ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾದ ತುಂಬಾ ಕಾಲಂದುಗೆ!

Last Updated 22 ಮೇ 2018, 19:30 IST
ಅಕ್ಷರ ಗಾತ್ರ

ಕಾಲ್ಗೆಜ್ಜೆ ಸದ್ದಿನಿಂದಲೇ ತನ್ನ ಬರುವಿಕೆಯ ಸುಳಿವು ನೀಡುತ್ತಿದ್ದ ಹೆಣ್ಮಕ್ಕಳು ಗೆಜ್ಜೆ ನಾದವಿಲ್ಲದ ಕಾಲಂದುಗೆಗಳೇ ಸಾಕು ಎನ್ನುತ್ತಿದ್ದಾರೆ. ಮದುಮಗಳ ಕಾಲಂದುಗೆಗಳಲ್ಲಿ ಗೆಜ್ಜೆಯ ಸದ್ದಿಲ್ಲ. ಆದರೆ ಮೋಹಕತೆ, ಆಧುನಿಕತೆಗೆ ಪ್ರತಿರೂಪವಾಗಿ ಕಾಲಂದುಗೆ ರೂಪಾಂತರಗೊಂಡಿದೆ.

ಎರಡೂ ಕಾಲುಗಳ ಮಣಿಕಟ್ಟುಗಳನ್ನು ಬಂಧಿಸುತ್ತಿದ್ದ ಕಾಲಿನ ಚೈನನ್ನು ಒಂದೇ ಕಾಲಿಗೆ ಧರಿಸುವ ಟ್ರೆಂಡ್‌ ಬಂದು ಕೆಲವು ವರ್ಷಗಳೇ ಆಗಿವೆ. ಆದರೆ ವಿಶೇಷ ದಿನಗಳಲ್ಲಿ ಧರಿಸುವ ಕಾಲಂದುಗೆಯೂ ವಿಶೇಷವಾಗಿಯೇ ಇರಬೇಕಲ್ಲ? ಹೌದು. ಇಡೀ ಪಾದವನ್ನು ಆವರಿಸಿಕೊಳ್ಳುವ ವಿನ್ಯಾಸದ ಕಾಲಂದುಗೆ ಈಗ ಪ್ರಚಲಿತದಲ್ಲಿರುವ ಟ್ರೆಂಡ್.

ಮದುಮಗಳಿಗೂ, ಮದರಂಗಿ, ಮದುವೆ, ಆರತಕ್ಷತೆ ಸಂದರ್ಭಗಳಲ್ಲಿ ಭರ್ಜರಿ ಉಡುಗೆ ತೊಡುಗೆಯೊಂದಿಗೆ ಮಿಂಚುವ ಬೆಡಗಿಯರಿಗೂ, ಶಾಲೆ ಕಾಲೇಜುಗಳಲ್ಲಿನ ವಿಶೇಷ ಸಮಾರಂಭಗಳಲ್ಲಿ ಆಕರ್ಷಣೆಯ ಕೇಂದ್ರಬಿಂದುವಾಗುವ ಉಮೇದು ಇರುವವರಿಗೂ ಈ ಬಗೆಯ ಕಾಲಂದುಗೆ ಮೆಚ್ಚುಗೆಯಾಗುತ್ತಿದೆ.

ಆಭರಣ ವಿನ್ಯಾಸ ಮತ್ತು ಫ್ಯಾಷನ್‌ ಲೋಕದಲ್ಲಿ ‘ಫೂಟ್‌ ಜ್ಯುವೆಲರಿ’ ಎಂಬ ಈ ಟ್ರೆಂಡ್‌ಗೆ ಈಗ ಬೇಡಿಕೆ ಹೆಚ್ಚು. ಬೆಳ್ಳಿ, ಚಿನ್ನದ ಒಡವೆಗಿಂತಲೂ ಇತರ ಲೋಹ, ಚಿನ್ನದ ಲೇಪವಿರುವ ಒಂದು ಗ್ರಾಂ ಒಡವೆ, ರೇಷ್ಮೆ ದಾರ, ಟೆರಾಕೋಟದ ಪರ್ಯಾಯ ಆಯ್ಕೆಗೇ ಹೆಣ್ಣುಮಕ್ಕಳು ಹೆಚ್ಚು ಒಲವು ತೋರುತ್ತಿದ್ದಾರೆ.

ನೆಕ್‌ಲೇಸ್‌ ಮತ್ತು ಬ್ರೇಸ್‌ಲೆಟ್‌ಗಳನ್ನು ಹೋಲುವ ವಿನ್ಯಾಸವೇ ‘ಫೂಟ್‌ ಜ್ಯುವೆಲ್‌’ಗಳಿಗೂ ಅನ್ವಯಿಸಿರುವುದು ವಿನ್ಯಾಸಕರ ಜಾಣ್ಮೆ. ತಲೆಯಿಂದ ಕಾಲಿನವರೆಗೂ ಒಂದೇ ವಿನ್ಯಾಸದ ಆಭರಣಗಳನ್ನು ಆರಿಸುವವರು ಕಾಲಿನ ಒಡವೆಯನ್ನೂ ತಮ್ಮ ಪಟ್ಟಿಗೆ ಸೇರಿಸಿಕೊಳ್ಳಬಹುದು.

ಆರಿಸಿಕೊಂಡ ವಿನ್ಯಾಸಕ್ಕೆ ತಕ್ಕುದಾಗಿ ಮದರಂಗಿ ಚಿತ್ತಾರ ಹಾಕಿಕೊಂಡರೆ ಕಾಲುಗಳ ಸೊಬಗು ದುಪ್ಪಟ್ಟಾಗುವುದರಲ್ಲಿ ಸಂಶಯವಿಲ್ಲ. ಅಂದ ಹಾಗೆ ಫೂಟ್‌ ಜ್ಯುವೆಲ್‌ಗಳು ಫ್ಯಾನ್ಸಿ ಸ್ಟೋರ್‌, ನಕಲಿ ಒಡವೆಗಳ ಅಂಗಡಿಗಳಿಗಿಂತಲೂ ಆನ್‌ಲೈನ್‌ನಲ್ಲಿ ಹೆಚ್ಚು ಲಭ್ಯವಾಗುತ್ತಿವೆ. ಆಯ್ಕೆ ಅವಕಾಶಗಳೂ ಹೇರಳವಾಗಿವೆ. 

ಆಸಕ್ತಿಕರ ಅಂಶವೆಂದರೆ, ಫೂಟ್‌ ಜ್ಯುವೆಲ್‌ಗಳ ಪರಿಕಲ್ಪನೆ ಶುರುವಾದದ್ದು ಕಡಲತೀರದ ಮದುವೆ (ಬೀಚ್‌ ವೆಡ್ಡಿಂಗ್‌)ಗಳಿಂದ.

‘ಬೇರ್‌ಫೂಟ್‌ ವೆಡ್ಡಿಂಗ್‌ ಸ್ಯಾಂಡಲ್ಸ್‌’ ಎಂದು ಹೇಳಲಾಗುವ ಈ ಪರಿಯ ಮದುವೆಗಳಲ್ಲಿ ಮದುಮಕ್ಕಳು ಪಾದರಕ್ಷೆ ಧರಿಸದಿರುವ ಕಾರಣ ಭರ್ಜರಿ ವಿನ್ಯಾಸದ ಒಡವೆಗ‌ಳಿಂದ ಪಾದಗಳನ್ನು ಅಲಂಕರಿಸುವುದು ರೂಢಿ.

ಬೀಚ್‌ ವೆಡ್ಡಿಂಗ್‌ಗಳು ವಿದೇಶಗಳಲ್ಲಿ ಸಾಮಾನ್ಯ. ಬಗೆ ಬಗೆಯ ಮುತ್ತು, ಕೃತಕ ಮಣಿಗಳಿಂದ ಸಮೃದ್ಧವಾಗಿರುವ ವಿನ್ಯಾಸಗಳಿಗೆ ಅಲ್ಲಿ ಬೇಡಿಕೆ ಹೆಚ್ಚು. ಕುಂದನ್‌, ಪೊಲ್ಕಿ ಮತ್ತು ಚೈನ್‌ನ ಮಾದರಿಯ ಫೂಟ್‌ ಜ್ಯುವೆಲ್‌ಗಳು ಆನ್‌ಲೈನ್‌ ಮಾರಾಟ ತಾಣಗಳಲ್ಲಿ ಯಥೇಚ್ಛವಾಗಿ ಸಿಗುತ್ತವೆ.

‌ಆನ್‌ಲೈನ್‌ನಲ್ಲಿ ಸಿಗುವ ಬೆಳ್ಳಿಯ ಕಾಲಂದುಗೆಗಳ ಬೆಲೆ ₹ 1500ರಿಂದ ಆರಂಭವಾಗುತ್ತವೆ. ‘etsy', amazon, eBayಯಂತಹ ಆನ್‌ಲೈನ್‌ ತಾಣಗಳಲ್ಲಿ ಇವುಗಳನ್ನು ಖರೀದಿಸಬಹುದು.

ಭರ್ಜರಿ ಉಡುಗೆ ತೊಡುಗೆ ಧರಿಸಿ ಎಲ್ಲರ ಕಣ್ಮನ ಸೆಳೆಯುವ ಮದುಮಗಳೂ, ಬೆಡಗಿಯರೂ ಪಾದವನ್ನಾವರಿಸುವ ಕಾಲಂದುಗೆಗಳನ್ನು ಧರಿಸಿ ಎಲ್ಲರ ಚಿತ್ತ ತಮ್ಮತ್ತ ತಿರುಗುವ ಖುಷಿಯನ್ನು ಸಂಭ್ರಮಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT