ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಗಾರು ಬಿತ್ತನೆಗೆ ಬಿರುಸುಗೊಂಡ ಸಿದ್ಧತೆ..!

ನೆತ್ತಿ ಸುಡುವ ಕೆಂಡದಂತಹ ಬಿಸಿಲನ್ನು ಲೆಕ್ಕಿಸದೆ ಹೊಲಕ್ಕಿಳಿದ ರೈತ ಸಮೂಹ, ಕೃಷಿ ಚಟುವಟಿಕೆ ಚುರುಕು
Last Updated 22 ಮೇ 2018, 9:35 IST
ಅಕ್ಷರ ಗಾತ್ರ

ವಿಜಯಪುರ: ಜೂನ್‌ ಸಾತ್‌ಗೆ ಹದಿನೈದು ದಿನವಷ್ಟೇ ಬಾಕಿಯಿದೆ. ನಿರೀಕ್ಷೆಗೂ ಮುನ್ನವೇ ವರ್ಷಧಾರೆ ಸುರಿಯುವ ಭರವಸೆಯೊಂದಿಗೆ ಜಿಲ್ಲೆಯ ರೈತ ಸಮೂಹ ಮುಂಗಾರು ಬಿತ್ತನೆಗೆ ಸಿದ್ಧತೆ ಆರಂಭಿಸಿದೆ.

ಇದೀಗ ಜಿಲ್ಲೆಯ ವಿವಿಧೆಡೆ ಎತ್ತ ನೋಡಿದರೂ ಜಮೀನುಗಳಲ್ಲಿ ಕೃಷಿ ಪೂರಕ ಚಟುವಟಿಕೆ ಕೈಗೊಂಡಿರುವ ಚಿತ್ರಣ ಗೋಚರಿಸುತ್ತಿದೆ. ಹಲ ರೈತರು ಟ್ರ್ಯಾಕ್ಟರ್‌ ಮೂಲಕ ನೇಗಿಲು ಹೊಡೆದರೆ; ಈಗಾಗಲೇ ಗಳೆ ಹೊಡೆದಿದ್ದವರು ಕೃಷಿ ಕೂಲಿ ಕಾರ್ಮಿಕರೊಟ್ಟಿಗೆ ಕಸ ಆಯುವ ಚಿತ್ರಣ ಎಲ್ಲೆಡೆ ಕಂಡು ಬರುತ್ತಿದೆ.

‘ಕೃತ್ತಿಕಾ’ ಮಳೆ ವಿವಿಧೆಡೆ ಕೃಪೆ ತೋರಿತ್ತು. ‘ರೋಹಿಣಿ’ ಮಳೆಗೆ ತೊಗರಿ ಬಿತ್ತಬೇಕು. ಆದಷ್ಟು ಲಗು ಬಿತ್ತಿದರೆ, ಫಸಲು ಅಷ್ಟೇ ಬೇಗ ಕೈ ಸೇರಲಿದೆ. ಮಾರುಕಟ್ಟೆಯಲ್ಲಿ ಚಲೋ ಧಾರಣೆ ದೊರೆಯಲಿದೆ ಎಂಬ ಆಶಾವಾದದಿಂದ ಬಿತ್ತನೆಗೆ ಹೊಲ ಸಜ್ಜುಗೊಳಿಸುತ್ತಿರುವ ರೈತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

‘20 ಎಕ್ರೆ ಜಮೀನಿದೆ. ಹೋದ ವರ್ಸ 10 ಎಕ್ರೇಲೀ ತೊಗರಿ ಬಿತ್ತಿದ್ರೇ; ಇನ್ನ 10 ಎಕ್ರೇಲೀ ಕಡಲೆ ಬಿತ್ತಿದೆ. ಕಡಲೆ ಬಿತ್ತಿದ್ದ ಭೂಮಿಯನ್ನು ಮುಂಗಾರು ಬಿತ್ತನೆಗೆ ಈಗಾಗಲೇ ಅಣಿಗೊಳಿಸಿರುವೆ. ತೊಗರಿ ಬಿತ್ತಿದ್ದ ಭೂಮಿಗೆ ಕೈ ಹಚ್ಚಿರಲಿಲ್ಲ.

ತಿಂಗಳ ಹಿಂದೆ ಎತ್ತುಗಳಿಂದ ಗಳೆ ಹೊಡೆದು ಬಿಟ್ಟಿದ್ದೇ. ತೊಗರಿ ಕಡ್ಡಿ ಮುರಿದು ಬಿದ್ದಿತ್ತು. ಸ್ವಚ್ಛಗೊಳಿಸಿರಲಿಲ್ಲ. ಮೂರು ದಿನಗಳಿಂದ ಕೃಷಿ ಕೂಲಿ ಕಾರ್ಮಿಕ ಹೆಣ್ಮಕ್ಕಳ ಜತೆ ಮನೆಯವರು ಸೇರಿ ತೊಗರಿ ಕಡ್ಡಿ ಆಯ್ದು ರಾಶಿ ಮಾಡಿ ಬೆಂಕಿ ಹಾಕುತ್ತಿದ್ದೇವೆ. ಇನ್ನೂ ಎರಡ್ಮೂರು ದಿನ ಕೆಲಸ ಹಿಡಿಯುತ್ತೆ’ ಎಂದು ಮನಗೂಳಿ ಪಟ್ಟಣದ ರೈತ ಶಿವಾಜಿ ಜಾಂಬ್ರೆ ಸೋಮವಾರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮುಂಜಾನೆ ಏಳಕ್ಕೆ ಬರ್ತಾರೆ. ಮಧ್ಯಾಹ್ನ 12.30ರವರೆಗೂ ಕಸ–ಕಡ್ಡಿ ಆಯ್ತಾರೆ. ನಂತರ ಬಿಸಿಲ ಝಳ ತಾಳಲಾರದೆ ಮನೆಗೆ ಹೋಗ್ತಾರೆ. ಪಟ್ಟಣದಿಂದ ಇವರನ್ನು ಎತ್ತಿನ ಬಂಡಿಯಲ್ಲೇ ಕರೆ ತರಬೇಕು. ಮತ್ತೆ ಮನೆಗಳ ಹತ್ತಿರ ಬಿಡಬೇಕು.

ಒಂದಾಳಿಗೆ ₹ 200 – ₹ 250 ಇದೆ. ಮುಂಜಾನೆ ಕೆಲಸಕ್ಕೆ ಬರುವಾಗಲೇ ಬುತ್ತಿ–ನೀರು ಹೊತ್ತು ತಂದಿರ್ತಾರೆ. ಇವರ ಜತೆಯಲ್ಲೇ ಮನೆ ಮಂದಿಯೆಲ್ಲಾ ಒಟ್ಟಾಗಿ ಬಂದು ಬಿಸಿಲನ್ನು ಲೆಕ್ಕಿಸದೆ ಮೈ ಮುರಿದು ದುಡೀತಿದ್ದೀವಿ. ಎರಡ್ಮೂರು ದಿನದಲ್ಲಿ ತೊಗರಿ ಕಡ್ಡಿ ಆಯ್ದು ತೆಗೆಯುವುದು ಮುಗಿಯುತ್ತದೆ. ನಂತರ ಎತ್ತುಗಳಿಂದ ಕುಂಟೆಯಲ್ಲಿ ಹರಗಿ, ತೊಗರಿ ಬಿತ್ತನೆಗೆ ಭೂಮಿ ಹದಗೊಳಿಸುವೆ. ಮಳೆ ಬರುತ್ತಿದ್ದಂತೆ ಸಕಾಲಕ್ಕೆ ಬಿತ್ತುವೆ’ ಎಂದು ಶಿವಾಜಿ ಕೃಷಿ ರ್ಚಟುವಟಿಕೆಗಳ ಮಾಹಿತಿ ನೀಡಿದರು.

ಕೃಷಿ ಕೆಲಸ ಬಿಟ್ಟರೆ ಬೇರೆ ಗೊತ್ತಿಲ್ಲ..!

‘ನಮ್ಗ ಕೃಷಿ ಕೆಲಸ ಬಿಟ್ರೇ ಬೇರೆ ಏನು ಗೊತ್ತಿಲ್ಲ. ಕೆಲಸವಿಲ್ಲದೆ ಮನೆಯಲ್ಲಿ ಕೂತು ಸಾಕಷ್ಟು ದಿನವಾಗಿದ್ವು. ಏನಾದ್ರೂ ಸಿಕ್ಕ್ರೇ ಸಾಕು ಅಂತಹ ಕಾದು ಕೂತಿದ್ವು. ಜಾಂಬ್ರೆ ಹೊಲದಲ್ಲಿ ತೊಗರಿ ಕಡ್ಡಿ ಆಯೋದು ಐತಿ ಬರ್ರೀ ಅಂದಿದ್ದೆ ತಡ. ನಾಲ್ಕೈದು ಮಂದಿ ಒಟ್ಟಾಗಿ ಮೂರ್‌ ದಿನದಿಂದ ಕೆಲಸಕ್ಕೆ ಬರ್ತಿದ್ದೀವಿ’ ಎಂದು ಕೃಷಿ ಕೂಲಿ ಕಾರ್ಮಿಕ ಮಹಿಳೆಯರಾದ ಮಹಾದೇವಿ ಹಿಟ್ನಳ್ಳಿ ತಿಳಿಸಿದರು.

‘ಮಳೆ ಬಿದ್ದರೆ ನಮ್ದು ಬದುಕು. ಇಲ್ದಿದ್ರೇ ಭಾರಿ ತ್ರಾಸು. ತಿಂಗಳಲ್ಲಿ ಒಂದ್‌ ವಾರ ಕೆಲ್ಸಾ ಸಿಕ್ಕರೇ ನಮ್‌ ಪುಣ್ಯ. ಇದ್ದಾಗ ದುಂದ. ಇಲ್ಲದಾಗ ಅಷ್ಟೇ. ಹೆಂಗ ಬರುತ್ತೆ ಹಂಗ ಬದುಕು ಮಾಡ್ತೀವಿ. ಕಸ ಆಯೋಕೆ ಬಂದಿದ್ದೇವೆ. ಬೆಳಿಗ್ಗೆ 6ರಿಂದ ಮಧ್ಯಾಹ್ನ 12ರವರೆಗೆ ಕೆಲಸ ಮಾಡಿದರೆ ₹ 200 ಕೊಡ್ತಾರೆ’ ಎಂದು ಶಾಂತಕ್ಕ ಮಣೂರ ಹೇಳಿದರು.

**
ನಿತ್ಯ ಕೆಲಸ ಸಿಗಲ್ಲ. ರೈತನ್ದು, ನಮ್ದೂ ಒಂದೇ ಹಣೆ ಬರಹ. ಇಬ್ರೂದು ಲಾಭವಿಲ್ಲದ ಬದುಕು. ತಪ್ಪದ ಹೈರಾಣ. ಬಿಸಿಲು–ಮಳೆ ಯಾವ್ದು ನಮ್ಗ ಅಡ್ಡಿಯಾಗಲ್ಲ
ಅಣ್ಣವ್ವ ಮಂಗೊಂಡ, ಕೃಷಿ ಕೂಲಿ ಕಾರ್ಮಿಕರು

**
ಮೂರ್‌ ದಿನದಿಂದ ಪತಿ ಜತೆ ಹೊಲಕ್ಕೆ ಬಂದು ಹೆಣ್ಣಾಳುಗಳ ಜತೆಯಲ್ಲೇ ತೊಗರಿ ಕಡ್ಡಿ ಆಯಕ್ಕತ್ತೀವಿ. ಈ ವರ್ಸನಾದ್ರೂ ಚಲೋ ಮಳೆ–ಬೆಳೆಯಾಗಲಿ
ರೂಪಾ ಜಾಂಬ್ರೆ, ರೈತ ಮಹಿಳೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT