ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾದಾಮಿ ಅಭಿವೃದ್ಧಿಯ ಕನಸು ನನಸಾದೀತೇ?

ಚಾಲುಕ್ಯರ ರಾಜಧಾನಿಯಲ್ಲಿ ನೂತನ ಶಾಸಕರು ಅಭಿವೃದ್ಧಿ ಕೈಗೊಳ್ಳಲು ಆಗ್ರಹ
Last Updated 22 ಮೇ 2018, 10:12 IST
ಅಕ್ಷರ ಗಾತ್ರ

ಬಾದಾಮಿ: ಐತಿಹಾಸಿಕ ಪ್ರವಾಸಿ ತಾಣ ಅನೇಕ ದಶಕಗಳಿಂದ ಅಭಿವೃದ್ಧಿಯಲ್ಲಿ ಹಿನ್ನೆಡೆಯನ್ನು ಕಂಡಿದೆ. ಈ ಬಾರಿ ವಿಧಾನಸಭೆಗೆ ಆಯ್ಕೆಯಾದ ಮಾಜಿ ಮುಖ್ಯಮಂತ್ರಿ ಶಾಸಕ ಸಿದ್ದರಾಮಯ್ಯ ಐತಿಹಾಸಿಕ ನಾಡನ್ನು ಮುನ್ನಡೆ ಮಾಡುವರೇ ಎಂಬ ಪ್ರಶ್ನೆ ಕ್ಷೇತ್ರದ ಜನತೆಯದ್ದಾಗಿದೆ.

ಸ್ವಾತಂತ್ರ್ಯದ ನಂತರ ವಿವಿಧ ರಾಜಕೀಯ ಪಕ್ಷಗಳ ಶಾಸಕರು, ಸಂಸದರು ಆಯ್ಕೆಯಾಗಿದ್ದಾರೆ. ಐತಿಹಾಸಿಕ ಚಾಲುಕ್ಯ ನಗರಿ ಪ್ರವಾಸೋದ್ಯಮ ಅಭಿವೃದ್ಧಿಯು ಶತಮಾನಗಳ ಹಿಂದೆಯೇ ಇದೆ ಎಂದು ಹೇಳಬಹುದು. ಅನೇಕ ದಶಕಗಳಿಂದ ಇಲ್ಲಿನ ಜನರು ಮತ್ತು ಪ್ರವಾಸಿಗರು ಮೂಲ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಐತಿಹಾಸಿಕ ಬಾದಾಮಿಗೆ ಹಿಂದಿನ, ಈಗಿನ ರಾಜ್ಯ ಹಾಗೂ ಕೇಂದ್ರ ಸರ್ಕಾರ ಪ್ರವಾಸಿ ತಾಣದ ಅಭಿವೃದ್ಧಿಗೆ ನಗರೋತ್ಥಾನ, ಹೃದಯ, ಅಮೃತ ಅಭಿವೃದ್ಧಿ ಕಾರ್ಯಗಳನ್ನು ಘೋಷಿಸಿವೆ. ಆದರೆ ಕೆಲವೊಂದು ಸರ್ಕಾರದ ಕಡತಗಳಲ್ಲಿ ಉಳಿದಿವೆ. ಹೃದಯ, ಅಮೃತ ಕಾಮಗಾರಿ ವಿಳಂಬವಾಗಿವೆ ಎಂದು ಸ್ಥಳೀಯರ ಕೊರಗು.

2008ರಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಟೂರಿಸಂ ಪ್ಲಾಜಾ ನಿರ್ಮಿಸಲು ಪಟ್ಟದಕಲ್ಲು ಸಮೀಪ 24 ಎಕರೆ ಭೂಮಿಯಲ್ಲಿ ಅಭಿವೃದ್ಧಿಯಾಗದೇ ಜಾಲಿಮುಳ್ಳುಕಂಟಿ ಬೆಳೆದಿದೆ. ನೂತನ ಸರ್ಕಾರದ ಪ್ರವಾಸೋದ್ಯಮ ಅಭಿವೃದ್ಧಿ ಮಾಡುವುದೇ ಎಂಬುದನ್ನು ಕಾದು ನೋಡಬೇಕಿದೆ. ನೀರಾವರಿ ಕಾಲುವೆ ಬಂದು ನಾಲ್ಕು ದಶಕಗಳು ಸಂದಿವೆ. ನೀರು ಬಾರದೇ ಕಾಲುವೆಗಳು ಮುಚ್ಚಿಮಾಯವಾಗಿವೆ. ನವಿಲುತೀರ್ಥ ಜಲಾಶಯದಿಂದ ಮಲಪ್ರಭಾ ಎಡದಂಡೆ ಕಾಲುವೆಯಿಂದ ನೀರು ಬರುತ್ತಿಲ್ಲ. ಮಳೆಯ ಕೊರತೆಯಿಂದ ಕೊಳವೆ ಬಾವಿಗಳು ಬತ್ತಿಹೋಗಿವೆ. ರೈತರು ಸಂಕಷ್ಟದಲ್ಲಿ ಇದ್ದಾರೆ ಎಂದು ರೈತರ ಪ್ರತಿನಿಧಿಯಾಗಿ ಮಹಾಗುಂಡಪ್ಪ ಮಣ್ಣೂರ ಹೇಳಿದರು.

‘ಬಾಗಲಕೋಟೆ ಜಿಲ್ಲೆಯಲ್ಲಿಯೇ ಅತಿದೊಡ್ಡ ಕೆರೆಯಾದ ತಾಲ್ಲೂಕಿನ ಕೆಂದೂರ ಕೆರೆಯ ಅಭಿವೃದ್ಧಿಗೆ ಸ್ಥಳೀಯ ಗ್ರಾಮಸ್ಥರ ಮನವಿಗಳು ಅರಣ್ಯರೋದನವಾಗಿವೆ. ಮಂಗಳೂರು ಗ್ರಾಮದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮತ್ತು ಏತನೀರಾವರಿ ಯೋಜನೆ ಮುಗಿದು ಐದು ವರ್ಷಗಳಾಗಿವೆ. ಇನ್ನೂ ಉದ್ಘಾಟನೆ ಭಾಗ್ಯ ದೊರಕಿಲ್ಲ’ ಎಂದು ಗ್ರಾಮದ ರೈತ ಸಂಗಯ್ಯ ವಸ್ತ್ರದ ಹೇಳಿದರು.

‘ಚಾಲುಕ್ಯ ಪರಿಸರದಲ್ಲಿ ಶಿಲಾಯುಗದ ಕಾಲದಿಂದ ಕಲೆಯ ಆವಿಷ್ಕಾರವಾಗಿದೆ. ಇಲ್ಲಿ ಲಲಿತಕಲಾ ವಿಶ್ವವಿದ್ಯಾಲಯ ಆರಂಭವಾದರೆ ದಕ್ಷಿಣ ಭಾರತದಲ್ಲಿಯೇ ಮೊದಲ ವಿಶ್ವವಿದ್ಯಾಲಯವಾಗಲಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಲಲಿತಕಲೆ ಜ್ಞಾನ ಪ್ರಸಾರವಾಗುತ್ತದೆ’ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಬಾದಾಮಿ ಕೇಂದ್ರದ ಮುಖ್ಯಸ್ಥ ಡಾ. ಕೃಷ್ಣ ಕಟ್ಟಿ ಹೇಳಿದರು.

ಮಾ.12ರಂದು ಸಾಧನೆಯ ಸಮಾವೇಶಕ್ಕೆ ಬಂದಾಗ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಇಲ್ಲಿ ನೂರಾರು ಕೋಟಿ ವೆಚ್ಚದ ಕಾಮಗಾರಿಗಳಿಗೆ ಚಾಲನೆ ಮಾಡಿದ್ದನ್ನು ಸ್ಮರಿಸಬಹುದು. ಆದರೆ ನೂತನ ಕಾಮಗಾರಿಗಳಿಗೆ ಚಾಲನೆ ಸಿಗಬೇಕಿದೆ. ಐತಿಹಾಸಿಕ ಬಾದಾಮಿ ಕ್ಷೇತ್ರವನ್ನು ಅಭಿವೃದ್ಧಿ ಮಾಡುವುದಾಗಿ ಚುನಾವಣಾ ಪ್ರಚಾರದ ಸಾರ್ವಜನಿಕ ಬಹಿರಂಗ ಸಭೆಯಲ್ಲಿ ಸಿದ್ದರಾಮಯ್ಯ ಭರವಸೆ ವ್ಯಕ್ತಪಡಿಸಿದ್ದಾರೆ. ಬಾದಾಮಿ ಪಟ್ಟಣದಲ್ಲಿ ಬಾಡಿಗೆ ಮನೆಯನ್ನು ನೋಡುವಂತೆ ತಿಳಿಸಿದ್ದಾರೆ. ರಾಜಕೀಯ ಗೊಂದಲ ಮುಗಿದ ನಂತರ ಬಾದಾಮಿಗೆ ಬರುವೆ ಎಂದು ಸ್ಥಳೀಯ ಕಾಂಗ್ರೆಸ್‌ ಮುಖಂಡರಿಗೆ ಸಿದ್ದರಾಮಯ್ಯ ತಿಳಿಸಿದ್ದಾರೆ.

**
ಈ ಕ್ಷೇತ್ರದಲ್ಲಿ ಕಳೆದ 10 ವರ್ಷಗಳಿಂದ ಸರ್ಕಾರದ ಕಡತಗಳಲ್ಲಿದ್ದ ಅಭಿವೃದ್ಧಿ ಯೋಜನೆಗಳಿಗೆ ಮರು ಜೀವ ಬರಲಿ
– ಇಷ್ಟಲಿಂಗ ಶಿರಸಿ, ಸಾಮಾಜಿಕ ಕಾರ್ಯಕರ್ತ

ಎಸ್‌.ಎಂ. ಹಿರೇಮಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT