ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡದಿ ನಾಪತ್ತೆಯಾಗಿದ್ದಾಳೆ!

Last Updated 22 ಮೇ 2018, 19:30 IST
ಅಕ್ಷರ ಗಾತ್ರ

‘ನನ್ನ ಮಡದಿ ನಾಪತ್ತೆಯಾಗಿದ್ದಾಳೆ. ನಾನು ಕಳೆದುಹೋಗುವ ಮೊದಲು ಅವಳನ್ನು ಹುಡುಕಿಕೊಡಿ, ಪ್ಲೀಸ್...’

ಗೆಳೆಯನ ಫೇಸ್‌ಬುಕ್‌ ಗೋಡೆಯಲ್ಲಿ ಬೆಳ್ಳಂಬೆಳಿಗ್ಗೆ ಇಂಥದ್ದೊಂದು ಪೋಸ್ಟ್ ನೇತಾಡುತ್ತಿತ್ತು. ‘ಅರೆ ಇದೇನಿದು? ಇವನ ಮದುವೆಯಾಗಿ 10 ವರ್ಷಕ್ಕೆ ಬಂತು. ಇದೇನಪ್ಪಾ ಹೀಗೆ ಮಾಡಿಕೊಂಡ’ ಎಂದುಕೊಂಡು ಫೋನ್ ಮಾಡಿದರೆ ಸಿಕ್ಕ ಉತ್ತರ ಭೂಮಂಡಲದ ಸಾರ್ವಕಾಲಿಕ, ಸಾರ್ವದೇಶಿಕ ಸಮಸ್ಯೆಯ ತುಣುಕು ಎನಿಸಿತ್ತು.

ನಂದಿನಿಯನ್ನು ರಾಜು ಇಷ್ಟಪಟ್ಟು ಮದುವೆಯಾದನೋ ಅಥವಾ ಮದುವೆಯಾದ ಮೇಲೆ ಇಷ್ಟಪಡಲು ಪ್ರಯತ್ನಿಸಿದನೋ ಬೇರೆ ಮಾತು. ಹತ್ತು ವರ್ಷದ ಸಂಸಾರ ಅಂದ್ರೆ ಹುಡುಗಾಟವೇ? ಮೇಲಾಗಿ ಇಬ್ಬರು ಮಕ್ಕಳು. ಅಕ್ಕಪಕ್ಕದ ಮನೆಯವರಿಗೆ ಕಿರಿಕಿರಿ ಆಗುವಷ್ಟು ಜಗಳವಿಲ್ಲದ ಸಂಸಾರ. ನೋಡಿದವರೆಲ್ಲರ ಕಣ್ಣಿಗೆ ಇವರು ನೆಮ್ಮದಿಯಾಗಿದ್ದರು.

ಕ್ರಮೇಣ ಆದದ್ದೇ ಬೇರೆ. ಮಕ್ಕಳನ್ನು ನೆಚ್ಚಿಕೊಳ್ಳುತ್ತಾ ನಂದಿನಿ, ಕೆಲಸವನ್ನು ಹಚ್ಚಿಕೊಳ್ಳುತ್ತಾ ರಾಜು ತಮ್ಮದೇ ಲೋಕ ಕಟ್ಟಿಕೊಂಡರು. ಬಿಟ್ಟು ಬದುಕುವುದು ಕ್ರಮೇಣ ರೂಢಿಯಾಯಿತು. ‘ಇವಳ ಕಿರಿಕಿರಿಯಿಲ್ಲದಿದ್ದರೆ ನಾನು ಏನಾದರೂ ಓದಬಹುದಿತ್ತು’ ಎಂದು ಅವನೂ, ‘ಇವನು ಆಫೀಸಿಗೆ ತೊಲಗಿದ್ದರೆ ನೆಮ್ಮದಿಯಾಗಿ ಸೀರಿಯಲ್ ನೋಡಬಹುದಿತ್ತು’ ಎಂದು ಅವಳೂ ಅಂದುಕೊಳ್ಳುವಷ್ಟು ‘ಆದರ್ಶದಂಪತಿ’ಗಳಾದರು!

ಮಾನಸಿಕವಾಗಿ ‘ನಾನೊಂದು ತೀರ, ನೀನೊಂದು ತೀರ...’ ಆಗುತ್ತಿದ್ದ ಈ ದಂಪತಿ ಎಷ್ಟೋ ದಿನಗಳು ಪರಸ್ಪರ ಮಾತನ್ನೇ ಆಡುತ್ತಿರಲಿಲ್ಲ. ‘ನನ್ನ ಜೊತೆಗೆ ಮಾತಾಡೋರೇ ಯಾರೂ ಇಲ್ಲ. ಈ ಮಕ್ಕಳು ಇಲ್ಲದಿದ್ದರೆ ಮಾತೇ ಮರೆತು ಹೋಗಿಬಿಡ್ತಿತ್ತು’ ಎಂದು ನಂದಿನಿ, ‘ಇವಳ ಜೊತೆ ಮಾತಾಡಿದ್ರೆ ತಲೆ ಬಿಸಿ, ಬರೀ ಜಗಳ. ಇವಳನ್ನು ಕಟ್ಟಿಕೊಳ್ಳದಿದ್ರೆ ಏನಾದರೂ ಸಾಧಿಸುತ್ತಿದ್ದೆ’ ಎಂದು ರಾಜು ಅವರಿವರ ಬಳಿ ದೂರಿಕೊಳ್ಳುತ್ತಿದ್ದರು. ಕೇಳಿಸಿಕೊಳ್ಳುವವರು ಕೇಳಿಸಿಕೊಂಡು, ಆಡಿಕೊಳ್ಳುವವರು ಆಡಿಕೊಂಡು, ಸಮಾಧಾನ ಮಾಡಲು ಯತ್ನಿಸುವವರು ಸಮಾಧಾನ ಮಾಡಿ ಸುಮ್ಮನಾಗಿದ್ದರು.

ಮಕ್ಕಳೊಂದಿಗೆ ನಂದಿನಿ ತವರಿಗೆ ಹೋಗಿದ್ದ ಒಂದು ದಿನ ರಾಜು ಗೆಳೆಯ ಉಮೇಶನ ಮನೆಗೆ ಊಟಕ್ಕೆ ಹೋಗಿದ್ದ. ಉಮೇಶನ ಅತ್ತೆ–ಮಾವ ಊರಿಂದ ಬಂದಿದ್ದರು. ಅಡುಗೆಮನೆಯಲ್ಲಿ ಚಪಾತಿ ಬೇಯಿಸುತ್ತಿದ್ದ ಉಮೇಶನ ಅತ್ತೆ ಅಚ್ಚುಕಟ್ಟಾಗಿ ಚಪಾತಿಯ ಅಂಚು ತೆಗೆದು,  ಮೆದುಭಾಗವನ್ನು ತುಂಡುತುಂಡು ಮಾಡಿ, ಪ್ರತಿ ತುಣುಕಿಗೂ ಇಷ್ಟಿಷ್ಟೇ ಬೆಣ್ಣೆ–ಚಟ್ನಿಪುಡಿಯನ್ನು ಸವರಿ ತನ್ನ ಪತಿಗೆ ತಂದುಕೊಟ್ಟರು.

ಯಜಮಾನರು ಊಟ ಮಾಡಿದ್ದ ತಟ್ಟೆಯಲ್ಲೇ ಉಮೇಶನ ಅತ್ತೆಯೂ ಊಟಕ್ಕೆ ಕುಳಿತರು. ತಮ್ಮ ಊಟ ಮುಗಿಸಿದ ತಕ್ಷಣ ಉಮೇಶನ ಮಾವ ಅಳಿಯ ಮತ್ತು ಅಳಿಯನ ಗೆಳೆಯನೊಂದಿಗೆ ಪಟ್ಟಾಂಗಕ್ಕೆ ಕೂರಲಿಲ್ಲ. ಹೆಂಡತಿಯ ಊಟ ಮುಗಿಯುವ ಹೊತ್ತಿಗೆ ದಾಳಿಂಬೆ ಬಿಡಿಸಿ, ದ್ರಾಕ್ಷಿ ತೊಳೆದು, ಸೇಬುಹೆಚ್ಚಿ ಫ್ರೂಟ್ ಸಲಾಡ್ ರೆಡಿ ಮಾಡಿದ್ದರು. ಬಟ್ಟಲು ತುಂಬಾ ಹಣ್ಣಿಟ್ಟುಕೊಂಡು ಜಗಲಿ ಮೇಲೆ ಕುಳಿತು ಎಲ್ಲರಿಗೂ ಇಷ್ಟಿಷ್ಟು ಹಣ್ಣು ಕೊಟ್ಟು ಹೆಂಡತಿಯ ಜೊತೆಗೆ ಮಾತಿಗೆ ತೊಡಗಿದರು. ಇಳಿವಯಸ್ಸಿನ ಈ ದಾಂಪತ್ಯ ಕಂಡ ಉಮೇಶನಿಗೆ ತನ್ನ ಪರಿಸ್ಥಿತಿಯನ್ನು ಹೇಳಿಕೊಳ್ಳಬೇಕು ಎನಿಸಿತು. ಕೇಳಿಸಿಕೊಳ್ಳಲು ಅವರ ಕಿವಿ ತೆರೆದಿತ್ತು.

‘ಮದುವೆಗೆ ಮೊದಲು ನಂದಿನಿ ನಿನಗೇಕೆ ಇಷ್ಟವಾಗಿದ್ದಳು ನೆನಪಿಸಿಕೊ. ಮೊದಲಿನಂತೆ ಅವಳ ಜೊತೆಗೆ ಮಾತನಾಡಲು ಶುರುಮಾಡು, ಅವಳ ಮಾತಿಗೆ ಕಿವಿಯಾಗು. ನಿನ್ನ ಮನಸು ನಿನಗೇ ತಿಳಿಯದಂತೆ ಸರಿಹೋಗುತ್ತೆ ನೋಡು. ನಿನ್ನ ಅಂಕಲ್ ಕೂಡ 30 ವರ್ಷ ಸರ್ವೀಸ್ ಮಾಡಿದ್ರು. ಆದ್ರೆ ಪ್ರತಿದಿನ ಮಧ್ಯಾಹ್ನ ನನಗೆ ಫೋನ್ ಮಾಡಿ ಊಟ ಆಯ್ತಾ ಅಂತ ಕೇಳ್ತಿದ್ರು. ನೀನು ನಂದಿನಿಗೆ ಒಂದು ದಿನವಾದ್ರೂ ಹೀಗೆ ಫೋನ್ ಮಾಡಿದ್ದಾ?’

ಗೆಳೆಯನ ಅತ್ತೆಯ ಈ ಮಾತು ಮುಗಿದ ಐದೇ ನಿಮಿಷಕ್ಕೆ ರಾಜು ತನ್ನ ಫೇಸ್‌ಬುಕ್ ಗೋಡೆಯಲ್ಲಿ ‘ನನ್ನ ಮಡದಿ ನಾಪತ್ತೆಯಾಗಿದ್ದಾಳೆ. ನಾನು ಕಳೆದುಹೋಗುವ ಮೊದಲು ಅವಳನ್ನು ಹುಡುಕಿಕೊಡಿ, ಪ್ಲೀಸ್...’ ಎಂದು ಬರೆದುಕೊಂಡಿದ್ದ.

ತಮ್ಮತಮ್ಮ ತೀರಗಳಿಂದ ನಂದಿನಿ–ರಾಜು ಮತ್ತೆ ಹತ್ತಿರ–ಹತ್ತಿರ ಬಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT