ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಮಾಣವಚನ; ಸಂಚಾರ ವ್ಯವಸ್ಥೆ ಬದಲು

ಮುಖ್ಯಮಂತ್ರಿಯಾಗಿ ಇಂದು ಪ್ರಮಾಣ ವಚನ ಸ್ವೀಕರಿಸಲಿರುವ ಎಚ್‌.ಡಿ.ಕುಮಾರಸ್ವಾಮಿ
Last Updated 23 ಮೇ 2018, 2:31 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಎಚ್‌.ಡಿ.ಕುಮಾರಸ್ವಾಮಿ ಬುಧವಾರ ಪ್ರಮಾಣವಚನ ಸ್ವೀಕರಿಸಲಿದ್ದು, ಕಾರ್ಯಕ್ರಮದಲ್ಲಿ ಸುಮಾರು 1 ಲಕ್ಷ ಜನ ಪಾಲ್ಗೊಳ್ಳುವ ನಿರೀಕ್ಷೆ ಇರುವ ಕಾರಣ ಪೊಲೀಸರು ನಗರದ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಿದ್ದಾರೆ.

ಮಾರ್ಗ ಬದಲಾವಣೆ ಎಲ್ಲೆಲ್ಲಿ: ಡಾ.ಅಂಬೇಡ್ಕರ್ ರಸ್ತೆಯಲ್ಲಿ ಪೊಲೀಸ್ ತಿಮ್ಮಯ್ಯ ವೃತ್ತದಿಂದ ಗೋಪಾಲಗೌಡ ವೃತ್ತದವರೆಗೆ ವಾಹನಗಳ ಸಂಚಾರ ಹಾಗೂ ನಿಲುಗಡೆ ನಿಷೇಧಿಸಲಾಗಿದೆ.

ಶೇಷಾದ್ರಿ ರಸ್ತೆ ಮತ್ತು ಹಳೆ ಅಂಚೆ ಕಚೇರಿ ರಸ್ತೆ ಕಡೆಯಿಂದ ಬಂದು ಅಂಬೇಡ್ಕರ್ ರಸ್ತೆಯಲ್ಲಿ ಸಂಚರಿಸುವ ಬಸ್‌ಗಳನ್ನು ಕೆ.ಆರ್.ವೃತ್ತದಲ್ಲೇ ತಡೆಯಲಾಗುವುದು. ಆ ವಾಹನಗಳು ನೃಪತುಂಗ ರಸ್ತೆ ಮುಖಾಂತರ ಸಾಗಬೇಕು ಎಂದು ಪೊಲೀಸರು ಹೇಳಿದ್ದಾರೆ.

ಕೆ.ಆರ್.ವೃತ್ತದ ಮೂಲಕ ಅಂಬೇಡ್ಕರ್ ರಸ್ತೆಯಲ್ಲಿ ಸಾಗುವ ಕಾರು ಹಾಗೂ ದ್ವಿಚಕ್ರ ವಾಹನಗಳು, ಗೋಪಾಲಗೌಡ ವೃತ್ತದವರೆಗೆ ಸಂಚರಿಸಬಹುದು. ಅಲ್ಲಿಂದ ಬಹುಮಹಡಿ ಕಟ್ಟಡ, ಹೈಕೋರ್ಟ್ ಹಾಗೂ ಕಬ್ಬನ್ ಪಾರ್ಕ್‌ನ ಒಳಭಾಗದ ರಸ್ತೆಗಳ ಮೂಲಕ ಸಾಗಬಹುದು.

ಬಸ್‌, ಟಿಟಿಗಳಿಗೆ ಅರಮನೆ ಮೈದಾನ: ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ, ಚನ್ನಪಟ್ಟಣ ಕಡೆಯಿಂದ ಬರುವ ಬಸ್ ಹಾಗೂ ಟಿ.ಟಿಗಳು, ಮೈಸೂರು ರಸ್ತೆ ಮೇಲ್ಸೇತುವೆ–ಎಸ್‌ಜೆಪಿ ರಸ್ತೆ–ಪುರಭವನ–ಎನ್‌.ಆರ್.ಜಂಕ್ಷನ್–ಹಡ್ಸನ್‌ ವೃತ್ತ ಮಾರ್ಗವಾಗಿ ಕಸ್ತೂರಬಾ ರಸ್ತೆಗೆ ಬಂದು ಅಲ್ಲಿ ಜನರನ್ನು ಇಳಿಸಬೇಕು.

ಕನಕಪುರ ರಸ್ತೆ ಕಡೆಯಿಂದ ಬರುವವರು ಬನಶಂಕರಿ ದೇವಸ್ಥಾನ ಬಸ್ ನಿಲ್ದಾಣ–ರಾಜಲಕ್ಷ್ಮಿ ಜಂಕ್ಷನ್–ಜಯನಗರ 4ನೇ ಮುಖ್ಯರಸ್ತೆ–ಸೌತ್ ಎಂಡ್ ವೃತ್ತ– ಆರ್.ವಿ.ಜಂಕ್ಷನ್-ಲಾಲ್‍ಬಾಗ್ ಪಶ್ಚಿಮ ದ್ವಾರ– ಮಿನರ್ವ ವೃತ್ತ–ಜೆ.ಸಿ.ರಸ್ತೆ–ಪುರಭವನ- ಹಡ್ಸನ್ ವೃತ್ತ ಮಾರ್ಗವಾಗಿ ಕಸ್ತೂರಬಾ ರಸ್ತೆಗೆ ಬಂದು ಜನರನ್ನು ಇಳಿಸಬೇಕು.

ಬಳಿಕ, ಖಾಲಿ ವಾಹನಗಳನ್ನು ಸಿದ್ದಲಿಂಗಯ್ಯ ವೃತ್ತ–ಕ್ವೀನ್ಸ್‌ ವೃತ್ತ–ಅನಿಲ್‌ ಕುಂಬ್ಳೆ ವೃತ್ತ–ಬಿಆರ್‌ವಿ ಜಂಕ್ಷನ್‌–ಕಬ್ಬನ್‌ರಸ್ತೆ–ಹಲಸೂರು ರಸ್ತೆ–ಬೇಗಂ ಮಹಲ್–ಅಣ್ಣಾಸ್ವಾಮಿ ಮೊದಲಿಯಾರ್ ರಸ್ತೆ–ಕೋಲ್ಸ್‌ ಪಾರ್ಕ್–ನಂದಿದುರ್ಗ ರಸ್ತೆ–ಜಯಮಹಲ್ ರಸ್ತೆ ಮಾರ್ಗವಾಗಿ ತೆಗೆದುಕೊಂಡು ಹೋಗಿ ಅರಮನೆ ಮೈದಾನದ ಕೃಷ್ಣ ವಿಹಾರ ಆವರಣ, ಮಾವಿನಕಾಯಿ ಮಂಡಿ ಮೈದಾನ ಹಾಗೂ ಸರ್ಕಸ್ ಮೈದಾನದಲ್ಲಿ ನಿಲುಗಡೆ ಮಾಡಬೇಕು.

ತುಮಕೂರು, ದೊಡ್ಡಬಳ್ಳಾಪುರ, ಕೋಲಾರ ಕಡೆಯಿಂದ ಬರುವ ಬಸ್‌ಗಳು, ಮೊದಲು ಮೇಖ್ರಿ ವೃತ್ತಕ್ಕೆ ಬರಬೇಕು. ಅಲ್ಲಿಂದ ಕಾವೇರಿ ಜಂಕ್ಷನ್–ವಿಂಡ್ಸರ್ ಮ್ಯಾನರ್ ಮಾರ್ಗವಾಗಿ ಸಾಗಿ ಹಳೆ ಹೈಗ್ರೌಂಡ್ಸ್ ಪೊಲೀಸ್ ಠಾಣೆ ಜಂಕ್ಷನ್‌ ಬಳಿ ಜನರನ್ನು ಇಳಿಸಬೇಕು. ಬಳಿಕ ಖಾಲಿ ವಾಹನಗಳು ಚಂದ್ರಿಕಾ ಜಂಕ್ಷನ್–ಉದಯ ಟಿ.ವಿ ಜಂಕ್ಷನ್–ಕಂಟೋನ್ಮೆಂಟ್ ಅಂಡರ್‌ಪಾಸ್–ಜಯಮಹಲ್ ರಸ್ತೆ ಮೂಲಕ ಅರಮನೆ ಮೈದಾನಕ್ಕೆ ಸಾಗಬೇಕು.

ನೌಕರರಿಗೆ ಅರ್ಧ ದಿನ ರಜೆ

ಬೆಂಗಳೂರು: ವಿಧಾನಸೌಧ ಆವರಣದಲ್ಲಿ ಬುಧವಾರ ಮುಖ್ಯಮಂತ್ರಿ ಪ್ರಮಾಣವಚನ ಸಮಾರಂಭವಿರುವ ಕಾರಣ, ವಿಧಾನಸೌಧ ಹಾಗೂ ವಿಕಾಸಸೌಧದ ನೌಕರರಿಗೆ ಅರ್ಧ ದಿನ ರಜೆ ನೀಡಲಾಗಿದೆ.

ನೌಕರರು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆವರೆಗೆ ಕೆಲಸ ಮಾಡಲಿದ್ದಾರೆ. ಸಂಜೆ 4.30ಕ್ಕೆ ಸಮಾರಂಭ ನಿಗದಿಯಾಗಿರುವ ಕಾರಣ, ಮಧ್ಯಾಹ್ನದ ನಂತರ ಕಚೇರಿ ಕೆಲಸಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ವಿಧಾನಸೌಧದ ಮೂಲಗಳು ತಿಳಿಸಿವೆ.

ಸರ್ಕಾರಿ ಬಂಗಲೆಗೆ ಹೋಗುವುದಿಲ್ಲ: ಎಚ್‌ಡಿಕೆ

ಬೆಂಗಳೂರು: ‘ನನ್ನ ಅವಧಿಯಲ್ಲಿ ದುಂದು ವೆಚ್ವಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಸರ್ಕಾರಿ ಬಂಗಲೆ ಬಳಸದೇ ಇರಲು ನಿರ್ಧರಿಸಿದ್ದೇನೆ’ ಎಂದು ಕುಮಾರಸ್ವಾಮಿ ಹೇಳಿದರು.

ಬುಧವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಅವರು, ‘ಈಗ ವಾಸ ಮಾಡುತ್ತಿರುವ ಜೆ.ಪಿ.ನಗರದ ನಿವಾಸವನ್ನೇ ಮುಖ್ಯಮಂತ್ರಿಯಾಗಿಯೂ ಬಳಸುತ್ತೇನೆ. ಈ ಮಾದರಿಯನ್ನೇ ಉಳಿದ ಸಚಿವರೂ ಅನುಸರಿಸಲಿ ಎಂಬುದು ನನ್ನ ಬಯಕೆ’ ಎಂದರು.

‘25 ವರ್ಷಗಳಿಂದ ಜೆ.ಪಿ.ನಗರದ ಮನೆಯಲ್ಲಿ ವಾಸ ಮಾಡುತ್ತಿದ್ದೇನೆ. ಇದರಿಂದ ನನಗೆ ಒಳ್ಳೆಯದಾಗಿದೆ. ನನ್ನ ಆರೋಗ್ಯದ ಬಗ್ಗೆ ನಿಗಾ ವಹಿಸಲು ವೈದ್ಯರು ಸೂಚಿಸಿದ್ದಾರೆ. ಜನರ ಮಧ್ಯೆ ಇದ್ದರೆ ಮಾತ್ರ ನಾನು ಆರೋಗ್ಯವಾಗಿರುತ್ತೇನೆ. ಹಾಗಾಗಿ ಗ್ರಾಮ ವಾಸ್ತವ್ಯದಂತಹ ಕಾರ್ಯಕ್ರಮ ಮುಂದುವರಿಸುತ್ತೇನೆ’ ಎಂದು ಅವರು ತಿಳಿಸಿದರು.

ಪಾರ್ಕಿಂಗ್ ಎಲ್ಲೆಲ್ಲಿ?

ಮಲ್ಯ ಆಸ್ಪತ್ರೆ ರಸ್ತೆಯ ಸೇಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್ ಮೈದಾನ

ಕಂಠೀರವ ಕ್ರೀಡಾಂಗಣ

ಯುಬಿ ಸಿಟಿ ಪಾರ್ಕಿಂಗ್ ಪ್ರದೇಶ

ಸೆಂಟ್ರಲ್ ಕಾಲೇಜು ಮೈದಾನ

ಸ್ವಾತಂತ್ರ್ಯ ಉದ್ಯಾನ

ಹಳೆ ಅಂಚೆ ಕಚೇರಿ ರಸ್ತೆಯ ಸರ್ಕಾರಿ ಕಲಾ ಕಾಲೇಜು

ಟಿ.ಚೌಡಯ್ಯ ರಸ್ತೆಯಲ್ಲಿ ಎಲ್ಆರ್‌ಡಿಇ ಜಂಕ್ಷನ್‌ನಿಂದ ರಾಜಭವನ ಜಂಕ್ಷನ್‌ವರೆಗೆ

ರಾಜಕಾರಣಿಗಳು ದೇವರಾಜ್ ಅರಸ್ ರಸ್ತೆಯಲ್ಲಿ ಬಂದು ಗೇಟ್ ಸಂಖ್ಯೆ 2ರ ಮೂಲಕವೇ ವಿಧಾನಸೌಧ ಪ್ರವೇಶಿಸಬೇಕು. ವಿಧಾನಸೌಧದ ಪಾರ್ಕಿಂಗ್ ಪ್ರದೇಶದಲ್ಲೇ ವಾಹನ ನಿಲುಗಡೆ ಮಾಡಬಹುದು.

2,500 ಪೊಲೀಸರ ಕಣ್ಗಾವಲು

‘ಕೆಎಸ್‌ಆರ್‌ಪಿಯ 35 ಹಾಗೂ ಸಿಎಆರ್‌ನ 50 ತುಕಡಿಗಳು, ಇಬ್ಬರು ಹೆಚ್ಚುವರಿ ಪೊಲೀಸ್ ಕಮಿಷನರ್‌ಗಳು, ಎಂಟು ಡಿಸಿಪಿ, 100 ಇನ್‌ಸ್ಪೆಕ್ಟರ್‌ ಸೇರಿ ವಿಧಾನಸೌಧ ಸುತ್ತಮುತ್ತ ಸುಮಾರು 2,500 ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಡ್ರೋನ್‌ ಕ್ಯಾಮೆರಾ ಬಳಕೆ ಮಾಡುವುದಿಲ್ಲ. ಸಿಬ್ಬಂದಿ ಲೋಹಶೋಧಕದ ಮೂಲಕ ಪ್ರತಿಯೊಬ್ಬರನ್ನೂ ತಪಾಸಣೆಗೆ ಒಳಪಡಿಸಲಿದ್ದಾರೆ’ ಎಂದು ನಗರ ಪೊಲೀಸ್ ಕಮಿಷನರ್ ಟಿ.ಸುನೀಲ್ ಕುಮಾರ್ ತಿಳಿಸಿದರು.

* ರಾಜ್ಯದ ವಿವಿಧ ಭಾಗಗಳಿಂದ ಸುಮಾರು 2,000 ಬಸ್‌ಗಳು ನಗರಕ್ಕೆ ಬರುವ ನಿರೀಕ್ಷೆ ಇದೆ. ಸಂಚಾರ ನಿರ್ವಹಣೆಗಾಗಿಯೇ 3,000 ಪೊಲೀಸರನ್ನು ನಿಯೋಜಸಿದ್ದೇವೆ.

–ಟಿ.ಸುನೀಲ್‌ಕುಮಾರ್, ಪೊಲೀಸ್ ಕಮಿಷನರ್, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT