ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರಾಫಿಕ್‌ನಲ್ಲೊಂದು ಹೊಸ ಲವ್‌ಸ್ಟೋರಿ

Last Updated 24 ಮೇ 2018, 6:39 IST
ಅಕ್ಷರ ಗಾತ್ರ

ಬೆಂಗಳೂರಿನಲ್ಲಿ ಸಿಲ್ಕ್‌ ಬೋರ್ಡ್‌ ಜಂಕ್ಷನ್‌ ಟ್ರಾಫಿಕ್‌ಗೆ ಫೇಮಸ್‌. ನಗರದ ಅತಿ ಹೆಚ್ಚು ಸಂಚಾರ ದಟ್ಟಣೆ ಪ್ರದೇಶ ಈ ವೃತ್ತ ಎಂದೇ ಜನಪ್ರಿಯವಾಗಿದೆ. ಹೆಚ್ಚಿನ ಬಹುರಾಷ್ಟ್ರೀಯ ಕಂಪೆನಿಗಳು ಇರುವ ಐಟಿಪಿಎಲ್‌, ಎಲೆಕ್ಟ್ರಾನಿಕ್‌ ಸಿಟಿ, ಬೆಳ್ಳಂದೂರಿಗೆ ಈ ರಸ್ತೆ ಮೂಲಕವೇ ಸಾಗಬೇಕು. ಹಾಗಾಗಿ ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ಇಲ್ಲಿ ಟ್ರಾಫಿಕ್‌ ಸಮಸ್ಯೆ ಸಾಮಾನ್ಯ. ಕೆಲವೊಮ್ಮೆ 2–3 ಗಂಟೆಗಳಷ್ಟು ಕಾಯಬೇಕಾಗುತ್ತದೆ.

ಟ್ರಾಫಿಕ್‌ನ ಇದೇ ಸಮಸ್ಯೆಯನ್ನು ಹಾಸ್ಯ ಹಾಗೂ ವಿಡಂಬನಾತ್ಮಕವಾಗಿ  ‘ಸಿಲ್ಕ್‌ಬೋರ್ಡ್‌’ (SILKBOARD) ಕಿರುಚಿತ್ರದಲ್ಲಿ ಚಿತ್ರಿಸಿದ್ದಾರೆ ಸಂತೋಷ್‌ ಗೋಪಾಲ್. ಟ್ರಾಫಿಕ್‌ನಲ್ಲೇ ಪರಿಚಯ ಆಗಿ, ಸ್ನೇಹ ಪ್ರೀತಿಯಾಗಿ, ಟ್ರಾಫಿಕ್‌ನಲ್ಲಿ ಮದುವೆಯೂ ಆಗಿ, ಮಗುವೂ ಆಗುವುದರ ಮೂಲಕ ಜಾಮ್‌ನಲ್ಲಿ ಸಿಕ್ಕಿಹಾಕಿಕೊಂಡರೆ ಹೊರಬರುವುದು ಸುಲಭದ ಕೆಲಸವಲ್ಲ ಎಂದು ಕಿರುಚಿತ್ರದಲ್ಲಿ ಕಟ್ಟಿಕೊಟ್ಟಿದ್ದಾರೆ.

ಟ್ರಾಫಿಕ್ ಎಂಬುದು ಮಾಮೂಲು ಸಮಸ್ಯೆಯಾದರೂ, ಈ ಕಿರುಚಿತ್ರದಲ್ಲಿ ಇಷ್ಟವಾಗುವುದು ನಿರೂಪಣೆ. ಸಂದರ್ಭಕ್ಕೆ ತಕ್ಕಂತೆ ಹಿನ್ನೆಲೆಯಲ್ಲಿ ರೇಡಿಯೊ ಧ್ವನಿಯನ್ನು ಬಳಸಿಕೊಳ್ಳಲಾಗಿದೆ. ಚಿತ್ರ ಆರಂಭವಾಗುವುದು ನಾಯಕನ ಮನೆಗೆ ಹುಡುಗಿ ಮನೆಯವರು ಬಂದಿದ್ದಾರೆ ಎಂಬಲ್ಲಿಂದ. ನಾಯಕ ಸಿಲ್ಕ್‌ಬೋರ್ಡ್‌ ಜಂಕ್ಷನ್‌ನಲ್ಲಿ ಸಿಕ್ಕಿ ಹಾಕಿಕೊಂಡಿದ್ದಾನೆ ಎಂಬ ಸಂಗತಿ ಗೊತ್ತಾಗಿ, ‘ಸಿಲ್ಕ್‌ಬೋರ್ಡ್‌’ ಎಂಬುದೇ ಹುಡುಗನಿಗಿರುವ ಕೊರತೆ ಎಂಬಂತೆ ಹುಡುಗನನ್ನು ತಿರಸ್ಕರಿಸುತ್ತಾರೆ.

ಆರಂಭದ ಈ ದೃಶ್ಯದಲ್ಲೇ ‘ಸಿಲ್ಕ್‌ಬೋರ್ಡ್‌’ನಲ್ಲಿ ಸಿಕ್ಕಿಹಾಕಿಕೊಂಡರೆ ಜೀವನವೇ ಅರ್ಧ ಮುಗಿದುಹೋಯಿತು ಎಂದು ತೋರಿಸಲಾಗಿದೆ. ನಂತರದಲ್ಲಿ ಯುವಕ– ಯುವತಿಯ ಪ್ರೇಮ ಪ್ರಸಂಗ ಆರಂಭವಾಗುತ್ತದೆ. ಇನ್ಫೋಸಿಸ್‌ನಲ್ಲಿ ಕೆಲಸ ಮಾಡುತ್ತಿರುವ ಪ್ರಕಾಶ್‌, ಟಿಸಿಎಸ್‌ನ ಮಿಥಿಲಾಳನ್ನು ಕಾರಿನಲ್ಲೇ ನೋಡುತ್ತಾನೆ. ಸ್ನೇಹ ಪ್ರೀತಿಯಾಗಿ, ಪ್ರೇಮ, ಪ್ರಣಯ ಆರಂಭ. ಮದುವೆಯೂ ಆಗುತ್ತದೆ. ರೇಡಿಯೊದಲ್ಲಿ ಕೇಳಿ ಬರುತ್ತಿರುವ ಹಾಡಿನ ಮೂಲಕ ಯುವಕನ ಮನಸ್ಥಿತಿಯನ್ನು ನಿರ್ದೇಶಕರು ತಮಾಷೆಯಾಗಿ ತೋರಿಸಿದ್ದಾರೆ. ಟ್ರಾಫಿಕ್‌ ಬಗ್ಗೆ ಅನೇಕ ಕತೆಗಳ ಕಿರುಚಿತ್ರ, ಚಿತ್ರಗಳು ಇವೆ. ಈ ಚಿತ್ರದಲ್ಲಿ ಟ್ರಾಫಿಕ್‌ನಲ್ಲಿ ಸಿಲುಕಿದವರ ಕತೆಯನ್ನು ಹಾಸ್ಯ, ಲಘುವಾಗಿ ಪ್ರೇಕ್ಷಕರಿಗೆ ದಾಟಿಸಿದ್ದಾರೆ ನಿರ್ದೇಶಕರು. ಚಿತ್ರದ ಉದ್ದೇಶ ಮನೋರಂಜನೆ ಎಂದೇ ಹೇಳಬಹುದು. ರೊಮ್ಯಾಂಟಿಕ್‌ ಕತೆಯೂ ಸೇರಿ ಲವಲವಿಕೆಯಿಂದ ಕೂಡಿದೆ. ನಾಯಕನಾಗಿ ರಾಕೇಶ್‌ ಮಯ್ಯ ಹಾಗೂ ನಾಯಕಿಯಾಗಿ ಸುವಿನ್‌ ಆನಿ ವಾಲ್ಸನ್‌ ನಟಿಸಿದ್ದಾರೆ.

‘ಈ ಕಿರುಚಿತ್ರ ಸ್ವತಃ ತಮ್ಮದೇ ಅನುಭವ. ಅದನ್ನೇ ಸ್ವಲ್ಪ ಕಲ್ಪನೆಯ ಮೂಲಕ ಬಿಚ್ಚಿಟ್ಟಿದ್ದೇವೆ’ ಎಂದು ಹೇಳಿಕೊಳ್ಳುತ್ತಾರೆ ನಿರ್ದೇಶಕ ಸಂತೋಷ್‌ ಗೋಪಾಲ್‌ ಹಾಗೂ ನಟ ರಾಕೇಶ್‌ ಮಯ್ಯ. ಸಂತೋಷ್‌ ಅವರ ಮನೆ ಇರುವುದು ಸಿಲ್ಕ್‌ಬೋರ್ಡ್‌ ಜಂಕ್ಷನ್‌ ಸಮೀಪ. ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಅವರು ಪ್ರತಿದಿನ ಸಿಲ್ಕ್‌ಬೋರ್ಡ್‌ ಮುಖ್ಯರಸ್ತೆಯಲ್ಲಿಯೇ ಅಡ್ಡಾಡಬೇಕು. ಹಾಗಾಗಿ ಇಲ್ಲಿನ ಟ್ರಾಫಿಕ್‌ ಸಮಸ್ಯೆಯನ್ನು ನಿತ್ಯ ಅನುಭವಿಸಿದವರಲ್ಲಿ ಅವರೂ ಒಬ್ಬರು. ರಾಕೇಶ್‌ ಮಯ್ಯ ಅವರೂ ಅಷ್ಟೇ. ನಟನೆ ಕ್ಷೇತ್ರಕ್ಕೆ ಬರುವ ಮೊದಲು ಸಿಲ್ಕ್‌ಬೋರ್ಡ್‌ನ ಐಟಿ ಕಂಪೆನಿಯಲ್ಲಿ ಕೆಲಸ ಮಾಡಿದವರು. ಅವರೂ ಈ ಟ್ರಾಫಿಕ್‌ನಿಂದ ಬೇಸತ್ತವರೇ. ‘ಸಂತೋಷ್‌ ಅವರಿಗೆ ಈ ಸಿಲ್ಕ್‌ಬೋರ್ಡ್‌ನಲ್ಲಿ ಟ್ರಾಫಿಕ್‌ನಲ್ಲಿ ಸಿಕ್ಕಿಕೊಂಡರೇ ಸಂಸಾರ ಮುಗಿಸಬಹುದು ಎಂದು ಯಾರೋ ಹೇಳಿದ್ದರಂತೆ. ಅದೇ ಎಳೆಯನ್ನು ಇಟ್ಟುಕೊಂಡು ಈ ಸಿನಿಮಾ ಮಾಡಿದ್ದಾರೆ’ ಎಂದು ಕತೆ ಹುಟ್ಟಿಕೊಂಡ ರೀತಿಯನ್ನು ವಿವರಿಸುತ್ತಾರೆ ರಾಕೇಶ್‌ ಮಯ್ಯ.

ಈ ಕಿರುಚಿತ್ರವನ್ನು ಸಿಲ್ಕ್‌ಬೋರ್ಡ್‌ ಮುಖ್ಯರಸ್ತೆಯಲ್ಲಿಯೇ ಚಿತ್ರೀಕರಣ ಮಾಡಲಾಗಿದೆ. ‘ಸಾಮಾನ್ಯವಾಗಿ ಈ ರಸ್ತೆಯಲ್ಲಿ ಓಡಾಡುವ ಜನರು ರೋಸಿ ಹೋಗಿರುತ್ತಾರೆ. ಆದರೆ ನಮ್ಮ ಚಿತ್ರೀಕರಣದ ಸಮಯದಲ್ಲಿ ಜನರು ಸಹಕರಿಸಿದರು. ಕೆಲವೊಂದು ದೃಶ್ಯಗಳಲ್ಲಿ ಅವರಾಗೇ ಪಾಲ್ಗೊಂಡರು. ಯಾವುದೇ ಸಮಸ್ಯೆ ಎದುರಾಗಲಿಲ್ಲ’ ಎಂದು ಚಿತ್ರೀಕರಣದ ಅನುಭವಗಳನ್ನು ಅವರು ಹಂಚಿಕೊಂಡರು.

ಈ ಚಿತ್ರದಲ್ಲಿ ಗಮನ ಸೆಳೆಯುವುದು ಛಾಯಾಗ್ರಹಣ. ಟ್ರಾಫಿಕ್‌ನಲ್ಲಿ ನಾಯಕ– ನಾಯಕಿಯ ರೋಮ್ಯಾಂಟಿಕ್‌ ದೃಶ್ಯಗಳು ಚೆನ್ನಾಗಿ ಮೂಡಿಬಂದಿವೆ. ನಾಯಕ– ನಾಯಕಿಯ ಮೂಡ್‌ಗೆ ತಕ್ಕ ಹಾಗೇ ಕನ್ನಡ ಚಿತ್ರಗಳ ವಿವಿಧ ಹಾಡುಗಳನ್ನು ಬಳಸಿಕೊಂಡು, ಸ್ನೇಹ, ಪ್ರೀತಿ, ತಮಾಷೆ, ಪ್ರೇಮ, ವೈರಾಗ್ಯ ಭಾವಗಳನ್ನು ಅಭಿವ್ಯಕ್ತಿಸಿರುವುದು ಇಷ್ಟವಾಗುತ್ತದೆ.

ಕಿರುಚಿತ್ರ: ಸಿಲ್ಕ್‌ಬೋರ್ಡ್‌

ನಿರ್ದೇಶನ: ಸಂತೋಷ್‌ ಗೋಪಾಲ್

ಕಲಾವಿದರು: ರಾಕೇಶ್‌ ಮಯ್ಯ, ಸುವಿನ್‌ ಆನಿ ವಾಲ್ಸನ್‌, ರಾಮ್‌ ಮಂಜುನಾಥ್‌, ಸುಮನಾ ಮುರಳೀಧರ, ವೀಣಾ ಎಚ್‌.ಎಸ್‌. ಹಾಗೂ ಇತರರು

ಯೂಟ್ಯೂಬ್‌ ಕೊಂಡಿ: https://bit.ly/2KGXhra

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT