ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಧರ ಆಶಾಕಿರಣ ಕಾನ್‌ಸ್ಟೆಬಲ್ ಕರಬಸಪ್ಪ

ಪರಿಸರ ಪ್ರೇಮಿ, ನೇತ್ರದಾನಿ ರಾಯಭಾರಿ, ರಕ್ತದಾನಿಯಾಗಿಯೂ ಜನಪ್ರಿಯ
Last Updated 22 ಮೇ 2018, 11:44 IST
ಅಕ್ಷರ ಗಾತ್ರ

ಹಾವೇರಿ: ಅಪಘಾತ, ಹೆರಿಗೆ ಅಥವಾ ಇನ್ನಾವುದೇ ತುರ್ತು ಸಂದರ್ಭದಲ್ಲಿ ರೋಗಿಗಳಿಗೆ ರಕ್ತ ಬೇಕಾಗಿದ್ದರೆ ರಕ್ತನಿಧಿ (ಬ್ಲಡ್ ಬ್ಯಾಂಕ್) ಅಥವಾ ಆಸ್ಪತ್ರೆಗಳಿಗೆ ಕರೆ ಹೋಗುವುದು ಸಾಮಾನ್ಯ. ಆದರೆ, ಜಿಲ್ಲೆಯಲ್ಲಿ ಇವೆಲ್ಲವುಗಳ ಜತೆಗೆ, ಆಡೂರು ಗ್ರಾಮದ ಪೊಲೀಸ್ ಠಾಣೆಯಲ್ಲಿರುವ ಕಾನ್‌ಸ್ಟೆಬಲ್‌ ಕರಬಸಪ್ಪ ಮನೋಹರ ಗೊಂದಿ ಅವರಿಗೂ ಕರೆ ಹೋಗುತ್ತದೆ.

ಹೌದು. ಹಾನಗಲ್‌ ತಾಲ್ಲೂಕಿನ ಆಡೂರ ಪೊಲೀಸ್‌ ಠಾಣೆಯಲ್ಲಿ ಕಾನ್‌ಸ್ಟೆಬಲ್‌ ಆಗಿರುವ ಕರಬಸಪ್ಪ, ತುರ್ತು ಸಂದರ್ಭಗಳಲ್ಲಿ ಯಾರೇ ಕರೆ ಮಾಡಿದರೂ ಸ್ಪಂದಿಸುತ್ತಾರೆ. ಇವರು ವೃತ್ತಿಯಲ್ಲಿ ಪೊಲೀಸ್‌ ಆಗಿದ್ದರೂ, ಪ್ರವೃತ್ತಿಯಲ್ಲಿ ಪರಿಸರ ಪ್ರೇಮಿ, ನೇತ್ರದಾನಿ ರಾಯಭಾರಿ ಹಾಗೂ ರಕ್ತದಾನಿ. ಹಾಗಾಗಿ, ಇವರ ಹೆಸರು ಜಿಲ್ಲೆಯಲ್ಲಿ ಜನಪ್ರಿಯವಾಗಿದೆ.

ವಾಟ್ಸ್‌ಆ್ಯಪ್ ಗ್ರೂಪ್: ಅಕ್ಕಿಆಲೂರು ಗ್ರಾಮದವರಾದ ಇವರ ಕಾರ್ಯಕ್ಕೆ ಮಡದಿ ವಿನುತಾ, ತಂದೆ ಮನೋಹರ, ತಾಯಿ ಕುಸುಮಾ ಹಾಗೂ ಸಂಬಂಧಿಕರು ಕೂಡಾ ಕೈ ಜೋಡಿಸಿದ್ದಾರೆ. ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ನಲ್ಲಿ ‘ಸ್ನೇಹಮೈತ್ರಿ ರಕ್ತದಾನಿಗಳ ಬಳಗ’ ಎಂಬ ಗ್ರೂಪ್‌ ಮಾಡಿಕೊಂಡು, ತಮ್ಮ ಜಾಲವನ್ನು ವಿಸ್ತರಿಸಿಕೊಂಡಿದ್ದಾರೆ. 1,300ಕ್ಕೂ ಅಧಿಕ ಜನರ ರಕ್ತದ ಗುಂಪಿನ ವಿವರ ಸಂಗ್ರಹಿಸಿಟ್ಟುಕೊಂಡಿರುವ ಕರಬಸಪ್ಪ, ರಕ್ತದ ಅವಶ್ಯಕತೆ ಇರುವವರಿಗೆ ಸಹಾಯ ಮಾಡುತ್ತಿದ್ದಾರೆ.

ಎಲ್ಲರೂ ತಮ್ಮ ಮನೆಯಲ್ಲಿ ನಡೆಯುವ ಮದುವೆ, ಸೀಮಂತ, ನಾಮಕರಣ ಸೇರಿದಂತೆ, ಇನ್ನಾವುದೇ ಶುಭ ಸಮಾರಂಭಗಳಲ್ಲಿ, ಮನೆಯನ್ನು ಶೃಂಗಾರ ಮಾಡುವುದು ಸರ್ವೇ ಸಾಮಾನ್ಯ. ಆದರೆ, ಇವರ ಮನೆಯಲ್ಲಿ ಶೃಂಗಾರದ ಜೊತೆಗೆ ರಕ್ತದಾನ, ನೇತ್ರದಾನ ಹಾಗೂ ದೇಹದಾನದ ಬಗ್ಗೆ ಜಾಗೃತಿ ಮೂಡಿಸುವ ಚಿತ್ರಪಟಗಳು ನೇತಾಡುತ್ತಿರುತ್ತವೆ.

‘ನನ್ನ ಮಗನ ನಾಮಕರಣ ಸಮಾರಂಭವನ್ನು ವೃಕ್ಷದಾನ ಹಾಗೂ ಸ್ವಾಮೀಜಿಗಳಿಗೆ ಸಸಿಗಳ ತುಲಾಬಾರ ಮಾಡುವ ಮೂಲಕ ವಿಶೇಷವಾಗಿ ಆಚರಿಸಿದೆ. ಮನೆಯಲ್ಲಿ ಕಳೆದ ವರ್ಷ ಮಠಾಧೀಶರ ನೇತೃತ್ವದಲ್ಲಿ ಸಸಿಗಳಿಗೆ ‘ತೊಟ್ಟಿಲ ಶಾಸ್ತ್ರ’ ನಡೆಸಿದೆ. ಅವುಗಳಿಗೆ ಮನೆಯ ಹಿರಿಯರ ಹಾಗೂ ಮಹಾತ್ಮರ ಹೆಸರನ್ನು ನಾಮಕರಣ ಮಾಡಿದ್ದೇನೆ’ ಎಂದು ಅವರು ಹೇಳಿದರು.

ಪ್ರಶಸ್ತಿಗಳು: ಕರಬಸಪ್ಪ ಅವರ ಸಮಾಜಮುಖಿ ಕಾರ್ಯಕ್ಕೆ ಮೆಚ್ಚಿ ದಾವಣಗೆರೆಯಲ್ಲಿ 2017ರಲ್ಲಿ ನಡೆದ ಶಿವಸಿಂಪಿ ಸಮಾವೇಶದಲ್ಲಿ ‘ಶಿವಸಿಂಪಿ ನೇತ್ರದಾನ ರಾಯಭಾರಿ’ ಎಂಬ ಪ್ರಶಸ್ತಿ ನೀಡಲಾಗಿದೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ. ಪರಶುರಾಂ ಅವರು, ಕರಬಸಪ್ಪ ಅವರಿಗೆ  ಸನ್ಮಾನ ಮಾಡಿ ಪ್ರೋತ್ಸಾಹಿಸಿದ್ದಾರೆ.

ಕರಬಸಪ್ಪ ಮನೋಹರ ಗೊಂದಿ ಅವರ ಸಂಪರ್ಕ ಸಂಖ್ಯೆ: 80883 18888, 88611 18881.

ನೇತ್ರದಾನ, ದೇಹದಾನ ವಾಗ್ದಾನ

‘ಕುಟುಂಬದವರು ಸೇರಿದಂತೆ, ಸುಮಾರು 450 ಜನರಿಂದ ಹಾಗೂ ನಮ್ಮ ಠಾಣೆಯ ವ್ಯಾಪ್ತಿಯಲ್ಲಿ ನಡೆದ ಅಪಘಾತಗಳಲ್ಲಿ ಮೃತರಾದ 15ಕ್ಕೂ ಅಧಿಕ ವ್ಯಕ್ತಿಗಳ ಕಣ್ಣಗಳನ್ನು ದಾನ ಮಾಡಿಸಿದ್ದೇನೆ. ನಮ್ಮ ತಂದೆ –ತಾಯಿ ಹಾಗೂ ದೊಡ್ಡಪ್ಪ ಬಾಬಣ್ಣ ಸೇರಿ, ಕುಟುಂಬದ 5 ಮಂದಿ ಹಾವೇರಿ ಸಿಂದಗಿ ಶಾಂತವೀರೇಶ್ವರ ಆಯುರ್ವೇದಿಕ್ ಮೆಡಿಕಲ್‌ ಕಾಲೇಜಿಗೆ ದೇಹದಾನದ ವಾಗ್ದಾನ ಮಾಡಿದ್ದಾರೆ’ ಎಂದು ಕರಬಸಪ್ಪ ಮನೋಹರ ಗೊಂದಿ ’ಪ್ರಜಾವಾಣಿ’ಗೆ ತಿಳಿಸಿದರು.

**
ಬಿಡುವಿನ ವೇಳೆಯಲ್ಲಿ ಪರಿಸರ ಕಾಳಜಿ, ರಕ್ತದಾನ, ನೇತ್ರದಾನ ಹಾಗೂ ದೇಹದಾನದ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಕರಬಸಪ್ಪ ಅವರ ಕಾರ್ಯ ಶ್ಲಾಘನೀಯ
ಕೆ. ಪರಶುರಾಂ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ 

**
ಪ್ರತಿ ತಿಂಗಳು ಶಂಕರ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಮನೆಯಲ್ಲಿ ಉಚಿತ ನೇತ್ರ ತಪಾಸಣೆ ಶಿಬಿರ ನಡೆಸಲಾಗುವುದು. ಅಗತ್ಯವಿದ್ದವರಿಗೆ ಶಸ್ತ್ರಚಿಕಿತ್ಸೆ ಮಾಡಿಸಲಾಗುವುದು
– ಕರಬಸಪ್ಪ ಮನೋಹರ ಗೊಂದಿ ಕಾನ್‌ಸ್ಟೆಬಲ್, ಆಡೂರು ಪೊಲೀಸ್ ಠಾಣೆ 

ಪ್ರವೀಣ ಸಿ. ಪೂಜಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT