ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿತ್ತನೆಗೆ ಹದಗೊಂಡ ನೆಲ

ಜಿಲ್ಲೆಯಲ್ಲಿ ವಾಡಿಕೆಗಿಂತಲೂ ಅಧಿಕ ಮಳೆ
Last Updated 22 ಮೇ 2018, 10:29 IST
ಅಕ್ಷರ ಗಾತ್ರ

ಬಳ್ಳಾರಿ: ಜಿಲ್ಲೆಯಲ್ಲಿ ಮುಂಗಾರುಪೂರ್ವ ಅವಧಿಯಲ್ಲಿ ವಾಡಿಕೆಗಿಂತಲೂ ಅಧಿಕ ಮಳೆ ಸುರಿದಿದ್ದು, ಉಳುಮೆ ಕಾರ್ಯ ಪಶ್ಚಿಮ ತಾಲ್ಲೂಕುಗಳಲ್ಲಿ ಆರಂಭವಾಗಿದೆ. ನೆಲ ಹದಗೊಂಡಿದ್ದು, ಮತ್ತೊಂದು ಮಳೆ ಬಂದ ಬಳಿಕ ಬಿತ್ತನೆ ಕಾರ್ಯವೂ ನಡೆಯಲಿದೆ.

ಬಳ್ಳಾರಿ, ಸಿರುಗುಪ್ಪ ಮತ್ತು ಹೊಸಪೇಟೆ ತಾಲ್ಲೂಕಿನಲ್ಲಿ ನೀರಾವರಿ ಪದ್ಧತಿಯಲ್ಲಿ ಭತ್ತ ಹೆಚ್ಚು ಬೆಳೆಯುವುದರಿಂದ, ಜೂನ್‌ನಿಂದಲೇ ಕೃಷಿ ಚಟುವಟಿಕೆಗಳು ಗರಿಗೆದರಲಿವೆ. ಹಡಗಲಿ, ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ ಮತ್ತು ಸಂಡೂರು ತಾಲ್ಲಕಿನಲ್ಲಿ ಉಳುಮೆ ಭರದಿಂದ ನಡೆದಿದೆ.

‘ಪ್ರಮುಖವಾಗಿ ಭತ್ತ, ಮುಸುಕಿನ ಜೋಳ, ಬಿಳಿ ಜೋಳ, ತೊಗರಿ ಸೇರಿದಂತೆ ಸಿರಿಧಾನ್ಯಗಳ ಬಿತ್ತನೆಗೆ ರೈತರು ಒಲವು ತೋರಿದ್ದಾರೆ. ಅವರಿಗೆ ಬಿತ್ತನೆ ಬೀಜ ವಿತರಿಸಲು ಸಕಲ ಸಿದ್ಧತೆ ನಡೆದಿದೆ’ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಎಂ.ಎಸ್‌.ದಿವಾಕರ್‌ ’ಪ್ರಜಾವಾಣಿ’ಗೆ ಸೋಮವಾರ ತಿಳಿಸಿದರು.

‘ಮೆಕ್ಕೆ ಜೋಳವನ್ನು ಹೊರತುಪಡಿಸಿ ಮಿಕ್ಕೆಲ್ಲ ಬಿತ್ತನೆ ಬೀಜಗಳ ದಾಸ್ತಾನು ಮಾಡಲಾಗುತ್ತಿದೆ. ಮೊದಲ ಹಂತದಲ್ಲಿ 15 ಸಾವಿರ ಕ್ವಿಂಟ್‌ ಬಿತ್ತನೆ ಬೀಜಗಳನ್ನು ಸಂಗ್ರಹಿಸಿಡುವಂತೆ ಕರ್ನಾಟಕ ಬೀಜ ನಿಗಮಕ್ಕೆ ಸೂಚಿಸಲಾಗಿದೆ’ ಎಂದು ತಿಳಿಸಿದರು.

‘ಜಿಲ್ಲೆಯಲ್ಲಿ 27 ರೈತ ಸಂಪರ್ಕ ಕೇಂದ್ರಗಳಿದ್ದು, ಕೇಂದ್ರವು ದೂರವಿರುವ ಹಳ್ಳಿಗಳ ರೈತರ ಅನುಕೂಲಕ್ಕಾಗಿ ಹಿಂದಿನ ವರ್ಷ ಜಿಲ್ಲೆಯ ನಾಲ್ಕು ಕಡೆದ ಹೆಚ್ಚುವರಿ ಕೇಂದ್ರಗಳನ್ನು ತೆರೆಯಲಾಗಿತ್ತು, ಈ ವರ್ಷವೂ ರೈತರಿಂದ ಬೇಡಿಕೆ ಬಂದಿದೆ. ಈ ನಾಲ್ಕರ ಜತೆಗೆ ಇನ್ನಷ್ಟು ಕೇಂದ್ರಗಳನ್ನು ತೆರೆಯುವ ಉದ್ದೇಶವಿದೆ. ವಾರದೊಳಗೆ ಬಿತ್ತನೆ ಬೀಜ ವಿತರಿಸಲಾಗುವುದು’ ಎಂದು ಮಾಹಿತಿ ನೀಡಿದರು.

‘ಕಳಪೆ ಬಿತ್ತನೆ ಬೀಜ ಮಾರಾಟಕ್ಕೆ ತಡೆ’

‘ಬಿ.ಟಿ.ಹತ್ತಿಯ ಕಳಪೆ ಬಿತ್ತನೆ ಬೀಜ ಮಾರಾಟ ನಿಯಂತ್ರಣಕ್ಕೂ ಅಗತ್ಯ ಕ್ರಮ ಕೈಗೊಳ್ಳಲಾಗಿದೆ.  ಆಂಧ್ರಪ್ರದೇಶದಿಂದ ಕಳಪೆ ಬೀಜ ಬಾರದಂತೆ ಎಚ್ಚರ ವಹಿಸಲಾಗಿದೆ. ಅಲ್ಲಿನ ಸರ್ಕಾರವೂ ಕಠಿಣ ಕ್ರಮ ಕೈಗೊಂಡಿದೆ’ ಎಂದು ಜಂಟ ನಿರ್ದೇಶಕ ದಿವಾಕರ್‌ ತಿಳಿಸಿದರು.

**
ಕಡಿಮೆ ನೀರು ಮತ್ತು ಕಡಿಮೆ ಬಿತ್ತನೆ ಬೀಜ ಬಯಸುವ, ಹೆಚ್ಚು ಇಳುವರಿ ನೀಡುವ ಕೂರಿಗೆ ಬಿತ್ತನೆ ಪದ್ಧತಿಯ ಅನುಷ್ಠಾನಕ್ಕೆ ಜೂನ್‌ನಿಂದ ಉತ್ತೇಜನ ನೀಡಲಾಗುವುದು
ಎಂ.ಎಸ್‌.ದಿವಾಕರ್‌, ಕೃಷಿ ಜಂಟಿ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT