ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸ್ವಚ್ಛ ಭಾರತ’ ಮಾಡುವವರಿಗೆ ವೇತನ ಸಿಗುತ್ತಿಲ್ಲ

ಗುತ್ತಿಗೆ ಪೌರ ಕಾರ್ಮಿಕರ ಗೋಳು ಆಲಿಸದ ರಾಯಚೂರು ನಗರಸಭೆ
Last Updated 22 ಮೇ 2018, 9:58 IST
ಅಕ್ಷರ ಗಾತ್ರ

ರಾಯಚೂರು: ನಗರದಲ್ಲಿ ಸ್ವಚ್ಛ ಭಾರತ ಆಂದೋಲನದ ಜಾರಿಗೆ ನಿಜವಾಗಿಯೂ ಕೆಲಸ ಮಾಡುತ್ತಿರುವ ಗುತ್ತಿಗೆ ಪೌರ ಕಾರ್ಮಿಕರಿಗೆ ಮೂರು ತಿಂಗಳಿನಿಂದ ನಗರಸಭೆ ವೇತನ ನೀಡಿಲ್ಲ!

ವಾರ್ಡ್‌ವಾರು ಘನತ್ಯಾಜ್ಯ ನಿರ್ವಹಣೆ ಗುತ್ತಿಗೆ ಪಡೆದಿರುವ ಗುತ್ತಿಗೆದಾರರ ಮೂಲಕ ನಗರಸಭೆಯು ವೇತನ ಪಾವತಿಸುವ ವ್ಯವಸ್ಥೆ ಇದೆ. ವೇತನ ಕೊಡುವಂತೆ ಗುತ್ತಿಗೆದಾರರನ್ನು ಮತ್ತು ಅಧಿಕಾರಿಗಳನ್ನು ವಿಚಾರಿಸುವ ಪೌರಕಾರ್ಮಿಕರಿಗೆ ಕೆಲಸದಿಂದ ತೆಗೆದುಹಾಕುವುದಾಗಿ ಬೆದರಿಕೆ ಹಾಕಲಾಗುತ್ತಿದೆ.

ಗುತ್ತಿಗೆ ಪೌರ ಕಾರ್ಮಿಕರ ವೇತನ ಹೆಚ್ಚಿಸಲಾಗಿದೆ. ಬೆಳಿಗ್ಗೆ ಉಪಹಾರ ಕೊಡುವ ಯೋಜನೆ ಜಾರಿಗೆ ಬಂದಿದೆ. ಪ್ರತಿ ತಿಂಗಳು ಗುತ್ತಿಗೆ ಕಾರ್ಮಿಕರ ಹೆಸರಿನಲ್ಲಿ ಭವಿಷ್ಯ ನಿಧಿ (ಪಿಎಫ್‌) ಜಮೆಯಾಗುತ್ತದೆ. ಆರೋಗ್ಯ ತಪಾಸಣೆ ಹಾಗೂ ಸುರಕ್ಷಾ ಸಾಧನಗಳನ್ನು ನಗರಸಭೆಯಿಂದ ಒದಗಿಸಲಾಗುವುದು ಎಂದು ಕಾಲಕಾಲಕ್ಕೆ ನಗರಸಭೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಘೋಷಣೆ ಮಾಡುತ್ತಾ ಬಂದಿರುವುದು ಸಾಕಷ್ಟು ಪ್ರಚಾರದಲ್ಲಿದೆ. ಆದರೆ, ವಾಸ್ತವದಲ್ಲಿ ಯಾವ ಸೌಲಭ್ಯಗಳು ರಾಯಚೂರು ನಗರಸಭೆ ಗುತ್ತಿಗೆ ಕಾರ್ಮಿಕರಿಗೆ ಸಿಗುತ್ತಿಲ್ಲ.

‘ನಮ್ಮ ಓಣಿಯಲ್ಲಿ ಬರುವ 15 ದಿನಗಳಲ್ಲಿ ಮಾರೆಮ್ಮನ ಜಾತ್ರೆ ಇದೆ. ಮೂರು ತಿಂಗಳಿಂದ ಸಂಬಳ ಕೊಟ್ಟಿಲ್ಲ. ಕೇಳುವುದಕ್ಕೆ ಹೋದವರನ್ನು ಕೆಲಸದಿಂದ ತೆಗೆದು ಹಾಕುತ್ತಾರೆ. ಜೀವನ ಸಾಗಿಸುವುದು ಕಷ್ಟವಾಗಿದೆ. ಬೆಳಿಗ್ಗೆ ಊಟ ಮಾಡುವುದಕ್ಕೆ ಗತಿಯಿಲ್ಲದೆ ಕೆಲಸಕ್ಕೆ ಬರುತ್ತೇವೆ. ಸರ್ಕಾರ ಮಾಡಿದ ಯೋಜನೆಗಳ ಬಗ್ಗೆ ಕೇಳಿ, ನಮಗೂ ಖುಷಿಯಾಗಿತ್ತು. ಯಾವ ಸೌಲಭ್ಯಗಳನ್ನು ನಮಗೆ ಕೊಟ್ಟಿಲ್ಲ. ಬೆಳಿಗ್ಗೆ ಉಪಹಾರ ಕೊಡುತ್ತಿಲ್ಲ. ಅದರ ಬಗ್ಗೆ ನಾವು ವಿಚಾರಿಸಿಲ್ಲ. ಸರಿಯಾಗಿ ವೇತನ ಕೊಡ್ರೀ ಅಂದ್ರು ಕಣ್ಣು ಆಗಲಿಸಿ ನೋಡುತ್ತಿದ್ದಾರೆ’ ಎಂದು ಗುತ್ತಿಗೆ ಪೌರ ಕಾರ್ಮಿಕರು ಅಳಲು ತೋಡಿಕೊಂಡರು.

‘ಕಾಯಂ ಪೌರಕಾರ್ಮಿಕರು ಬೆರಳೆಣಿಕೆಯಷ್ಟಿದ್ದಾರೆ. ಅವರು ಸರಿಯಾಗಿ ಕೆಲಸ ಬರದಿದ್ದರೆ, ಅಧಿಕಾರಿಗಳು ಕೇಳುವುದಿಲ್ಲ. ಹೊರ ಗುತ್ತಿಗೆ ಪೌರಕಾರ್ಮಿಕರು 38 ಜನರಿದ್ದೇವೆ. ಆದರೆ, ಲೆಕ್ಕದಲ್ಲಿ ಬಹಳಷ್ಟು ಪೌರಕಾರ್ಮಿಕರನ್ನು ತೋರಿಸಿ, ನಗರಸಭೆಯಲ್ಲಿ ಅವ್ಯವಹಾರದಿಂದ ಹಣ ಎತ್ತುತ್ತಿದ್ದಾರೆ. ನಗರಸಭೆ ದೊಡ್ಡ ಸ್ಥಾನಗಳ ಜವಾಬ್ದಾರಿ ಇದ್ದವರು ಕೂಡಾ ಪಾಲು ಪಡೆಯುತ್ತಾರೆ. ಕಸ ಎತ್ತಿ ಹಾಕುವುದನ್ನು ಕಡ್ಡಾಯವಾಗಿ ಸೂಚಿಸಿ, ಕೆಲಸ ಮಾಡಿಸುತ್ತಾರೆ. ಆದರೆ, ಸಂಬಳ ಮಾತ್ರ ಕೊಡುತ್ತಿಲ್ಲ’ ಎಂದರು.

ನಗರಸಭೆಯಿಂದ ಪ್ರತಿ ತಿಂಗಳು ವೇತನ ಪಾವತಿಸುವುದು ವಿಳಂಬವಾದರೂ ಗುತ್ತಿಗೆದಾರರು, ಗುತ್ತಿಗೆ ಪೌರಕಾರ್ಮಿಕರಿಗೆ ಪ್ರತಿ ತಿಂಗಳು ಸಮರ್ಪಕವಾಗಿ ವೇತನ ನೀಡಬೇಕು. ವೇತನವನ್ನು ಮುಂಗಡವಾಗಿ ನೀಡುವ ಸಾಮರ್ಥ್ಯ ಇರುವವರು ಗುತ್ತಿಗೆ ವಹಿಸಿಕೊಳ್ಳುವ ಬಗ್ಗೆ ಟೆಂಡರ್್ ನಲ್ಲಿಯೆ ಷರತ್ತು ಹಾಕಲಾಗಿತ್ತು. ಆದರೆ, ಷರತ್ತಿನಲ್ಲಿ ಒಪ್ಪಿಕೊಂಡಿರುವಂತೆ ಪೌರ ಕಾರ್ಮಿಕರಿಗೆ ಗುತ್ತಿಗೆದಾರರು ವೇತನ ಕೊಡುತ್ತಿಲ್ಲ. ಅಧಿಕಾರಿಗಳನ್ನು ಕೇಳಿದರೆ, ಗುತ್ತಿಗೆದಾರರತ್ತ ಕೈ ತೋರಿಸುತ್ತಾರೆ. ಗುತ್ತಿಗೆದಾರರನ್ನು ತೋರಿಸಿದರೆ; ನಗರಸಭೆಯಿಂದ ಹಣ ಕೊಟ್ಟಿಲ್ಲ ಎನ್ನುವ ಕಾರಣ ಕೊಡುತ್ತಿದ್ದಾರೆ. ಗುತ್ತಿಗೆ ಪೌರ ಕಾರ್ಮಿಕರ ಗೋಳು ಅರಣ್ಯರೋದನವಾಗಿ ಮಾರ್ಪಟ್ಟಿದೆ.

‘ಸರ್ಕಾರವು ಹಣ ಬಿಡುಗಡೆಗೆ ಖಜಾನೆ–2 ಹೊಸ ಸಾಫ್ಟ್‌ವೇರ್‌ ಅನು ಷ್ಠಾನಗೊಳಿಸಿದೆ. ನಗರಸಭೆ ಹಣ ಜಮಾ ಆಗುವುದಕ್ಕೆ ತಾಂತ್ರಿಕ ತೊಂದರೆ ಆಗಿತ್ತು. ಸದ್ಯಕ್ಕೆ ಹಣ ಬಿಡುಗಡೆಯಾಗಿದ್ದು, ಇನ್ನೊಂದು ವಾರದಲ್ಲಿ ಗುತ್ತಿಗೆ ಪೌರಕಾರ್ಮಿಕರ ವೇತನ ಕೊಡುತ್ತೇವೆ’ ಎಂದು ನಗರಸಭೆ ಪೌರಾಯುಕ್ತ ರಮೇಶ ನಾಯಕ ‘ಪ್ರಜಾವಾಣಿ’ಗೆ ತಿಳಿಸಿದರು.

**
ಗುತ್ತಿಗೆ ಪೌರ ಕಾರ್ಮಿಕರಿಗೆ ಆದಷ್ಟು ಬೇಗನೆ ವೇತನ ಪಾವತಿಸುವುದಕ್ಕೆ ಕ್ರಮ ವಹಿಸುತ್ತೇನೆ. ತಾಂತ್ರಿಕ ಕಾರಣಗಳಿಂದಾಗಿ ಸ್ವಲ್ಪ ತೊಂದರೆಯಾಗಿತ್ತು
ರಮೇಶ ನಾಯಕ, ನಗರಸಭೆ ಪೌರಾಯುಕ್ತ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT