ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಟರಿ ಬಾಳಿಕೆಯೇ ಇದರ ಹೆಗ್ಗಳಿಕೆ...

Last Updated 23 ಮೇ 2018, 19:30 IST
ಅಕ್ಷರ ಗಾತ್ರ

ಭಾರತದ ಎಲೆಕ್ಟ್ರಾನಿಕ್ಸ್ ಮಾರುಕಟ್ಟೆಯಲ್ಲಿ ಚೀನಾ, ತೈವಾನ್, ದಕ್ಷಿಣ ಕೊರಿಯಾ ಇತ್ಯಾದಿ ದೇಶದ ಕಂಪನಿಗಳ ಉತ್ಪನ್ನಗಳೇ ಬಹುತೇಕ ತುಂಬಿವೆ. ತೈವಾನ್ ದೇಶದ ಏಸುಸ್ ಕಂಪನಿ ಭಾರತದ ಗಣಕಯಂತ್ರ, ಲ್ಯಾಪ್‌ಟಾಪ್, ಟ್ಯಾಬ್ಲೆಟ್ ಮತ್ತು ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಒಂದು ಗಮನಾರ್ಹ ಹೆಸರು. ಈ ಕಂಪನಿಯ ಹಲವು ಉತ್ಪನ್ನಗಳನ್ನು ಇದೇ ಅಂಕಣದಲ್ಲಿ ವಿಮರ್ಶಿಸಲಾಗಿತ್ತು. ಏಸುಸ್ ಫೋನ್‌ಗಳಲ್ಲಿ ಅಧಿಕ ಶಕ್ತಿಯ ಬ್ಯಾಟರಿಯನ್ನು ಒಳಗೊಂಡ ಕೆಲವನ್ನು ಈ ಅಂಕಣದಲ್ಲಿ ವಿಮರ್ಶಿಸಲಾಗಿತ್ತು. ಆದರೆ ಅವುಗಳ ಬೆಲೆ ಸ್ವಲ್ಪ ಹೆಚ್ಚೇ ಎಂದು ಹೇಳಬಹುದಿತ್ತು. ಈಗ ಏಸುಸ್ ಕಂಪನಿ ಅಧಿಕ ಶಕ್ತಿಯ ಬ್ಯಾಟರಿಯನ್ನು ಒಳಗೊಂಡ ಆದರೆ ಕಡಿಮೆ ಬೆಲೆಯ ಫೋನ್ ತಯಾರಿಸಿದೆ. ಅದುವೇ ಏಸುಸ್ ಝೆನ್‌ಫೋನ್ ಮ್ಯಾಕ್ಸ್ ಪ್ರೊ ಎಂ1 (Asus Zenfone Max Pro M1). ಇದು ನಮ್ಮ ಈ ವಾರದ ಗ್ಯಾಜೆಟ್.

ಇದು ಅಧಿಕ ಶಕ್ತಿಯ ಬ್ಯಾಟರಿ ಇರುವ ಫೋನ್. ಅಂತೆಯೇ ಇದರ ತೂಕ ಸ್ವಲ್ಪ ಜಾಸ್ತಿ. ಹಾಗೆಂದು ಹೇಳಿ ತುಂಬ ಜಾಸ್ತಿಯೇನಲ್ಲ. ಈ ಫೋನಿನ ರಚನೆ ಮತ್ತು ವಿನ್ಯಾಸದಲ್ಲಿ ವಿಶೇಷವೇನಿಲ್ಲ. ಇತ್ತೀಚೆಗೆ ಮಾರುಕಟ್ಟೆಗೆ ಬರುತ್ತಿರುವ ಬಹುತೇಕ ಫೋನ್‌ಗಳಂತೆಯೇ ಇದೆ. ಇತ್ತೀಚೆಗಿನ ಬಹುತೇಕ ಫೋನ್‌ಗಳಂತೆ ಇದು ಕೂಡ ಅಂಚುರಹಿತ (bezelless) ಫೋನ್. ಪರದೆ ಮತ್ತು ದೇಹದ ಗಾತ್ರಗಳ ಅನುಪಾತ ಉತ್ತಮವಾಗಿದೆ. 16:9 ಅನುಪಾತದ ಪರದೆ ಆದ ಕಾರಣ ಬೆರಳಚ್ಚು ಸ್ಕ್ಯಾನರ್ ಹಿಂದುಗಡೆ ಇದೆ. ಪ್ರಾಥಮಿಕ ಕ್ಯಾಮೆರಾಗಳು ಹಿಂದೆ ಹಾಗೂ ಬಲಕ್ಕೆ ಒಂದರ ಕೆಳಗೆ ಇನ್ನೊಂದು ಇವೆ. ಅವುಗಳ ಕೆಳಗೆ ಫ್ಲಾಶ್ ಇದೆ. ಹಿಂಬದಿಯ ಕವಚ ಸ್ವಲ್ಪ ದೊರಗು ಎನ್ನಬಹುದು. ನಯವಾಗಿಯಂತೂ ಇಲ್ಲ. ಯುಎಸ್‌ಬಿ ಕಿಂಡಿ ಮತ್ತು 3.5 ಮಿ.ಮೀ. ಇಯರ್‌ಫೋನ್ ಕಿಂಡಿಗಳು ಕೆಳಗಡೆ ಇವೆ. ಆನ್/ಆಫ್ ಮತ್ತು ವಾಲ್ಯೂಮ್ ಬಟನ್‌ಗಳು ಬಲಗಡೆ, ಸಿಮ್ ಮತ್ತು ಮೆಮೊರಿ ಹಾಕುವ ಟ್ರೇ ಎಡಗಡೆ ಇವೆ. ಕಪ್ಪು ಮತ್ತು ಕಂದು ಎರಡು ಬಣ್ಣಗಳಲ್ಲಿ ಲಭ್ಯ.

ಇದರಲ್ಲಿ ಮುಂಭಾಗದಲ್ಲಿ ಮೂರು ಬಟನ್‌ಗಳಿಲ್ಲ. ಪರದೆಯಲ್ಲೇ ಬೇಕಾದಾಗ ಬಟನ್‌ಗಳು ಗೋಚರಿಸುತ್ತವೆ. ಇದು ಗೂಗಲ್‌ನವರ ಶುದ್ಧ ಆಂಡ್ರೋಯಿಡ್ ವಿಧಾನ. ಇದರಲ್ಲಿರುವುದು ಶುದ್ಧ ಆಂಡ್ರೋಯಿಡ್ 8.1. ಈ ವಿಷಯದಲ್ಲಿ ಏಸುಸ್‌ನವರು ಪ್ರಥಮ ಬಾರಿಗೆ ಭಿನ್ನ ಹಾದಿ ಹಿಡಿದಿದ್ದಾರೆ ಅನ್ನಬಹುದು. ಇತರೆ ಏಸುಸ್ ಫೋನ್‌ಗಳಂತೆ ಇದರಲ್ಲಿ ಅನವಶ್ಯಕ ಆಪ್‌ಗಳಿಲ್ಲ (bloatware).

ಇದರಲ್ಲಿರುವುದು ಮಧ್ಯಮ ದರ್ಜೆಯ ಪ್ರೋಸೆಸರ್. ಇದರ ಅಂಟುಟು ಬೆಂಚ್‌ಮಾರ್ಕ್ 114267 ಇದೆ. ಅಂದರೆ ಇದು ಒಂದು ಮಟ್ಟಿಗೆ ವೇಗದ ಫೋನ್ ಎನ್ನಬಹುದು. ಎಲ್ಲ ನಮೂನೆಯ ಆಟಗಳನ್ನು ಆಡುವ ಅನುಭವ ಅತ್ಯುತ್ತಮವಾಗಿದೆ. ಅತಿ ಶಕ್ತಿಯನ್ನು ಬೇಡುವ ಮೂರು ಆಯಾಮದ ಮೇಲ್ದರ್ಜೆಯ ಆಟಗಳನ್ನು ಕೂಡ ಒಂದು ಮಟ್ಟಿಗೆ ತೃಪ್ತಿದಾಯಕವಾಗಿ ಆಡಬಹುದು.

ವಿಡಿಯೊ ವೀಕ್ಷಣೆಯ ಅನುಭವ ಚೆನ್ನಾಗಿದೆ. ಇದು ಹೈಡೆಫಿನಿಶನ್ ವಿಡಿಯೊ ಪ್ಲೇ ಮಾಡುತ್ತದೆ. ಹೈಡೆಫಿನಿಶನ್ ಮತ್ತು ಅಲ್ಟ್ರಾಹೈಡೆಫಿನಿಶನ್ (4k) ವಿಡಿಯೊ ವೀಕ್ಷಣೆ ಮಾಡಬಹುದು. ಈ ಫೋನಿನ ಆಡಿಯೊ ಇಂಜಿನ್ ಹೇಳಿಕೊಳ್ಳುವಂತೇನಿಲ್ಲ. ತುಂಬ ಕಳಪೆ ಅನ್ನುವಂತಿಲ್ಲ. ಫೋನಿನ ಜೊತೆ ಇಯರ್‌ಫೋನ್ ನೀಡಿಲ್ಲ. ಇದರಲ್ಲಿರುವ ಎಫ್‌ಎಂ ರೇಡಿಯೋದ ಗ್ರಾಹಕ ಶಕ್ತಿ ಕಡಿಮೆ ಇದೆ. ಮನೆಯೊಳಗೆ ಎಲ್ಲ ಕೇಂದ್ರಗಳು ಬರುವುದಿಲ್ಲ.

ಇದರಲ್ಲಿರುವುದು 13 ಮತ್ತು 5 ಮೆಗಾಪಿಕ್ಸೆಲ್‌ನ ಪ್ರಾಥಮಿಕ ಕ್ಯಾಮೆರಾಗಳು. ಕ್ಯಾಮೆರಾದ ಗುಣಮಟ್ಟ ಅಂತಹ ಹೇಳಿಕೊಳ್ಳುವಂತೇನೂ ಇಲ್ಲ. ಜೊತೆಗೆ ಕ್ಯಾಮೆರಾದ ಕಿರುತಂತ್ರಾಂಶ (ಆಪ್) ಕೂಡ ಅಷ್ಟಕ್ಕಷ್ಟೆ. ಮ್ಯಾನ್ಯುವಲ್ ಆಯ್ಕೆ ಇಲ್ಲ. ಓಪನ್ ಕ್ಯಾಮೆರಾ ಕಿರುತಂತ್ರಾಂಶ ಹಾಕಿಕೊಂಡರೂ ಕ್ಯಾಮೆರಾದ ಯಂತ್ರಾಂಶದ ಬೆಂಬಲವಿಲ್ಲದ ಕಾರಣ ಮ್ಯಾನ್ಯುವಲ್ ಆಯ್ಕೆ ಬರುವುದಿಲ್ಲ. ಕೆಲವು ಸಂದರ್ಭಗಳಲ್ಲಿ ಉತ್ತಮ ಫೋಟೊ ತೆಗೆಯುತ್ತದೆ. ಆದರೆ ನಿಜಕ್ಕೂ ಅತ್ಯುತ್ತಮ ಕ್ಯಾಮೆರಾ ಫೋನ್‌ಬೇಕು ಎನ್ನುವವರಿಗೆ ಇದು ಹೇಳಿದ್ದಲ್ಲ. ಹಾಗೆಂದು ಹೇಳಿ ಪೂರ್ತಿ ತೆಗೆದುಹಾಕುವಂತಿಲ್ಲ. ಈ ಫೋನಿನ ಬೆಲೆಗೆ ಹೋಲಿಸಿದರೆ ಕ್ಯಾಮೆರಾ ಅಲ್ಲಿಂದಲ್ಲಿಗೆ ತೃಪ್ತಿದಾಯಕ ಎನ್ನಬಹುದು.

ಈ ಫೋನಿನ ಹೆಚ್ಚುಗಾರಿಕೆಯಿರುವುದು ಇದರ ಬ್ಯಾಟರಿಯಲ್ಲಿ. 5000 mAh ಎಂದರೆ ತುಂಬ ಶಕ್ತಿಶಾಲಿ ಎನ್ನಬಹುದು. ಆದರೆ ಬ್ಯಾಟರಿ ಬಳಕೆಯನ್ನು ಏಸುಸ್‌ನವರು ಇನ್ನೂ ಸ್ವಲ್ಪ ಉತ್ತಮಗೊಳಿಸಬಹುದಿತ್ತು. ಅವರದೇ ಚಾರ್ಜರ್ ಮತ್ತು ಕೇಬಲ್ ಬಳಸಿದರೆ ಸುಮಾರು ಎರಡೂವರೆ ಗಂಟಗಳಲ್ಲಿ ಪೂರ್ತಿ ಚಾರ್ಜ್ ಆಗುತ್ತದೆ.

ಒಟ್ಟಿನಲ್ಲಿ ಹೇಳುವುದಾದರೆ ನೀಡುವ ಹಣಕ್ಕೆ ತೃಪ್ತಿದಾಯಕ ಫೋನ್ ಎನ್ನಬಹುದು.

*


ವಾರದ ಆಪ್ (app) ಸ್ತೋತ್ರಮಾಲ (Stotramaala)
ಹಲವು ಸ್ತೋತ್ರಗಳನ್ನು, ಮಂತ್ರಗಳನ್ನು, ಭಜನೆಗಳನ್ನು ನಿಮಗೆ ಹೇಳುವ, ಭಜಿಸುವ ಅಭ್ಯಾಸವಿದೆಯೇ? ಪ್ರತಿ ಸ್ತೋತ್ರಕ್ಕೂ ಬೇರೆ ಬೇರೆ ಪುಸ್ತಕ ನಿಮ್ಮಲ್ಲಿದೆಯೇ? ಈಗ ಅವೆಲ್ಲವೂ ಒಂದೇ ಕಿರುತಂತ್ರಾಂಶದಲ್ಲಿ (ಆಪ್) ನಿಮಗೆ ಲಭ್ಯ. ಅದು ಬೇಕಿದ್ದರೆ ನೀವು ಗೂಗ್ಲ್ ಪ್ಲೇ ಸ್ಟೋರಿಗೆ ಬೇಟಿ ನೀಡಿ Stotramaala ಎಂದು ಹುಡುಕಬೇಕು ಅಥವಾ http://bit.ly/gadgetloka330 ಜಾಲತಾಣಕ್ಕೆ ಭೇಟಿ ನೀಡಬೇಕು. ಗಣೇಶ, ಲಕ್ಷ್ಮಿ, ಶ್ರೀರಾಮ, ಶ್ರೀಕೃಷ್ಣ, ಗಾಯತ್ರಿ, ಭಗವದ್ಗೀತೆ, ಸಹಸ್ರನಾಮಗಳು, ಅಷ್ಟೋತ್ತರಗಳು, ವೇದಮಂತ್ರಗಳು, ಜನಪ್ರಿಯ ಭಜನೆಗಳು, ಎಲ್ಲ ಇದರಲ್ಲಿವೆ. ಈ ಎಲ್ಲವುಗಳು ಪಠ್ಯರೂಪದಲ್ಲಿವೆ, ಆಡಿಯೋ ಅಲ್ಲ. ಅವುಗಳನ್ನು ಓದಿ ನೀವು ಜಪಿಸಬೇಕು ಅಥವಾ ಭಜಿಸಬೇಕು.

ಗ್ಯಾಜೆಟ್ ಪದ: Database application = ದತ್ತಸಂಚಯ ಆನ್ವಯಿಕ ತಂತ್ರಾಂಶ
ದತ್ತಸಂಚಯಗಳನ್ನು (database) ತಯಾರಿಸುವ, ನಿರ್ವಹಿಸುವ, ಆನ್ವಯಿಕ ತಂತ್ರಾಂಶಗಳಿಗೆ (application software) ಹಿಂದಿನಿಂದ ದತ್ತಾಂಶಗಳನ್ನು (data) ಒದಗಿಸುವ ತಂತ್ರಾಂಶಗಳು (software). ಕೆಲವು ಉದಾಹರಣೆಗಳು – ಮೈಕ್ರೋಸಾಫ್ಟ್‌ಅಕ್ಸೆಸ್ (Microsoft Access), ಒರೇಕಲ್ (Oracle), ಎಸ್‌ಕ್ಯುಎಲ್ ಸರ್ವರ್ (SQL Server), ಇತ್ಯಾದಿ.

ಗ್ಯಾಜೆಟ್ ಸುದ್ದಿ: ರಿಯಲ್‌ಮಿ ಫೋನ್
ಒಪ್ಪೊ ಕಂಪೆನಿಯು ರಿಯಲ್‌ಮಿ ಹೆಸರಿನಲ್ಲಿ ಹೊಸ ಫೋನ್ ವಿಭಾಗ ಅಥವಾ ಕಂಪೆನಿ ಸೃಷ್ಟಿಸಿದೆ. ರಿಯಲ್‌ಮಿ ಕಂಪೆನಿ ತನ್ನ ಪ್ರಥಮ ಫೋನ್ ರಿಯಲ್‌ಮಿ1 ಅನ್ನು ಇತ್ತೀಚೆಗೆ ಭಾರತದಲ್ಲಿ ಬಿಡುಗಡೆ ಮಾಡಿದೆ. ಮೀಡಿಯಾಟೆಕ್ ಹೀಲಿಯೋ ಪಿ60 ಪ್ರೋಸೆಸರ್‌ಒಳಗೊಂಡ ಈ ಫೋನ್‌ಗಳು 3+32, 4+64 ಮತ್ತು 6+128 ಮೆಮೊರಿಯ ಆವೃತ್ತಿಗಳಲ್ಲಿ ಲಭ್ಯ. ಇವುಗಳ ಬೆಲೆಗಳು ಅನುಕ್ರಮವಾಗಿ ₹ 8,990, 10,990 ಮತ್ತು 13,990. ಮೇ 25, 2018ರಿಂದ ಇವು ಅಮೆಜಾನ್ ಮೂಲಕ ಲಭ್ಯ. ಇವುಗಳು ಉತ್ತಮ ವಿನ್ಯಾಸವನ್ನು ಹೊಂದಿವೆ. ಶಿಯೋಮಿ ಫೋನ್‌ಗಳಿಗೆ ಇವು ನೇರವಾಗಿ ಪೈಪೋಟಿ ನೀಡುವ ನಿರೀಕ್ಷೆ ಇದೆ.

ಗ್ಯಾಜೆಟ್ ಸಲಹೆ
ನಮಿತ ಅವರ ಪ್ರಶ್ನೆ:
ಹೋನರ್ 7 ಎಕ್ಸ್ ಮತ್ತು ಶಿಯೋಮಿ ರೆಡ್‌ಮಿ ನೋಟ್ 5 ಇವುಗಳಲ್ಲಿ ಯಾವುದು ಉತ್ತಮ?
ಉ: ಹೋನರ್ 7 ಎಕ್ಸ್. ಆದರೆ ಇದು ರೆಡ್‌ಮಿ ನೋಟ್ 5 ಗಿಂತ ಸುಮಾರು ಎರಡು ಸಾವಿರದಷ್ಟು ಹೆಚ್ಚು ಬೆಲೆಯದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT