಸೋಮವಾರ ಪರಿಶೀಲಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ವರದಿಯನ್ನು ಜಿಲ್ಲಾಧಿಕಾರಿಗೆ ಸಲ್ಲಿಸಲಿದ್ದಾರೆ
– ಸುಭಾಸ ಸಂಪಗಾವಿ, ಬಸವನಬಾಗೇವಾಡಿ ತಹಶೀಲ್ದಾರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT