ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರಿಗೂ ಬೇಕು ಆರೋಗ್ಯ ವಿಮೆ

Last Updated 22 ಮೇ 2018, 19:30 IST
ಅಕ್ಷರ ಗಾತ್ರ

ಈಚಿನ ವರ್ಷಗಳಲ್ಲಿ ಭಾರತೀಯ ಮಹಿಳೆಯರ ಜೀವನಶೈಲಿ ಬದಲಾಗಿದೆ. ಅವರು ಅಳವಡಿಸಿಕೊಂಡಿರುವ ಒತ್ತಡದ ಜೀವನ ಶೈಲಿಯನ್ನು ಗಮನಿಸಿದರೆ, ಅವರು ಆರೋಗ್ಯಪೂರ್ಣ ಜೀವನ ಶೈಲಿ ಅನುಸರಿಸುವುದರ ಜೊತೆಗೆ ಒಂದು ಸಮಗ್ರವಾದ ಆರೋಗ್ಯ ವಿಮೆಯನ್ನೂ ಹೊಂದುವುದು ಅತ್ಯಗತ್ಯ ಎಂದೆನಿಸುತ್ತದೆ.

ನಮ್ಮ ಮಹಿಳೆಯರು ‘ಸೂಪರ್‌ ವುಮನ್‌’ಗಳಾಗಿ ಬದಲಾವಣೆಯಾಗುತ್ತಿರುವುದನ್ನು ಕೆಲವು ದಶಕಗಳ ಹಿಂದೆ ಮುಖ್ಯ ವಾಹಿನಿಯ ಮಾಧ್ಯಮಗಳು ಗುರುತಿಸಿದವು. ಇಂಥ ಮಹಿಳೆಯರನ್ನು ಈಗ ಬೇರೆಲ್ಲೋ ಹುಡುಕಬೇಕಾಗಿಲ್ಲ. ನಮ್ಮ ಮನೆಗಳಲ್ಲೇ ಇದ್ದಾರೆ. ಇವರು ಏಕಕಾಲಕ್ಕೆ ಒಬ್ಬ ತಾಯಿ, ಪತ್ನಿ, ಮಗಳು, ಸೊಸೆ, ಸ್ನೇಹಿತೆ, ಉದ್ಯೋಗಿ, ಸಹೋದ್ಯೋಗಿ... ಎಲ್ಲವೂ ಆಗಿದ್ದಾರೆ. ಈ ಎಲ್ಲಾ ಪಾತ್ರಗಳನ್ನು ಸಮರ್ಥವಾಗಿ ನಿಭಾಯಿಸುತ್ತಲೇ ‘ನನ್ನ ಆರೋಗ್ಯ’ ಎಂಬ ಅತ್ಯಂತ ಪ್ರಮುಖ ಪಾತ್ರವನ್ನು ನಿರ್ಲಕ್ಷಿಸಲು ಆರಂಭಿಸುತ್ತಾರೆ. ಅದರತ್ತ ಗಮನಹರಿಸಲು ಅವರಲ್ಲಿ ಸಮಯವೇ ಇರುವುದಿಲ್ಲ. ಬೇರೆಯವರ ಅಗತ್ಯ, ಬೇಡಿಕೆಗಳನ್ನು ಪೂರೈಸುವುದರ ಮುಂದೆ ಈ ‘ಸೂಪರ್‌ ವುಮನ್‌’ಗೆ ತನ್ನ ಆರೋಗ್ಯ ಮುಖ್ಯ ಎಂದೆನಿಸುವುದಿಲ್ಲ. ಈ ‘ಸೂಪರ್‌ ವುಮನ್‌’ ಪಾತ್ರವು ಮಹಿಳೆಯ ಜೀವನದ ಮೇಲೆ ಯಾವ ಪರಿಣಾಮ ಉಂಟುಮಾಡುತ್ತಿದೆ ಎಂಬುದು ಗೊತ್ತಿದೆಯೇ?

‘ಅಸೋಚಾಂ’ ನಡೆಸಿದ ಒಂದು ಅಧ್ಯಯನದ ಪ್ರಕಾರ ನೌಕರಿ ಮಾಡುವ ಶೇ 80ರಷ್ಟು ಭಾರತೀಯ ಮಹಿಳೆಯರು, ಹೃದಯದ ರಕ್ತನಾಳದ ಸಮಸ್ಯೆ, ಮಧುಮೇಹ, ರಕ್ತದೊತ್ತಡ, ಖಿನ್ನತೆ, ಬೊಜ್ಜು, ಬೆನ್ನು ನೋವು ಮುಂತಾದ ಜೀವನಶೈಲಿ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ವೃತ್ತಿ ಹಾಗೂ ವೈಯಕ್ತಿಕ ಬದುಕನ್ನು ಸರಿದೂಗಿಸುವಲ್ಲಿ ಉಂಟಾಗುವ ಒತ್ತಡವೇ ಈ ಸಮಸ್ಯೆಗಳಿಗೆ ಪ್ರಮುಖ ಕಾರಣ. ಇವೆಲ್ಲ ಸಣ್ಣ ಪುಟ್ಟ ಸಮಸ್ಯೆಗಳೆಂದು ಆರಂಭದಲ್ಲಿ ನಿರ್ಲಕ್ಷಿಸಿದರೆ ಮುಂದೆ ಇವುಗಳೇ ಹೆಮ್ಮಾರಿಗಳಾಗಿ ಬೆಳೆದುನಿಲ್ಲುವ ಸಾಧ್ಯತೆ ಇದೆ. ಸಾಮಾನ್ಯವಾಗಿ ಕಂಡುಬರುವ ಜೀವನಶೈಲಿ ಕಾಯಿಲೆಗಳಲ್ಲದೆ ಸ್ತನ ಕ್ಯಾನ್ಸರ್‌, ಬೆನ್ನ ಹುರಿಯ ಸಮಸ್ಯೆ, ಅನೀಮಿಯ, ಕ್ಯಾಲ್ಸಿಯಂ ಕೊರತೆ ಮುಂತಾದ ಕೆಲವು ಸಮಸ್ಯೆಗಳನ್ನೂ ಮಹಿಳೆಯರು ಎದುರಿಸಬೇಕಾಗುತ್ತದೆ. ಇವುಗಳಲ್ಲಿ ಕೆಲವು ಸಮಸ್ಯೆಗಳು ಮಹಿಳೆಯರಲ್ಲಿ ಮಾತ್ರ ಕಾಣಿಸುವವುಗಳಾದರೆ ಇನ್ನೂ ಕೆಲವು ಸಮಸ್ಯೆಗಳು ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರಲ್ಲಿ ಕಾಣಿಸುವಂಥವು. ಗರ್ಭಿಣಿಯರು ಹಾಗೂ ಪ್ರಸವದ ನಂತರದ ಆರೈಕೆ ಸರಿಯಾಗಿ ಆಗದಿದ್ದಲ್ಲಿ ಅಂಥ ಮಹಿಳೆಯರು ಮುಂದೆ ಬಹುದೊಡ್ಡ ಸಮಸ್ಯೆ ಎದುರಿಸಬೇಕಾಗಿ ಬರುವ ಸಾಧ್ಯತೆಯೂ ಇದೆ.

ಮಹಿಳೆಯರ ಅಗತ್ಯಗಳು ಮತ್ತು ಸಮಸ್ಯೆಗಳತ್ತ ಹಿಂದೆ ಜಗತ್ತು ಅಷ್ಟಾಗಿ ಗಮನ ಕೊಟ್ಟಿರಲಿಲ್ಲ. ಈಗ ಪರಿಸ್ಥಿತಿ ಬದಲಾಗಿದೆ. ಮಹಿಳಾ ಕೇಂದ್ರಿತ ಪರಿಹಾರ ಸೂತ್ರಗಳನ್ನು ರೂಪಿಸುವತ್ತ ಮುತುವರ್ಜಿ ವಹಿಸಲಾಗುತ್ತಿದೆ. ಮಹಿಳೆಯರ ಆರೋಗ್ಯ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡೇ ರೂಪಿಸಿರುವ ಅನೇಕ ವಿಮಾ ಯೋಜನೆಗಳು ಇಂದು ಮಾರುಕಟ್ಟೆಯಲ್ಲಿ ಲಭ್ಯ ಇವೆ. ವೈಯಕ್ತಿಕ ಹಾಗೂ ವೃತ್ತಿ ಬದುಕುಗಳನ್ನು ನಿಭಾಯಿಸುವ ಒತ್ತಡವು ಮಹಿಳೆಯರ ಮೇಲೆ ಇರುವಷ್ಟು ದಿನವೂ ಅವರು ಅನೇಕ ಆರೋಗ್ಯ ಸಮಸ್ಯೆಗಳನ್ನು ಆಹ್ವಾನಿಸುತ್ತಲೇ ಇರುತ್ತಾರೆ ಎಂಬುದು ಸತ್ಯ.

ವ್ಯಾಯಾಮ ಮತ್ತು ಆಗಾಗ ಆರೋಗ್ಯ ತಪಾಸಣೆಗಳನ್ನು ಮಾಡಿಸುವುದರ ಜೊತೆಗೆ ಮಹಿಳೆಯರು ಆರೋಗ್ಯ ವಿಮೆ ಹೊಂದುವುದರ ಅಗತ್ಯವನ್ನು ಅರಿಯುವುದು ಅನಿವಾರ್ಯ. ಯಾವುದೇ ಆರೋಗ್ಯ ಸಮಸ್ಯೆ ಎದುರಾದರೆ ತಮ್ಮ ಜೇಬಿಗೆ ಕತ್ತರಿ ಬೀಳದಂತೆಯೇ ಆರೋಗ್ಯ ಸೇವೆಗಳನ್ನು ಪಡೆಯುವ ಅಸ್ತ್ರವೆಂದರೆ ‘ಆರೋಗ್ಯ ವಿಮೆ’ ಮಾತ್ರ. ಆರೋಗ್ಯ ಸಮಸ್ಯೆ ಬಂದಾಗ ಆಸ್ಪತ್ರೆಗೆ ದಾಖಲಾಗಿ ಪಡೆಯುವ ಚಿಕಿತ್ಸೆಯ ವೆಚ್ಚವನ್ನು ಭರಿಸುವುದಲ್ಲದೆ ಕೆಲವು ಆರೋಗ್ಯ ವಿಮೆಗಳು ಪ್ರಸವ ಸಂದರ್ಭದ ವೆಚ್ಚವನ್ನೂ ಭರಿಸುತ್ತವೆ.

ಆರೋಗ್ಯ ವಿಮೆಯ ಲಾಭಗಳ ಬಗ್ಗೆ ಮಹಿಳೆಯರಿಗೆ ಮಾಹಿತಿ ಇಲ್ಲವೆಂದಲ್ಲ. ಎಲ್ಲ ಮಾಹಿತಿಗಳನ್ನು ಹೊಂದಿದ್ದರೂ ಮಹಿಳೆಯರು ಹೆಚ್ಚಿನ ಸಂದರ್ಭದಲ್ಲಿ ಅವನ್ನು ನಿರ್ಲಕ್ಷಿಸುತ್ತಾರೆ. ತಮ್ಮ ಸಂಸ್ಥೆ ಕೊಡಮಾಡಿದ ಗುಂಪು ವಿಮೆಯ ಮೇಲೆಯೇ ಹೆಚ್ಚಾಗಿ ಅವಲಂಬಿಸಿರುತ್ತಾರೆ ಅಥವಾ ವಿಮೆ ಖರೀದಿಸುವ ವಿಚಾರವನ್ನು ತಮ್ಮ ಪತಿ ಅಥವಾ ಕುಟುಂಬದ ಇತರ ಹಿರಿಯರಿಗೆ ಬಿಟ್ಟುಬಿಡುತ್ತಾರೆ. ಇಂಥ ನಿರ್ಲಕ್ಷ್ಯವೇ ಮುಂದೆ ದುಬಾರಿಯಾಗಿ ಪರಿಣಮಿಸುತ್ತದೆ.

ನೀವೊಂದುವೇಳೆ ಆರೋಗ್ಯ ವಿಮೆ ಪಡೆಯುವ ಒಳ್ಳೆಯ ನಿರ್ಧಾರ ಮಾಡಿದ್ದೀರಿ ಎಂದಿಟ್ಟುಕೊಂಡರೆ, ವಿಮೆ ಖರೀದಿಗೂ ಮುನ್ನ ಕೆಲವು ಅಂಶಗಳನ್ನು ತಿಳಿದುಕೊಳ್ಳುವುದು ಅಗತ್ಯ. ಎಲ್ಲಕ್ಕಿಂತ ಮೊದಲು ಮತ್ತು ಅತಿಮುಖ್ಯವಾದ ಅಂಶವೆಂದರೆ ಆದಷ್ಟು ಬೇಗನೆ ವಿಮೆ ಮಾಡಿಸಿಕೊಳ್ಳಿ. ವಿಮೆಯ ಕಂತಿನ ಮೊತ್ತಕ್ಕೂ ನಿಮ್ಮ ವಯಸ್ಸಿಗೂ ಸಂಬಂಧ ಇರುವುದರಿಂದ ಸಣ್ಣ ವಯಸ್ಸಿನಲ್ಲಿ ವಿಮೆ ಮಾಡಿಸಿದರೆ ಲಾಭ ಹೆಚ್ಚಾಗಿರುತ್ತದೆ.

ವಿಮೆಯ ಕಂತಿನ ಪ್ರಮಾಣ ಪ್ರಮುಖ ಅಂಶವೇ ಆಗಿದ್ದರೂ ಅದರ ಆಧಾರದಲ್ಲೇ ವಿಮೆಯ ಮೌಲ್ಯ ಮಾಪನ ಮಾಡುವುದು ಸಹ ಸರಿಯಲ್ಲ. ನೀವು ಆಯ್ಕೆ ಮಾಡುವ ವಿಮೆಯ ನಿಯಮ–ನಿಬಂಧನೆಗಳ ಬಗ್ಗೆ ಸರಿಯಾಗಿ ತಿಳಿದುಕೊಳ್ಳುವುದು ಅಗತ್ಯ. ಸಾಮಾನ್ಯವಾಗಿ ಕಾಣಿಸುವ ಕಾಯಿಲೆಗಳಲ್ಲಿ ಹೆಚ್ಚಿನವು ವಿಮಾ ವ್ಯಾಪ್ತಿಯೊಳಗಿವೆ ಎಂದಾದರೆ ಅಂಥ ವಿಮೆಯನ್ನೇ ಮಾಡಿಸುವುದು ಸೂಕ್ತ. ವಿಮಾ ಮೊತ್ತದ ಬಳಕೆ ಹೇಗಿರಬೇಕು ಎಂಬ ಬಗ್ಗೆ ವಿಪರೀತ ನಿಯಮಾವಳಿಗಳಿದ್ದರೆ, ಸಹ ಪಾವತಿ (ಕೊ–ಪೇ) ಪ್ರಮಾಣ ಅತಿ ಹೆಚ್ಚಾಗಿದ್ದರೆ, ಕ್ಯಾಶ್‌ಲೆಸ್‌ ವ್ಯವಸ್ಥೆ ಹೊಂದಿರುವ ಆಸ್ಪತ್ರೆಗಳ ಜಾಲದ ಗುಣಮಟ್ಟ ಚೆನ್ನಾಗಿಲ್ಲದಿದ್ದರೆ ಅಂಥ ಉತ್ಪನ್ನಗಳಿಂದ ದೂರ ಇರುವುದು ಸೂಕ್ತ. ಮರುಪಾವತಿ (ವಿಮಾದಾರನೇ ಆಸ್ಪತ್ರೆಯ ವೆಚ್ಚವನ್ನು ಭರಿಸಿ, ಆನಂತರ ವಿಮಾ ಸಂಸ್ಥೆಯಿಂದ ಆ ಹಣವನ್ನು ಪಡೆಯುವುದು) ವ್ಯವಸ್ಥೆಗಿಂತ ಕ್ಯಾಶ್‌ಲೆಸ್‌ (ವಿಮಾ ಸಂಸ್ಥೆ ನೇರವಾಗಿ ಆಸ್ಪತ್ರೆಗೆ ಹಣ ಸಂದಾಯ ಮಾಡುವುದು) ವ್ಯವಸ್ಥೆ ಆಯ್ಕೆ ಮಾಡಿಕೊಳ್ಳುವುದು ಯಾವತ್ತೂ ಅನುಕೂಲಕರ. ಜೊತೆಗೆ ಯಾವ್ಯಾವ ಕಾಯಿಲೆಗಳನ್ನು, ವಿಶೇಷವಾಗಿ ವಿಮೆ ಮಾಡಿಸುವುದಕ್ಕೂ ಮೊದಲೇ ಇದ್ದ ಕಾಯಿಲೆಗಳನ್ನು ವಿಮಾ ವ್ಯಾಪ್ತಿಯಿಂದ ಹೊರಗಿಡಲಾಗುತ್ತದೆಯೇ ಎಂಬುದನ್ನು ವಿಮೆ ಮಾಡಿಸುವ ಸಂದರ್ಭದಲ್ಲೇ ತಿಳಿದುಕೊಳ್ಳುವುದು ಅಗತ್ಯ.

ಕೆಲವು ಹೊಸ ವಿಮಾ ಸಂಸ್ಥೆಗಳು ಗ್ರಾಹಕರಿಗೆ ಸಾಮಾನ್ಯ ಆರೋಗ್ಯ ವಿಮೆಗಿಂತ ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸುತ್ತವೆ. ಗ್ರಾಹಕರು ಚಟುವಟಿಕೆಗಳಿಂದ ಕೂಡಿದ, ಆರೋಗ್ಯಪೂರ್ಣ ಜೀವ ನಡೆಸಬೇಕು ಎಂದು ಅವು ಪ್ರೋತ್ಸಾಹಿಸುತ್ತವೆ. ಅಂಥ ಆರೋಗ್ಯಪೂರ್ಣ ಜೀವನ ನಡೆಸುವವರಿಗೆ ಇಂಥ ಸಂಸ್ಥೆಗಳು ಪ್ರೋತ್ಸಾಹ ಧನ ಅಥವಾ ಕಂತಿನಲ್ಲಿ ರಿಯಾಯಿತಿಗಳನ್ನು ನೀಡುತ್ತವೆ. ಯುವಕರು ಹಾಗೂ ಆರೋಗ್ಯವಂತರಾಗಿರುವವರು ಇಂಥ ಉತ್ಪನ್ನಗಳತ್ತ ಗಮನಹರಿಸಬಹುದು.

ಕೊನೆಯದಾಗಿ, ವಿಮೆ ಖರೀದಿಗೂ ಮುನ್ನ ಆ ಕಂಪನಿಯ ಸೇವಾ ಗುಣಮಟ್ಟ ಹೇಗಿದೆ, ವಿಮಾ ಮೊತ್ತವನ್ನು ಪಾವತಿಸಲು ಎಷ್ಟು ಕಾಲಾವಕಾಶ ತೆಗೆದುಕೊಳ್ಳುತ್ತದೆ ಎಂಬ ಅಂಶಗಳನ್ನೂ ತಿಳಿದುಕೊಳ್ಳಿರಿ.

(ಆದಿತ್ಯ ಬಿರ್ಲಾ ಹೆಲ್ತ್‌ ಇನ್ಶುರನ್ಸ್ ಕಂಪನಿಯ ಸಿಇಒ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT